ಕಲ್ಲಾಜೆ: ಅಡ್ಡಬಂದ ದನ-ತಪ್ಪಿಸಲು ಹೋಗಿ ಕಾರು ಚರಂಡಿಗೆ, ಪ್ರಯಾಣಿಕರಿಗೆ ಗಾಯ- ಪ್ರಕರಣ ದಾಖಲು

0

ಪುತ್ತೂರು: ಅಡ್ಡಲಾಗಿ ಬಂದ ದನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರು ಪಕ್ಕದ ಚರಂಡಿಗೆ ಬಿದ್ದ ಘಟನೆ ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ಎಂಬಲ್ಲಿ ನ.2ರಂದು ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ನಿವಾಸಿಗಳಾದ ಶ್ರೀಮತಿ ಬೇಬಿ(38ವ.), ಅವರ ಪತ್ತೆ ಸಾವಿತ್ರಮ್ಮ(80ವ.), ಮಕ್ಕಳಾದ ಅನು(14ವ.) ಹಾಗೂ ಮಂಜಣ್ಣ ಗೌಡ(12ವ.)ಎಂಬವರು ಗಾಯಗೊಂಡಿದ್ದು ಇವರೆಲ್ಲರೂ ಕಡಬ ಜೆಎಂಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಗ್ಲಾಸ್ ಲೈಫ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀಮತಿ ಬೇಬಿ ಅವರ ಪತಿ ಸ್ವಾಮಿ ಹಾಗೂ ಇತರರು ನ.1ರಂದು ಕೆಎ 51 ಎಂವೈ 7047 ನೋಂದಾಣಿ ನಂಬ್ರದ ಕಾರಿನಲ್ಲಿ ಧರ್ಮಸ್ಥಳಕ್ಕೆ ಬಂದು ನ.2ರಂದು ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆಂದು ಧರ್ಮಸ್ಥಳ-ಸುಬ್ರಹ್ಮಣ್ಯ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಐತ್ತೂರು ಗ್ರಾಮದ ಕಲ್ಲಾಜೆಯಲ್ಲಿ ಕಾರಿಗೆ ಅಡ್ಡಲಾಗಿ ದನವೊಂದು ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಕಾರು ಚಾಲಕ ಸ್ವಾಮಿ ಅವರ ನಿಯಂತ್ರಣ ಕಳೆದುಕೊಂಡು ಪಕ್ಕದ ಚರಂಡಿಗೆ ಬಿದ್ದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಬೇಬಿ, ಸಾವಿತ್ರಮ್ಮ, ಅನು ಮತ್ತು ಮಂಜಣ್ಣಗೌಡ ಗಾಯಗೊಂಡಿದ್ದರು. ಗಾಯಾಳುಗಳಿಗೆ ಕಡಬ ಜೆಎಂಜೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಅಲ್ಲಿಂದ ಹಾಸನ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಅಲ್ಲಿನ ವೈದ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಚನ್ನರಾಯಪಟ್ಟಣ ಗ್ಲಾಸ್ ಲೈಪ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೇಬಿ ಅವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here