ದೇಶದ ಕಷ್ಟ ನಿವಾರಿಸುವ ಮಂತ್ರ ವಂದೇ ಮಾತರಂ: ಆದರ್ಶ ಗೋಖಲೆ
ಪುತ್ತೂರು: ಸ್ವಾತಂತ್ರ್ಯ ಪೂರ್ವದಲ್ಲಿ ಭವ್ಯ ಭಾರತದ ಸಂಸ್ಕೃತಿ, ಕಲೆ, ಹಿರಿಮೆ, ಪ್ರಾದೇಶಿಕ ಕಲಾ ವೈವಿಧ್ಯ, ಪ್ರಾಕೃತಿಕ ಸೌಂದರ್ಯವೇ ಮೊದಲಾದ ವಿಚಾರಗಳ ಬಗೆಗೆ ಸುಂದರ ಪದಗಳನ್ನು ಪೋಣಿಸಿ ಮಾಡಿದ ಗೀತೆಯೇ ವಂದೇ ಮಾತರಂ. ದೇಶದ ಸ್ವಾತಂತ್ರ್ಯ ಹೋರಾಟ, ಚಳುವಳಿ, ಆಂದೋಲನ ಹಾಗೂ ಧೀರ ಹೋರಾಟಗಾರರ ಬಾಯಿಯಲ್ಲಿ ಮೊಳಗಿದ ಗೀತೆ ವಂದೇ ಮಾತರಂ. ಹಲವಾರು ಸಂದರ್ಭಗಳಲ್ಲಿ ದೇಶದ ಏಕತೆಗೆ ಧಕ್ಕೆ ಬರುವ ಹಾಗೂ ಇತರ ಅನೇಕ ಸಂದರ್ಭಗಳಲ್ಲಿ ಕಷ್ಟ ನಿವಾರಿಸುವ ಮಂತ್ರವಾಗಿ ವಂದೇ ಮಾತರಂ ಹೊರಹೊಮ್ಮಿದೆ ಎಂದು ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

ಅವರು ’ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆ ಪ್ರಯುಕ್ತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಸುಶೀಲಾ ಶಿವಾನಂದ ರಾವ್ ವೇದಿಕೆಯಲ್ಲಿ ಮಂಗಳವಾರ ವಿಶೇಷ ಉಪನ್ಯಾಸ ನೀಡಿದರು.
ಬಂಕಿಮ ಚಂದ್ರ ಚಟರ್ಜಿಯವರು ಬರೆದ ಈ ಗೀತೆ ಬ್ರಿಟಿಷರ ವಿರುದ್ದ ನಡೆಸಿದ ವಂಗ-ಭಂಗ ಚಳವಳಿಯ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಕೆಯಾಯಿತು. ಬ್ರಿಟೀಷರ ಒಡೆದು ಆಳುವ ನೀತಿ ಅಲ್ಲಿ ಪರಿಣಾಮ ಬೀರಲಿಲ್ಲ. ಪತ್ರಗಳಲ್ಲಿ, ಘೋಷಣೆಗಳಲ್ಲಿ ಮಾತ್ರವಲ್ಲದೆ ವೀರ ಹೋರಾಟಗಾರರು ತಮ್ಮ ಕಷ್ಟದ ಸಂದರ್ಭಗಳಲ್ಲಿ ದೇಶಕ್ಕಾಗಿ ಹೋರಾಡುವಾಗ ವಂದೇ ಮಾತರಂ ಹೇಳುತ್ತಿದ್ದರು. ಈ ಗೀತೆಯ ಸಾಲುಗಳ ಶಕ್ತಿ ಅಂತಹುದು. ಆದರೆ ಸ್ವಾತಂತ್ರ್ಯದ ಬಳಿಕ ಈ ಗೀತೆಯನ್ನು ನಿರ್ಲಕ್ಷಿಸುವ ಕಾರ್ಯ ನಡೆಯಿತು. ಹಾಡಿನ ಸಾಲುಗಳಿಗೆ ಕತ್ತರಿ ಪ್ರಯೋಗ ನಡೆಸುವ ಕಾರ್ಯವೂ ನಡೆದಿರುವುದು ಬೇಸರದ ಸಂಗತಿ ಎಂದರು.
ವಂದೇ ಮಾತರಂ ಹಾಡುವಾಗ ಅದರ ಸಾಲುಗಳನ್ನು ಸರಿಯಾಗಿ ಅರ್ಧ ಮಾಡಿಕೊಂಡಲ್ಲಿ ಮೈ ರೋಮಾಂಚನಗೊಳ್ಳುತ್ತದೆ. ಅಷ್ಟು ಗಂಭೀರ ಒಳ ಅರ್ಥಗಳನ್ನು ಅದು ಒಳಗೊಂಡಿದೆ. ಇದನ್ನು ಹಾಡುವ ಸಂದರ್ಭದಲ್ಲಿ ಇದು ನಮ್ಮ ದೇಶಕ್ಕಾಗಿ ಹೋರಾಡಿದ ಮಹಾನ್ ವೀರ ಪುರುಷರ ಬಾಯಲ್ಲಿ ಅನುರಣಿಸಿದ ಪದ ಎಂಬುದು ನಮ್ಮಲ್ಲಿ ಜಾಗೃತವಾಗಿರಬೇಕು. ಬ್ರಿಟೀಷರ ವಿರುದ್ಧ ಹೋರಾಡಲು ಸ್ಪೂರ್ತಿ ತುಂಬಿದ ಈ ಗೀತೆ ನಮ್ಮೊಳಗೆ ರಾಷ್ಟ್ರ ಜಾಗೃತಿಯನ್ನು ಮೂಡಿಸಲು ಸಹಕಾರಿಯಾಗಲಿದೆ ಎಂದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ, ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಂಶುಪಾಲ ಗಣೇಶ್ ಪ್ರಸಾದ್ ಡಿ.ಎಸ್. ಉಪಸ್ಥಿತರಿದ್ದರು. ಬಪ್ಪಳಿಗೆ ಪದವಿಪೂರ್ವ ವಿದ್ಯಾಲಯದ ಗಣಿತಶಾಸ್ತ್ರ ಉಪನ್ಯಾಸಕಿ ಜೀವಿತಾ ಕಾರ್ಯಕ್ರಮ ನಿರ್ವಹಿಸಿದರು.