ಪುತ್ತೂರು: ಪುತ್ತೂರು ಕೋ-ಒಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ನೂತನ ವೆಬ್ಸೈಟ್ ಮತ್ತು ಸ್ಟೇಷನರಿ ಹಾಗೂ ರೆಕಾರ್ಡ್ ರೂಮ್ ನ.14ರಂದು ಉದ್ಘಾಟಿಸಲಾಯಿತು.
ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಅವರು ಬ್ಯಾಂಕಿನ ನೂತನ ವೆಬ್ಸೈಟ್ನ್ನು ಅಂತರ್ಜಾಲದಲ್ಲಿ ಅನಾವರಣಗೊಳಿಸಿ ಗ್ರಾಹಕರು ಮತ್ತು ಸದಸ್ಯರಿಗೆ ಇದು ಬಹು ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಈ ವೆಬ್ಸೈಟ್ ಮುಖಾಂತರ ಬ್ಯಾಂಕಿನ ವಿವಿಧ ಸೇವೆಗಳು, ಯೋಜನೆಗಳು ಮತ್ತು ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ನೂತನ ಸುಸಜ್ಜಿತ ಸ್ಟೇಷನರಿ ಮತ್ತು ರೆಕಾರ್ಡ್ ರೂಮ್ ಕೂಡ ಉದ್ಘಾಟಿಸಿದರು. ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ. ಶೇಖರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನೂತನ ವೆಬ್ಸೈಟ್ ಭೇಟಿ ನೀಡುವ ಮೂಲಕ ಬ್ಯಾಂಕಿನ ಸೌಲಭ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ಜನಸಾಮಾನ್ಯರು ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.
ಬ್ಯಾಂಕಿನ ಉಪಾಧ್ಯಕ್ಷ ಶ್ರೀಧರ ಗೌಡ ಕಣಜಾಲು, ನಿರ್ದೇಶಕರಾದ ಬಪ್ಪಳಿಗೆ ಚಂದ್ರಶೇಖರ ರಾವ್, ಕಿರಣ್ ಕುಮಾರ್ ರೈ, ರಾಜು ಶೆಟ್ಟಿ, ರಾಮಚಂದ್ರ ಕಾಮತ್, ಮಲ್ಲೇಶ್ ಕುಮಾರ್, ಸಿ.ಎ. ಅರವಿಂದ ಕೃಷ್ಣ, ಗಣೇಶ ಕೌಕ್ರಾಡಿ, ಸೀಮಾ ಎ.ಎ., ವೀಣಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನೂತನ ವೆಬ್ಸೈಟ್ ಸಂಯೋಜನೆಯನ್ನು ರಾಮಚಂದ್ರ ಶೆಣೈ ನಿರ್ವಹಿಸಿ ವಿವರ ನೀಡಿದರು. ಪುತ್ತೂರು ಶಾಖೆಯ ಶಾಖಾಧಿಕಾರಿ ಚಿದಂಬರ, ವಿಟ್ಲ ಶಾಖೆಯ ಶಾಖಾಧಿಕಾರಿ ಜ್ಯೋತಿ ಎನ್.ಎಸ್. ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
