ಆಳ್ವಾಸ್ನ 350 ವಿದ್ಯಾರ್ಥಿ ಕಲಾವಿದರಿಂದ 3 ಗಂಟೆ ಸಾಂಸ್ಕೃತಿಕ ಪ್ರದರ್ಶನ
ಸಾಂಸ್ಕೃತಿಕ ಲೋಕಕ್ಕೆ ಕರೆದೊಯ್ದ ಕಲಾತಂಡ ಯೋಗ, ನೃತ್ಯ, ಜನಪದ, ಯಕ್ಷಗಾನ ಸಹಿತ 12 ವಿವಿಧ ಪ್ರಾಕಾರಗಳ ಪ್ರದರ್ಶನ

ಪುತ್ತೂರು: ಆಳ್ವಾಸ್ ನುಡಿಸಿರಿ ವಿರಾಸತ್ ಪುತ್ತೂರು ಘಟಕದ ಆಶ್ರಯದಲ್ಲಿ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯ ಸಿ.ಎಚ್.ಕೋಚಣ್ಣ ರೈ ಪ್ರಾಂಗಣದ ಜಿ.ಎಲ್.ಆಚಾರ್ಯ ವೇದಿಕೆಯಲ್ಲಿ ನ.16ರಂದು ಸಂಜೆ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ನೋಡುಗರ ಮನಸೂರೆಗೊಂಡಿತು. ನಿರಂತರ 3 ಗಂಟೆಗಳ ಕಾಲ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ೩೫೦ ವಿದ್ಯಾರ್ಥಿ ಕಲಾವಿದರಿಂದ ದೇಸಿ ಸೊಬಗಿನ ವಿವಿಧ ಸಾಂಸ್ಕೃತಿಕ ವೈಭವ ಪ್ರದರ್ಶನಗೊಂಡಿತು. ಕಣ್ಮನ ಸೆಳೆಯುವ ವಿವಿಧ ನೃತ್ಯ ರೂಪಕವನ್ನು ಜನತೆ ಕಣ್ತುಂಬಿಕೊಂಡರು. ಕೊನೆಯಲ್ಲಿ ಸುಡುಮದ್ದು ಪ್ರದರ್ಶನವೂ ನಡೆಯಿತು.
ಆಳ್ವಾಸ್ನಲ್ಲಿ ರಾಷ್ಟ್ರ ನಿರ್ಮಾಣದ ವಿದ್ಯಾರ್ಥಿಗಳಾಗುತ್ತಾರೆ:
ಸಾಂಸ್ಕೃತಿಕ ವೈಭವ ಉದ್ಘಾಟಿಸಿದ ಮಾಜಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಕಲೆ, ಸಾಹಿತ್ಯ, ಸಂಗೀತವನ್ನು ದೇವತಾ ಆರಾಧನೆಯಲ್ಲಿ ಜೋಡಿಸಿರುವ ದೇಶ ಭಾರತ. ಜಗತ್ತಿಗೆ ಕಲಾ ವೈಭವವನ್ನೂ ತೋರಿಸಿರುವ ದೇಶ ಭಾರತ. ಇಂತಹ ಕಲಾ ವೈಭವವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯು ತನ್ನ ವಿದ್ಯಾರ್ಥಿಗಳ ಮೂಲಕ ಜನ ಸಮುದಾಯದ ಮುಂದಿಡುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವರಿಗೆ ಅಭಿನಂದನೆ ಸಲ್ಲಿಸಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣದ ಕಾಶಿ. ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರದ ಮೂಲಕ ಶ್ರೇಷ್ಟ ವ್ಯಕ್ತಿತ್ವ ರೂಪಿಸುತ್ತಿದೆ. ಪುತ್ತೂರಿನಲ್ಲಿ ಸಾಂಸ್ಕೃತಿಕ ವೈಭವದ ಮೂಲಕ ಇಲ್ಲಿನ ವಿದ್ಯಾರ್ಥಿಗಳಿಗೂ ಪ್ರೇರಣೆ ನೀಡುವ ಕೆಲಸ ಮಾಡಿದ್ದಾರೆ. ಈ ಸಂಸ್ಥೆ ಶಿಕ್ಷಣದ ಜೊತೆ ಕ್ರೀಡೆಗೂ ಆದ್ಯತೆ ನೀಡಿದೆ. ಸಾಹಿತ್ಯ ಸಮ್ಮೇಳನದ ಮೂಲಕ ಸಾಹಿತ್ಯದ ಅಭಿರುಚಿಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಮುಂದೆ ವೈದ್ಯಕೀಯ ಶಿಕ್ಷಣ ಸಂಸ್ಥೆ ತೆರೆಯುವ ಪ್ರಯತ್ನದಲ್ಲೂ ಇದ್ದಾರೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದರೆ ಮಾನವ ಬಾಂಬರ್ ಆಗಲಿಕ್ಕಿಲ್ಲ. ರಾಷ್ಟ್ರ ನಿರ್ಮಾಣದ ವಿದ್ಯಾರ್ಥಿಗಳಾಗುತ್ತಾರೆ. ಆ ಕೊಡುಗೆಯನ್ನು ಆಳ್ವರು ನೀಡುತ್ತಿದ್ದಾರೆ ಎಂದರು.
ಸೌಂದರ್ಯ ಪ್ರಜ್ಞೆ ದೇಶದ ಬಹು ದೊಡ್ಡ ಸಂಪತ್ತು:
ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ಇದು ಯಾವುದೇ ಪ್ರಚಾರ ಅಥವಾ ವಿದ್ಯಾಸಂಸ್ಥೆಯ ಮಕ್ಕಳನ್ನು ಸೇರಿಸುವ ಕಾರ್ಯಕ್ರಮವಲ್ಲ. ಕೇವಲ ಸಾಂಸ್ಕೃತಿಕ ವಿನಿಮಯವಾಗಿದೆ. ಸಮಾಜವನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಆಳ್ವಾಸ್ ನುಡಿಸಿರಿ 17 ಆಗಿದೆ. ವಿರಾಸತ್ 30 ಆಗಿದೆ. ವಿಶ್ವ ನುಡಿಸಿರಿ ವಿರಾಸತ್ ಒಂದು ಸಲ ಆಗಿದೆ. ರಾಜ್ಯದಲ್ಲಿ 90 ವಿರಾಸತ್ ಘಟಕ ಮಾಡಿ ಪ್ರತಿ ವರ್ಷವೂ ಕಾರ್ಯಕ್ರಮ ನೀಡುತ್ತಿದ್ದೇವೆ. ದೇಶದಲ್ಲಿ ಅನೇಕ ಧರ್ಮ, ಸಂಸ್ಕೃತಿಗಳಿವೆ. ಮಿನಿ ಭಾರತದಂತೆ ಸಂಸ್ಥೆಯನ್ನು ಕಟ್ಟಿದ್ದೇವೆ. ಇಲ್ಲಿ ಎಲ್ಲಾ ಜಾತಿ, ಮತ, ಧರ್ಮದವರಿದ್ದಾರೆ. ಹಲವು ಕಾರ್ಯಕ್ರಮ ನೀಡುತ್ತಿದ್ದೇವೆ. ಸಂಸ್ಥೆಯಿಂದ ಐದು ವಿಧದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿದ್ದೇವೆ. ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಅಂಗನ್ಯೂನ್ಯತೆ ಇರುವ ಮಕ್ಕಳನ್ನೂ ದತ್ತು ಸ್ವೀಕಾರ ಮಾಡಿ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಕನ್ನಡ ಭಾಷೆಗೆ ಒತ್ತು ನೀಡಲು ಕನ್ನಡ ಮಾಧ್ಯಮ ಶಾಲೆ ಆರಂಭಿಸಿ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದೆ. ಪರಿಶಿಷ್ಟ ಪಂಗಡದ ಸುಮಾರು 7 ಜನಾಂಗವನ್ನು ಆಯ್ದು ಕೊಂಡು ಅಲ್ಲೂ ಕೆಲ ಮಕ್ಕಳನ್ನು ದತ್ತು ಸ್ವೀಕಾರ ಮಾಡಿ ಅವರಿಗೂ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಒಟ್ಟಿನಲ್ಲಿ ನಮ್ಮ ವಿದ್ಯಾಸಂಸ್ಥೆಯಲ್ಲಿ 20 ಸಾವಿರ ಮಕ್ಕಳ ಪೈಕಿ 3 ಸಾವಿರ ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಇದಕ್ಕಾಗಿ ವಾರ್ಷಿಕವಾಗಿ 50 ಕೋಟಿ ರೂ. ವೆಚ್ಚ ಮಾಡುತ್ತಿದ್ದೇವೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 400 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಅವರಿಗೆ ನಮ್ಮ ದೇಶದ ಶಾಸೀಯ, ನೃತ್ಯ ಕಲೆಗಳ ಬಗ್ಗೆ ತಿಳಿಸಿ ಅವರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತಾ ಸೌಂದರ್ಯ ಪ್ರಜ್ಞೆ ನೀಡುವ ಆಸೆ ನನಗಿದೆ. ಎಲ್ಲಿ ಸೌಂದರ್ಯ ಪ್ರಜ್ಞೆ ಇದೆಯೋ ಅವರು ದೇಶವನ್ನು, ಕಲೆಯನ್ನು, ಕಲಾವಿದರನ್ನು, ಪರಿಸರವನ್ನು ಪ್ರೀತಿಸುತ್ತಾರೆ. ಅವರೇ ದೇಶದ ಬಹು ದೊಡ್ಡ ಸಂಪತ್ತು. ಯಾರಿಗೆ ಸೌಂದರ್ಯ ಪ್ರಜ್ಞೆ ಇಲ್ಲವೋ ಅವರು ದೇಶದ ಅಪಾಯಕಾರಿ ವ್ಯಕ್ತಿ ಆಗುತ್ತಾರೆ. ಎಲ್ಲಾ ಮಕ್ಕಳೂ ಸೌಂದರ್ಯ ಪ್ರಜ್ಞೆ ಬೆಳೆಸುವವರಾಗಬೇಕು. ನಮಗೆ ವಿದ್ಯಾರ್ಥಿಗಳ ಶಕ್ತಿಯ ಮೇಲೆ ಅಪಾರವಾದ ಗೌರವವಿದೆ. ದೇಶದ 142 ಕೋಟಿ ಜನಸಂಖ್ಯೆಯಲ್ಲಿ 52 ಕೋಟಿ ಯುವ ಸಮುದಾಯವಿದೆ. ಹಾಗಾಗಿ ನಾವು ಮಕ್ಕಳ ಮೇಲೆ ಭರವಸೆ ಇಡಬೇಕು. ಅವರಿಗೆ ವಿದ್ಯಾಬುದ್ದಿಯ ಜೊತೆ ಸಂಸ್ಕಾರ ಕೊಡಿಸಬೇಕು ಎಂದರು.
ಅವಿಭಜಿತ ದ.ಕ.ಜಿಲ್ಲೆ ಆಳ್ವಾಸ್ ಕಾರ್ಯಕ್ರಮದ ಪರವಾಗಿದೆ;
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಡಾ.ಎಂ.ಮೋಹನ್ ಆಳ್ವ ಅವರು ನಮಗೆ ಸಮಯದ ಕುರಿತು ಮಾರ್ಗದರ್ಶನ ನೀಡಿದವರು. ಆಳ್ವಾಸ್ ವಿದ್ಯಾಸಂಸ್ಥೆ ವಿದ್ಯೆಯ ಜೊತೆಗೆ ಸಾಂಸ್ಕೃತಿಕ, ಕ್ರೀಡೆಗೂ ಆದ್ಯತೆ ನೀಡುತ್ತಿದೆ. ಇದು ನಮಗೂ ಹೆಮ್ಮೆ. ಆಳ್ವಾಸ್ ನುಡಿಸಿರಿಗೆ ಬೇಡಿಕೆಯೂ ಇದೆ. ಪಕ್ಷಾತೀತ, ಜಾತ್ಯಾತೀತವಾಗಿ ಅವರೇ ಬಂದು ಕಾರ್ಯಕ್ರಮ ನೀಡುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನ ಆಳ್ವಾಸ್ ಕಾರ್ಯಕ್ರಮದ ಪರವಾಗಿದ್ದಾರೆ ಎಂದರು.
ಡಾ.ಎಂ.ಮೋಹನ್ ಆಳ್ವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವ ಅನಿವಾರ್ಯತೆ ದೇಶಕ್ಕಿದೆ:
ಬಾರ್ಕೂರು ಸಂಸ್ಥಾನ ಮಠದ ಸಂತೋಷ್ ಗುರೂಜಿ ಆಶೀರ್ವಚನ ನೀಡಿದರು. ಆಳ್ವರು ಸಮಯಕ್ಕೆ ಮಹತ್ವ ನೀಡುತ್ತಾರೆ. ಅವರ ಶ್ರದ್ಧೆಯನ್ನು ಸಮಾಜಕ್ಕೆ ಕೊಟ್ಟಿದ್ದಾರೆ. ಶಿಕ್ಷಣ ಸಂಸ್ಥೆಯ ಮಕ್ಕಳಿಗೂ ಅಷ್ಟೇ ಮಹತ್ವ ಕೊಟ್ಟಿದ್ದಾರೆ. ಮಕ್ಕಳು ಪದವೀಧರರಾಗುವುದು ಮುಖ್ಯವಲ್ಲ. ವಿದ್ಯಾವಂತರಾಗುವುದು ಮುಖ್ಯ. ಎಲ್ಲಿ ಸಂಸ್ಕಾರ ಕಲಿಸಿಕೊಡುತ್ತೇವೆಯೋ ಅಲ್ಲಿ ಸಂಸ್ಕೃತಿ ಬೆಳೆಯುತ್ತದೆ. ಎಷ್ಟೋ ಶಾಲೆಗಳಲ್ಲಿ ಕೇವಲ ರ್ಯಾಂಕ್ಗಳಿಕೆ ಮಾತ್ರ ಒತ್ತು ನೀಡಲಾಗುತ್ತದೆ. ಎಲ್ಲಾ ರೀತಿಯಲ್ಲೂ ಉತ್ತಮ ಸೇವೆ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವರನ್ನು ಸರಕಾರ ಗುರುತಿಸಿ ಮುಂದೊಂದು ದಿನ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡುವ ಅನಿವಾರ್ಯತೆ ದೇಶಕ್ಕೆ ಇದೆ ಎಂದು ಹೇಳಿದರು.
ಮಾಜಿ ಶಾಸಕರಾದ ಸಂಜೀವ ಮಠಂದೂರು, ಶಕುಂತಳಾ ಟಿ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಚಿನ್ ಟ್ರೇಡರ್ಸ್ನ ಮಾಲಕ ಮಂಜುನಾಥ್ ನಾಯಕ್, ಮುಳಿಯ ಗೋಲ್ಡ್ ಆಂಡ್ ಡೈಮಂಡ್ನ ಪ್ರಧಾನ ಆಡಳಿತಾಧಿಕಾರಿ ಮತ್ತು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಎಸ್.ಆರ್.ಕೆ.ಲ್ಯಾಡರ್ಸ್ನ ಮಾಲಕ ಕೇಶವ ಅಮೈ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕ ಜಿ.ಎಲ್ ಬಲರಾಮ ಆಚಾರ್ಯ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಸುರೇಶ್ ಪುತ್ತೂರಾಯ, ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಕ್ಯಾಂಪ್ರೋದ ನಿವೃತ್ತ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಮೋದ್ ಕುಮಾರ್ ರೈ ಇಳಂತಾಜೆ, ಕರಾವಳಿ ಅಭಿವೃದ್ಧಿ ಪ್ರಾಽಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ರೋಟರಿ ಕ್ಲಬ್ ಬೀರಮಲೆ ಇದರ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಳ್ಯೊಟ್ಟು, ಪುತ್ತೂರು ತಾ. ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ಬಿಂದು ಗ್ರೂಪ್ನ ಸಿಎಂಡಿ ಸತ್ಯಶಂಕರ್ ದಂಪತಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಜನಪದ ವಿದ್ವಾಂಸ ಡಾ. ರವೀಶ ಪಡುಮಲೆ, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಧ್ಯಕ್ಷ ಎನ್.ಕರುಣಾಕರ ಸುವರ್ಣ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್, ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಯೋಜನಾಽಕಾರಿ ಶಶಿಧರ್, ಕಸಾಪ ಪುತ್ತೂರು ತಾಲೂಕು ಅಧ್ಯಕ್ಷ ಉಮೇಶ್ ನಾಯಕ್, ತುಳುಕೂಟ ಪುತ್ತೂರು ಇದರ ಅಧ್ಯಕ್ಷ ಪ್ಯಾಟ್ರಿಕ್ ಸಿಫ್ರಿಯನ್ ಮಸ್ಕರೇನ್ಹಸ್, ಜನಪದ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಂತೋಷ್ ಕುಮಾರ್ ರೈ, ಹಿರಿಯ ಯಕ್ಷಗಾನ ಕಲಾವಿದ ದಾಸಪ್ಪ ರೈ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಸಿದ್ದಿಕ್ ನಿರಾಜೆ, ಪ್ರಗತಿ ವಿದ್ಯಾಸಂಸ್ಥೆ ಕಾಣಿಯೂರು ಇದರ ಸಂಚಾಲಕ ಜಯಸೂರ್ಯ ರೈ ಮಾದೋಡಿ, ನಿವೃತ್ತ ಪ್ರಾಚಾರ್ಯ ಪ್ರೊ. ಎ.ವಿ.ನಾರಾಯಣ, ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು, ಜಿ.ಪಂ.ನಿವೃತ್ತ ಮುಖ್ಯ ಕಾರ್ಯನಿರ್ವಹಣಾಽಕಾರಿ ಕೆ ಸುಂದರ ನಾಯಕ್, ಸಂಜೀವ ಶೆಟ್ಟಿ ಜವುಳಿ ಮಳಿಗೆಯ ಎಂ.ಗಿರಿಧರ ಶೆಟ್ಟಿ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ಬಿ.ದೀಪಕ್ ಕುಮಾರ್, ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಕಹಳೆ ನ್ಯೂಸ್ನ ಶ್ಯಾಮ್ ಸುದರ್ಶನ್ ಭಟ್, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಸಹಕಾರ ರತ್ನ ದಂಬೆಕಾನ ಸದಾಶಿವ ರೈ, ಬಿಳಿಯೂರುಗುತ್ತು ಧನ್ಯ ಕುಮಾರ್ ರೈ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಂಗಳೂರು ವಿ.ವಿ ನಾರಾಯಣ ಗುರು ಅಧ್ಯಯನ ಪೀಠದ ಸಲಹಾ ಸಮಿತಿ ಸದಸ್ಯ ವಿಜಯ ಕುಮಾರ್ ಸೊರಕೆ, ಎಸ್ಡಿಪಿ ರೆಮಿಡೀಸ್ನ ಡಾ. ಹರಿಕೃಷ್ಣ ಪಾಣಾಜೆ, ಡಾ. ಶಶಿಧರ್ ಕಜೆ, ಡಾ.ಹೆಚ್ ಮಾಧವ ಭಟ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಕರುಣಾಕರ ರೈ ದೇರ್ಲ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಚಂದ್ರಹಾಸ ರೈ, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ರೈ ನಡುಬೈಲು, ರಂಗಕರ್ಮಿ ಐ.ಕೆ.ಬೊಳುವಾರು, ನಲ್ಕ ಗೋಪಾಲಕೃಷ್ಣ ಆಚಾರ್ಯ, ನಾರಾಯಣ ರೈ ಕುಕ್ಕುವಳ್ಳಿ, ಜಗಜೀವನ್ದಾಸ್ ರೈ, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ್ ಬಾರ್ಯ, ಜೈರಾಜ್ ಭಂಡಾರಿ, ಆಳ್ವಾಸ್ ನುಡಿಸಿರಿ ಪುತ್ತೂರು ಘಟಕದ ಅಧ್ಯಕ್ಷರಾಗಿರುವ ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಾಳೆ ವರ್ಷಂತು ಪ್ರಜನ್ಯಹ ಮತ್ತು ವೈಷ್ಣವಿ ಜನತೋ ಪ್ರಾರ್ಥನೆ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ಕಲಾವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಿತೀಶ್ ಮತ್ತಿತರರು ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರೊ. ಉಷಾ, ಆಳ್ವಾಸ್ ನುಡಿಸಿರಿ ಪುತ್ತೂರು ಘಟಕದ ಕಾರ್ಯಾಧ್ಯಕ್ಷ ಬಿ.ಪುರಂದರ ಭಟ್, ಕಾರ್ಯದರ್ಶಿ ಡಾ| ರಾಜೇಶ್ ಬೆಜ್ಜಂಗಳ, ಕೋಶಾಽಕಾರಿ ಬಿ.ಐತ್ತಪ್ಪ ನಾಯ್ಕ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಮಯ ಪಾಲನೆ;
ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಸಮಯ ಪಾಲನೆಗೆ ಒತ್ತು ನೀಡಿದ್ದು ವಿಶೇಷವಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಸೂಚಿಸಿದಂತೆ ಸಂಜೆ 5.45ಕ್ಕೆ ಸರಿಯಾಗಿ ಸಭಾ ಕಾರ್ಯಕ್ರಮ ಆರಂಭಗೊಂಡು 6.30ಕ್ಕೆ ಮುಕ್ತಾಯಗೊಂಡಿತ್ತು. 6.30ರಿಂದ ನಿರಂತರ ಮೂರುಗಂಟೆಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆದು 9.30ಕ್ಕೆ ಕೊನೆಗೊಂಡಿತು. ಸಮಯ ಪಾಲನೆ ಆಗಿರುವುದು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಯಿತು.
ವಿವಿಧ ಕಲಾಪ್ರಕಾರಗಳ ಅನಾವರಣ
ಆಳ್ವಾಸ್ ಸಾಂಸ್ಕೃತಿಕ ವೈಭವದಲ್ಲಿ ದೇಶದ ವಿವಿಧ ಕಲಾ ಪ್ರಕಾರಗಳ ಅನಾವರಣಗೊಂಡಿತು. ನಿರ್ಮಲ ಕೋಡ್ಲಿಕರ್ ಅವರ ನಿರ್ದೇಶನದಲ್ಲಿ ಶಿವಗೀತೆಯೊಂದಿಗೆ ಯೋಗ ದೀಪಿಕ, ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯ ನಿರ್ದೇಶಕ ವಿದ್ವಾನ್ ಬಿ ದೀಪಕ್ ಕುಮಾರ್ ಅವರ ನಿರ್ದೇಶನದಲ್ಲಿ ಶಾಸೀಯ ನೃತ್ಯ – ಅಷ್ಟಲಕ್ಷ್ಮೀ, ಪೃಥ್ವಿಶ್ ಶೆಟ್ಟಿಗಾರ್, ಶಬರೀಶ್ ಅವರ ನಿರ್ದೇಶನದಲ್ಲಿ ಬಡಗುತಿಟ್ಟು ಯಕ್ಷಗಾನ ಶಂಕರಾರ್ದ ಶರೀರಿಣಿ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಬಸವರಾಜ್ ಮತ್ತು ಚೇತನ್ ಕುಮಾರ್ ನಿರ್ದೇಶನದಲ್ಲಿ ಮಲ್ಲಕಂಬ ಹಾಗೂ ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಉತ್ತರ ಭಾರತದ ಶಾಸೀಯ ನೃತ್ಯ ಕಥಕ್ ನೃತ್ಯ – ವರ್ಷಧಾರೆ, ಡಾ. ಜೀವನ್ರಾಮ್ ಸುಳ್ಯ ಅವರ ನಿರ್ದೇಶನದಲ್ಲಿ ಪುರುಲಿಯಾ ಸಿಂಹ ಭೇಟೆಯ ನೃತ್ಯ, ಅದಿತ್ಯ ಅಂಬಲಪಾಡಿ ಮತ್ತು ಆಳ್ವಾಸ್ ಶಿಕ್ಷಣ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶನದಲ್ಲಿ ತೆಂಕುತಿಟ್ಟು ಯಕ್ಷಗಾನ – ಹಿರಾಣ್ಯಕ್ಷ ವಧೆ, ಬೊಂಬೆ ವಿನೋದಾವಳಿ ನೃತ್ಯಗಳು ಎಲ್ಲರ ಗಮನ ಸೆಳೆದವು.
ಕಂಗೊಳಿಸಿದ ಸಾಂಸ್ಕೃತಿಕ ವೈಭವ
ಆಳ್ವಾಸ್ ಪ್ರತಿಷ್ಠಾನ ಪ್ರತಿವರ್ಷ ಮೂಡಬಿದಿರೆಯಲ್ಲಿ ’ವಿಶ್ವ ನುಡಿಸಿರಿ ವಿರಾಸತ್’ ನಡೆಸಿಕೊಂಡು ಬರುತ್ತಿದೆ. ಪುತ್ತೂರಿನಲ್ಲಿ ಸುಮಾರು 10 ವರ್ಷಗಳ ಬಳಿಕ ಮತ್ತೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಂಗೊಳಿಸಿದೆ. ಆಳ್ವಾಸ್ನ ಸುಮಾರು 350ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದ್ದರು. ಸಣ್ಣಗೆಯ ಚಳಿಯ ನಡುವಲ್ಲೂ ವಿದ್ಯಾರ್ಥಿಗಳಿಂದ ಯೋಗ ದೀಪಿಕ, ಶಾಸೀಯ ನೃತ್ಯ – ಅಷ್ಟಲಕ್ಷ್ಮೀ, ಬಡಗುತಿಟ್ಟು ಯಕ್ಷಗಾನ – ಶ್ರೀರಾಮ ಪಟ್ಟಾಭಿಷೇಕ, ಗುಜರಾತಿನ ದಾಂಡಿಯಾ ನೃತ್ಯ, ಮಣಿಪುರಿ ಸ್ವಿಕ್ ಡ್ಯಾನ್ಸ್, ಮಲ್ಲಕಂಬ ಹಾಗು ರೋಪ್ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ನೃತ್ಯ – ವರ್ಷಧಾರೆ, ಪುರುಲಿಯಾ, ತೆಂಕುತಿಟ್ಟು ಯಕ್ಷಗಾನ – ಅಗ್ರಪೂಜೆ, ಬೊಂಬೆ ವಿನೋದಾವಳಿಯು ನೆರೆದವರನ್ನು ನಿಬ್ಬೆರಗಾಗುವಂತೆ ಮಾಡಿತು. ಅದರಲ್ಲೂ ವಿದ್ಯಾರ್ಥಿಗಳಿಂದ ಮಣಿಪುರ ಸ್ಟಿಕ್ ಡ್ಯಾನ್ಸ್, ಮಲ್ಲಕಂಬ ಹಾಗೂ ರೋಪ್ ಕಸರತ್ತು ಮನಮೋಹಕವಾಗಿ ಮೂಡಿ ಬಂದವು. ಗುಜರಾತಿನ ದಾಂಡಿಯಾ ನೃತ್ಯ ದೇಶಿಯ ಸೊಗಡನ್ನು ಅನಾವರಣಗೊಳಿಸಿತು.