ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಂಗಭೂಮಿ ಕಲಾವಿದ, ಸಿನಿಮಾ ನಟ ನಿರ್ದೇಶಕ ಸುಂದರ ರೈ ಮಂದಾರರವರಿಗೆ ಕುಂಬ್ರ ಸ್ಪಂದನಾ ಸೇವಾ ಬಳಗದ ವತಿಯಿಂದ ನ.16 ರಂದು ಕುಂಬ್ರ ಶ್ರೀ ರಾಮ ಮಂದಿರದ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಶಾಲು, ಹಾರ ಹಾಕಿ,ಪೇಟಾ ತೊಡಿಸಿ ಫಲಪುಷ್ಪ ಸ್ಮರಣಿಕೆಗಳೊಂದಿಗೆ ಗಣ್ಯರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿದ ನಟ ಸುಂದರ ರೈ ಮಂದಾರ ಮಾತನಾಡಿ, ಶ್ರೀರಾಮನ ಪುಣ್ಯ ನೆಲದಲ್ಲಿ ದೊರೆತ ಸನ್ಮಾನ ಇದು ನನಗೆ ಶ್ರೀರಾಮನ ಅನುಗ್ರಹವಾಗಿದೆ. ಕಳೆದ 33 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಮಾಡುತ್ತಿದ್ದೇನೆ. ನನಗೆ ಅಭಿನಯ ಬಿಟ್ಟು ಬೇರೆನೂ ಕೆಲಸ ಗೊತ್ತಿಲ್ಲ ಎಂದ ಮಂದಾರರವರು ಈ ಸನ್ಮಾನ ತುಳುನಾಡಿನ ಕಲಾವಿದರಿಗೆ ಅರ್ಪಣೆ ಮಾಡುವ ಮೂಲಕ ಇದು ಕುಂಬ್ರದ ಜನತೆಯ ಆಶೀರ್ವಾದ ಎಂದು ಭಾವಿಸಿದ್ದೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷಿಕ ಕಡಮಜಲು ಸುಭಾಷ್ ರೈ, ಪುರುಷರಕಟ್ಟೆ ಸರಸ್ವತಿ ವಿದ್ಯಾಮಂದಿರದ ಸಂಚಾಲಕ ಅವಿನಾಶ್ ಕೊಡಂಕೀರಿ, ಶ್ರೀರಾಮ ಮಂದಿರದ ಆಡಳಿತ ಸಮಿತಿ ಅಧ್ಯಕ್ಷ ಮೋನಪ್ಪ ಪೂಜಾರಿ ಬಡಕ್ಕೋಡಿ, ಜಮದಗ್ನಿ ನಾಟಿ ವೈದ್ಯಾಲಯದ ನಾಟಿ ವೈದ್ಯರು, ಅರ್ಚಕರಾದ ರವಿರಾಮ ಭಟ್, ಸ್ಪಂದನಾ ಸೇವಾ ಬಳಗದ ಅಧ್ಯಕ್ಷ ರತನ್ ರೈ ಕುಂಬ್ರ, ಗೌರವ ಸಲಹೆಗಾರ ಸುಧಾಕರ ರೈ ಕುಂಬ್ರ ಮತ್ತಿತರರು ಭಾಗವಹಿಸಿದ್ದರು.
