ನಿಡ್ಪಳ್ಳಿ; ನಿಡ್ಪಳ್ಳಿ ಗ್ರಾಮ ಪಂಚಾಯತ್ ನ 2025-26 ನೇ ಸಾಲಿನ ಮಹಿಳಾ ಗ್ರಾಮ ಸಭೆ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ರವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಮುದಾಯ ಭವನದಲ್ಲಿ ನ.18 ರಂದು ನಡೆಯಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಮಾತನಾಡಿ ಗ್ರಾಮ ಮಟ್ಟದಲ್ಲಿ ಮಹಿಳೆಯರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲವು ಯೋಜನೆಯನ್ನು ತಯಾರಿಸುವ ಬಗ್ಗೆ ತಿಳಿಸಿದರು.ಮಹಿಳೆಯರಿಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಜಾಗದಲ್ಲಿ ತ್ಯಾಜ್ಯ ಎಸೆಯುವವರ ಪತ್ತೆ ಹಚ್ಚುವ ಉದ್ದೇಶದಿಂದ ಸುಮಾರು 20 ಮನೆಗಳನ್ನು ಕವರ್ ಮಾಡುವ ರೀತಿಯಲ್ಲಿ ಸಿ.ಸಿ.ಕ್ಯಾಮರಾ ಆಳವಡಿಸಲು ಕ್ರಮ ಕೈಗೊಳ್ಳಲು ಚಿಂತನೆ ನಡೆಸಲಾಗುವುದು.ಅಲ್ಲದೆ ಗ್ರಾಮದ ಸುಮಾರು ಕನಿಷ್ಠ 20 ಮಂದಿ ಮಹಿಳೆಯರಿಗಾದರೂ ಉದ್ಯೋಗ ಸೃಷ್ಟಿಸಲು ಅವಕಾಶ ನೀಡುವ ನಿಟ್ಟಿನಲ್ಲಿ ತೆಂಗಿನ ಕಾಯಿಯಿಂದ ಮತ್ತು ಇತರ ಉತ್ಪನ್ನಗಳಿಂದ ವಿವಿಧ ಖಾಧ್ಯ ಉತ್ಪನ್ನಗಳ ತಯಾರಿಸುವ ಒಂದು ಘಟಕವನ್ನು ಮುಂದಿನ ದಿನಗಳಲ್ಲಿ ನಿರ್ಮಾಣ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಮಹಿಳಾ ಸಬಲೀಕರಣ ಮತ್ತು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನ; ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ವಲಯ ಮೇಲ್ವಿಚಾರಕಿ ನಂದನರವರು ಮಾಹಿತಿ ನೀಡಿ ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ನಮ್ಮ ಇಲಾಖೆಯ ಮುಖ್ಯ ಉದ್ದೇಶ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಗೆ ತಂದ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಮಾತೃವಂದನಾ, ಬೆಟಿ ಬಚಾವೊ, ಬೆಟಿ ಪಡಾವೊ ಮೊದಲಾದ ಅನೇಕ ಯೋಜನೆಗಳು ಮಹಿಳೆಯರ ಅಭಿವೃದ್ಧಿಗೆ ಸಹಕಾರಿಯಾಗಿದೆ.ಸರಕಾರದ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಒಂದು ಹಾಡಿನ ಮೂಲಕ ಮಹಿಳೆಯ ಶ್ರೇಷ್ಠತೆಯನ್ನು ವರ್ಣಿಸಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮಾಹಿತಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಗ್ರಾಮಾಭಿವೃದ್ದಿಯ ಹೊಸ ಹಾದಿ “ಯುಕ್ತ ದಾರ ” ತಂತ್ರಾಂಶದ ಮೂಲಕ 2026-27 ನೇ ಸಾಲಿನ ಕಾರ್ಮಿಕರ ಆಯವ್ಯಯ ಮತ್ತು ಕ್ರಿಯಾ ಯೋಜನೆ ತಯಾರಿ ಬಗ್ಗೆ ಉದ್ಯೋಗ ಖಾತರಿ ಯೋಜನೆಯ ತಾಲೂಕು ಸಿಬ್ಬಂದಿ ಸುಮನ ಮಾಹಿತಿ ನೀಡಿದರು. ಈ ಸಾಲಿನಲ್ಲಿ ಕಾಮಗಾರಿ ಕೈಗೊಳ್ಳಲು ಇಚ್ಚಿಸುವವರು ನ.20 ರೊಳಗೆ ಪಂಚಾಯತ್ ಗೆ ಅರ್ಜಿ ಸಲ್ಲಿಸಲು ತಿಳಿಸಿದರು.
ಪುತ್ತೂರು ಮಹಿಳಾ ಠಾಣೆಯ ಪಿ.ಎಸ್.ಐ ಸುಷ್ಮಾ ಸಮಾಜದಲ್ಲಿ ಮಹಿಳೆಯರು ತಮ್ಮ ರಕ್ಷಣೆಯನ್ನು ಯಾವ ರೀತಿಯಲ್ಲಿ ಮಾಡಿ ಕೊಳ್ಳ ಬಹುದು ಮತ್ತು ಅದಕ್ಕೆ ಇರುವ ಕಾನೂನು ನಿಯಮಗಳ ಬಗ್ಗೆ ಮಾಹಿತಿ ನೀಡಿದರು.ಮಹಿಳೆಯರಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.ಪಂಚಾಯತ್ ಸದಸ್ಯರಾದ ನಂದಿನಿ ಅರ್.ರೈ, ಗ್ರೇಟಾ ಡಿ”ಸೋಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂಚಾಯತ್ ಸಿಬ್ಬಂದಿ ಜಯಕುಮಾರಿ ಸ್ವಾಗತಿಸಿ, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಭವ್ಯಾ ಬಹುಮಾನದ ಪಟ್ಟಿ ವಾಚಿಸಿದರು.ಎಲ್.ಸಿ.ಅರ್.ಪಿ ಚಿತ್ರಕಲಾ ವಂದಿಸಿದರು. ಗ್ರಂಥ ಪಾಲಕಿ ಪವಿತ್ರ.ಜಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ರೇವತಿ,ಸಂಶೀನಾ, ವಿನೀತ್ ಕುಮಾರ್, ಪಶುಸಖಿ ತೇಜಸ್ವಿನಿ, ಕೃಷಿ ಸಖಿ ಹೇಮಾವತಿ ಮುಂತಾದವರು ಸಹಕರಿಸಿದರು.ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ವಚ್ಚತಾ ಘಟಕ ಸಿಬ್ಬಂದಿಗಳು ಹಾಗೂ ಮಹಿಳೆಯರು ಪಾಲ್ಗೊಂಡರು.
ಸಮುದಾಯ ಆರೋಗ್ಯ ಅಧಿಕಾರಿ ಛಲವಾದಿ ಲಕ್ಷ್ಮೀ ಮಾಹಿತಿ ನೀಡಿ ಮಹಿಳೆಯರು ಸ್ವಚ್ಚತೆ ಮತ್ತು ಆರೋಗ್ಯದ ರಕ್ಷಣೆ ಮಾಡುವುದು.ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ ಲಾಲನೆ ಮತ್ತು ಪಾಲನೆ ಮಾಡುವುದು.ಮಹಿಳೆಯರು ಕೂಡ ಪೌಷ್ಟಿಕ ಆಹಾರ ಬಳಸಿಕೊಂಡು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು.ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಅನಿಮಿಯಾ ರೋಗ ಮುಕ್ತವಾಗಲು ಬೇಕಾದ ಪೌಷ್ಟಿಕ ಆಹಾರ ತೆಗೆದುಕೊಳ್ಳುವ ಬಗ್ಗೆ ತಿಳಿಸಿದರು.ಬ್ಲಡ್ ಮತ್ತು ಸ್ತನ ಕ್ಯಾನ್ಸರ್ ಬರದ ಹಾಗೆ ಮುನ್ನೆಚ್ಚರಿಕೆ ವಹಿಸುವುದು. ಅಲ್ಲದೇ ಯಾವುದೇ ರೋಗದ ಲಕ್ಷಣ ಕಂಡು ಬಂದರೂ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆದು ಕೊಂಡು ಆರೋಗ್ಯವಂತ ಜೀವನ ನಡೆಸುವ ಬಗ್ಗೆ ಸೂಕ್ತ ಮಾಹಿತಿ ನೀಡಿದರು.