ಪುತ್ತೂರು: ಸಾಮೆತ್ತಡ್ಕದಲ್ಲಿ ನಿರ್ಮಾಣಗೊಳ್ಳಲಿರುವ ನಗರ ಆರೋಗ್ಯ ಕೇಂದ್ರವನ್ನು ಪಶ್ಚಿಮಾಭಿಮುಖವಾಗಿ ನಿರ್ಮಿಸಿ ನಾಗರಿಕರಿಗೆ, ಚಿಕಿತ್ಸೆಗೆ ಬರುವ ರೋಗಿಗಳಿಗೆ ಅನುಕೂಲ ಮಾಡಿಕೊಡುವಂತೆ ಪುತ್ತೂರು ನಗರಸಭೆ ವ್ಯಾಪ್ತಿಯ ನಿವಾಸಿಗಳಿಂದ ನಗರಸಭೆಯ ಪೌರಾಯುಕ್ತರಿಗೆ ವಿದ್ಯಾ ಕಾಳೆರವರಿಗೆ ನ.12ರಂದು ಮನವಿ ಮಾಡಲಾಗಿದ್ದು, ನಗರ ಆರೋಗ್ಯ ಕೇಂದ್ರಕ್ಕೆ ಮಂಗಳೂರು ಆರೋಗ್ಯ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಗುರುಪ್ರಸಾದ್ ರವರ ತಂಡ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸದ್ರಿ ನಿರ್ಮಾಣವಾಗುವ ಕಟ್ಟಡದ ಮುಂಬದಿ ಹಾಗೂ ಹಿಂಬದಿ ಎರಡು ಡಾಮಾರು ರಸ್ತೆಗಳು ಹಾದು ಹೋಗಿರುತ್ತದೆ. ಮಾತ್ರವಲ್ಲ ಈ ಎರಡೂ ರಸ್ತೆಗಳು ಪಿಡಬ್ಲ್ಯೂಡಿ ಇಲಾಖೆಗೆ ಸಂಬಂಧಪಟ್ಟದ್ದಾಗಿದೆ. ಇದೀಗ ಇಂಜಿನಿಯರ್ ರವರ ತಂಡ ಗ್ರಾಮಸ್ಥರೊಂದಿಗೆ ವಿಚಾರ ವಿನಿಮಯದ ಬಳಿಕ ಸದ್ರಿ ರಚನೆಯಾಗುವ ಕಟ್ಟಡವನ್ನು ಒಂದೂವರೆ ಮೀಟರ್ ತಗ್ಗಿಸುವುದು, ಪೂರ್ವಾಭಿಮುಖವಾಗಿ ನಿರ್ಮಿಸುವುದು, ಮುಂದಿನ ದಿನಗಳಲ್ಲಿ ಈ ಎರಡು ರಸ್ತೆಯನ್ನು ಒನ್ ವೇ ರಸ್ತೆಯನ್ನಾಗಿ ಮಾರ್ಪಡಿಸಲು ಶಾಸಕರಲ್ಲಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗುವುದು ಎಂದು ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಇಂಜಿನಿಯರ್ ಸುಧಾಕರ್, ಕಾಂಟ್ರಾಕ್ಟರ್ ಗುರುಪ್ರಸಾದ್ ರೈ, ಎಸಿಸಿಐಯ ಕಾರ್ಯದರ್ಶಿ ವೆಂಕಟ್ರಾಜ್ ಹಾಗೂ ನಿವಾಸಿಗಳಾದ ಮೌರಿಸ್ ಮಸ್ಕರೇನ್ಹಸ್ ಸಾಮೆತ್ತಡ್ಕ, ಚಂದ್ರಶೇಖರ(ಅಶ್ವಿನಿ) ಸಾಮೆತ್ತಡ್ಕ, ಜೋನ್ ಪೀಟರ್ ಡಿಸಿಲ್ವ ಸಾಮೆತ್ತಡ್ಕ, ಗುರುಪ್ರಸಾದ್ ನಾಯಕ್ ಕಲ್ಲಾರೆ, ರವೀಂದ್ರ ಹೆಗ್ಗಡೆ ಸಾಮೆತ್ತಡ್ಕ, ದೇವಾ ಟ್ರೇಡರ್ಸ್ ನ ಟಿ.ವಿ ರವೀಂದ್ರನ್, ಭೀಮ ಭಟ್ ಕರಿಯಾಲ್, ಪಾವ್ಲ್ ಮೊಂತೇರೊ ಕಲ್ಲಾರೆ, ವಾಸು ನಾಯ್ಕ ಸಾಮೆತ್ತಡ್ಕ ಸಹಿತ ಮತ್ತೀತರರು ಉಪಸ್ಥಿತರಿದ್ದರು.
ಗ್ರಾಮಸ್ಥರು ಈಗಾಗಲೇ ಮನವಿಯ ಪ್ರತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಂಗಳೂರಿನ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈರವರಿಗೆ ಕಳುಹಿಸಿ ಕೊಡಲಾಗಿತ್ತು.