25 ವರ್ಷದ ಹಿಂದಿನ ಬೇಡಿಕೆ ಈಡೇರಿಸಿದ ಶಾಸಕ ಅಶೋಕ್ ರೈ
ಪುತ್ತೂರು: ನರಿಮೊಗರು ಗ್ರಾಮದ ಆಲಂಗ-ಶಿಬರ- ನಡುವಾಲ್ ನಿವಾಸಿಗಳ 25 ವರ್ಷದ ಹಿಂದಿನ ಬೇಡಿಕೆಯನ್ನು ಶಾಸಕ ಅಶೋಕ್ ರೈ ಅವರು ಈಡೇರಿಸಿದ್ದಾರೆ.
ಈ ಭಾಗದಲ್ಲಿ 25 ಮನೆಗಳಿದ್ದು ರಸ್ತೆ ಖಾಸಗಿ ಜಾಗದಲ್ಲಿ ಹಾದು ಹೋಗಬೇಕಾದ ಕಾರಣ ಈ ಸಮಸ್ಯೆ ಉಂಟಾಗಿತ್ತು. ಶಾಸಕರು ಖಾಸಗಿ ಜಾಗದ ಮಾಲಕರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಇತ್ಯರ್ಥ ಮಾಡಿದ್ದಾರೆ.
25 ವರ್ಷದ ಬೇಡಿಕೆ ಈಡೇರಿದೆ:ಅಶೋಕ್ ರೈ
ಇಲ್ಲಿನ ರಸ್ತೆ ಸಮಸ್ಯೆ ಬಗ್ಗೆ ಮಾತನಾಡಲು ಈ ಭಾಗದ ಕಾಂಗ್ರೆಸ್ ವಲಯಾಧ್ಯಕ್ಷ ಹೊನ್ನಪ್ಪ ಕೈಂದಾಡಿ, ಬಾಬು ಶೆಟ್ಟಿ ಸಹಿತ ಕೆಲವರು ಬಂದಿದ್ದರು. ಇಲ್ಲಿ 25 ಮನೆಗಳಿದ್ದು ಮನೆಗೆ ತೆರಳಲು ರಸ್ತೆ ಇಲ್ಲದ ಕಾರಣ ಸಮಸ್ಯೆ ಗಂಭೀರವಾಗಿಯೇ ಇದೆ. ಯಾರೂ ಈ ಭಾಗಕ್ಕೆ ಬಂದು ಜನರ ಸಮಸ್ಯೆಯನ್ನು ಆಲಿಸಿಲ್ಲ ಎಂದು ಹೇಳಿದ್ದರು. ರಸ್ತೆ ನಿರ್ಮಾಣವಾಗಬೇಕಾದರೆ ಜಾಗದ ಪ್ರಮುಖರಾದ ಬಾಲಚಂದ್ರ ಮತ್ತು ಕಿಶೋರ್ ಅವರನ್ನು ಕರೆಸಿ ಮಾತುಕತೆ ಮಾಡಿದಾಗ ಬಹಳ ಪ್ರೀತಿಯಿಂದ ಜಾಗ ಬಿಟ್ಟು ಕೊಡಲು ಸಿದ್ದರಾಗಿದ್ದಾರೆ. ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಈ ಭಾಗದ ಗ್ರಾಮಸ್ಥರು ಕೂಡಾ ನನ್ನಲ್ಲಿ ರಸ್ತೆಯ ಬೇಡಿಕೆಯನ್ನು ಇಟ್ಟಿದ್ದರು. ರಸ್ತೆ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡಲಾಗಿದೆ. ಈ ರಸ್ತೆಯ ಅಭಿವೃದ್ದಿಗೆ 5 ಲಕ್ಷ ಅನುದಾನವನ್ನು ನೀಡುತ್ತಿದ್ದೇನೆ ಎಂದು ಶಾಸಕರು ಘೋಷಣೆ ಮಾಡಿದರು.
ರಸ್ತೆಗೆ ಜಾಗ ಬಿಟ್ಟಿದ್ದೇವೆ: ಕಿಶೋರ್
ಶಾಸಕ ಅಶೋಕ್ ರೈ ಮತ್ತು ಈ ಭಾಗದ ಜನರು ರಸ್ತೆ ಸಮಸ್ಯೆ ಬಗ್ಗೆ ಕೇಳಿಕೊಂಡಾಗ ನಾವು ನಮ್ಮ ವರ್ಗ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಅವಕಾಶ ಮಾಡಿದ್ದೇವೆ. ಇನ್ನು ಶಿಬರ ಭಾಗದ ಜನರಿಗೆ ರಸ್ತೆ ಸಮಸ್ಯೆಯ ಇರುವುದಿಲ್ಲ. ಈ ರಸ್ತೆಯನ್ನು ಅಭಿವೃದ್ದಿ ಮಾಡುವುದಾಗಿಯೂ ಶಾಸಕರು ಹೇಳಿದ್ದು ಈಗಾಗಲೇ 5ಲಕ್ಷ ಅನುದಾನವನ್ನು ನೀಡಿದ್ದಾರೆ ಎಂದು ಜಾಗದ ಮಾಲಕ ಕಿಶೋರ್ ತಿಳಿಸಿದ್ದಾರೆ.
ಶಾಸಕರು ನೂರಾರು ವಿವಾದ ಇತ್ಯರ್ಥ ಮಾಡಿದ್ದಾರೆ – ಕೆ ಪಿ ಆಳ್ವ
ಅಶೋಕ್ ರೈ ಶಾಸಕರಾದ ಬಳಿಕ ಹಲವಾರು ವರ್ಷಗಳಿಂದ ವಿವಾದಿತವಾಗಿಯೇ ಇದ್ದ ರಸ್ತೆ ವಿವಾದವನ್ನು ಇತ್ಯರ್ಥ ಮಾಡುವ ಮೂಲಕ ಜನರಿಗೆ ನೆರವಾಗಿದ್ದಾರೆ. ರಸ್ತೆ ವಿವಾದವನ್ನು ಬಗೆಹರಿಸಿ ಬಳಿಕ ಆ ರಸ್ತೆಯನ್ನು ಅಭಿವೃದ್ದಿ ಮಾಡುವ ಮೂಲಕ ನಾವು ಅಭಿವೃದ್ದಿ ಎಂಬುದನ್ನು ಸಾಬೀತು ಮಾಡಿದ್ದೇವೆ. ಯಾರಿಂದಲೂ ಸಾಧ್ಯವಾಗದ ಕೆಲವೊಂದು ವಿಚಾರಗಳನ್ನು ಶಾಸಕರು ರಿಸ್ಕ್ ತೆಗೆದುಕೊಂಡು ಇತ್ಯರ್ಥ ಮಾಡುತ್ತಿದ್ದಾರೆ. ಜನ ಇದನ್ನು ಗಮನಿಸಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಭಿವೃದ್ದಿಗೆ ಮತಹಾಕಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಮಾತುಕೊಟ್ಟಿದ್ದೆವು ಈಡೇರಿಸಿದ್ದೇವೆ -ಹೊನ್ನಪ್ಪ ಕೈಂದಾಡಿ
ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿ ಮಾತನಾಡಿ ಕಳೆದ ಚುನಾವಣೆಯ ವೇಳೆ ನಾವು ಈಭಾಗಕ್ಕೆ ವೋಟು ಕೇಳಲು ಬಂದಾಗ ರಸ್ತೆ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದರು. ಅಶೋಕ್ ರೈ ಗೆದ್ದರೆ ಖಂಡಿತವಾಗಿಯೂ ರಸ್ತೆ ಮಾಡಿಕೊಡುತ್ತೇವೆ ಎಂದು ಮಾತು ಕೊಟ್ಟಿದ್ದೆವು. ಕೊಟ್ಟ ಮಾತಿನಂತೆ ಶಾಸಕ ಅಶೋಕ್ ರೈ ಹಾಗೂ ಜಾಗದ ಮಾಲಕರ ಸಹಕಾರದಿಂದ ಸಮಸ್ಯೆ ಇತ್ಯರ್ಥವಾಗಿದೆ ಇದು ತುಂಬಾ ಸಂತೋಷದ ವಿಚಾರವಾಗಿದೆ.
ಪಕ್ಷದ ಮುಖಂಡರಾದ ಬಾಬು ಶೆಟ್ಟಿ ನರಿಮೊಗರು, ಕಾಂಗ್ರೆಸ್ ವಕ್ತಾರ ರವೀಂದ್ರ ರೈ ನೆಕ್ಕಿಉಲು, ರಾಘವೇಂದ್ರ ಪ್ರಭು, ಚೆನ್ನಪ್ಪ ಗೌಡ, ಮಂಜುನಾಥ ಶೇಖ, ವಲಯ ಮಹಿಳಾ ಘಟಕದ ಅಧ್ಯಕ್ಷೆ ಹರಿಣಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.
