ನಾಣ್ಯಗಳ ಚಲಾವಣೆಗೆ ಗ್ರಾಹಕರ ಹಿಂದೇಟು…
ಕಾಣಿಕೆ ಡಬ್ಬಿ, ಮನೆಯ ಕಾಯಿನ್ ಬಾಕ್ಸ್ ಸೇರುತ್ತಿವೆ ನಾಣ್ಯಗಳು..?
✍🏻ಸಿಶೇ ಕಜೆಮಾರ್
ಪುತ್ತೂರು: ಒಂದು ಕಾಲದಲ್ಲಿ ಅಂಗಡಿ ಹೋಟೇಲ್ಗಳ ಕ್ಯಾಶ್ಕೌಂಟರ್ನ ಡಬ್ಬಿಯಲ್ಲಿ ತುಂಬಿ ತುಳುಕುತ್ತಿದ್ದ ಚಿಲ್ಲರೆ ನಾಣ್ಯಗಳು ಈಗ ಮೆಲ್ಲನೆ ಜಾಗ ಖಾಲಿ ಮಾಡಿ ಬಿಟ್ಟಿವೆ. ಗೂಗಲ್ಪೇ, ಫೋನ್ ಪೇಗಳ ಈ ಆಧುನಿಕ ಯುಗದಲ್ಲಿ ಆಗೊಮ್ಮೆ ಈಗೊಮ್ಮೆ ಚಿಲ್ಲರೆ ಬಂದರೆ ಅದು ಗ್ರಾಹಕರ ಕೈಗೆ ಸೇರಿದ ಮೇಲೆ ಮತ್ತೆ ಚಲಾವಣೆಯನ್ನು ಪಡೆಯದೇ ಮನೆಯ ಕಾಯಿನ್ ಬಾಕ್ಸ್, ದೇವಸ್ಥಾನದ ಕಾಣಿಕೆ ಡಬ್ಬಿಗಳು ಪಾಲಾಗುತ್ತಿವೆ. ಇದರಿಂದಾಗಿ ವ್ಯಾಪಾರಿಗಳು ಚಿಲ್ಲರೆಗಾಗಿ ಹುಡುಕಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ 10 ರೂಪಾಯಿ ನಾಣ್ಯಗಳು ಅಪರೂಪಕ್ಕೆ ಚಲಾವಣೆಯಲ್ಲಿದ್ದರೂ ಅದನ್ನು ಪಡೆದುಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿರುವುದು ಕಂಡುಬರುತ್ತಿದೆ. ವರ್ತಕರು ಬ್ಯಾಂಕ್ನಿಂದ ಕಟ್ಟು ಕಟ್ಟು ಚಿಲ್ಲರೆ ಪಡೆದುಕೊಂಡು ಬಂದು ಅಂಗಡಿಯಲ್ಲಿಟ್ಟು ಗ್ರಾಹಕರ ಕೈಗೆ ಕೊಟ್ಟರೂ ಅದು ಮರಳಿ ವರ್ತಕರ ಕೈಗೆ ಬಾರದ ಸ್ಥಿತಿಗೆ ಚಿಲ್ಲರೆಯ ಅವಸ್ಥೆ ಮುಟ್ಟಿದೆ.

ಇದು ಚಿಲ್ಲರೆಯ ಕಥೆ…
ಒಂದು ಕಾಲದಲ್ಲಿ ಐದು, ಹತ್ತು ಪೈಸೆ ಚಿಲ್ಲರೆಗೂ ಭಾರೀ ಬೆಲೆ ಇತ್ತು ಆದರೆ ಕಾಲಾಕ್ರಮೇಣ ಚಿಕ್ಕಪುಟ್ಟ ಚಿಲ್ಲರೆ ನಾಣ್ಯಗಳು ತಮ್ಮ ಮೌಲ್ಯವನ್ನು ಕಳೆದುಕೊಂಡು ಮೂಲೆಗುಂಪಾಗಿ ಹೋಗಿದ್ದು ಪ್ರಸ್ತುತ ದಿನಗಳಲ್ಲಿ 50 ಪೈಸೆ, ಒಂದು, ಎರಡು ರೂಪಾಯಿ ಐದು, ಹತ್ತು ಮತ್ತು 20 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದರೂ ಗ್ರಾಹಕರು ಚಿಲ್ಲರೆ ನಾಣ್ಯಗಳ ಚಲಾವಣೆಗೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲೂ 50 ಪೈಸೆ, ಒಂದು, ಎರಡು ರೂಪಾಯಿ ನಾಣ್ಯಗಳು ಕಾಣಲಿಕ್ಕೆ ಸಿಗುತ್ತಿಲ್ಲ ಹಾಗಾದರೆ ಈ ನಾಣ್ಯಗಳೆಲ್ಲ ಎಲ್ಲಿಗೆ ಹೋಗುತ್ತಿವೆ..? ಚಿಲ್ಲರೆ ಚಲಾವಣೆಯಲ್ಲಿ ಗ್ರಾಹಕರೆ ಹಿಂದೇಟು…? ಹತ್ತು, ಇಪ್ಪತ್ತು ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದ್ದರೂ ಅದನ್ನು ಚಲಾವಣೆ ಮಾಡಲು ಗ್ರಾಹಕರೇ ಹಿಂದೇಟು ಹಾಕುತ್ತಿದ್ದಾರೆ. ಅದಲ್ಲದೆ ಬೀಡಾ, ಜ್ಯೂಸ್, ತರಕಾರಿ ಇತ್ಯಾದಿ ಸಣ್ಣಪುಟ್ಟ ಅಂಗಡಿಗಳಿಗೆ ಇಂತಹ ಹತ್ತಿಪ್ಪತ್ತು ರೂಪಾಯಿ ನಾಣ್ಯಗಳನ್ನು ಕೊಟ್ಟರು ಅಂಗಡಿಯವರು ಸ್ವೀಕರಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಚಿಲ್ಲರೆ ಬೇಡ ಅಣ್ಣ… ನಮ್ಮಿಂದ ಅದನ್ನು ದಾಟಿಸಲು ಕಷ್ಟ ಆಗುತ್ತದೆ ಗೂಗಲ್ ಪೇ, ಫೋನ್ ಪೇ ಮಾಡಿ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ. ಚಿಲ್ಲರೆಗಳನ್ನು ಪರ್ಸ್, ಜೇಬು ಇತ್ಯಾದಿಗಳಲ್ಲಿ ತುಂಬಿಸಿಕೊಂಡು ಹೋಗುವುದು ತುಸು ಕಷ್ಟ ಹಾಗಾಗಿ ಗ್ರಾಹಕರು ಕೂಡ ಶಾಫಿಂಗ್ಗೆ ಚಿಲ್ಲರೆಗಳನ್ನು ತೆಗೆದುಕೊಂಡು ಹೋಗುತ್ತಿಲ್ಲ ಒಂದು ಲೆಕ್ಕಚಾರದ ಪ್ರಕಾರ ಚಿಲ್ಲರೆ ಚಲಾವಣೆಯಲ್ಲಿ ಗ್ರಾಹಕರು ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ.
ಮನೆಯ ಕಾಯಿನ್ ಬಾಕ್ಸ್ ಸೇರುತ್ತಿವೆ ಚಿಲ್ಲರೆಗಳು…
ಬ್ಯಾಂಕ್ಗಳಿಂದ ಕಾಯಿನ್ಗಳು ಮಾರುಕಟ್ಟೆಗೆ ಬರುತ್ತಿದ್ದರೂ ಈ ಎಲ್ಲಾ ಕಾಯಿನ್ಗಳು ಎಲ್ಲಿಗೆ ಹೋಗುತ್ತಿವೆ ಎಂದು ನೋಡಿದರೆ ಜನರ ಮನೆಯ ಡಬ್ಬಿಗಳನ್ನು ತುಂಬುತ್ತಿವೆ. ಅಂಗಡಿ, ಮಾರುಕಟ್ಟೆಗಳಲ್ಲಿ ನಮ್ಮ ಕೈಗೆ ಸಿಕ್ಕಿದ ಕಾಯಿನ್ಗಳನ್ನು ಸಂಜೆಗೆ ನಮ್ಮ ಮನೆಯ ಡಬ್ಬಿಗಳಿಗೆ ಹಾಕಿ ಬಿಡುತ್ತೇವೆ. ಯಾರೂ ಕೂಡ ಕಾಯಿನ್ಗಳನ್ನು ದಿನ ಬೆಳಿಗ್ಗೆ ಜೇಬು, ಪರ್ಸ್ಗಳಲ್ಲಿ ತುಂಬಿಸಿಕೊಂಡು ಹೊರಡುವುದಿಲ್ಲ ಬದಲಾಗಿ ದಿನದಲ್ಲಿ ಸಿಕ್ಕಿದ ನಾಣ್ಯಗಳನ್ನು ಆಯಾ ದಿನ ಸಂಜೆ ಮನೆಗೆ ಬಂದು ಕಾಯಿನ್ ಬಾಕ್ಸ್ಗಳಿಗೆ ಹಾಕಿ ಬಿಡುತ್ತೇವೆ. ಇದರಿಂದಾಗಿ ಪ್ರತಿಯೊಬ್ಬರ ಮನೆಯಲ್ಲೂ ನಾಣ್ಯಗಳು ರಾಶಿ ರಾಶಿಯಾಗಿರುವುದನ್ನು ಕಾಣಬಹುದಾಗಿದೆ.
10 ರೂ. ನಾಣ್ಯದ ಕಥೆ, ವ್ಯಥೆ..!
ಇತ್ತೀಚಿನ ದಿನಗಳಲ್ಲಿ 10 ರೂಪಾಯಿ ನಾಣ್ಯಗಳು ಹೆಚ್ಚಾಗಿ ಚಲಾವಣೆಯಲ್ಲಿದ್ದರೂ ಇದು ಕೇವಲ ಹೋಟೆಲ್ಗಳಲ್ಲಿ ಟಿಪ್ಸ್ ಕೊಡಲು, ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕಲು ಸೀಮಿತವಾಗುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಹೊಟೇಲ್ ಮಾಲಕರು ಬ್ಯಾಂಕ್ನಿಂದ 10 ರೂ.ನಾಣ್ಯಗಳ ಕಟ್ಟು ತಂದು ಕ್ಯಾಶ್ನಲ್ಲಿ ಇಟ್ಟುಕೊಂಡು ತಮ್ಮಲ್ಲಿಗೆ ಬರುವ ಗ್ರಾಹಕರಿಗೆ ಕೊಟ್ಟರೆ ಗ್ರಾಹಕರು ಅದನ್ನು ಹೋಟೆಲ್ ಸಪ್ಲೈಯರ್ಗೆ ಟಿಪ್ಸ್ ರೂಪದಲ್ಲಿ ಕೊಡುತ್ತಿದ್ದಾರೆ. ಸಪ್ಲೈಯರ್ ಮತ್ತೆ ಅದನ್ನು ಹೊಟೇಲ್ ಮಾಲಕರಿಗೆ ಕೊಟ್ಟು ನೋಟುಗಳನ್ನು ಪಡೆದುಕೊಳ್ಳುತ್ತಾರೆ ಇದರಿಂದ ನಾಣ್ಯಗಳು ಅಲ್ಲೆ ಗಿರಾಕಿ ಹೊಡೆಯುತ್ತಿರುತ್ತವೆ. ದೇವಸ್ಥಾನದ ಹುಂಡಿಗಳಲ್ಲೂ ಕಳೆದ ಎರಡುಮೂರು ವರ್ಷಗಳಿಂದ 10 ರೂ.ನಾಣ್ಯಗಳು ಹೆಚ್ಚಾಗಿ ಕಂಡು ಬರುತ್ತಿವೆಯಂತೆ ಇದರಿಂದ ದೇವರಿಗೆ ಕಾಣಿಕೆ ಹಾಕಿದಂತೆಯೂ ನಾಣ್ಯಗಳು ಖಾಲಿಯಾದಂತೆಯೂ ಆಯ್ತು ಎನ್ನುವುದು ಜನರ ಬುದ್ದಿವಂತಿಕೆ ಆಗಿದೆ.
‘ಗೂಗಲ್ ಪೇ, ಫೋನ್ ಪೇಗಳಿಂದಾಗಿ ಈ ಒಂದೆರಡು, ಐದು ರೂಪಾಯಿ ನಾಣ್ಯಗಳನ್ನು ಬಿಡಿ 10 ರೂ.ನಾಣ್ಯಗಳು ಕೂಡ ಬರುತ್ತಿಲ್ಲ, 20 ರೂ. ನಾಣ್ಯ ಕೆಲವೊಮ್ಮೆ ಬರುತ್ತದೆ. ನಾಣ್ಯಗಳ ಚಲಾವಣೆಯೇ ಕಡಿಮೆಯಾಗಿದೆ. ಕೆಲವೊಮ್ಮೆ ಗ್ರಾಹಕರು ಸಪ್ಲೈಯರ್ಸ್ಗೆ ನಾಣ್ಯಗಳನ್ನು ಟಿಪ್ಸ್ ಆಗಿ ಕೊಡುತ್ತಾರೆ.’
ರಫೀಕ್ ಅಲ್ರಾಯ, ಹೊಟೇಲ್ ಉದ್ಯಮಿ ಕುಂಬ್ರ
‘ಕಾಯಿನ್ ಇದ್ದರೂ ಅದು ಜನರ ಮನೆಯ ಡಬ್ಬಿಯಲ್ಲಿ ಬಾಕಿಯಾಗಿರುವುದರಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ. ಇಲೆಕ್ಟ್ರಾನಿಕ್ಸ್ ಅಂಗಡಿಗಳಲ್ಲಿ ಗ್ರಾಹಕರಿಗೆ ಚಿಲ್ಲರೆಯೇ ಕೊಡಬೇಕಾಗುತ್ತದೆ ಆದರೆ ಕಾಯಿನ್ಗಳು ಇಲ್ಲದೆ ಇರುವುದರಿಂದ ತೊಂದರೆಯಾಗುತ್ತಿದೆ. ಕಾಯಿನ್ಗಳು ಮನೆಯ ಡಬ್ಬಿಯಿಂದ ಮಾರುಕಟ್ಟೆಯಲ್ಲಿ ಚಲಾವಣೆಯಾಗಬೇಕಾಗಿದೆ.’
ಸಂಪತ್ ಕುಮಾರ್, ಉದ್ಯಮಿ, ಅತಿಥಿ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್ಸ್ ಕುಂಬ್ರ