ಮೆದುಳಿಗೆ ಆಹಾರವನ್ನು ಒದಗಿಸುವ ಕಾರ್ಯ ನಡೆಸಬೇಕು : ಗೋವಿಂದ ಪ್ರಕಾಶ್ ಸಾಯ
ಪುತ್ತೂರು: ಮನುಷ್ಯನ ಮೆದುಳು ಯಾವಾಗಲೂ ಚಿಂತನೆಯನ್ನು ನಡೆಸುತ್ತಿರುತ್ತದೆ. ಆದರೆ ಮೆದುಳಿಗೆ ನಾವು ಸೂಕ್ತವಾದ ಆಹಾರವನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿರಬೇಕು. ಅಂದರೆ ನಾವು ಹೊಸ ಚಿಂತನೆಯೊಂದಿಗೆ ಕನಸು ಕಾಣುತ್ತಿರಬೇಕು ಎಂದು ಪುತ್ತೂರಿನ ಸಾಯ ಎಂಟರ್ಪ್ರೈಸಸ್ ಸಂಸ್ಥೆಯ ಮಾಲಿಕ ಗೋವಿಂದ ಪ್ರಕಾಶ್ ಸಾಯ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಲಾದ ಬಝಾರ್ ಫೆಸ್ಟಿವಲ್ ಎಂಬ ವಿದ್ಯಾರ್ಥಿ ಮಾರುಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಂದೆ ತಾನು ಜೀವನದಲ್ಲಿ ಯಾವ ಗುರಿಯನ್ನು ತಲುಪಬೇಕು ಎಂಬ ಕನಸನ್ನು ಇಟ್ಟುಕೊಂಡರೆ, ಆ ಕನಸೇ ನಮ್ಮನ್ನು ಸದಾ ಎಚ್ಚರಿಸುತ್ತಿರುತ್ತದೆ. ಜೀವನದಲ್ಲಿ ಅನೇಕ, ಸವಾಲುಗಳು, ಜವಾಬ್ದಾರಿಗಳು ನಮ್ಮ ಮುಂದೆ ಬರುತ್ತವೆ. ಅವುಗಳನ್ನೆಲ್ಲಾ ಸ್ವೀಕರಿಸುತ್ತಾ ನಾವು ಮುನ್ನಡೆಯಬೇಕು. ಜೀವನದಲ್ಲಿ ಏಳು -ಬೀಳುಗಳು ಸಹಜ. ಆದರೆ ನಾವು ಯಾವುದೇ ಕಾರಣಕ್ಕೂ ಹಿಂದೆ ಸರಿಯಬಾರದು. ಜೀವನದಲ್ಲಿ ನಮ್ಮ ಯೋಚನೆಗಳು ಇತರರಿಗಿಂತ ಭಿನ್ನವಾಗಿರಬೇಕು ಹಾಗಾಗಿ ಹೊಸದಾದ ಯೋಜನೆಯನ್ನು ರಚಿಸುವುದು ಅತ್ಯಂತ ಅವಶ್ಯಕ ಎಂದು ಅಭಿಪ್ರಾಯಪಟ್ಟರು.
ವ್ಯಾಪಾರಿಗಳೆಂದರೆ ಮೋಸಮಾಡುವವರು ಎಂಬ ಪರಿಕಲ್ಪನೆ ಕೆಲವರಲ್ಲಿದೆ. ಆದರೆ ವ್ಯಾಪಾರವೂ ಒಂದು ಸೇವೆ ಎಂಬುದನ್ನು ಅರಿತುಕೊಳ್ಳಬೇಕು. ಅದು ಜನರ ಬೇಡಿಕೆಯನ್ನು ಈಡೇರಿಸುವ ಕಾರ್ಯವಾಗಿದೆ. ಓದಿ ಪದವೀಧರರಾದ ನಂತರ ಇತರರ ಕೈ ಕೆಳಗೆ ದುಡಿಯುವುದರ ಬದಲು, ಸ್ವಯಂ ಉದ್ಯೋಗವನ್ನು ಮಾಡಿಕೊಂಡು ಇತರರಿಗೆ ಕೆಲಸವನ್ನು ನೀಡುವ ಉದ್ಯಮಿಗಳಾಗುವಷ್ಟು ಎತ್ತರಕ್ಕೆ ವಿದ್ಯಾರ್ಥಿಗಳು ಬೆಳೆಯಬೇಕು. ನಾವು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸಿದಾಗ ಅದರಿಂದ ಜೀವನದಲ್ಲಿ ಸಿಗುವ ಸಂತೃಪ್ತಿ ಮತ್ತೆಲ್ಲೂ ಸಿಗಲು ಸಾಧ್ಯವಿಲ್ಲ. ಒಬ್ಬ ಉದ್ಯಮಿ ಹೇಗಿರಬೇಕೆಂದರೆ ಸಮಾಜದಿಂದ ಪಡೆದುಕೊಂಡದ್ದನ್ನು ಮತ್ತೆ ಸಮಾಜಕ್ಕೆ ಕೊಡುವಂತಹ ವ್ಯಕ್ತಿಯಾಗಿ ಮೂಡಿಬರಬೇಕು ಎಂದು ನುಡಿದರು.
ಯೋಜನೆ ಪರಿಶ್ರಮಗಳು ಯಶಸ್ವಿಯ ಮಂತ್ರಗಳು. ಯಶಸ್ಸಿಗೆ ಯಾವುದೇ ಸುಲಭದ ದಾರಿ ಎಂಬುದು ಇಲ್ಲ. ಅದಕ್ಕಾಗಿ ನಾವು ಶ್ರಮ ಪಡಲೇಬೇಕು. ನಾವು ಇರುವ ವ್ಯವಸ್ಥೆಯಲ್ಲಿ ಪರಿಪೂರ್ಣವಾದ ಜ್ಞಾನವನ್ನು ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರ ಉದ್ಯಮ ಕ್ಷೇತ್ರದಲ್ಲಿ ನಮ್ಮ ಗುರಿಯನ್ನು ತಲುಪಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣ ಎಂಬುದು ನಾಲ್ಕು ಗೋಡೆಯ ಒಳಗೆ ನಡೆಯುವ ಕಾರ್ಯ ಅಲ್ಲ. ವಿಜ್ಞಾನದಲ್ಲಿ ಕೇವಲ ಸಿದ್ಧಾಂತ ಮಾತ್ರವಲ್ಲದೆ ಪ್ರಾಯೋಗಿಕ ಅನುಭವದ ವ್ಯವಸ್ಥೆಯೂ ಇದೆ. ಅದರಂತೆ ನಾವು ಪ್ರಾಯೋಗಿಕ ಅನುಭವಕ್ಕೆ ಆದ್ಯತೆ ನೀಡುತ್ತಾ ಸಾಗಬೇಕು. ಗೋಡೆ ಮಧ್ಯದ ಶಿಕ್ಷಣದ ಚೌಕಟ್ಟನ್ನು ಮೀರಿ ಮಕ್ಕಳು ಪಾಠಕ್ಕೆ ಪೂರಕವಾದ ವ್ಯವಹಾರ ಜ್ಞಾನವನ್ನು ಇಂತಹ ಮಾರ್ಕೆಟ್ ಫೆಸ್ಟಿನ ಮೂಲಕ ತಿಳಿದುಕೊಳ್ಳುತ್ತಾರೆ ಎಂದರು.
ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲೆ ಮಾಲತಿ ಡಿ., ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಸನ್ಮಯ್ ಎನ್. ಪ್ರಾರ್ಥಿಸಿ, ವಿದ್ಯಾರ್ಥಿನಿ ಪೂರ್ವಿ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿನಿ ಶಮಿತಾ ವಂದಿಸಿ, ವಿದ್ಯಾರ್ಥಿನಿ ವಿವಿಕ್ತಾ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಧಿ ನಿರ್ವಹಿಸಿದರು.