ಬಿಲ್ಲವ ಬಾಂಧವರ ಬಾಂಧವ್ಯ ಹೆಚ್ಚಿಸಲು ಕ್ರೀಡೆ-ಸತೀಶ್ ಕೆಡೆಂಜಿ
ಪುತ್ತೂರು: ಅವತಾರ ಪುರುಷರಾದ ಕೋಟಿ-ಚೆನ್ನಯರವರ ಹೆಸರಿನಲ್ಲಿ ನಡೆಸಲಾಗುವ ಈ ಕ್ರೀಡಾಕೂಟ ಬಿಲ್ಲವ ಸಮಾಜ ಬಾಂಧವರ ಬಾಂಧವ್ಯ ಹೆಚ್ಚಿಸಲು ನೆರವಾಗುತ್ತಿದೆ. ಕ್ರೀಡೆಯಲ್ಲಿ ಜಯಗಳಿಸುವುದಕ್ಕಿಂತ ಭಾಗವಹಿಸುವಿಕೆ ಮುಖ್ಯ ಎಂದು ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಹೇಳಿದರು.
ನ.23ರಂದು ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ ಅವಿಭಜಿತ ಪುತ್ತೂರು ತಾಲೂಕು ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ-2025 ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಅಣ್ಣಿ ಪೂಜಾರಿ ಮಾತನಾಡಿ, ಯುವವಾಹಿನಿ ವತಿಯಿಂದ ನಡೆಯುವ ಕೋಟಿ-ಚೆನ್ನಯ ಕ್ರೀಡಾಕೂಟಕ್ಕೆ ಕಳೆದ ಯುವವಾಹಿನಿ ಅಧ್ಯಕ್ಷರಾಗಿದ್ದ ಜಯರಾಮ್ ರವರಿಂದ ಮರುಜೀವ ಪಡೆದಿತ್ತು. ಯುವವಾಹಿನಿಯ ತತ್ವ ಸಿದ್ಧಾಂತಗಳಿಗುಣಗುಣವಾಗಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಕ್ರೀಡೆಯಲ್ಲಿ ಭಾಗವಹಿಸುವವರು ವೈಮನಸ್ಸು ಹೊಂದದೆ ಒಗ್ಗಟ್ಟಾಗಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಎಸೋಸಿಯೇಶನ್, ಮಂಗಳೂರು ಇದರ ಅಧ್ಯಕ್ಷ ಬಿ.ಎಸ್. ಸತೀಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಎಂಟನೇ ತರಗತಿಯಲ್ಲಿಯೇ ತಮ್ಮ ದೇಹಕ್ಕೆ ಅನುಗುಣವಾಗಿ ಯಾವ ಕ್ರೀಡೆಯನ್ನು ಆಯ್ಕೆ ಮಾಡಬೇಕು ಎಂಬುದಾಗಿ ನಿರ್ಧರಿಸಬೇಕು ಜೊತೆಗೆ ತಾನು ಆಯ್ಕೆ ಮಾಡಿದ ಕ್ರೀಡೆಯನ್ನು ಸತತ ಅಭ್ಯಾಸ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಹೊಂದಬೇಕಾಗಿರುವುದು ಅಗತ್ಯತೆ. ಯುವಸಮುದಾಯ ಕ್ರೀಡೆಯಲ್ಲಿ ಮನಸ್ಸು ಮಾಡಿದ್ತೆ ಕ್ರೀಡಾ ಇಂಡಸ್ಟ್ರಿ ಬೆಳೆಯುತ್ತದೆ, ಕ್ರೀಡೆಯಿಂದ ಜೀವನ ಬೆಳಗಾಗುತ್ತದೆ ಎಂದರು.
ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಅಮೈ ಮಾತನಾಡಿ, ಯುವವಾಹಿನಿ ಸಂಸ್ಥೆ ವಿದ್ಯೆ, ಉದ್ಯೋಗ, ಸಂಪರ್ಕದಡಿಯಲ್ಲಿ ನಿರಂತರ ಕೆಲಸ ಮಾಡುತ್ತಿದೆ. ಕ್ರೀಡೆಯ ಮೂಲಕ ಅವಿಭಜಿತ ಪುತ್ತೂರು ತಾಲೂಕಿನ ಗ್ರಾಮ ಸಮಿತಿಗಳನ್ನು ಸೇರಿಸಿಕೊಂಡು ಬಾಂಧವ್ಯದ ಸಂಪರ್ಕದ ಕೊಂಡಿಯಾಗಿ ಮಾಡಿರುವುದು ಯುವವಾಹಿನಿಯ ಹೆಗ್ಗಳಿಕೆಯಾಗಿದೆ ಎಂದರು.
ನವ್ಯಾ ದಾಮೋದರ್ ಪ್ರಾರ್ಥಿಸಿದರು. ಯುವವಾಹಿನಿ ಪುತ್ತೂರು ಘಟಕದ ಉಪಾಧ್ಯಕ್ಷ ಸಮಿತ್ ಪರ್ಪುಂಜ ಸ್ವಾಗತಿಸಿದರು. ಲೋಹಿತ್ ಕಲ್ಕಾರು, ಶಿವಪ್ರಸಾದ್, ದಾಮೋದರ್ ಶಾಂತಿಗೋಡು, ಕಿರಣ್ ಸರ್ವೇದೋಳ, ಭವಿತ್, ಉಮೇಶ್ ಬಾಯಾರುರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಿದರು. ಯುವವಾಹಿನಿ ಕಾರ್ಯದರ್ಶಿ ಶರತ್ ಸಾಲ್ಯಾನ್ ದೋಳ ವಂದಿಸಿದರು. ಪುತ್ತೂರು ಬಿಲ್ಲವ ಸಂಘದ ಉಪಾಧ್ಯಕ್ಷೆ ಪುಷ್ಪಾವತಿ ಕೇಕುಡೆ, ಯುವವಾಹಿನಿ ಕ್ರೀಡಾ ನಿರ್ದೇಶಕ ಗೌತಮ್ ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯುವವಾಹಿನಿ ನಿರ್ದೇಶಕ ಅವಿನಾಶ್ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು.
ಚಾಲನೆ..
ಪ್ರಗತಿಪರ ಕೃಷಿಕರಾದ ವಾಸು ಪೂಜಾರಿ ಗುಂಡ್ಯಡ್ಕರವರು ತೆಂಗಿನಕಾಯಿ ಒಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಸ್ಪರ್ಧೆಯ ವಿವರಗಳು..
ಪುರುಷರಿಗೆ :ಕ್ರಿಕೆಟ್ (ಓವರ್ ಆರ್ಮ್), ಹಗ್ಗಜಗ್ಗಾಟ, ವಾಲಿಬಾಲ್
ಮಹಿಳೆಯರಿಗೆ :
ತ್ರೋಬಾಲ್, ಹಗ್ಗಜಗ್ಗಾಟ
ಮಕ್ಕಳಿಗೆ:
ಎಲ್.ಕೆ.ಜಿ.ಯಿಂದ 7ನೇ ತರಗತಿಯವರೆಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು