ಗ್ರಾಮಾಂತರ, ನಗರ ಭಾಗವನ್ನು ಒಂದು ಮಾಡಿಕೊಟ್ಟರೆ ನಾನು ನಾಳೆಯೇ ಜವಾಬ್ದಾರಿ ತೆಗೆದುಕೊಂಡು ಬಿಜೆಪಿಯನ್ನು ಗೆಲ್ಲಿಸಿ ತೋರಿಸುತ್ತೇನೆ- ಅರುಣ್ ಕುಮಾರ್ ಪುತ್ತಿಲ

0

ಪುತ್ತೂರು: ಗ್ರಾಮಾಂತರ ಮತ್ತು ನಗರ ಭಾಗವನ್ನು ಒಂದು ಮಾಡಿಕೊಟ್ಟರೆ ನಾನು ನಾಳೆಯೇ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ. ಮತ್ತೆ ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತೋರಿಸುತ್ತೇನೆ ಎಂದು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ.


ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ಕುರಿತ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು,ಜವಾಬ್ದಾರಿ ಕೊಡುವ ವಿಚಾರದಲ್ಲಿ ರಾಜ್ಯ ನಾಯಕರು ಕೂತು ಮಾತನಾಡಿದ್ದಾರೆ. ಜವಾಬ್ದಾರಿ ಕೊಡಬೇಕೆಂಬ ಸೂಚನೆ ನೀಡಿದ್ದಾರೆ. ಏನು ಕೊಟ್ಟಿದ್ದಾರೆ ಎಂಬುದನ್ನು ಬಿಜೆಪಿ ಜಿಲ್ಲಾಧ್ಯಕ್ಷರಲ್ಲಿ ಪತ್ರಕರ್ತರೇ ಪ್ರಶ್ನೆ ಮಾಡಬೇಕೆಂದರು. ಅಧಿಕಾರ ಸ್ಥಾನಮಾನಕ್ಕಾಗಿ ಹೋರಾಟ ಮಾಡುತ್ತಿರುವುದು ಹೌದಾದರೆ ನನಗೆ ಅನೇಕ ನಾಯಕರ ಸಂಪರ್ಕವಿದೆ. ದೆಹಲಿಯಲ್ಲಿರುವ ನಾಯಕರ ಜೊತೆಗೆ ನಿರಂತರ ಸಂಪರ್ಕದ ಜೊತೆಗೆ ಏನೂ ಬೇಕಾದರೂ ಮಾಡಬಹುದಿತ್ತು. ಆದರೆ ವ್ಯವಸ್ಥೆಯ ಹೊರಗೆ ಸರಿಯಾಗಿ ಇರಬೇಕೆಂಬ ದೃಷ್ಟಿಕೋನದಿಂದ ಯಾವತ್ತು ಕೂಡ ಅಧಿಕಾರ ಮತ್ತು ಸ್ಥಾನ ಮಾನಕ್ಕಾಗಿ ಹೋರಾಟ ಮಾಡಿದ ಯಾವುದೇ ಸಂದರ್ಭವಿಲ್ಲ. ಆದರೆ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಅಪಾದನೆ ಮಾಡುತ್ತಿರುವುದಕ್ಕೆ ನಮಗೆನೂ ಉತ್ತರ ಕೊಡಲಾಗುವುದಿಲ್ಲ. ಶ್ರೀನಿವಾಸನೇ ಉತ್ತರ ಕೊಡಬೇಕಷ್ಟೆ ಎಂದರು.


ಕಾರ್ಯಕರ್ತರ ಭಾವನೆಗೆ ಸ್ಪಂಧಿಸದಿರುವುದು ಮುಂದುವರಿದಿದೆ:
ಕಳೆದ ಚುನಾವಣೆಯಲ್ಲಿ ಕಾರ್ಯಕರ್ತರ ಭಾವನೆ ಮತ್ತು ಸಾಮಾನ್ಯ ಕಾರ್ಯಕರ್ತನಿಗೆ ಸೂಕ್ತವಾದ ಸ್ಥಾನಮಾನ ಕೊಡಲಿಲ್ಲ. ಆಗಿರುವ ಎಲ್ಲಾ ಜನಪ್ರತಿನಿಧಿಗಳು ಕೂಡಾ ಕಾರ್ಯಕರ್ತನ ಮಾನಸಿಕತೆಯನ್ನು ಅರಿತುಕೊಂಡು ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕಾಗಿ ಕಾರ್ಯಕರ್ತರ ಅಪೇಕ್ಷೆಗೆ ಅನುಗುಣವಾಗಿ ನಾನು ಚುನಾವಣೆಗೆ ಸ್ಪರ್ಧಿಸಿದ್ದು. ಇವತ್ತು ಅದೇ ಮುಂದುವರಿದ ಭಾಗವಾಗಿದೆ. ಕಾರ್ಯಕರ್ತರ ಭಾವನೆಗೆ ಸ್ಪಂಧಿಸುವುದು ನಾಯಕರ ಕರ್ತವ್ಯ. ಎಲ್ಲಿಯೋ ಸಣ್ಣ ವ್ಯವಸ್ಥೆಯ ತಪ್ಪಿನಿಂದಾಗಿ ಬೇರೆ ಬೇರೆ ವ್ಯವಸ್ಥೆಗಳು ನಡೆದಿದೆ. ಕಾರ್ಯಕರ್ತರ ಭಾವನೆಗಳಿಗೆ ಬೆಲೆಗಳನ್ನು ಕೊಡಬೇಕು ಎಂದ ಅರುಣ್ ಕುಮಾರ್ ಪುತ್ತಿಲ ಅವರು, ನಮ್ಮ ಪರಿವಾರದ ಜೊತೆಗೆ ಗುರುತಿಸಿಕೊಂಡ ಕಾರ್ಯಕರ್ತರಿಗೆ ಒಂದಾಗಬೇಕೆಂಬ ನಿಟ್ಟಿನಲ್ಲಿ ಪಕ್ಷದಲ್ಲಿ ಅವರಿಗೆ ಜವಾಬ್ದಾರಿಯನ್ನು ಕೊಟ್ಟಿರುವುದು ಆದರೆ ಇನ್ನೂ ಕಾರ್ಯಕರ್ತರಿಗೆ ಸ್ಪಂಧನೆ ಸಿಗುತ್ತಿಲ್ಲ ಎಂದರು.


ಕಾರ್ಯಕರ್ತರಿಂದ ಯಾವುದೇ ಬೆಳವಣಿಗೆ ಸಾಧ್ಯ:
ಕಾರ್ಯಕರ್ತರು ಅಪೇಕ್ಷೆ ಮಾಡಿದರೆ ಪಕ್ಷದಲ್ಲಿ ಯಾವುದೇ ಬೆಳವಣಿಗೆ ಆಗಲು ಸಾಧ್ಯ ಅನ್ನುವಂತಹದ್ದನ್ನು ಅನೇಕ ಸಂದರ್ಭದಲ್ಲಿ ನೋಡಿದ್ದೇವೆ. ಅದಕ್ಕೆ ಜಾಸ್ತಿ ಹೇಳಬೇಕಾದ ಅವಶ್ಯಕತೆ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅರುಣ್ ಕುಮಾರ್ ಪುತ್ತಿಲ 2028 ವಿಧಾನಸಭೆ ಚುನಾವಣೆಯ ಅಭಿಯಾನಕ್ಕೆ ಸಂಬಂಧಿಸಿ ಬಂದಿರುವ ಪೋಸ್ಟ್‌ಗಳ ಕುರಿತು ಉತ್ತರಿಸಿದರು.


ಗೊಂದಲ ಸೃಷ್ಟಿ ಮಾಡುವುದು ನಮ್ಮ ಕೆಲಸವಲ್ಲ:
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮಶತಾಬ್ದಿಯ ಅಂಗವಾಗಿ ನಾವು ಪಾಣಾಜೆಯಲ್ಲಿ ಸುಮಾರು ಒಂದೂಕಾಲು ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಮಾಡಿ ಹಸ್ತಾಂತರ ಮಾಡಿದ್ದೇವೆ. ಅಟಲ್ ಜಿ ಅವರಿಗೆ ಗೌರವ ಕೊಡುವ ಕೆಲಸ ಕಾರ್ಯವನ್ನು ನಾವು ಕೂಡಾ ಶಕ್ತಿ ಮೀರಿ ಮಾಡಿದ್ದೇವೆ. ಮೊನ್ನೆಯ ಕಾರ್ಯಕ್ರಮಕ್ಕೆ ಸಂಬಂಧಿಸಿ ಆಮಂತ್ರಣ ಇಲ್ಲದ ಕಾರ್ಯಕ್ರಮಕ್ಕೆ ನಾವು ಹೋಗುವ ಅವಶ್ಯಕತೆ ಇಲ್ಲವಾಗಿತ್ತು. ಅದಕ್ಕಿಂತ ಹಿಂದೆ ವಿಶ್ವಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಆಗಿರುವ ಗೊಂದಲ ನಮ್ಮ ಮನಸ್ಸಿನಲ್ಲಿದೆ. ಈ ರೀತಿಯ ಗೊಂದಲಗಳನ್ನು ಸೃಷ್ಟಿ ಮಾಡುವುದು ನಮ್ಮ ಕಾರ್ಯವಲ್ಲ. ಸಮಾಜ ಒಂದಾಗಬೇಕು ವಾಜಪೇಯಿ ಅವರಂತಹ ನಾಯಕರ ಆದರ್ಶಗಳು ನಮ್ಮ ಜೀವನದಲ್ಲಿ ಇರಬೇಕೆಂಬ ನಿಟ್ಟಿನಲ್ಲಿ ನಾವು ಕೆಲಸ ಕಾರ್ಯನಿರ್ವಹಿಸುವವರು. ಕಾರ್ಯಕ್ರಮವೊಂದೇ ವಾಜಪೇಯಿ ಅವರ ಜನ್ಮಶತಾಬ್ದಿಯಲ್ಲ. ಬೇರೆ ಬೇರೆ ಸಂಗತಿಗಳನ್ನು ಮಾಡಲು ನಮಗೆ ಅವಕಾಶವಿದೆ. ವಿಶ್ವಹಿಂದು ಪರಿಷತ್ ಕಾರ್ಯಕ್ರಮದಲ್ಲಿ ಹಿರಿಯರು ಕೊಟ್ಟಿರುವ ಸೂಚನೆಗಳನ್ನು ಪಾಲನೆ ಮಾಡುತ್ತಿದ್ದರೆ ಮೊನ್ನೆಯ ಅಟಲ್ ವಿರಾಸತ್ ಕಾರ್ಯಕ್ರಮದ ಕುರಿತು ಎಲ್ಲರಿಗೂ ಆಮಂತ್ರಣ ಕೊಡಬೇಕಾಗಿತ್ತು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು. ಮೊನ್ನೆಯ ಕಾರ್ಯಕ್ರಮಕ್ಕೆ ನನಗೆ ಯಾರೂ ಕರೆ ಮಾಡಿಲ್ಲ. ಕರೆ ಮಾಡಿದರೆ ನಾನು ಸ್ವೀಕರಿಸದೆ ಕೂತುಕೊಳ್ಳುವ ವ್ಯಕ್ತಿಯಲ್ಲ. ಸರ್ವೆ ಕಾರ್ಯಕ್ರಮದಲ್ಲೂ ಒಂದೇ ವೇದಿಕೆಯಲ್ಲಿ ಕೂತ ಸಂದರ್ಭಲ್ಲೂ ನನಗೆ ಯಾವುದೇ ಆಮಂತ್ರಣ ಪತ್ರ ಕೊಡಲಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಯಾರೆ ಅಭ್ಯರ್ಥಿ ನಿಲ್ಲಿಸಲಿ ನಾವು ಗೆಲ್ಲಿಸುತ್ತೇವೆ:
ಸಾಮಾಜಿಕ ಬದ್ಧತೆ ಮತ್ತು ಸಾಮಾನ್ಯ ಕಾರ್ಯಕರ್ತನಿಗೆ ಶಕ್ತಿಯನ್ನು ಆತನಿಗೂ ಅವಕಾಶ ಕೊಡಬೇಕೆಂಬ ನಿಟ್ಟಿನಲ್ಲಿ ಕಳೆದ 35 ವರ್ಷಗಳಿಂದ ಕೆಲಸ ಮಾಡಿರುವುದರಿಂದ ಸಮಾಜ ನಮ್ಮನ್ನು ಒಪ್ಪಿಕೊಂಡಿದೆ. ಗ್ರಾಮಾಂತರ ಮತ್ತು ನಗರ ಭಾಗವನ್ನು ಒಂದು ಮಾಡಿ ಅಧಿಕಾರ ಕೊಟ್ಟರೆ ಯಾರೆ ಅಭ್ಯರ್ಥಿಯನ್ನು ನಿಲ್ಲಿಸಲಿ ನಾವು ಗೆಲ್ಲಿಸುತ್ತೇವೆ. ನಮ್ಮ ವ್ಯವಸ್ಥೆಯ ಒಳಗಡೆ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಕಾರ್ಯಕರ್ತರ ಅಪೇಕ್ಷೆ ಅರಿತು ಕೆಲಸ ಮಾಡುವ ಜವಾಬ್ದಾರಿ ಪಕ್ಷದ ಪದಾಧಿಕಾರಿಗಳಿಗೆ ಇದೆ. ಆ ಹಿನ್ನೆಲೆಯಲ್ಲಿ ಕಾರ್ಯಕರ್ತರ ಅಪೇಕ್ಷೆಗಳು ಏನಿದೆಯೋ ಅದನ್ನು ನೂರರ ಪ್ರತಿಶತಃ ಪೂರೈಸುವ ಕೆಲಸವನ್ನು ಜವಾಬ್ದಾರಿ ಕೊಟ್ಟರೆ ನಾನು ಮಾಡುತ್ತೇನೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

LEAVE A REPLY

Please enter your comment!
Please enter your name here