ಬೆಟ್ಟಂಪಾಡಿ: 1980-81ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು ನವೋದಯ ಪ್ರೌಢಶಾಲೆಗೆ ಭೇಟಿ ನೀಡಿದರು.

ಹಿರಿಯ ವಿದ್ಯಾರ್ಥಗಳಾದ ದಿವಾಕರ ರೈ ಮೊಡಪ್ಪಾಡಿ ನಿವೃತ್ತ ಎಸ್. ಐ, ರಾಮಯ್ಯ ರೈ ಕಾರ್ಯನಿರ್ವಹಣಾಧಿಕಾರಿಗಳು, ಇರ್ದೆ ಬೆಟ್ಟಂಪಾಡಿ ಸೇವಾಸಹಕಾರಿ ಬ್ಯಾಂಕ್, ಶ್ರೀಧರ ಮಣಿಯಾಣಿ ನಿವೃತ್ತ ಎ. ಎಸ್. ಐ, ಶಂಕರ ಭಟ್ ಮಜಲುಗುಡ್ಡೆ, ತಿಮ್ಮಣ್ಣ ರೈ ಕೃಷಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಮಾರ್ಗದರ್ಶಕರು, ಅಮ್ಮಣ್ಣ ರೈ ಪಿ.ಬಿ. ಕೃಷಿಕರು, ಮೋನಪ್ಪ ಕಜೆ ನಿವೃತ್ತ ಸಹಾಯಕ ಗ್ರಂಥಪಾಲಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ, ವಸಂತ ಕುಮಾರ್ ರೈ ಕೆಲ್ಲಾಡಿ ಮಾಜಿ ಸೈನಿಕರು ಹಾಗೂ ನಿವೃತ್ತ ಅಂಚೆ ಕಛೇರಿ ಅಧಿಕಾರಿಗಳು, ಶಶಿಕಲಾ ಶೆಟ್ಟಿ ಬೆಟ್ಟಂಪಾಡಿ, ರುಕ್ಮಿಣಿ ಕಜೆ, ಸೌಮ್ಯಾ ದಿವಾಕರ ರೈ ಮೊಡಪ್ಪಾಡಿ ಇವರು ತಾವು ಕಲಿತ ಶಾಲೆಗೆ ಸುಮಾರು 44 ವರ್ಷಗಳ ನಂತರ ಭೇಟಿ ನೀಡಿ ಬಾಲ್ಯದ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು.
ಈ ಸಂದರ್ಭದಲ್ಲಿ ದಿವಾಕರ ರೈ ಮೊಡಪ್ಪಾಡಿ, ರಾಮಯ್ಯ ರೈ ಹಾಗೂ ಶ್ರೀಧರ ಮಣಿಯಾಣಿ ಅವರು ಮಾತನಾಡಿ, ಕನ್ನಡ ಮಾಧ್ಯಮದ ಶಿಕ್ಷಣದ ಮಹತ್ವವನ್ನು ಹಲವಾರು ಉದಾಹರಣೆಗಳೊಂದಿಗೆ ಈಗಿನ ಮಕ್ಕಳಿಗೆ ಮನಮುಟ್ಟುವಂತೆ ತಿಳಿಸಿದರು. ಈ ಸಂದರ್ಭದಲ್ಲಿ 1980-81ರ ಶೈಕ್ಷಣಿಕ ವರ್ಷದ ಎಲ್ಲಾ ಹಿರಿಯ ವಿದ್ಯಾರ್ಥಿಗಳ ಸಂಸ್ಥೆಯ ಮೇಲಿನ ಅಭಿಮಾನವು ಇತರ ಹಿರಿಯ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಲಿ ಎಂದು ತಿಳಿಸಿದರು. 1980-81ರ ಹಿರಿಯ ವಿದ್ಯಾರ್ಥಿಗಳೆಲ್ಲರೂ ಸೇರಿ ರೂ. 50,000ಗಳನ್ನು ಸಂಸ್ಥೆಯ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿ ಪ್ರಮಾಣಪತ್ರವನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು. ಅಲ್ಲದೆ ಸಂಸ್ಥಗೆ ರೂ.7,500ಗಳನ್ನು ದೇಣಿಗೆಯಾಗಿ ನೀಡುವುದರೊಂದಿಗೆ ಮುಂದೆಯೂ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಹಿರಿಯ ವಿದ್ಯಾರ್ಥಿಗಳೆಲ್ಲರನ್ನು ಶಾಲಾ ಸಂಚಾಲಕರು ಶಾಲು ಹೊದಿಸಿ ಗೌರವಿಸಿ, ಶುಭ ಹಾರೈಸಿದರು. ಮುಖ್ಯ ಗುರುಗಳು ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕರಾದ ರಾಧಾಕೃಷ್ಣ ಕೋಡಿ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಎಲ್ಲಾ ಅಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸಹಕರಿಸಿದರು.