ಪುತ್ತೂರು: ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 2025-26 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ನ.14 ರಂದು ತಾಲೂಕು ಕ್ರೀಡಾಂಗಣ ಕೊಂಬೆಟ್ಟುವಿನಲ್ಲಿ ನಡೆಯಿತು.
ಕ್ರೀಡಾಕೂಟದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ದ್ವಜವಂದನೆ ಸ್ವೀಕರಿಸಿ, ದೀಪವನ್ನು ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಕ್ಕಳು ದೇಶದ ಭವಿಷ್ಯ, ಕ್ರೀಡೆ ಅವರ ಶಕ್ತಿ, ಇವೆರಡೂ ಸೇರಿ ಮಕ್ಕಳಲ್ಲಿನ ಚೈತನ್ಯವನ್ನು ಆಚರಿಸುವ ದಿನ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿ, ರಾಜ್ಯ ಪ್ರಶಸ್ತಿ ಪುರಸ್ಕೃತ ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಧ್ವಜವನ್ನು ಅರಳಿಸುವುದರ ಮೂಲಕ ಉದ್ಘಾಟಿಸಿ, ಕ್ರೀಡೆಯಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ನಿರಂತರ ಶ್ರಮದಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಕಡಿಮೆ ಅವಧಿಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡು ಸಂಸ್ಥೆಯ ಕೀರ್ತಿಯನ್ನು ಉನ್ನತಕ್ಕೇರಿಸುವಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದರು.
ಶಾಲಾ ರಾಜ್ಯ ಮಟ್ಟದ ಕರಾಟೆ ಪಟು ಸ್ಮೃತಿ ಮತ್ತು ಜಿಲ್ಲಾ ಮಟ್ಟದ ಕ್ರೀಡಾಪಟು ಕುಶಿತ್ ಪಿ ರೈ ತಂಡದವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ತಂದ ಕ್ರೀಡಾಜ್ಯೋತಿಯನ್ನು ಶಾಲಾ ಸಂಚಾಲಕರಿಗೆ ಹಸ್ತಾಂತರಿಸಿದರು. ಶಾಲಾ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಗಳ ಬ್ಯಾಂಡ್ ಸೆಟ್ನೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು. ಕ್ರೀಡಾ ಮಂತ್ರಿಯಾದ ಪ್ರಥಮ್ ಪ್ರತಿಜ್ಞಾವಿಧಿ ಬೋಧಿಸಿದರು.
ಮುಖ್ಯೋಪಾಧ್ಯಾಯರಾದ ಗಾಯತ್ರಿ ಎಸ್ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ವಂದಿಸಿ. ಶಿಕ್ಷಕಿ ಸಂಧ್ಯಾ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರೋಪ ಸಮಾರಂಭದಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರುಗಳಾದ ಜಯಪ್ರಕಾಶ್ ರೈ ನೂಜಿಬೈಲು ಮತ್ತು ವಾಣಿ ಎಸ್ ಶೆಟ್ಟಿ ಯವರು ಉಪಸ್ಥಿತರಿದ್ದರು. ವಿಜೇತ ಕ್ರೀಡಾಪಟುಗಳಿಗೆ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
