ಪುತ್ತೂರು: 2023-24ನೇ ಸಾಲಿನಲ್ಲಿ ಆರಂಭವಾದ ಶಾಲಾ ಮಧ್ಯಾಹ್ನದ ಬಿಸಿಯೂಟದ ಅನ್ನಪೂರ್ಣಾ ಯೋಜನೆಯು ನಿರಂತರವಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಯುವಂತೆ ಊರ ಪರವೂರ ಕೊಡುಗೈ ದಾನಿಗಳ ಶಾಲಾ ಪೋಷಕರ ಸಹಕಾರ ಸದಾ ಸ್ಮರಣೀಯವಾಗಿದ್ದು ಇದೀಗ ಸಾಮೂಹಿಕ ಭೋಜನ ವ್ಯವಸ್ಥೆಗೆ ಸಂಬಂಧಿಸಿ ರಾಮಾಮೃತ – ಭೋಜನ ಶಾಲೆ ನಿರ್ಮಾಣಕ್ಕೆ ಶುಭಾರಂಭ ನೀಡಲಾಯಿತು.

ಪುತ್ತೂರಿನ ಮೂಕಾಂಬಿಕಾ ಗ್ಯಾಸ್ ಏಜನ್ಸೀಸ್ ಮಾಲಕ ಸಂಜೀವ ಆಳ್ವ ಅವರು ದೀಪ ಬೆಳಗಿಸಿ ಕನ್ನಡ ಭಾಷಾ ಪ್ರೇಮವನ್ನು ಬೆಳೆಸಿಕೊಳ್ಳುವುದರೊಂದಿಗೆ ಶಾಲಾ ಹಂತದಲ್ಲಿ ತಮ್ಮ ಸಾಮರ್ಥ್ಯಗಳನ್ನು ಅರಿತು ಕಲಿಕೆ ಹಾಗೂ ಕಲಿಕಾ ಪೂರಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು ಎಂದು ಶುಭ ಹಾರೈಸಿದರು ಹಾಗೂ ರೂ 5 ಲಕ್ಷ ಮೊತ್ತವನ್ನು ಭೋಜನಾ ಶಾಲಾ ನಿರ್ಮಾಣಕ್ಕೆ ದೇಣಿಗೆ ನೀಡಿದರು. ಇನ್ನೋರ್ವ ಅಭ್ಯಾಗತರಾಗಿ ಆಗಮಿಸಿದ ಪುತ್ತೂರಿನ ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ| ಸುರೇಶ್ ಪುತ್ತೂರಾಯ ತೆಂಗಿನ ಕಾಯಿ ಒಡೆಯುವ ಮೂಲಕ ಮಕ್ಕಳಿಗೆ ನೀಡುತ್ತಿರುವ ಮಧ್ಯಾಹ್ನದ ಪೋಷಣಾಯುಕ್ತ, ರುಚಿಕರವಾದ ಊಟದ ವ್ಯವಸ್ಥೆಯು ಶಾಲಾ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಮತ್ತಷ್ಟು ಸಹಕಾರಿಯಾಗಲಿ, ಇಲ್ಲಿನ ಮಕ್ಕಳ ರಾಜ್ಯ, ರಾಷ್ಟ್ರಮಟ್ತದ ಸಾಧನೆಗೆ ಮತ್ತಷ್ಟು ಶಕ್ತಿ ತುಂಬಲಿ ಎಂದು ಶುಭ ಹಾರೈಸಿದರು.
ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಎಂ, ಸಂಚಾಲಕರಾದ ವಸಂತ ಸುವರ್ಣ, ಶಾಲಾ ಸಹಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು. ಭೋಜನ ಶಾಲಾ ಕಾಮಗಾರಿ ವ್ಯವಸ್ಥೆಯ ಜವಾಬ್ದಾರಿ ನಿರ್ವಹಿಸುತ್ತಿರುವ ಗಣೇಶ್ ಇಂಜಿನಿಯರಿಂಗ್ ಇಂಡಸ್ಟ್ರೀಸ್, ಬೈಕಂಪಾಡಿ ಮಂಗಳೂರು ಇದರ ಮಾಲಕ ಯತೀಶ್ ರೈ ಚೆಲ್ಯಡ್ಕ ಉಪಸ್ಥಿತರಿದ್ದರು. ಶಾಲಾ ಮುಖ್ಯಗುರು ಆಶಾ ಬೆಳ್ಳಾರೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.