ʼಶಾಲಾ ಆವರಣದೊಳಗೆ ಬೀದಿ ನಾಯಿಗಳ ಹಾವಳಿಯಿಂದ ಭಯಭೀತರಾಗಿದ್ದೇವೆ ʼಆರ್ಯಾಪು ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳ ಅಳಲು

0

ಪುತ್ತೂರು: ಶಾಲಾ ಆವರಣದೊಳಗೆ ಬೀದಿ ನಾಯಿಗಳ ಹಾವಳಿ ಅಧಿಕವಾಗಿದ್ದು ನಮ್ಮಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಆರ್ಯಾಪು ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.


ಸಭೆಯು ನ.24ರಂದು ಗ್ರಾ.ಪಂ ಅಧ್ಯಕ್ಷೆ ಗೀತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕುಂಜೂರು ಪಂಜ ಶಾಲಾ ವಿದ್ಯಾರ್ಥಿ ಗಗನ್‌ದೀಪ್ ಮಾತನಾಡಿ, ನಮ್ಮ ಶಾಲೆಯಲ್ಲಿ 83 ವಿದ್ಯಾರ್ಥಿಗಳಿದ್ದಾರೆ. ಆದರೆ ಶಾಲಾ ಆವರಣದೊಳಗೆ ಬೀದಿ ನಾಯಿಗಳು ಅಧಿಕವಾಗಿ ಬರುತ್ತಿದೆ. ನಾಯಿಗಳು ಗುಂಪು ಗುಂಪಾಗಿ ಬರುತ್ತಿದ್ದು ನಮ್ಮಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಶಾಲೆಗೆ ಆವರಣಗೋಡೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಪಿಡಿಓ ನಾಗೇಶ್ ಮಾತನಾಡಿ, ಬೀದಿ ನಾಯಿಗಳಿಂದ ದೊಡ್ಡ ಸಮಸ್ಯೆ ಉಂಟಾಗುತ್ತಿದೆ. ಪಂಚಾಯತ್‌ನಿಂದ ಉಚಿತ ರೇಬಿಸ್ ರೋಗ ನಿರೋಧಕ ಲಸಿಕೆ ವಿತರಿಸಲಾಗಿದೆ. ಬೀದಿ ನಾಯಿ ಸೇರಿದಂತೆ ಯಾವುದೇ ಸಾಕುಪ್ರಾಣಿಗಳನ್ನು ಬೀದಿಗೆ ಬಿಡದಂತೆ ಅನೌನ್ಸ್ ಮಾಡಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಆ ಬಳಿಕವೂ ಬಿಟ್ಟರೆ ರೂ.1000 ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.


ಸಂಟ್ಯಾರು ಶಾಲಾ ವಿದ್ಯಾರ್ಥಿನಿ ಧನ್ಯಶ್ರೀ ಮಾತನಾಡಿ, ನಮ್ಮ ಶಾಲಾ ಕಟ್ಟಡವು ಸೋರುತ್ತಿದೆ. ದುರಸ್ಥಿಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸ್ಪಂಧನೆ ದೊರೆತಿಲ್ಲ ಎಂದು ತಿಳಿಸಿದರು. ಶಾಲಾ ಕಟ್ಟಡ ದುರಸ್ಥಿಗೆ ದೊಡ್ಡ ಮೊತ್ತದ ಅನುದಾನಕ್ಕೆ ಪಂಚಾಯತ್‌ನಲ್ಲಿ ಅನುದಾನದ ಅವಕಾಶವಿಲ್ಲದೇ ಇದ್ದು ತಾ.ಪಂ., ಜಿ.ಪಂಗೆ ಮನವಿ ಮಾಡಲಾಗಿದೆ. ಅಲ್ಲದೆ ಮಳೆಹಾನಿಯಲ್ಲಿ ಕಟ್ಟಡಗಳ ದುರಸ್ಥಿಗೆ ರೂ.2ಲಕ್ಷ ಅನುದಾನ ನೀಡಲಾಗುತ್ತಿದ್ದು ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು.


ಅಮೃತ ಮಹೋತ್ಸವದ ಹೊಸ್ತಿಲಲ್ಲಿರುವ ಕುಂಜೂರುಪಂಜ ಶಾಲಾ ಕಟ್ಟಡಗಳಿಗೆ ಪೈಂಟಿಂಗ್ ಆಗಬೇಕು. ಕೈತೋಟ ಹಾಗೂ ಕುಡಿಯುವ ನೀರಿಗೆ ಶಾಶ್ವತ ಸೌಲಭ್ಯವಾಗಬೇಕು. ಹಂಟ್ಯಾರು ಶಾಲಾ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಬ್ಬರ ಮನೆಗೆ ಶೌಚಾಲಯ ನಿರ್ಮಿಸಿ‌ ಕೊಡಬೇಕು, ಕುರಿಯ ಶಾಲೆಗೆ ನೀರಿನ ಹೊಸ ಸಂಪರ್ಕವಿದ್ದರೂ ನೀರು ಬರುತ್ತಿಲ್ಲ, ರಸ್ತೆಯಲ್ಲಿ ವಾಹನಗಳು ಅಧಿಕ ವೇಗದಲ್ಲಿ ಸಂಚರಿಸುತ್ತಿದ್ದು ಕುರಿಯ ಶಾಲಾ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಬೇಕು, ಶಾಲೆಗೆ ಅಧ್ಯಾಪಕರ ನೇಮಿಸಿ, ಮಕ್ಕಳ ರಕ್ತವರ್ಗಿಕರಣ ಮಾಡುವುದು ಸೇರಿದಂತೆ ವಿದ್ಯಾರ್ಥಿಗಳು ಹಲವು ಬೇಡಿಕೆಗಳನ್ನು ಸಲ್ಲಿಸಿದರು.


ಬಿಆರ್‌ಪಿ ರತ್ನ ಕುಮಾರಿ ಶಿಕ್ಷಣ ಇಲಾಖೆ ಮಾಹಿತಿ ನೀಡಿದರು. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ತಜ್ಞೆ ಡಾ.ಪ್ರತೀಕ್ಷಾ ನೈತ್ತಾಡಿ ಮಕ್ಕಳ ಆರೋಗ್ಯ ಸಂರಕ್ಷಣೆಯ ಕುರಿತು ಹಾಗೂ ಸಂಪ್ಯ ಠಾಣಾ ಎಸ್‌ಐ ಸುಷ್ಮಾ ಭಂಡಾರಿ ಮಕ್ಕಳ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು.


ಬಹುಮಾನ ವಿತರಣೆ:
ಮಕ್ಕಳ ಗ್ರಾಮ ಸಭೆಯ ಅಂಗವಾಗಿ ಪಂಚಾಯತ್ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರು ಬಹುಮಾನ ವಿತರಿಸಲಾಯಿತು. ಲೆಕ್ಕ ಸಹಾಯಕಿ ರಾಜೇಶ್ವರಿ ಬಹುಮಾನ ವಿಜೇತರ ಪಟ್ಟಿ ಓದಿದರು.


ಸದಸ್ಯರಾದ ರೇವತಿ, ಯಾಕೂಬ್ ಯಾನೆ ಸುಲೈಮಾನ್, ರತ್ನಾವತಿ, ನೇಮಾಕ್ಷ ಸುವರ್ಣ, ಯತೀಶ್ ದೇವ, ಸುಬ್ರಹ್ಮಣ್ಯ ಬಲ್ಯಾಯ, ಕಲಾವತಿ ವೇದಿಕೆಯಲ್ಲಿ ಉಪಸ್ಥಿತರದ್ದರು. ಪಿಡಿಓ ನಾಗೇಶ್ ಸ್ವಾಗತಿಸಿ, ಕಾರ್ಯದರ್ಶಿ ಮೋನಪ್ಪ ವಂದಿಸಿದರು. ಸಿಬಂದಿಗಳು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ ನೆರವೇರಿತು. ಕುಂಜೂರುಪಂಜ, ಕುರಿಯ ಹಾಗೂ ಹಂಟ್ಯಾರು ಶಾಲಾ ವಿದ್ಯಾರ್ಥಿಗಳು ಸಭೆಯಲ್ಲಿ ಭಾಗವಹಿಸಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here