ಪುತ್ತೂರು: ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ಚಾಲಕ ಗಾಯಗೊಂಡ ಘಟನೆ ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಡಕ್ಕೋಡಿ ಮಸೀದಿ ಬಳಿ ನ.26ರಂದು ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ರಿಟ್ಜ್ ಕಾರು ಬಡಕ್ಕೋಡಿ ಮಸೀದಿ ಬಳಿ ತಲುಪಿದ ವೇಳೆ ಎದುರಿನಿಂದ ಹೋಗುತ್ತಿದ್ದ ಇನ್ನೊಂದು ಕಾರಿನ ಚಾಲಕ ಏಕಾಏಕಿ ಬಲಭಾಗಕ್ಕೆ ಕಾರನ್ನು ಚಲಾಯಿಸಿದ್ದು, ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ರಿಟ್ಜ್ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ಕಣಿಗೆ ಉರುಳಿ ಬಿದ್ದಿದೆ. ಮಗುವೊಂದು ಹಠಾತ್ತನೆ ರಸ್ತೆಗೆ ಬಂದ ಕಾರಣ ರಿಟ್ಜ್ ಕಾರಿನ ಎದುರು ಹೋಗುತ್ತಿದ್ದ ಮತ್ತೊಂದು ಕಾರಿನ ಚಾಲಕ ಬ್ರೇಕ್ ಹಾಕಿ ಮಗುವಿಗೆ ಕಾರು ಗುದ್ದುವುದನ್ನು ತಪ್ಪಿಸಲು ಹೋಗಿ ಬಲ ಭಾಗಕ್ಕೆ ಕಾರನ್ನು ಚಲಾಯಿಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ರಿಟ್ಜ್ ಕಾರು ಚಾಲಕ ಸವಣೂರು ಯತೀಶ್ ಕೆಡೆಂಜಿ ಎಂಬವರ ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ. ಘಟನೆಯಿಂದ ಕಾರು ನಜ್ಜುಗುಜ್ಜಾಗಿದ್ದು ಅಪಾರ ನಷ್ಟ ಸಂಭವಿಸಿದೆ.
