ಪುತ್ತೂರು: ನಾಲ್ಕು ಶತಮಾನಗಳ ಇತಿಹಾಸ ಇರುವ, ಮುಂಡೂರು ಗ್ರಾಮದ ಅಜಲಾಡಿ ಬೀಡು ಕುಟುಂಬದ ನವೀಕೃತ ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವಗಳ ಪ್ರತಿಷ್ಠೆ ಹಾಗೂ ದೈವಗಳ ನೇಮೋತ್ಸವವು ವಿವಿಧ ವೈದಿಕ, ತಾಂತ್ರಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.

ತಂತ್ರಿ ಬ್ರಹ್ಮಶ್ರೀ ವೇ.ಮೂ ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ನ.26ರಂದು ಸಂಜೆ ಪ್ರಾರ್ಥನೆ, ಸ್ಥಳಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಅನ್ನಸಂತರ್ಪಣೆ ನಡೆಯಿತು. ನ.27ರಂದು ಬೆಳಿಗ್ಗೆ ಗಣಹೋಮ, ಶ್ರೀಲಕ್ಷ್ಮೀ ನಾರಾಯಣ ಹೃದಯ ಹೋಮ, ದಾರಲಕ್ಷ್ಮೀಪೂಜೆ, ನವೀಕೃತ ತರವಾಡು ಮನೆಯ ಗೃಹಪ್ರವೇಶ, ಶ್ರೀ ವೆಂಕಟ್ರಮಣ ದೇವರ ಮುಡಿಪು ಸೇವೆ, ದೈವಗಳ ಪ್ರತಿಷ್ಠೆ, ಮಧ್ಯಾಹ್ನ ತಂಬಿಲ ಸೇವೆ, ಪ್ರಸಾದ ವಿತರಣೆಯ ಬಳಿಕ ಸಭಾ ಕಾರ್ಯಕ್ರಮ ನೆರವೇರಿತು.
ಜೀವನದ ಹಾದಿ ನಿರ್ಮಿಸಲು ತರವಾಡು ಮನೆಗಳು ಅವಶ್ಯಕ-ಒಡಿಯೂರು ಶ್ರೀ:
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು ಮಾತನಾಡಿ, ಪ್ರಸ್ತುತ ಜೀವನದಲ್ಲಿ ಆನ್ಲೈನ್ ಆಫ್ಲೈನ್ಗಳು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೆ ಇದರ ಮಧ್ಯೆ ನಮ್ಮ ಲೈಫ್ಲೈನ್ ಮರೆಯುತ್ತಿದ್ದೆವೇ. ಲೈಫ್ಲೈನ್ ಕಟ್ಟುವ ಕೆಲಸವಾಗಬೇಕಾದರೆ ಇಂತಹ ತರವಾಡು ಮನೆ ನಿರ್ಮಾಣವಾಗಬೇಕು. ಎಲ್ಲಿ ಹೋದರೂ ಊರಿನ ತರವಾಡು ದೈವ ದೇವರನ್ನು ಮರೆಯಬಾರದು. ತರವಾಡು ಮನೆಯ ಮೂಲ ಸಂಸ್ಕೃತಿಯ ವಿಚಾರಗಳನ್ನು ಮಕ್ಕಳಿಗೆ ಪರಿಚಯಿಸಿದಾಗ ಧರ್ಮದ ಉಳಿವಿಗೆ ದೊಡ್ಡ ಕೊಡುಗೆಯಾಗಲಿದೆ. ಧರ್ಮ, ಸಂಸ್ಕೃತಿಗಳನ್ನು ನಾವೇ ಉಳಿಸಬೇಕು. ನಾವು ಆಚರಣೆ ಧರ್ಮ, ಸಂಸ್ಕೃತಿ ಆಚರಣೆ ಮಾಡಿದಾಗ ಉಳಿಯಬಹುದು. ಜಾಗತೀಕರಣದ ವೇಗದ ಜೊತೆಗೆ ಭಾರತೀಕರಣ ಉಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ತರವಾಡು ಮನೆಗಳಲ್ಲಿ ದೈವ, ದೇವರ ಸೇವೆ ಜೊತೆಗೆ ಸಂಸ್ಕೃತಿ ಉಳಿಸುವ ಕಾರ್ಯ-ರಮಾನಾಥ ರೈ:
ತೆಂಗಿನಗರಿ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈ ಮಾತನಾಡಿ, ತುಳುನಾಡಿನಲ್ಲಿ ಹಲವು ಜಾತಿಗಳ ತರವಾಡು ಮನೆಗಳು ಅಭಿವೃದ್ಧಿ ಅಗುತ್ತಿದೆ. ತರವಾಡು ಮನೆ ನಿಮಾಣದ ಮೂಲಕ ಕುಟುಂಬದ ಸದಸ್ಯರು ಒಟ್ಟು ಸೇರುವ ಕೆಲಸ ಜಿಲ್ಲೆಯಾದ್ಯಂತ ದೊಡ್ಡಮಟ್ಟದಲ್ಲಿ ಅಗುತ್ತಿದೆ. ತರವಾಡು ಮನೆಗಳು ಎಲ್ಲಿಲ್ಲಿ ಇದೆಯೋ ಅಲ್ಲಿ ಅಭಿವೃದ್ಧಿಯಾಗುವ ಜೊತೆಗೆ ದೈವ ದೇವರ ಸೇವೆ ಮಾಡುವ ಜೊತೆಗೆ ಪುರಾತನ ಸಂಸ್ಕೃತಿಯನ್ನು ಉಳಿಸುವ ಕಾರ್ಯವಾಗುತ್ತಿದೆ. ದೈವಜ್ಞರ ಸೂಚನೆಯಂತೆ ಪುನರುತ್ಥಾನದ ಕಾರ್ಯಗಳು ನಡೆಯುತ್ತಿದೆ. ಕುಟುಂಬಸ್ಥರೆಲ್ಲರೂ ಒಟ್ಟು ಸೇರಿ ಮಾಡುವ ಕಾರ್ಯಗಳನ್ನು ಶ್ಲಾಘಿಸಿದ ಅವರು ಪುತ್ತೂರು ದ.ಕ ಜಿಲ್ಲೆಯ ಬಂಟರ ರಾಜದಾನಿ. ಇಂತಹ ರಾಜದಾನಿಯಲ್ಲಿ ಅಜಲಾಡಿ ಬೀಡು ಪ್ರತಿಷ್ಠಿತ ಮನೆತನವೂ ಒಂದಾಗಿದ್ದು ಗೌರವಗಳಿಗೆ ಮಾನ್ಯವಾದ ಮನೆಯಾಗಿದೆ ಎಂದರು.
ಕುಟುಂಬಸ್ಥರೆಲ್ಲರು ಪ್ರೀತಿ, ವಿಶ್ವಾಸದಿಂದ ಒಟ್ಟು ಸೇರಲು ತರವಾಡು ಮನೆಗಳಲ್ಲಿ ಸಾಧ್ಯ-ಮಲ್ಲಿಕಾ ಪ್ರಸಾದ್:
ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮಾತನಾಡಿ, ನಮಗೂ ಅಜಲಾಡಿ ಬೀಡು ತರವಾಡು ಮನೆಗೂ ನಿಕಟ ಸಂಬಂಧವಿದೆ. ತರವಾಡು ಮನೆಯು ಬಹಳಷ್ಟು ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡು ಗೃಹಪ್ರವೇಶ ಕಾರ್ಯಕ್ರಮಗಳು ಎಲ್ಲರಿಗೂ ಸಂತಸ ನೀಡಿದೆ. ಇದರ ಹಿಂದೆ ಬಹಳಷ್ಟು ಶ್ರಮವಿದೆ. ಕುಟುಂಬಸ್ಥರೆಲ್ಲರ ಪ್ರೀತಿ, ವಿಶ್ವಾಸದಿಂದ ಒಟ್ಟು ಸೇರಿರುವುದರಿಂದ ಇದು ಸಾಧ್ಯವಾಗಿದ್ದು ತರವಾಡು ಮನೆಯಲ್ಲಿರುವ ದೈವ ದೇವರ ಅನುಗ್ರಹ ಎಲ್ಲರಿಗೂ ದೊರೆಯಲಿ ಎಂದು ಆಶಿಸಿದರು.
ಅಜಲಾಡಿ ಬೀಡು ಮನೆಯ ಚರಿತ್ರೆಯಲ್ಲೇ ವಿಶೇಷ ದಿನ-ರಾಜೇಂದ್ರ ರಾವ್:
ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾಯಿಪ್ಪಾಡಿ ಅರಮನೆಯ ರಾಜವಂಶಸ್ಥರಾದ ರಾಜೇಂದ್ರ ರಾವ್ ಮಾಯಿಪ್ಪಾಡಿ, ರಾಜೇಂದ್ರ ರಾವ್ ಮಾಯಿಪ್ಪಾಡಿ ಮಾತನಾಡಿ, ಬಹಳ ಪುರಾತನವಾಗಿರುವ ಅಜಲಾಡಿ ಬೀಡು ತರವಾಡು ಮನೆಯು ಉತ್ತಮ ರೀತಿಯಲ್ಲಿ ಜೀರ್ಣೋದ್ಧಾರಗೊಂಡಿದೆ. ತರವಾಡು ಮನೆಯ ಗೃಹಪ್ರವೇಶ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದ್ದು ಅಜಲಾಡಿ ಬೀಡು ಮನೆಯ ಚರಿತ್ರೆಯಲ್ಲಿ ವಿಶೇಷವಾದ ದಿನವಾಗಿದೆ. ಇದರ ಹಿಂದಿರುವ ಕುಟುಂಬಸ್ಥರ ಪರಿಶ್ರಮಕ್ಕೆ ದೈವ, ದೇವರು ಅನುಗ್ರಹಿಸಲಿ ಎಂದು ಹೇಳಿದರು.
ಅಜಲಾಡಿ ಬೀಡಿಗೂ ಮಾಯಿಪ್ಪಾಡಿ ಅರಸು ಮನೆತನಕ್ಕೂ ನಿಕಟ ಸಂಬಂಧವಿದೆ-ಪ್ರವೀಣ್ಚಂದ್ರ ಆಳ್ವ
ಪ್ರವೀಣ್ಚಂದ್ರ ಆಳ್ವ ಮುಂಡೇಲು ಪ್ರಾಸ್ತಾವಿಕವಾಗಿ ಮಾತನಾಡಿ, ಹಲವು ಬೀಡು, ಗುತ್ತು, ಬಾರಿಕೆಗಳಿರುವ ದ.ಕ ಜಿಲ್ಲೆಯಲ್ಲಿ ಅಜಲಾಡಿ ಒಂದು. ಇದರ ಪರಂಪರೆ ಎಲ್ಲರಿಗೂ ತಿಳಿದಿದೆ. ಪುರಾತನದಲ್ಲಿ ಬಲ್ಲಾಳರು ಆಡಳಿತ ನಡೆಸುತ್ತಿದ್ದ ಬೀಡು ಆಗಿದ್ದು ಕಾರಣಿಕದ ಕ್ಷೇತ್ರವಾಗಿದೆ. ಅಜಲಾಡಿ ಬೀಡಿಗೂ ಮಾಯಿಪ್ಪಾಡಿ ಅರಸು ಮನೆತನಕ್ಕೂ ನಿಕಟ ಸಂಬಂಧವಿದೆ ಎನ್ನುವುದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ. ಅರಸರ ಕಾಲದಲ್ಲಿ ಗದ್ದೆಕೋರಿ, ಹೊಸಅಕ್ಕಿ ಊಟ(ಪುದ್ವಾರ್) ಹಾಗೂ ಕಾಲಾವಧಿ ನೇಮಗಳು ನಡೆಯುತ್ತಿತ್ತು. ಈಗಲೂ ಈ ಕಾರ್ಯಕ್ರಮಗಳು ಮುಂದುವರಿಯುತ್ತಿದ್ದು ಹುಲಿಭೂತ ದೈವಕ್ಕೆ ಪ್ರತಿವರ್ಷ ಮೂರು ಬಾರಿ ನೇಮ ನಿರಂತರವಾಗಿ ನಡೆಯುತ್ತಿದೆ. ತರವಾಡು ಮನೆಯಲ್ಲಿ ಶಶಿಕಾಂತ್ ಪಂಡತರ ಮೂಲಕ ಪ್ರಶ್ನಾಚಿಂತನೆ ನಡೆಸಿ ಹಲವು ಪರಿಹಾರಾಧಿಗಳನ್ನು ನೆರವೇರಿಸಿ, ಬೆದ್ರಡ್ಕ ರಮೇಶ್ ಕಾರಂತರ ಮಾರ್ಗದರ್ಶನದಲ್ಲಿ ತರವಾಡು ಮನೆ ನಿರ್ಮಾಣಗೊಂಡಿದ್ದು ಕೆಮ್ಮಿಂಜೆ ಸುಬ್ರಹ್ಮಣ್ಯ ಬಳ್ಳಕ್ಕುರಾಯ ಅವರು ನೇತೃತ್ವದಲ್ಲಿ ಗೃಹಪ್ರವೇಶ ಕಾರ್ಯಕ್ರಮಗಳು ನಡೆಯುತ್ತಿದೆ ಎಂದು ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕರಾದ ಶಕುಂತಳಾ ಟಿ. ಶೆಟ್ಟಿ, ಸಂಜೀವ ಮಠಂದೂರು, ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಅರಿಯಡ್ಕ ಚಿಕ್ಕಪ್ಪ ನಾೖಕ್, ಅಜಲಾಡಿ ಬೀಡು ಬಾಲಕೃಷ್ಣ ಶೆಟ್ಟಿ ಪಟ್ಟೆಗುತ್ತು, ತರವಾಡು ಮನೆ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸದಾಶಿವ ರೈ ಸೋಪಾಂಡಿ, ಅಜಲಾಡಿ ಬೀಡು ಫೌಂಡೇಶನ್ ಟ್ರಸ್ಟ್ನ ಅಧ್ಯಕ್ಷ ಚಂದ್ರಹಾಸ ರೈ ಮುಂಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ ಗೌರವಾರ್ಪಣೆ:
ಕಾರ್ಯಕ್ರಮದಲ್ಲಿ ತರವಾಡು ಮನೆ ಗೃಹ ಪ್ರವೇಶದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಕೆಮ್ಮಿಂಜೆ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ತರವಾಡು ಮನೆ ಕಾರ್ಯಕ್ರಮದಲ್ಲಿ ಪ್ರಮುಖರಾಗಿರುವ ಬಾಲಕೃಷ್ಣ ಶೆಟ್ಟಿ ಪಟ್ಟೆಗುತ್ತು, ಜೀರ್ಣೋದ್ಧಾರದ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತರವಾಡು ಮನೆ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಕ್ಷಿತ್ ರೈ ಮುಗೇರು ದಂಪತಿಯನ್ನು ಸನ್ಮಾನಿಸಲಾಯಿತು. ತರವಾಡು ಮನೆ ನಿರ್ಮಾಣದಲ್ಲಿ ಸಹಕರಿಸಿದ ಗುತ್ತಿಗೆದಾರ ಪದ್ಮನಾಭ ಪೂಜಾರಿ ಬೆದ್ರಾಳ, ದಿವಾಕರ ಆಚಾರ್ಯ, ಜಗದೀಶ್ ಮುಲಾರ್, ಜಗದೀಶ್ ಬಾರಿಕೆ ಮನೆ, ಸಂಜೀವ ಶೆಟ್ಟಿ, ಪದ್ಮಾವತಿ ಲಿಂಗಪ್ಪ ಗೌಡ, ಪ್ರಕಾಶ್, ಹರೀಶ್ ಪರವ, ಮಹಾಲಿಂಗ ಬಾಕುಡ ಇವರನ್ನು ಗೌರವಿಸಲಾಯಿತು.
ಸತ್ಯವತಿ ಆಳ್ವ ಪ್ರಾರ್ಥಿಸಿದರು. ಆರಾಧ್ಯ ಪ್ರಾರ್ಥನಾ ನೃತ್ಯ ಮಾಡಿದರು. ಪ್ರವೀಣ್ ಚಂದ್ರ ಆಳ್ವ ಸ್ವಾಗತಿಸಿದರು. ದೇವಿಪ್ರಸಾದ್ ಸಾಮಾನಿ ವಂದಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ತರವಾಡು ಮನೆ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ಮುಂಡೇಲು, ಖಜಾಂಚಿ ನಳಿನ್ ಕುಮಾರ್ ಶೆಟ್ಟಿ ಸವಣೂರು ಮುಗೇರು, ಅಜಲಾಡಿ ಬೀಡು ಫೌಂಡೇಶನ್ ಟ್ರಸ್ಟ್ನ ಕಾರ್ಯದರ್ಶಿ ವಿಜಯಕುಮಾರ್ ಮುಗೇರು, ಶರತ್ ಕುಮಾರ್ ರೈ, ರಮ್ಯ, ಅರುಣಾ ಡಿ.ರೈ, ರವಿಕಿರಣ್, ದೇವಿಪ್ರಸಾದ್ ಸಾಮಾನಿ, ನಳಿನ್ ಕುಮಾರ್ ಶೆಟ್ಟಿ, ಶರತ್ ಕುಮಾರ್ ರೈ, ರಕ್ಷಿತ್ ರೈ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ, ಮಧ್ಯಾಹ್ನ ತುಳು ಅಪ್ಪೆ ಕೂಟ ಪುತ್ತೂರು ಇವರಿಂದ ತುಳುನಾಡ ಬಲಿಯೇಂದ್ರ ಎಂಬ ಯಕ್ಷಗಾನ ತಾಳಮದ್ದಳೆ ನಡೆಯಿತು. ರಾತ್ರಿ ದೈಗಳ ಭಂಡಾರ ತೆಗೆದ ಬಳಿಕ ಅನ್ನಸಂತರ್ಪಣೆ ಹಾಗೂ ಕಲ್ಲುರ್ಟಿ ದೈವದ ಕೋಲ ನೆರವೇರಿತು.
ನ.28 ಅಜಲಾಡಿ ಬೀಡಿನಲ್ಲಿ
ತರವಾಡು ಮನೆಯಲ್ಲಿ ನ.28ರಂದು ಬೆಳಿಗ್ಗೆ ಗಣಹೋಮ, ವೆಂಕಟರಮಣ ದೇವರ ಮುಡಿಪು ಸೇವೆ, ಮಧ್ಯಾಹ್ನ ಹೊಸಅಕ್ಕಿ ಊಟ(ಪುದ್ವಾರ್), ರಾತ್ರಿ ಧರ್ಮದೈವ ಪಿಲಿಭೂತದ ದೈವದ ನೇಮ, ಅನ್ನಸಂತರ್ಪಣೆ ನಂತರ ಜಾವತೆ ಹಾಗೂ ವರ್ಣರ ಪಂಜುರ್ಲಿ ದೈವದ ನೇಮ ನಡೆಯಲಿದೆ.
ತರವಾಡು ಮನೆಯ ನಿರ್ಮಾಣದಲ್ಲಿ ಬಹಳಷ್ಟು ಶ್ರಮವಿದೆ. ಹಂಚಿಹೋಗಿದ್ದ ಕುಟುಂಬಗಳನ್ನು ಒಟ್ಟು ಸೇರಿಸುವ ಮಹತ್ಕಾರ್ಯವಾಗಿದೆ. ದೈವ ದೇವರನ್ನು ಪ್ರತಿಷ್ಠಾಪಿಸುವ ಪುಣ್ಯದ ಕಾರ್ಯವಾಗಿದೆ. ತರವಾಡು ಮನೆಯಲ್ಲಿ ದೈವ ದೇವರುಗಳಿದ್ದು ದೈವಿಕವಾದ ಭಾವನೆ ನಮ್ಮಲ್ಲಿರಬೇಕು. ಹಿಂದೆ ದೈವದ ನಡೆಯಲ್ಲಿ ನಿಂತ ಹೇಳಿದರೆ ತಕ್ಷಣ ಪ್ರತಿಫಲ ದೊತೆಯುತ್ತಿತ್ತು. ಈಗ ಬದಲಾಗಿದ್ದು ಕೋರ್ಟ್ಕೇಸುಗಳಲ್ಲಿ ಮುಂದುವರಿಯವ ಕಾಲವಾಗಿದೆ. ಪುರಾತನ ಗುತ್ತು, ಬಾರಿಕೆಗಳನ್ನು ನೋಡಿದಾಗ ಧರ್ಮ ಶ್ರದ್ಧೆಯ ಅರಿವಾಗುತ್ತದೆ. ಕುಟುಂಬಸ್ಥರಲ್ಲಿ ಪ್ರೀತಿ, ವಿಶ್ವಾಸದಿಂದ ಒಟ್ಟು ಸೇರಿ ಅನ್ಯೋನ್ವಯಾಗಿದ್ದಾಗ ಮಾತ್ರ ಮನೆ ಮನೆಯಾಗಿ ಬೆಳೆಯಲು ಸಾಧ್ಯ. ಇಲ್ಲಿದಿದ್ದರೆ ಕೇವಲ ಕಟ್ಟಡವಾಗಿ ಉಳಿಯಲಿದೆ.
-ಶ್ರೀಗುರುದೇವಾನಂದ ಸ್ವಾಮೀಜಿ. ಗುರುದೇವದತ್ತ ಸಂಸ್ಥಾನಮ್ ಒಡಿಯೂರು