ಪ್ರಗತಿ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಪುತ್ತೂರುನ ಕನಸಿನ ಶಾಶ್ವತ ಪ್ರಾಜೆಕ್ಟ್ – ಪುತ್ತೂರು ರೋಟರಿ ಮ್ಯಾಮೋಗ್ರಾಫಿ ಸೆಂಟರ್ ಉದ್ಘಾಟನೆ

0


ಸ್ತನ ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವಿಕೆಗೆ ಉತ್ತಮ ಸಾಧನ-ರಾಮ್‌ಕೀ

ಪುತ್ತೂರು: ಮ್ಯಾಮೋಗ್ರಾಫಿ ಸೆಂಟರ್‌ನಿಂದ ಮಹಿಳೆಯರಲ್ಲಿ ಆರಂಭಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವಲ್ಲಿ ಹೆಚ್ಚು ಸಹಕಾರಿಯಾಗುತ್ತದೆ. ಪುತ್ತೂರು ತಾಲೂಕಿನಲ್ಲಿ ಇಂತಹ ಸಾಧನವನ್ನು ಪರಿಚಯಿಸಿರುವುದರಿಂದ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಹಾಗೂ ಸ್ತನ ಕ್ಯಾನ್ಸರ್ ಇದೆಯೋ ಎಂದು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವಿಕೆಗೆ ಕಾರಣವಾಗಿದೆ ಎಂದು ಅಂತರರಾಷ್ಟ್ರೀಯ ರೋಟರಿ ಜಿಲ್ಲೆ ೩೧೮೧ ಇದರ ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆ(ರಾಮ್‌ಕೀ)ರವರು ಹೇಳಿದರು.


ನ.೨೮ ರಂದು ಬೊಳ್ವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಜಿಲ್ಲೆಯ ಹಿರಿಯ ಕ್ಲಬ್, ಡೈಮಂಡ್ ಜ್ಯುಬಿಲಿಯನ್ನು ಆಚರಿಸುತ್ತಿರುವ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಹಾಗೂ ಜಿಲ್ಲೆ 6540, ರೋಟರಿ ಕ್ಲಬ್ ಸ್ಕೆರೆರ್ವಿಲ್ ಯು.ಎಸ್.ಎ ಇವುಗಳ ಜಂಟಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ರೋಟರಿ ಫೌಂಡೇಶನ್‌ನ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ಆಗಿರುವ ರೋಟರಿ ಮ್ಯಾಮೋಗ್ರಾಫಿ ಸೆಂಟರ್(ಸ್ತನ ಕ್ಯಾನ್ಸರ್/ಗೆಡ್ಡೆ ಪತ್ತೆ ಹಚ್ಚುವಿಕೆ ಕೇಂದ್ರ)ನ ದೀಪ ಬೆಳಗಿಸಿ ಉದ್ಘಾಟನೆಯನ್ನು ಅವರು ನೆರವೇರಿಸಿ ಮಾತನಾಡಿದರು.


ಮಹಿಳೆಯರ ಆರೋಗ್ಯಕ್ಕೆ ಈ ಸೆಂಟರ್ ಆಶಾಕಿರಣವಾಗಲಿ-ಮೈಕಲ್ ಡಿ’ಸೋಜ:
ಮುಖ್ಯ ಅತಿಥಿ, ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜರವರು ತಮ್ಮ ಪತ್ನಿ ಫ್ಲಾವಿಯಾ ಡಿ’ಸೋಜರವರೊಡಗೂಡಿ ಮ್ಯಾಮೋಗ್ರಾಫಿ ಸೆಂಟರ್‌ನ ರಿಬ್ಬನ್ ಕತ್ತರಿಸಿ, ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿ, ನಮ್ಮ ದುಡಿಮೆಯ ಹಿಂದೆ ದೇವರ ಆಶೀರ್ವಾದ ಇದ್ದೇ ಇದೆ. ನಮ್ಮ ದುಡಿಮೆಯ ಫಲವಾಗಿ ಸಮಾಜದ ಉದ್ಧಾರಗೋಸ್ಕರ ಹಣವನ್ನು ವಿನಿಯೋಗಿಸಲು ನನಗೆ ಬಹಳ ಸಂತೋಷವಾಗುತ್ತದೆ. ನಾನೋರ್ವ ಕನ್ನಡಿಗ, ಮ್ಯಾಮೋಗ್ರಾಫಿ ಸೆಂಟರಿಗೋಸ್ಕರ ವಿದೇಶದಿಂದ ಸುಸಜ್ಜಿತ ಮೆಶಿನ್ ಅನ್ನು ತರಿಸುವಲ್ಲಿ ಭಗೀರಥ ಪ್ರಯತ್ನ ಮಾಡಿದ ರೋಟರಿ ಪುತ್ತೂರುಗೆ ನನ್ನ ಧನ್ಯವಾದಗಳು. ಈ ಸೆಂಟರ್ ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ಆಶಾಕಿರಣವಾಗಿ ಮೂಡಿ ಬರಲಿ, ಪ್ರಾಥಮಿಕ ಹಂತದಲ್ಲಿಯೇ ಸ್ತನ ಕ್ಯಾನ್ಸರ್ ಅಥವಾ ಇತರ ರೋಗವನ್ನು ಪತ್ತೆ ಹಚ್ಚುವಲ್ಲಿ ಸಹಕಾರವಾಗಲಿ ಎಂದರು.


ಯಾವುದೇ ವೆಚ್ಚವಿಲ್ಲದೆ ಫಲಾನುಭವಿಗಳ ಸೇವೆ ಮಾಡುವುದು ಮುನ್ನುಡಿ-ಕೃಷ್ಣ ಶೆಟ್ಟಿ:
ಗೌರವ ಅತಿಥಿ, ರೋಟರಿ ಮಾಜಿ ಜಿಲ್ಲಾ ಗವರ್ನರ್, ಎಆರ್‌ಆರ್‌ಎಫ್‌ಸಿ ಕೆ.ಕೃಷ್ಣ ಶೆಟ್ಟಿರವರು ಮ್ಯಾಮೋಗ್ರಾಫಿ ಸೆಂಟರ್‌ನ ನೂತನ ಮೆಷಿನ್‌ನ ಸ್ವಿಚ್ ಅದುಮಿ ಮಾತನಾಡಿ, ರೋಟರಿ ಫೌಂಡೇಶನ್ ಮೂಲಕ ಮ್ಯಾಮೋಗ್ರಾಫಿ ಸೆಂಟರ್‌ಗೆ ಗ್ಲೋಬಲ್ ಮ್ಯಾಚಿಂಗ್ ಗ್ರ್ಯಾಂಟ್ ಸಿಕ್ಕಿರುವುದು ಸಂತಸ ತಂದಿದೆ ಮಾತ್ರವಲ್ಲ ಈ ಭಾಗದಲ್ಲಿನ ಸಮುದಾಯ ಸೇವೆಗೆ ಯಾವುದೇ ವೆಚ್ಚವಿಲ್ಲದೆ ಫಲಾನುಭವಿಗಳ ಸೇವೆ ಮಾಡುವುದು ಮುನ್ನುಡಿ ಎನಿಸಿದೆ. ಪುತ್ತೂರು ಹಾಗೂ ಆಸುಪಾಸಿನ ಜನರು ಇದರ ಪ್ರಯೋಜನ ಪಡೆಕೊಳ್ಳುವಂತಾಗಲಿ. ಪ್ರಗತಿ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ರಾವ್‌ರವರ ಭಗೀರಥ ಪ್ರಯತ್ನದಿಂದ ಮತ್ತು ಎಲ್ಲರ ಸಹಕಾರದಿಂದ ಈ ಪ್ರಾಜೆಕ್ಟ್ ಹೊಂದಲು ಸಹಕಾರಿಯಾಗಿದೆ ಎಂದರು.


ಪುತ್ತೂರು ಜಿಲ್ಲಾ ಕೇಂದ್ರವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ವ್ಯವಸ್ಥೆಗಳು ಪೂರಕ-ರಂಗನಾಥ್ ಭಟ್:
ರೋಟರಿ ಮಾಜಿ ಜಿಲ್ಲಾ ಗವರ್ನರ್, ಡಿ.ಆರ್.ಎಫ್.ಸಿ ರಂಗನಾಥ ಭಟ್ ಮಾತನಾಡಿ, ಈ ಪ್ರಾಜೆಕ್ಟ್ ಹಿಂದೆ ಸಾಕಷ್ಟು ಶ್ರಮ ವಹಿಸಿ ನಮ್ಮನ್ನು ಅಗಲಿದ ಯು.ಎಸ್.ಎ ರೋಟರಿ ಕ್ಲಬ್ ನ ಪಿಡಿಜಿ ಡಾ.ರಂಜನ್ ಕಿಣಿ ಮತ್ತು ನನಗೆ ಅವಿನಾಭಾವ ಸಂಬಂಧವಿತ್ತು. ನಮ್ಮ ಯಾವುದೇ ಪ್ರಾಜೆಕ್ಟ್ ಮಾಡಿದಾಗ ನನಗೆ ಅವರು ನೀಡುವ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಕೈಗೆಟಕುವ ದರದಲ್ಲಿ ಇಂತಹ ವ್ಯವಸ್ಥೆಗಳಿರುವಾಗ ಫಲಾನುಭವಿಗಳು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂಬುದು ರೋಟರಿ ಪುತ್ತೂರು ಇದರ ಆಶಯವಾಗಿದೆ. ಪುತ್ತೂರು ಜಿಲ್ಲಾ ಕೇಂದ್ರವಾಗುತ್ತಿರುವ ಹಿನ್ನೆಲೆಯಲ್ಲಿ ಇಂತಹ ವ್ಯವಸ್ಥೆಗಳು ಪೂರಕವಾಗಿ ಪರಣಮಿಸಲಿದೆ ಎಂದರು.


ಶಾಶ್ವತ ಪ್ರಾಜೆಕ್ಟ್‌ಗಳ ಮಹತ್ವವನ್ನು ರೋಟರಿ ಕ್ಲಬ್‌ಗಳು ಸಮಾಜಕ್ಕೆ ಅರಿವನ್ನು ಮೂಡಿಸಲಿ-ವಿಕ್ರಂ ದತ್ತ:
ಅಂತರ್ರಾಷ್ಟ್ರೀಯ ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ವಿಕ್ರಂ ದತ್ತ ಮಾತನಾಡಿ, ಪುತ್ತೂರಿಗೆ ಸಂಬಂಧಿಸಿದಂತೆ ರೋಟರಿ ಫೌಂಡೇಶನ್‌ನಿಂದ ಇದೀಗ ನಾಲ್ಕನೇ ಪ್ರಾಜೆಕ್ಟ್ ಮ್ಯಾಮೋಗ್ರಾಫಿ ಸೆಂಟರ್ ಗುರುತಿಸಿಕೊಂಡಿದೆ. ಪುತ್ತೂರಿನಲ್ಲಿ ಆಗಿರುವ ಶಾಶ್ವತ ಪ್ರಾಜೆಕ್ಟ್‌ಗಳ ಮಹತ್ವದ ಬಗ್ಗೆ ರೋಟರಿ ಕ್ಲಬ್‌ಗಳು ಸಮಾಜಕ್ಕೆ ಅರಿವನ್ನು ಮೂಡಿಸಿ, ರೋಟರಿಯ ಪಬ್ಲಿಕ್ ಇಮೇಜ್ ಹೆಚ್ಚಿಸಿ, ರೋಟರಿ ಸಂಸ್ಥೆಯ ಹೆಸರು ಮುಂದೆ ಮುಂದೆ ಹೋಗಲಿ. ಸಮಾಜಮುಖಿ ಕಾರ್ಯಗಳಿಗೆ ದೇಣಿಗೆ ಮುಖಾಮತರ ಕೊಡುವ ಮನಸ್ಸಿನ ಗುಣವಿರುವ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜರವರು ನಮಗೆ ರೋಲ್‌ಮಾಡೆಲ್ ಆಗಲಿ ಎಂದರು.


ಆರೋಗ್ಯ ಕ್ಷೇತ್ರದಲ್ಲಿ ರೋಟರಿ ಪುತ್ತೂರುನಿಂದ ಮಹತ್ತರ ಕೊಡುಗೆ-ಡಾ.ಶ್ರೀಪ್ರಕಾಶ್:
ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಮಾತನಾಡಿ, ರೋಟರಿ ಪುತ್ತೂರು ಸಂಸ್ಥೆ ಪುತ್ತೂರಿನ ಜನತೆಯ ಆರೋಗ್ಯದ ಬಗ್ಗೆ ತೋರಿಸಿದ ಪ್ರೀತಿ, ಮಮತೆ, ಶ್ರದ್ಧೆಗೆ ಈ ಪ್ರಾಜೆಕ್ಟ್ ಮತ್ತೊಂದು ಸಾಕ್ಷಿಯಾಗಿದೆ. ಅರುವತ್ತು ವರ್ಷದ ಸುದೀರ್ಘ ಪಯಣದ ನಂತರ ಮ್ಯಾಮೋಗ್ರಾಫಿ ಸೆಂಟರ್ ಪುತ್ತೂರಿನ ಜನರಿಗೆ ಸಮರ್ಪಣೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಮಹಿಳೆಯರಿಗೆ ಪ್ರಾಥಮಿಕ ಹಂತದಲ್ಲಿಯೇ ಸ್ತನಗಳ ಪರೀಕ್ಷಿಸಿ ಯಾವ ರೋಗ ಎಂಬುದಾಗಿ ಪ್ರಾಥಮಿಕ ವರದಿ ಪಡೆದ ಬಳಿಕ ಮುಂದಿನ ಚಿಕಿತ್ಸೆಗೆ ವೈದ್ಯರು ಶಿಫಾರಸ್ಸು ಮಾಡಬಹುದಾಗಿದೆ. ಇದರಲ್ಲಿ ಯಾವುದೇ ಭಯ ಪಡುವ ಅಗತ್ಯವಿಲ್ಲ. ಇಂತಹ ಸೆಂಟರ್ ಈ ಭಾಗದಲ್ಲಿ ಆಗಿರುವುದು ಮಹಿಳೆಯರಿಗೆ ಬಹಳ ಉಪಯುಕ್ತವಾಗಿದೆ ಎಂದರು.


ಸಮಾಜ ಸೇವೆ ಮಾಡುವುದೇ ಗೌರವದ ವಿಷಯ-ಬಾಲಕೃಷ್ಣ ಪೈ:
ರೋಟರಿ ವಲಯ ಐದರ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ಮಾತನಾಡಿ, ಮಂಗಳೂರಿನಿಂದ ಹಿಡಿದು ಮಡಿಕೇರಿವರೆಗೆ ಮ್ಯಾಮೋಗ್ರಾಫಿ ಸೆಂಟರ್ ಇಲ್ಲವಾಗಿದ್ದು, ಮಂಗಳೂರಿಗೇ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ರೋಟರಿ ವಲಯ ನಾಲ್ಕು ಹಾಗೂ ಐದರ ರೋಟರಿ ಕ್ಲಬ್‌ಗಳ ಪಿತಾಮಹ ಪುತ್ತೂರು ರೋಟರಿ ಕ್ಲಬ್ ಆಗಿದೆ. ಸಮಾಜ ಸೇವೆ ಮಾಡುವುದೇ ಒಂದು ಗೌರವದ ವಿಷಯವಾಗಿದೆ ಎಂದರು.


ರೋಟರಿ ಪುತ್ತೂರು ಮುಕುಟಕ್ಕೆ ಮತ್ತೊಂದು ಗರಿ-ಉಮಾನಾಥ್ ಪಿ.ಬಿ:
ರೋಟರಿ ವಲಯ ಐದರ ವಲಯ ಸೇನಾನಿ ಉಮಾನಾಥ್ ಪಿ.ಬಿ ಮಾತನಾಡಿ, ಆರುವತ್ತರ ಹರೆಯದ ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯನಾಗಿರುವುದು ನನಗೆ ಹೆಮ್ಮೆ ಎನಿಸುತ್ತದೆ. ರೋಟರಿ ಪುತ್ತೂರು ಈಗಾಗಲೇ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಸೆಂಟರ್, ಬ್ಲಡ್ ಕಲೆಕ್ಷನ್ ವ್ಯಾನ್, ರೋಟರಿ ಕಣ್ಣಿನ ಆಸ್ಪತ್ರೆ ಎಂಬ ಶಾಶ್ವತ ಕೊಡುಗೆಗಳನ್ನು ಸಮಾಜಕ್ಕೆ ನೀಡಿದ್ದು ಇದೀಗ ಮ್ಯಾಮೋಗ್ರಾಫಿ ಸೆಂಟರ್ ತೆರೆದು ರೋಟರಿ ಪುತ್ತೂರು ಮುಕುಟಕ್ಕೆ ಮತ್ತೊಂದು ಗರಿ ಪೋಣಿಸಿದೆ. ಪುತ್ತೂರು ಹಾಗೂ ಆಸುಪಾಸಿನ ಮಹಾಜನತೆ ಇದರ ಪ್ರಯೋಜನ ಪಡೆದುಕೊಳ್ಳುವಂತಾಗಲಿ ಎಂದರು.


ಮಾನವೀಯ ಸೇವೆಯ ಮೂಲಕ ಲ್ಯಾಂಡ್ ಮಾರ್ಕ್-ಡಾ.ಶ್ರೀಪತಿ ರಾವ್:
ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯು.ಶ್ರೀಪತಿ ರಾವ್ ಮಾತನಾಡಿ, ನಾಲ್ಕು ವರುಷದ ಹಿಂದೆ ತನ್ನ ತಾಯಿ ಸ್ತನ ಕ್ಯಾನ್ಸರ್ ರೋಗದಿಂದಾಗಿ ತೀರಿದ್ರು. ಆವಾಗ ನನ್ನ ಮನಸ್ಸಿಗೆ ನಾವ್ಯಾಕೆ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಬಗೆಗಿನ ಯಂತ್ರವನ್ನು ಪುತ್ತೂರಿನಲ್ಲಿ ಅಳವಡಿಸಬಾರದು ಎಂಬ ಚಿಂತನೆಯೊಂದು ಮೂಡಿದರ ಫಲವಾಗಿ ಹಲವಾರು ಅಡೆತಡೆಗಳಿದ್ರೂ ಕೊನೆಗೂ ಮ್ಯಾಮೋಗ್ರಾಫಿ ಸೆಂಟರ್ ಅನ್ನು ತೆರೆಯುವಲ್ಲಿ ಯಶಸ್ವಿಯಾಗಿದ್ದು ಇದು ಮಾನವೀಯ ಸೇವೆ ಮೂಲಕ ಪುತ್ತೂರಿನಲ್ಲಿ ಲ್ಯಾಂಡ್ ಮಾರ್ಕ್ ಎನಿಸಿಬಿಟ್ಟಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ವಲಯದಲ್ಲೂ ಈ ವ್ಯವಸ್ಥೆಯನ್ನು ಮುಂದುವರೆಸುವ ಇರಾದೆಯನ್ನು ಹೊಂದಿದ್ದೇವೆ ಎಂದರು.


60ನೇ ವರ್ಷದ ಕನಸಿನ ಪ್ರಾಜೆಕ್ಟ್-ಡಾ.ಶ್ಯಾಂ ಬಿ:
ಪ್ರಾಜೆಕ್ಟ್ ಚೇರ್ಮನ್ ಡಾ.ಶ್ಯಾಮ್ ಬಿ.ರವರು ಪ್ರಾಸ್ತಾವಿಕವಾಗಿ ಮಾತನಾಡಿ, 60ನೇ ಡೈಮಂಡ್ ಜ್ಯುಬಿಲಿ ವರ್ಷದ ಕನಸಿನ ಪ್ರಾಜೆಕ್ಟ್ ಡಾ.ಶ್ರೀಪತಿ ರಾವ್‌ರದ್ದು. ಈ ಕನಸಿನ ಪ್ರಾಜೆಕ್ಟ್‌ಗೆ ೨೦ ಮಂದಿಯ ಸಮಿತಿ ರಚನೆಯಾಗಿದ್ದು ಪ್ರಾಜೆಕ್ಟ್ ಬರುವಲ್ಲಿ ಬಹಳ ಶ್ರಮ ಪಟ್ಟಿರುತ್ತಾರೆ. ಈ ಪ್ರಾಜೆಕ್ಟ್ ಸರಿ ಹೋಗುವಲ್ಲಿ ಮೂರು ವರ್ಷ ಆಗಿರುತ್ತದೆ. ಈ ಪ್ರಾಜೆಕ್ಟ್‌ಗೆ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜ, ಡಾ.ಗೌರಿ ಪೈ, ದಿ.ಅನಂತ ಭಟ್ ಕುಟುಂಬ ನೆರವು ನೀಡಿರುತ್ತಾರೆ ಅಲ್ಲದೆ ನಮ್ಮ ರೋಟರಿ ಸದಸ್ಯರು ಕೂಡ ಕೈಜೋಡಿಸಿರುತ್ತಾರೆ ಎಂದರು.


ಗುರುತಿಸುವಿಕೆ:
ಮ್ಯಾಮೋಗ್ರಾಪಿ ಸೆಂಟರ್ ಅನ್ನು ಪುತ್ತೂರಿಗೆ ಪರಿಚಯಿಸುವಲ್ಲಿ ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ನೊಂದಿಗೆ ನಿರಂತರ ಸಂಪರ್ಕವಿರಿಸಿರುವ ಪ್ರೈಮರಿ ಕಾಂಟಾಕ್ಟ್ ವಿ.ಜೆ ಫೆರ್ನಾಂಡೀಸ್, ಸೆಕೆಂಡರಿ ಕಾಂಟಾಕ್ಟ್ ಗುರುರಾಜ್ ಕೊಳತ್ತಾಯ, ಡಾ.ಚಂದ್ರಶೇಖರ್ ರಾವ್, ಪಿಡಿಜಿ ಡಾ.ಭಾಸ್ಕರ್‌ರವರುಗಳಿಗೆ ಶಾಲು ಹೊದಿಸಿ ಗುರುತಿಸಲಾಯಿತು.


ಪಿಡಿಜಿ ಡಾ.ರಂಜನ್ ಕಿಣಿರವರಿಗೆ ಶ್ರದ್ಧಾಂಜಲಿ:
ಮ್ಯಾಮೋಗ್ರಾಫಿ ಸೆಂಟರ್ ಪುತ್ತೂರಿನಲ್ಲಿ ನಿರ್ಮಾಣಗೊಳ್ಳಲು ಅಂತರ್ರಾಷ್ಟ್ರೀಯ ರೋಟರಿ ಫೌಂಡೇಶನ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವ ಪುತ್ತೂರು/ಉಡುಪಿ ಮೂಲದ ರೋಟರಿ ಜಿಲ್ಲೆ ೬೫೪೦, ರೋಟರಿ ಕ್ಲಬ್ ಸ್ಕೆರೆರ್ವಿಲ್ ಯು.ಎಸ್.ಎ ಇದರ ಪೂರ್ವಾಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಗವರ್ನರ್ ಡಾ.ರಂಜನ್ ಕಿಣಿರವರು ಆಕಸ್ಮಾತ್ 2024ರಲ್ಲಿ ಅಗಲಿದ್ದು, ಡಾ.ರಂಜನ್ ಕಿಣಿರವರು ಈ ಕನಸಿನ ಪ್ರಾಜೆಕ್ಟ್ ಬಗ್ಗೆ ಶ್ರಮ ವಹಿಸಿಸದ ಬಗ್ಗೆ ಜೊತೆಗೆ ಅವರ ಅಗಲುವಿಕೆಯ ಬಳಿಕ ಯು.ಎಸ್‌ಎಯ ರೋಟರಿ ಕ್ಲಬ್‌ಗಳ ಸಹಕಾರದ ಬಗ್ಗೆ ಪಿಡಿಜಿ ಡಾ.ಭಾಸ್ಕರ್ ಎಸ್‌ರವರು ಮಾತನಾಡಿ, ಅಗಲಿದ ಡಾ.ರಂಜನ್ ಕಿಣಿರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.


ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಳವಡಿಸಲಾದ ನೂತನ ಪ್ರಾಜೆಕ್ಟ್ ಮ್ಯಾಮೋಗ್ರಾಫಿ ಸೆಂಟರ್ ಇದನ್ನು ಜಿಲ್ಲಾ ಗವರ್ನರ್ ರಾಮಕೃಷ್ಣ ಪಿ.ಕೆರವರು ಪ್ರಗತಿ ಆಸ್ಪತ್ರೆಯ ವೈದ್ಯ ಡಾ.ಶ್ರೀಪತಿ ರಾವ್‌ರವರಿಗೆ ಹೂಗುಚ್ಛವನ್ನು ನೀಡುವ ಮೂಲಕ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರೊ.ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಮೇಜರ್ ಡೋನರ್ ಡಾ.ಶ್ರೀಪ್ರಕಾಶ್ ಬಿ. ಸ್ವಾಗತಿಸಿ, ಪ್ರಾಜೆಕ್ಟ್‌ನ ಪ್ರೈಮರಿ ಕಾಂಟಾಕ್ಟ್ ವಿ.ಜೆ ಫೆರ್ನಾಂಡೀಸ್ ವಂದಿಸಿದರು. ಕ್ಲಬ್ ಪೂರ್ವಾಧ್ಯಕ್ಷ ಪ್ರೊ.ಝೇವಿಯರ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

ಮ್ಯಾಮೋಗ್ರಾಫಿ ಅಂದರೆ..
ಮ್ಯಾಮೋಗ್ರಫಿ ಎಂದರೆ ಸ್ತನಗಳನ್ನು ಪರೀಕ್ಷಿಸಲು ಕಡಿಮೆ-ಡೋಸ್ ಎಕ್ಸ್-ರೇಗಳನ್ನು ಬಳಸುವ ಒಂದು ತಂತ್ರಜ್ಞಾನವಾಗಿದೆ. ಇದು ಸ್ತನ ಕ್ಯಾನ್ಸರ್ ಮತ್ತು ಇತರ ಸ್ತನ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ. ಇದು ಒಂದು ಸ್ಕ್ರೀನಿಂಗ್ ಮತ್ತು ರೋಗನಿರ್ಣಯ ಸಾಧನವಾಗಿದ್ದು, ಸ್ತನ ಕ್ಯಾನ್ಸರ್‌ನಿಂದ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಮ್ಯಾಮೋಗ್ರಫಿಯ ಕಾರ್ಯಪರೀಕ್ಷೆಯ ಸಮಯದಲ್ಲಿ, ಪ್ರತಿ ಸ್ತನವನ್ನು ಎರಡು ಪ್ಲೇಟ್‌ಗಳ ನಡುವೆ ಒತ್ತಲಾಗುತ್ತದೆ. ಇದು ಸ್ತನವನ್ನು ಚಪ್ಪಟೆಯಾಗಿ ಮಾಡಲು ಮತ್ತು ಸ್ಪಷ್ಟವಾದ ಎಕ್ಸ್-ರೇ ಚಿತ್ರಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಆರಂಭಿಕ ಪತ್ತೆಯು ಹೆಚ್ಚು ಚಿಕಿತ್ಸಾ ಆಯ್ಕೆಗಳನ್ನು ಒದಗಿಸುತ್ತದೆ ಮತ್ತು ಸಂಪೂರ್ಣವಾಗಿ ಗುಣಮುಖರಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಸ್ಕ್ರೀನಿಂಗ್ ಮ್ಯಾಮೋಗ್ರಫಿ ಸ್ತನ ಕ್ಯಾನ್ಸರ್‌ನಿಂದ ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ರೂ.65 ಲಕ್ಷ ವೆಚ್ಚ..
ಸ್ತನ ಕ್ಯಾನ್ಸರ್ ಮತ್ತು ಇತರ ಸ್ತನ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವ ಸಾಧನ ಮ್ಯಾಮೋಗ್ರಾಫಿ ಸೆಂಟರ್‌ಗೆ ರೂ.65 ಲಕ್ಷ ವೆಚ್ಚವಾಗಿದ್ದು, ಈ ವೆಚ್ಚವನ್ನು ರೋಟರಿ ಫೌಂಡೇಶನ್‌ನೊಂದಿಗೆ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜ, ಪುತ್ತೂರಿನ ಹಿರಿಯ ವೈದ್ಯೆ ಡಾ.ಗೌರಿ ಪೈ, ಉದ್ಯಮಿ ದಿ.ಅನಂತ ಭಟ್‌ರವರ ಕುಟುಂಬದವರ ಜೊತೆಗೆ ರೋಟರಿ ಸದಸ್ಯ ದಾನಿಗಳು ಇದರಲ್ಲಿ ಕೈಜೋಡಿಸಿರುತ್ತಾರೆ.

ಗ್ರಾಮಾಂತರದಲ್ಲೂ ಚಿಕಿತ್ಸೆಗೆ ತಂತ್ರಜ್ಞಾನದ ಮೆಷಿನ್ ಖರೀದಿಗೆ ಮೈಕಲ್ ಡಿ’ಸೋಜರವರಿಂದ ರೂ.10 ಲಕ್ಷ ಘೋಷಣೆ..
ಕಾರ್ಯಕ್ರಮದಲ್ಲಿ ಭಾಗವಹಿಸಿದ ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜರವರನ್ನು ಮ್ಯಾಮೋಗ್ರಾಫಿ ಸೆಂಟರ್‌ಗೆ ರೂ.10 ಲಕ್ಷ ದೇಣಿಗೆಯನ್ನು ನೀಡಿದ್ದು, ರೋಟರಿ ಪುತ್ತೂರು ವತಿಯಿಂದ ಅವರಿಗೆ ಶಾಲು ಹೊದಿಸಿ, ಹೂ ನೀಡಿ ಗೌರವಿಸಲಾಯಿತು. ಪ್ರಸ್ತುತ ಈ ತಂತ್ರಜ್ಞಾನ ಶಾಶ್ವತವಾಗಿ ಪ್ರಗತಿ ಆಸ್ಪತ್ರೆಯಲ್ಲಿ ಲಭ್ಯವಿದ್ದು ಮುಂದಿನ ದಿನಗಳಲ್ಲಿ ಇದು ಗ್ರಾಮಾಂತರ ಪ್ರದೇಶದ ಮಹಿಳೆಯರಿಗೂ ಉಪಯೋಗಬೇಕು ಎನ್ನುವ ನಿಟ್ಟಿನಲ್ಲಿ ಗ್ರಾಮ ಗ್ರಾಮಕ್ಕೆ ಕೊಂಡೊಯ್ಯುವಾಗೆ ತಂತ್ರಜ್ಞಾನದ ಮೆಷಿನ್ ಖರೀದಿ ಮಾಡಲಾಗುತ್ತದೆ ಇದಕ್ಕೆ ಸುಮಾರು 10 ಲಕ್ಷ ವೆಚ್ಚವಾಗುತ್ತದೆ ಎಂದು ಡಾ.ಶ್ರೀಪತಿ ರಾವ್ ಹೇಳಿದ್ದಕ್ಕೆ ಇದರ ವೆಚ್ಚವನ್ನೂ ತನ್ನ ಕುಟುಂಬ ವ್ಯಯಿಸುತ್ತದೆ, ಎಲ್ಲರೂ ಸುಖಿಗಳಾಗಿ ಜೀವನ ನಡೆಸಬೇಕು ಎಂಬುದು ನಮ್ಮ ಧ್ಯೇಯ ಎಂದು ಅನಿವಾಸಿ ಉದ್ಯಮಿ ಮೈಕಲ್ ಡಿ’ಸೋಜರವರು ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here