ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಕನ್ನಡದ ಜೊತೆ ಇಂಗ್ಲೀಷ್ ಕೂಡಾ ಅತ್ಯಗತ್ಯ-ಫೌಝಿಯಾ
ಪುತ್ತೂರು: ನೆ.ಮುಡ್ನೂರು ಗ್ರಾಮದ ಪಳ್ಳತ್ತೂರು ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ತರಗತಿ ಆರಂಭೋತ್ಸವ ನ.28ರಂದು ನಡೆಯಿತು. ದೀಪ ಪ್ರಜ್ವಲನಗೊಳಿಸುವ ಮೂಲಕ ಚಾಲನೆ ನೀಡಿ ಪುಸ್ತಕ ವಿತರಿಸಿದ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷೆ ಫೌಝಿಯಾ ಇಬ್ರಾಹಿಂ ಮಾತನಾಡಿ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಪ್ರತೀ ಮಕ್ಕಳು ಕನ್ನಡದ ಜೊತೆ ಇಂಗ್ಲೀಷ್ ಶಿಕ್ಷಣ ಪಡೆಯುವುದು ಕೂಡಾ ಅತ್ಯಗತ್ಯ, ಗ್ರಾಮದ ಕಟ್ಟಕಡೆಯ ಮಕ್ಕಳೂ ಬಡವ-ಶ್ರೀಮಂತ ಎನ್ನುವ ಬೇಧಭಾವವಿಲ್ಲದೇ ಗುಣಮಟ್ಟದ ಶಿಕ್ಷಣ ಪಡೆಯುವ ಉದ್ದೇಶದಿಂದ ಇಲ್ಲಿನ ಅಂಗನವಾಡಿಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಆರಂಭಿಸಲು ನಾವು ಪ್ರಯತ್ನಪಟ್ಟಿದ್ದೆವು, ಎಲ್‌ಕೆಜಿ, ಯುಕೆಜಿ ಮಂಜೂರುಗೊಳಿಸಿದ ರಾಜ್ಯ ಸರಕಾರಕ್ಕೆ, ಇದಕ್ಕಾಗಿ ಸಹಕಾರ ನೀಡಿದ ಶಾಸಕರಿಗೆ ಮತ್ತು ಇಲಾಖೆಯವರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ನೂತನ ಕಟ್ಟಡ ಮತ್ತು ಶೌಚಾಲಯದ ಉದ್ಘಾಟನೆಯನ್ನು ನೆ.ಮುಡ್ನೂರು ಗ್ರಾ.ಪಂ ಉಪಾಧ್ಯಕ್ಷ ರಾಮ ಮೇನಾಲ ಹಾಗೂ ಸದಸ್ಯ ಶ್ರೀರಾಮ್ ಪಕ್ಕಳ ನೆರವೇರಿಸಿದರು.

ನೆ.ಮುಡ್ನೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ ಕೆ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ಇಬ್ರಾಹಿಂ ಕೆ, ಆಲಂತಡ್ಕ ಪ್ರಾ.ಶಾಲಾ ಮುಖ್ಯಗುರು ಕಾತ್ಯಾಯಿನಿ, ಮೂಸಾನ್ ಅಬ್ದುಲ್ ಕುಂಞಿ, ಮಹಮ್ಮದ್, ಗುತ್ತಿಗೆದಾರ ಅಝೀಝ್, ಪಳ್ಳತ್ತೂರು ಅಂಗನವಾಡಿಯ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ತಾಹಿರಾ, ವಿಕಲಚೇತನರ ಪುನರ್ವಸತಿ ಕಾರ್ಯಕರ್ತ ಬಾಲಕೃಷ್ಣ ಉಪಸ್ಥಿತರಿದ್ದರು.
ವಲಯದ ಎಲ್ಲಾ ಅಂಗನವಾಡಿಗಳ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಪೋಷಕರು, ಆಶಾ ಕಾರ್ಯಕರ್ತೆಯರು, ಪುಟಾಣಿಗಳು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸವಿತಾ ಸ್ವಾಗತಿಸಿದರು. ಪ್ರಮೀಳಾ ವಂದಿಸಿದರು. ಪೆರ್ನಾಜೆ ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು. ಅಂಗನವಾಡಿ ಸಹಾಯಕಿ ಜಲಜಾ ಸಹಕರಿಸಿದರು.