ಉನ್ನತ ಮಟ್ಟಕ್ಕೆ ಬೆಳೆಯುವುದಕ್ಕೆ ಈ ಶಾಲೆ ಉದಾಹರಣೆ-ವಿಷ್ಣುಪ್ರಸಾದ್
ಮಕ್ಕಳಿಗೆ ಪೋಷಕರು ನಕಾರಾತ್ಮಕ ಮಾತು ತುಂಬಬಾರದು-ನಾಗಶ್ರೀ ಐತಾಳ್
ಶಾಲೆಯ ಕ್ಯಾಂಪಸ್ ಖಾಸಗಿ ಶಾಲೆಯ ರೀತಿ ಇದೆ-ಶಶಿಕುಮಾರ್ ರೈ ಬಾಲ್ಯೊಟ್ಟು
ಪುತ್ತೂರು: ಹಾರಾಡಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಲೋತ್ಕರ್ಷ-2025 ಕಾರ್ಯಕ್ರಮದ ಉದ್ಘಾಟನೆ ಡಿ.5ರಂದು ಬೆಳಿಗ್ಗೆ ನಡೆಯಿತು.
ಬೆಳಿಗ್ಗೆ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪುತ್ತೂರು ಉಪವಲಯ ಅರಣ್ಯಾಧಿಕಾರಿ ಉಲ್ಲಾಸ್ ಕೆ. ಧ್ವಜಾರೋಹಣ ನೆರವೇರಿಸಿದರು. ಬಳಿಕ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಸುಲೋಚನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾದ ಶಿಕ್ಷಣ ಸಂಯೋಜಕರಾದ ಅಮೃತಕಲಾ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರತ್ನಕುಮಾರಿ ಪಿ.ಕೆ. ಮಾತನಾಡಿ ಶುಭಹಾರೈಸಿದರು. ಶಾಲಾ ಮುಖ್ಯಶಿಕ್ಷಕ ಕುಕ್ಕೆ ಕೆ., ವಿದ್ಯಾರ್ಥಿ ನಾಯಕ ಕೃತೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮ:
ಪ್ರತಿಭಾ ಪುರಸ್ಕಾರ ಬಳಿಕ ಸಭಾಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪುತ್ತೂರು ತಾಲೂಕಿನ ಹೆಮ್ಮೆಯ ಶಾಲೆ ಹಾರಾಡಿ. ಒಂದು ಸರಕಾರಿ ಶಾಲೆ ಯಾವ ರೀತಿ ಉನ್ನತ ಮಟ್ಟಕ್ಕೆ ಬೆಳೆಯಬಹುದು ಎಂಬುದಕ್ಕೆ ಹಾರಾಡಿ ಶಾಲೆ ಉದಾಹರಣೆಯಾಗಿದೆ. ಹಾರಾಡಿ ಶಾಲೆ ಶಿಕ್ಷಣದಲ್ಲಿ ಹಾಗೂ ಪ್ರತಿಭೆಯಲ್ಲಿ ಮುಂದಿದೆ. ಈ ಸರಕಾರಿ ಶಾಲೆಯ ಶಿಕ್ಷಣದ ಗುಣಮಟ್ಟ, ಉನ್ನತಿಯು ಖಾಸಗಿ ಶಾಲೆಯನ್ನೂ ಮೀರಿದೆ ಎಂದು ಹೇಳಿ ಮುಂದಿನ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಇನ್ನು ಹೆಚ್ಚಾಗಲಿ ಎಂದರು.
ಬೊಳುವಾರು ಆಕಾಶ್ ಕೋಚಿಂಗ್ ಸೆಂಟರ್‌ನ ಮನೋತಜ್ಞೆ ನಾಗಶ್ರೀ ಐತಾಳ್ ಮಾತನಾಡಿ, ಆರೋಗ್ಯ ಎಂದರೆ ಮಾನಸಿಕ, ದೈಹಿಕ, ಸಾಮಾಜಿಕವಾಗಿ ನಾವು ಸಮಾತೋಲನದಲ್ಲಿರುವುದಾಗಿದೆ. ಈ ಮೂರು ಆರೋಗ್ಯವನ್ನು ಮಕ್ಕಳು ಚೆನ್ನಾಗಿ ಇಟ್ಟುಕೊಳ್ಳಬೇಕು. ಪೋಷಕರ ನಡವಳಿಕೆಯನ್ನು ಮಕ್ಕಳು ಅನುಕರಣೆ ಮಾಡುತ್ತಾರೆ. ಆದುದರಿಂದ ಪೋಷಕರು ಜಾಗ್ರತೆ ವಹಿಸೇಕು. ಮಕ್ಕಳಲ್ಲಿ ನಾವು ಸಕರಾತ್ಮಕವಾಗಿ ಮಾತನಾಡಬೇಕು. ನಕರಾತ್ಮಕ ಮಾತು ಬೇಡ. ಆತ್ಮವಿಶ್ವಾಸ ತುಂಬಬೇಕು. ಮಕ್ಕಳಿಗೆ ಆತ್ಮಗೌರವ ಹೆಚ್ಚಾಗುವ ರೀತಿ ಸ್ಪಂದಿಸಿ ಎಂದು ಪೋಷಕರಿಗೆ ಶಿಕ್ಷಕರಿಗೆ ತಿಳಿಸಿದರು.
ಮುಖ್ಯ ಅತಿಥಿ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, 38 ಶಿಕ್ಷಕರನ್ನು ಹೊಂದಿದ ಶಾಲೆಗೆ ಪ್ರಥಮವಾಗಿ ನಾನು ಬಂದಿದ್ದೇನೆ. ಈ ಶಾಲೆಯ ಕ್ಯಾಂಪಸ್ ಖಾಸಗಿ ಶಾಲೆಯ ರೀತಿ ಇದೆ. ಈ ದೇಶದ ಮಹಾನ್ ವ್ಯಕ್ತಿಗಳೆಲ್ಲರೂ ಸರಕಾರಿ ಶಾಲೆಯಲ್ಲಿಯೇ ಓದಿದವರು. ಡಾಕ್ಟರ್, ಇಂಜಿನಿಯರ್ ಆಗುವ ಬದಲು ಶಿಕ್ಷಕರಾಗುವ ಕನಸೂ ಕಾಣಿ. ಹಾರಾಡಿ ಶಾಲೆಯಿಂದ ಹೋದ ವಿದ್ಯಾರ್ಥಿಗಳು ಶಿಕ್ಷಕರಾಗಿಯೇ ಬರಬೇಕು ಎಂದು ಹೇಳಿ ಈ ಶಾಲೆ ಶಿಕ್ಷಣದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯಲಿ ಎಂದು ಹೇಳಿ ಹಾರೈಸಿದರು.
ಜನನಿ ಮ್ಯಾಚಿಂಗ್ ಸೆಂಟರ್ ಮಾಲಕ ಪ್ರೇಮಲತಾ ಜಿ. ನಂದಿಲ ಮಾತನಾಡಿ ಶಾಲೆಯ ಹಲವು ಕಾರ್ಯಕ್ರಮದಲ್ಲಿ ಭಾಗವಹಿಸುತಿದ್ದೇನೆ. ಎಲ್ಲಾ ಕಾರ್ಯಕ್ರಮದಲ್ಲೂ ಕ್ರಿಯಾತ್ಮಕತೆ, ಅಚ್ಚುಕಟ್ಟು ಹೊಂದಿರುತ್ತದೆ. ಸರಕಾರಿ ಶಾಲೆಯಲ್ಲಿ ಕಲಿತ ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ಇರುತ್ತದೆ. ಎಲ್ಲಾ ಸೌಲಭ್ಯಗಳನ್ನು ಸರಕಾರದಿಂದಲೇ ನಿರೀಕ್ಷೆ ಮಾಡಬಾರದು. ದಾನಿಗಳು ಪೋಷಕರು ಕೈಜೋಡಿಸಿ ಕೆಲಸ ಮಾಡಿದರೆ ಸರಕಾರಿ ಶಾಲೆಗಳು ಕೂಡ ಅಭಿವೃದ್ಧಿಯಾಗುತ್ತದೆ ಎಂದರು.
ಪುತ್ತೂರು ಮಹಿಳಾ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಗೌರಿ ಬನ್ನೂರು ಮಾತನಾಡಿ, ಸಮಾಜದಲ್ಲಿ ನನ್ನ ಹೆಸರು ಉಳಿಯಲು ಹಾರಾಡಿ ಶಾಲೆ ಕಾರಣವಾಗಿದೆ. ಈ ಶಾಲೆಗೆ ನಮ್ಮ ವಿವಿದೋದ್ಧೇಶ ಸಹಕಾರಿ ಸಂಘದಿಂದ ಕೂಡ ಸಹಕಾರ ನೀಡಿದ್ದೇವೆ. ಪೋಷಕರು ಶಿಕ್ಷಕರು ಒಳ್ಳೆಯ ಶಾಲೆಯನ್ನು ಸಮಾಜಕ್ಕೆ ನೀಡಿದ್ದಾರೆ. ಅಲ್ಲದೆ ಶಾಲೆಗೆ ಉತ್ತಮ ಮುಖ್ಯ ಶಿಕ್ಷಕರನ್ನು ನೀಡಿದ್ದು ನಮಗೆಲ್ಲ ಹೆಮ್ಮೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುಲೋಚನಿ ಮಾತನಾಡಿ ಇಂದು ಹಬ್ಬದ ವಾತಾವರಣ ಇದೆ. ಶಿಕ್ಷಕರಿಗೆ ಶಿಸ್ತು ಬೆಳೆಸಲು ಪೋಷಕರು ಸಹಕಾರ ನೀಡಬೇಕು. ಸರಕಾರಿ ಶಾಲೆಗೆ ಒಳ್ಳೆಯ ಹೆಸರಿದೆ. ಇಲ್ಲಿ ಎಲ್ಲಾ ಕಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಎಸ್‌ಡಿಎಂಸಿ ಜತೆ ಕೈಜೋಡಿಸಿ ಎಂದು ಹೇಳಿ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕ್ರಿತಜ್ಞತೆ ಸಲ್ಲಿಸಿದರು.
ಗೌರವಾರ್ಪಣೆ:
ಚಿತ್ರಕಲೆಯಲ್ಲಿ ಸಾಧನೆ ಮಾಡಿದ ಚಲನ ಚಿತ್ರದ ಕಲಾ ನಿರ್ದೇಶಕರಾದ ವಿದ್ಯಾರ್ಥಿಗಳಿಗೆ ಚಿತ್ರಕಲೆ ತರಬೇತಿ ನೀಡಿದ ಯೋಗೀಶ್ ಕಡಂದೇಲುರವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂಗೀತ ತರಬೇತಿ ನೀಡಿದ ಶಿಕ್ಷಕಿ ನಂದಿನಿವಿನಾಯಕ್‌ರವರನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಲಾಯಿತು. 2024-25 ನೇ ಸಾಲಿನಲ್ಲಿ ಪುತ್ತೂರು ತಾಲೂಕಿನ ಸರಕಾರಿ ಶಾಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಹಾರಾಡಿ ಶಾಲೆಯ ವಿದ್ಯಾರ್ಥಿ ರೋಷನ್‌ರವರನ್ನು ಗೌರವಿಸಲಾಯಿತು.
ಪೋಷಕರಿಗೆ ನಡೆಸಿದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ, ಶಾಲಾ ವಾರ್ಷಿಕ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಸಂಜನಾ ಭಟ್ ಬಳಗದವರು ಪ್ರಾರ್ಥಿಸಿದರು. ಮುಖ್ಯಶಿಕ್ಷಕರಾದ ಕುಕ್ಕ ಕೆ. ಸ್ವಾಗತಿಸಿದರು. ಶಿಕ್ಷಕಿ ವನಿತಾ ವಂದಿಸಿ ಶಿಕ್ಷಕ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷರು, ಸದಸ್ಯರು ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿಯರು ವಿವಿಧ ಕಾರ್ಯಕ್ರಮ ನಿರ್ವಹಿಸಿ ಸಹಕರಿಸಿದರು.
ಸಭಾಕಾರ್ಯಕ್ರಮ ಬಳಿಕ ಚಿತ್ರಕಲಾ ವಿದ್ಯಾರ್ಥಿಗಳ ಪ್ರದರ್ಶನ ಮಳಿಗೆ ಉದ್ಘಾಟನೆ ನಡೆಯಿತು. ಗೌರಿ ಬನ್ನೂರು ಮಳಿಗೆ ಉದ್ಘಾಟಿಸಿದರು. ವಿದ್ಯಾರ್ಥಿಗಳಿಂದ ಸಂಗೀತ ನಿನಾದ, ಭರತನಾಟ್ಯ, ಯಕ್ಷಗಾನ, ಕರಾಟೆ ಪ್ರದರ್ಶನ, ಪಿಲಿನಲಿಕೆ ಕಾರ್ಯಕ್ರಮ ನಡೆಯಿತು.
ಇಂದು “ಕಲೋತ್ಕರ್ಷ” ಸಾಂಸ್ಕೃತಿಕ ವೈವಿಧ್ಯ
ಡಿ.6ರಂದು ವಿದ್ಯಾರ್ಥಿಗಳ ಸಾಂಸ್ಕೃತಿಕ ವೈವಿಧ್ಯ ಕಲೋತ್ಕರ್ಷ 2025 ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 9.30ರಿಂದ ಪ್ರತಿಭಾ ಪುರಸ್ಕಾರ, ಅಪರಾಹ್ನ ಅಂಗನವಾಡಿ ಮಕ್ಕಳಿಂದ ಚಿಣ್ಣರ ಚಿಲಿಪಿಲಿ, ವಿದ್ಯಾರ್ಥಿಗಳಿಂದ ಇಂಗ್ಲಿಷ್ ನಾಟಕ ಮತ್ತು ಕಲೋತ್ಕರ್ಷ ಕಾರ್ಯಕ್ರಮ ನಡೆಯಲಿದೆ.