ಕಾರ್ಯಕರ್ತರೇ ಪಕ್ಷಕ್ಕೆ ದೊಡ್ಡ ಶಕ್ತಿ ಮತ್ತು ಆಸ್ತಿ: ಅಶೋಕ್ ರೈ
ಪುತ್ತೂರು: ಕಾರ್ಯಕರ್ತರೇ ಪಕ್ಷದ ಶಕ್ತಿ ಮತ್ತು ಆಸ್ತಿಯಾಗಿದ್ದಾರೆ. ಈ ಕಾರಣಕ್ಕೆ ಕಾರ್ಯಕರ್ತರಿಗೆ ಹೆಚ್ಚಿನ ಗೌರವ ಪಕ್ಷದಲ್ಲಿ ಇದ್ದೇ ಇದೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಮಾಸಿಕ ಸಭೆ ಹಾಗೂ ವಲಯ ಅಧ್ಯಕ್ಷರುಗಳ ಸಭೆಯಲ್ಲಿ ಮಾತನಾಡಿದರು.
ಸರಕಾರ ಎಲ್ಲಾಸಮುದಾಯದ ಅಭಿವೃದ್ದಿಗೂ ವಿಶೇಷ ಅನುದಾನವನ್ನು ವಿವಿಧ ಯೋಜನೆಗಳನ್ನು ನೀಡುತ್ತಿದೆ. ಆಯಾ ಸಮುದಾಯದ ಜನರು ಅರ್ಜಿ ಹಾಕಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಅರ್ಜಿ ಹಾಕದೇ ಇದ್ದಲ್ಲಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಸರಕಾರದ ವಿವಿಧ ಯೋಜನೆಗಳ ಬಗ್ಗೆ ವಲಯ ಮತ್ತು ಬೂತ್ ಅಧ್ಯಕ್ಷರು ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸವನ್ನು ಮಾಡುವ ಮೂಲಕ ಕಾಂಗ್ರೆಸ್ ಸರಕಾರ ಮತ್ತು ಶಾಸಕರು ಏನು ಅಭಿವೃದ್ದಿ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಬೇಕು
ಪ್ರತೀಯೊಬ್ಬ ವಲಯ ಅಧ್ಯಕ್ಷರೂ ಮಾಸಿಕ ಸಭೆಯಲ್ಲಿ ಭಾಗವಹಿಸಬೇಕು. ಅನಿವಾರ್ಯ ಕಾರಣಗಳಿದ್ದಲ್ಲಿ ತಿಳಿಸುವ ಕೆಲಸವನ್ನು ಮಾಡಿ. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು, ಕಾರ್ಯಕರ್ತನೇ ಪಕ್ಷದ ಆಸ್ತಿ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸ್ಥಳೀಯ ಚುನಾವಣೆಗೆ ಸಜ್ಜಾಗಿ
ಕಾರ್ಯಕರ್ತರು ಮುಂದೆ ನಡೆಯುವ ಸ್ಥಳೀಯ ಚುನಾವಣೆಗೆ ಸಜ್ಜಾಗಬೇಕು. ನಗರಸಭೆ, ಗ್ರಾಪಂ, ತಾಪಂ, ಜಿಪಂ ಚುನಾವಣೆ ಯಾವಾಗ ಬೇಕಾದರೂ ನಡೆಯಬಹುದು. ಪುತ್ತೂರಿನಲ್ಲಿನಡೆದ ಅಭಿವೃದ್ದಿ ಕೆಲಸಗಳು, ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ಜನರಿಗೆ ತಿಳಿಸಿ ಅವರನ್ನು ಪಕ್ಷದ ಕಡೆ ಒಲವು ಬರುವಂತೆ ಮಾಡಬೇಕು. ಕಾಂಗ್ರೆಸ್ ಬಡವರ ಪಕ್ಷ, ಅಭಿವೃದ್ದಿಯ ಪರ, ಶಾಂತಿ,ಸೌಹಾರ್ಧತೆಯ ಪರ ಎಂಬುದನ್ನು ಜನರಿಗೆ ತಿಳಿಸಬೇಕು. ಈಗ ಎಲ್ಲೆಡೆ ಕಾಂಗ್ರೆಸ್ ಪರ ಅಲೆ ಇದೆ ಇರುವ ಕಾರಣ ಸ್ಥಳಿಯ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಶಾಸಕರು ಹೇಳಿದರು.
ಒಟ್ಟಾಗಿ ಕೆಲಸ ಮಾಡಿ-ಕೆ ಪಿ ಆಳ್ವ
ಮುಂಬರುವ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರು ಒಟ್ಟಾಗಿ ಕೆಲಸ ಮಾಡಬೇಕಿದೆ. ರಾಜ್ಯದಲ್ಲಿ ಕಾಂಗ್ರೆಸ್ ಉತ್ತಮ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸರಕಾರ ಆಗಬಹುದು ಎಂಬ ಭಾವನೆ ಎಲ್ಲರಲ್ಲಿದೆ ಇದನ್ನು ಮತವಾಗಿ ಪರಿವರ್ತನೆ ಮಾಡುವ ಕೆಲಸ ನಾವು ಮಾಡಬೇಕು. ಮಾಸಿಕ ಸಭೆಯಲ್ಲಿ ಭಾಗವಹಿಸುವ ಮೂಲಕ ವಲಯ ಅಧ್ಯಕ್ಷರು ಪಕ್ಷದ ಆಗುಹೋಗುವ ವಿಚಾರಗಳ ಬಗ್ಹೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ವೇದಿಕೆಯಲ್ಲಿ ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಆಝಾದ್, ಪುಡಾ ಅಧ್ಯಕ್ಷ ಅಮಲರಾಮಚಂದ್ರ, ಅರ್ಷದ್ ದರ್ಬೆ, ಸಂತೋಷ್ ಭಂಡಾರಿ ಚಿಲ್ಮೆತ್ತಾರು ಉಪಸ್ಥಿತರಿದ್ದರು. ಪ್ರ.ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಸ್ವಾಗತಿಸಿ ವಂದಿಸಿದರು.
