ವರ್ಣಕುಟೀರದ ಶಮಿಕರವರಿಂದ ಕಣ್ಣುಮುಚ್ಚಿ 24 ಗಂಟೆ ನಿರಂತರ ಗಾಂಧಾರಿ ವಿದ್ಯೆ ಪ್ರದರ್ಶನ : ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನತ್ತ ಹೆಜ್ಜೆ

0

ಪುತ್ತೂರು: ಮೂರನೇ ಕಣ್ಣಿನಿಂದ ನೋಡುವ ವಿದ್ಯೆಯಾಗಿರುವ ಗಾಂಧಾರಿ ವಿದ್ಯೆ(ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ) ಮೂಲಕ ಸುಮಾರು 300 ಕಲಾಕೃತಿಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರಂತರ 24 ಗಂಟೆ ಹಿನ್ನೆಲೆ ಗಾಯನದ ಮೂಲಕ ರಚಿಸುವುದರಿಂದ ಏಷ್ಯಾನ್ ಬುಕ್ ಆಫ್ ರೆಕಾರ್ಡ್‌ನತ್ತ ಹೆಜ್ಜೆ ಇಟ್ಟಿರುವ ಹಿರೇಬಂಡಾಡಿ ನಿವಾಸಿ, ರೋಟರಿ ಕ್ಲಬ್ ಉಪ್ಪಿನಂಗಡಿ ಇದರ ನಿಯೋಜಿತ ಅಧ್ಯಕ್ಷ ಕೇಶವ ಪಿ.ಎಂ ಹಾಗೂ ಗೀತಾಮಣಿ ದಂಪತಿ ಪುತ್ರಿ, ಪುತ್ತೂರಿನ ಕಲ್ಲಾರೆಯ ವರ್ಣಕುಟೀರದ ಹಾಗೂ ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ಒಂಭತ್ತನೇ ತರಗತಿ ವಿದ್ಯಾರ್ಥಿನಿ ಶಮಿಕ ಎಂ.ಕೆರವರು ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನತ್ತ ಹೆಜ್ಜೆ ಇಟ್ಟಿದ್ದಾರೆ.


ಶಮಿಕರವರ ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಲಿ-ಭರತ್ ಕಾಮತ್:
ಡಿ.6 ಹಾಗೂ 7ರಂದು ಕಲ್ಲಾರೆಯಲ್ಲಿನ ವರ್ಣಕುಟೀರದಲ್ಲಿ ನಡೆದ ಗಾಂಧಾರಿ ವಿದ್ಯೆಯ ಪ್ರದರ್ಶನದ ನಿರಂತರ 24 ಗಂಟೆ ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನತ್ತ ಹೆಜ್ಜೆಯ ಕಾರ್ಯಕ್ರಮವು ಏಷ್ಯನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಇದರ ಸ್ಟೇಟ್ ಕೋ-ಆರ್ಡಿನೇಟರ್ ಹೆಡ್ ಭರತ್ ಕಾಮತ್‌ರವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿತು. ಬಳಿಕ ಮಾತನಾಡಿದ ಅವರು ಕಣ್ಣಿಗೆ ಬಟ್ಟೆ ಕಟ್ಟಿ ಚಿತ್ರಕಲೆಯನ್ನು ಬಿಡಿಸುವುದು ಕಷ್ಟದ ಕೆಲಸ. ಆದರೆ ವಿದ್ಯಾರ್ಥಿನಿ ಶಮಿಕರವರು ತನ್ನ ದೃಢ ನಿರ್ಧಾರ, ಅಚಲ ಛಲದ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಅಣಿಯಾಗುತ್ತಿದ್ದು ಈ ಶಮಿಕರವರ ಸಾಧನೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.

ಚಿತ್ರ:ಕ್ಲಾಸಿ ಕ್ಲಿಕ್ಸ್ ಪುತ್ತೂರು


ಶಮಿಕರವರದ್ದು ಜಾಗತಿಕ ಮಟ್ಟದಲ್ಲಿನ ಸಾಧನೆ-ಸಂಜೀವ ಮಠಂದೂರು:
ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನನ್ನದೇ ಹಿರೇಬಂಡಾಡಿ ಗ್ರಾಮದ ಶಮಿಕರವರು ಜಾಗತಿಕ ಮಟ್ಟದಲ್ಲಿ ತನ್ನದೇ ಆದ ಸಾಧನೆಯನ್ನು ಮಾಡಿ ಪುತ್ತೂರಿನ ಹೆಸರನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮುಂದಡಿ ಇಟ್ಟಿದ್ದಾಳೆ. ಅವಳ ಅವಿರತ ಪರಿಶ್ರಮದ ಹಿಂದೆ ಹೆತ್ತವರು, ಕುಟುಂಬ, ಗುರುಗಳ ಪ್ರೋತ್ಸಾಹ ಮೆಚ್ಚಬೇಕಾದ್ದು. ಶಮಿಕರವರು 24 ಗಂಟೆ ನಿರಂತರ ಸಾಧನೆ ಮಾಡುವ ಮುಖಾಂತರ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರ್ಪಡೆಯಾಗಲಿ ಎಂಬುದೇ ನಮ್ಮ ಹಾರೈಕೆಯಾಗಿದೆ ಎಂದರು.


ಶಮಿಕರವರ ಸಾಧನೆ ಎಲ್ಲರಿಗೂ ಸ್ಪೂರ್ತಿ-ಅರುಣ್ ಪುತ್ತಿಲ:
ಪುತ್ತಿಲ ಪರಿವಾರ ಟ್ರಸ್ಟ್ ಇದರ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಶಮಿಕರವರ ಪ್ರತಿಭೆಯ ಅನಾವರಣದ ಜೊತೆಗೆ ಶಮಿಕರವರ ಸಾಧನೆಯಿಂದ ಪುತ್ತೂರಿನ ಹೆಸರನ್ನು ಜಗತ್ತಿಗೆ ಪಸರಿಸುವ ಕಾರ್ಯ ವರ್ಣಕುಟೀರ ಸಂಸ್ಥೆಯಿಂದ ಆಗಿರುವುದು ಹೆಮ್ಮೆ ತರುವಂತಹುದು ಮಾತ್ರವಲ್ಲ ಅನೇಕ ವರ್ಷಗಳಿಂದ ಚಿತ್ರಕಲೆಯನ್ನು ಆಭ್ಯಾಸ ಮಾಡಿ ಚಿತ್ರಕಲೆಯ ಅನಾವರಣ ಶಮಿಕರವರ ಸಾಮಾಜಿಕ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಶಮಿಕರವರ ಸಾಧನೆ ನಮಗೆಲ್ಲಾ ಸ್ಫೂರ್ತಿ. ಪುತ್ತೂರಿನ ಎಲ್ಲಾ ಮಕ್ಕಳಿಗೆ ಶಮಿಕರವರು ಮಾದರಿಯಾಗಲಿ ಎಂದರು.


ಶಮಿಕರವರ ಸಾಧನೆ ಜಗತ್ತೇ ಗುರುತಿಸುವಂತಹುದ್ದು-ಆಂಜನೇಯ ರೆಡ್ಡಿ:
ಪುತ್ತೂರು ನಗರ ಠಾಣೆಯ ಎಸ್.ಐ ಆಂಜನೇಯ ರೆಡ್ಡಿ ಮಾತನಾಡಿ, ಶಮಿಕರವರ ಸಾಧನೆ ಜಗತ್ತೇ ಗುರುತಿಸುವಂತಹ ಕಾರ್ಯಕ್ರಮ. ಇಂದಿನ ದಿನಗಳಲ್ಲಿ ಕಣ್ಣು ತೆರೆದುಕೊಂಡು ನಡೆಯುವುದೇ ಕಷ್ಟ. ಅದರಲ್ಲೂ ಕಣ್ಣಿಗೆ ಬಟ್ಟೆ ಕಟ್ಟಿ ಚಿತ್ರಕಲೆಯನ್ನು ಬಿಡಿಸುವುದು ಸಾಧನೆಯೇ ಸರಿ. ದೇಶದಲ್ಲಿ ಇಂಜಿನಿಯರ್ಸ್, ವೈದ್ಯರುಗಳು, ಸಾಹಿತಿಗಳು ಹೀಗೆ ಎಲ್ಲರೂ ಕಾಣ ಸಿಗುವರು. ಆದರೆ ಇಂತಹ ಕಲೆಯನ್ನು ಮೈಗೂಡಿಸಿಕೊಂಡವರು ಸಿಗುವುದು ಬಹಳ ಕಷ್ಟ ಎಂದರು.


ಶಮಿಕರವರ ಸಾಧನೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ-ಗೀತಾಲಕ್ಷ್ಮೀ ಕೆದಿಮಾರು:
ವರ್ಣಕುಟೀರ ಕಲಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಗೀತಾಲಕ್ಷ್ಮೀ ಕೆದಿಮಾರು ಮಾತನಾಡಿ, ಪ್ರತಿಭೆ ಅನ್ನುವುದು ಪ್ರತಿಯೊಂದು ಮಕ್ಕಳಲ್ಲಿ ಹುದುಗಿರುವ ಕಾಣಿಕೆಯಾಗಿದೆ. ಆದರೆ ಆ ಹುದುಗಿರುವ ಪ್ರತಿಭೆಯ ಪೋಷಣೆಯೊಂದಿಗೆ ಅನಾವರಣ ಮಾಡಿ ಜಗತ್ತಿಗೆ ತೋರಿಸುವಂತಾಗಬೇಕು. ಮಾತ್ರವಲ್ಲ ಶಮಿಕರವರ ಸಾಧನೆಗೆ ವರ್ಣಕುಟೀರ ಸಂಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ. ಶಮಿಕರವರ ಸಾಧನೆ ಹೊಸ ದಾಖಲೆ ಆಗಲಿ, ಜೊತೆಗೆ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಲಿ ಎಂದರು.


ಪುತ್ತೂರು ಒಕ್ಕಲಿಗ ಗೌಡ ಸಮುದಾಯದ ನಿಕಟಪೂರ್ವ ಅಧ್ಯಕ್ಷ ರವಿ ಮುಂಗ್ಲಿಮನೆ, ಪ್ರೊ.ಕಬಡ್ಡಿ ಆಟಗಾರ ಪ್ರಶಾಂತ್ ರೈ, ಶಮಿಕರವರ ಅಜ್ಜ-ಅಜ್ಜಿಯಂದಿರಾದ ಮೋಹನ್ ಗೌಡ ಕೆಮ್ಮಾರ, ಯಶೋಧ, ಸರೋಜಿನಿ ಮುಡಿಪು, ಜಯಲಕ್ಷ್ಮೀ, ಗೀತಾ, ವಿಜಯ ಮುಂಗ್ಲಿಮನೆ, ಮಾವಂದಿರಾದ ಬಾಲಕೃಷ್ಣ ಕೆಮ್ಮಾರ ಪಡ್ರೆ, ಭರತ್ ಕೆಮ್ಮಾರ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವರ್ಣಕುಟೀರ ಕಲಾ ಸಂಸ್ಥೆಯ ಸಂಚಾಲಕ ಪ್ರವೀಣ್ ವರ್ಣಕುಟೀರರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


ಒಬ್ಬನ ಪ್ರಯತ್ನವಲ್ಲ, ಸಂಸ್ಥೆಯ ಟೀಮ್ ವರ್ಕ್…
ವರ್ಣಕುಟೀರ ಸಂಸ್ಥೆಯು ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು ಶಮಿಕರವರ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಸಂಸ್ಥೆಗೆ ಹೆಗ್ಗುರುತಾಗಿದೆ. ಮಕ್ಕಳ ಹೆತ್ತವರು ಒಂದು ಮಣ್ಣಿನ ಮುದ್ದೆಯನ್ನು ನಮ್ಮಲ್ಲಿ ನೀಡುತ್ತಾ ಅದಕ್ಕೆ ರೂಪ ಕೊಡಿ ಎಂದು ಹೇಳುತ್ತಾರೆ. ಅದರಂತೆ ಮಣ್ಣಿನ ಮುದ್ದೆಯಂತಾಗಿರುವ ಮಕ್ಕಳಿಗೆ ಒಂದು ಫ್ರೇಮ್ ನಲ್ಲಿ ಜೋಡಿಸಿ, ಅದಕ್ಕೆ ರೂಪ ಕೊಟ್ಟು ಸುಂದರ ಮೂರ್ತಿಯನ್ನಾಗಿ ಮಾಡಿ ಅವರ ಪ್ರತಿಭೆಯನ್ನು ಪೋಷಿಸುವ ಕಾರ್ಯ ವರ್ಣಕುಟೀರ ಸಂಸ್ಥೆ ಮಾಡುತ್ತಿದೆ. ವಿದ್ಯಾರ್ಥಿಗಳ ಸಾಧನೆ ಇದು ನನ್ನ ಒಬ್ಬನ ಪ್ರಯತ್ನವಲ್ಲ, ಇದು ಸಂಸ್ಥೆಯ ಟೀಮ್ ವರ್ಕ್ ನಿಂದ ಆಗಿದೆ.
-ಪ್ರವೀಣ್ ವರ್ಣಕುಟೀರ, ಸಂಚಾಲಕರು, ವರ್ಣಕುಟೀರ ಸಂಸ್ಥೆ

ಹಿನ್ನೆಲೆ ಸಂಗೀತ..
ಶಮಿಕರವರು ಚಿತ್ರ ಬಿಡಿಸುವ ಸಂದರ್ಭದಲ್ಲಿ ಗೀತಾಲಕ್ಷ್ಮೀ ಕೆದಿಮಾರು, ಅನುಷಾ ಅಮ್ಮಣ್ಣಾಯ, ಬಾಲಸುಬ್ರಹ್ಮಣ್ಯ ಶರ್ಮ, ಹೇಮಂತ್ ರಾಗಿದಕುಮೇರು, ರವಿ ಅಜ್ಜಿಕಲ್ಲು, ನಿರೀಕ್ಷಾ, ರಿತೀಕ್ಷಾ, ಖುಶಿ, ವಿಶ್ಮಾ ಅಜ್ಜಿಕಲ್ಲು, ಮೈತ್ರಿ, ಸುರೇಶ್ ಉಪ್ಪಿನಂಗಡಿ, ಲಕ್ಷ್ಮೀಸಾಗರ್ ಹೀಗೆ 12 ಮಂದಿ ನಿರಂತರ ಹಿನ್ನೆಲೆ ಸಂಗೀತ ಹಾಗೂ ಹಾಡನ್ನು ಹಾಡುವ ಮೂಲಕ ಹರಿದುಂಬಿಸಲಿದ್ದಾರೆ. ವರ್ಣಕುಟೀರ ಸಂಸ್ಥೆಯ ಬಾಲಸುಬ್ರಹ್ಮಣ್ಯ ಶರ್ಮರವರು ಶಂಖನಾದ ನುಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರತಿ 3 ಗಂಟೆಗೆ 15 ನಿಮಿಷ ವಿಶ್ರಾಂತಿ..
ಏಷ್ಯಾನ್ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ಗೆ ಗಾಂಧಾರಿ ವಿದ್ಯೆ ಪ್ರವೀಣೆ ಶಮಿಕ ಎಂ.ಕೆರವರು ಮೊದಲೇ ನಿರ್ಧರಿಸಿದ್ದಂತೆ ದಿನದ 24 ಗಂಟೆ ಅಂದರೆ ಡಿ.6 ರಂದು ಬೆಳಿಗ್ಗೆ 10 ಗಂಟೆಯಿಂದ ಡಿ.7ರ 10 ಗಂಟೆಯ ತನಕ ಸುಮಾರು 300 ಕಲಾಕೃತಿಗಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಸ್ಯಾಂಡ್ ಆರ್ಟ್ ಕಲಾ ವಿನ್ಯಾಸ ರಚನೆಗೆ ಈಗಾಗಲೇ ಮುನ್ನುಡಿ ಇಟ್ಟಿದ್ದು, ಪ್ರತೀ ಮೂರು ಗಂಟೆಯ ಅವಧಿಗೆ ಶಮಿಕರವರು ಕೇವಲ ಹದಿನೈದು ನಿಮಿಷದ ವಿಶ್ರಾಂತಿ ಪಡೆಯಲಿದ್ದಾರೆ.

LEAVE A REPLY

Please enter your comment!
Please enter your name here