ಪುತ್ತೂರು: ತುಳು ಚಿತ್ರರಂಗದಲ್ಲಿ ವಿಭಿನ್ನ ತಂತ್ರಜ್ಞಾನದಲ್ಲಿ ಯಸ್‌ಬಿ ಗ್ರೂಪ್ಸ್ ಅರ್ಪಿಸುವ ಶಿಯಾನ ಪ್ರೋಡಕ್ಷನ್ ಹೌಸ್ ಬ್ಯಾನರ್‌ನ ಅಡಿಯಲ್ಲಿ ತಯಾರಾದ, ಪ್ರತೀಕ್ ಯು ಪೂಜಾರಿ ಕಾವೂರು ನಿರ್ಮಾಣದ, ಭರತ್ ಶೆಟ್ಟಿಯವರ ಕಥೆ, ಪರಿಕಲ್ಪನೆ ನಿರ್ದೇಶನದ, ವಿಭಿನ್ನ ತಂತ್ರಜ್ಞಾನದ ಬಹುತಾರಾಗಣದ ’ಪಿಲಿಪಂಜ’ ತುಳು ಸಿನಿಮಾ ಡಿ.12ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಮತ್ತು ಕಲಾವಿದ ರಮೇಶ್ ರೈ ಕುಕ್ಕುವಳ್ಳಿ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಬೆಳಗ್ಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ತುಳುನಾಡಿನ ಮಣ್ಣಿನ ಕಥೆಯನ್ನು ತೆರೆಗೆ ತರುವ ಪ್ರಯತ್ನದಲ್ಲಿರುವ ಈ ಚಿತ್ರ ಕತ್ತಲು ಬೆಳಕಿನ ನಡುವಿನ ಸಸ್ಪೆನ್ಸ್ ಚಿತ್ರವಾಗಿದೆ. ಈಗಾಗಲೇ ಪ್ರಿಮಿಯರ್ ಶೋ ನಡೆದಿದ್ದು, ಪ್ರೇಕ್ಷಕರಿಂದ ಉತ್ತಮ ಸ್ಪಂದನೆ ಬಂದಿದೆ ಎಂದರು.
ಚಿತ್ರದ ನಿರ್ಮಾಪಕ ಪ್ರತೀಕ್ ಯು ಪೂಜಾರಿ ಮಾತನಾಡಿ, ಚಿತ್ರವನ್ನು 35 ದಿನದ ಶೂಟಿಂಗ್ ಮಾಡಲಾಗಿದೆ. ಮುಡಿಪು, ಇರಾ, ಸಾಲೆತ್ತೂರು ಸಹಿತ ಕೊಕ್ಕಡದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಬಹುತೇಕ ಕತ್ತಲು ಆವರಿಸಿದಾಗ ಶೂಟಿಂಗ್ ನಡೆದಿದೆ. ಚಿತ್ರದಲ್ಲಿ ವಿಭಿನ್ನ ತಂತ್ರಜ್ಞಾನ ಸಿಜಿ ಕೆಲಸ ಮಾಡಲಾಗಿದೆ. ಕುಟುಂಬ ಸಮೇತರಾಗಿ ನೋಡುವ ಚಿತ್ರವಾದ್ದರಿಂದ ಪುತ್ತೂರಿನ ಜನರು ಪೂರ್ಣ ಸಹಕಾರ ನೀಡುವಂತೆ ಮನವಿ ಮಾಡಿದರು.
ಚಿತ್ರದಲ್ಲಿ ರಮೇಶ್ ರೈ ಕುಕ್ಕುವಳ್ಳಿ, ಬೋಜರಾಜ್ ವಾಮಂಜೂರು, ಸುಂದರ ರೈ ಮಂದಾರ, ಶಿವಪ್ರಕಾಶ್ ಪೂಂಜ, ರವಿ ರಾಮಕುಂಜ, ರೂಪಶ್ರೀ ಪೆರ್ಕಾಡಿ, ರಂಜನ್ ಬೋಳೂರು, ರಾಜ್ ಪ್ರಕಾಶ್ ಶೆಟ್ಟಿ, ಪ್ರತೀಕ್, ಪ್ರವೀಣ್, ಜಯಶೀಲ, ಭಾಸ್ಕರ್ ಮತ್ತಿತರರು ಅಭಿನಯಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚಿತ್ರದ ಕಥೆಗೆ ಹೊಂದಾಣಿಕೆಯಾದ ಹಾಸ್ಯ ಪಾತ್ರಗಳು:
ಚಿತ್ರದಲ್ಲಿ ಕಥೆ ಬೇರೆ ಹಾಸ್ಯ ಬೇರೆ ಇರುವುದಿಲ್ಲ. ಚಿತ್ರದ ಕಥೆಗೆ ಹೊಂದಾಣಿಕೆ ಆಗುವ ಹಾಸ್ಯ ಪಾತ್ರಗಳು ಇವೆ. ಇವೆಲ್ಲ ತುಳು ನಾಡಿನ ಮಣ್ಣಿನ ಸೊಗಡನ್ನು ತಿಳಿಸುವ ಚಿತ್ರವಾಗಿದೆ ಎಂದು ಚಿತ್ರದ ನಟ ಸುಂದರ ರೈ ಮಂದಾರ ಅವರು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಭರತ್ ಶೆಟ್ಟಿ, ಕಲಾವಿದ ರವಿ ರಾಮಕುಂಜ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.
