ವಿಧಾನಸಭಾ ಕ್ಷೇತ್ರಕ್ಕೆ 5 ಕೆಪಿಎಸ್ ಮಾದರಿ ಶಾಲೆ ಮಂಜೂರು: ಅಶೋಕ್ ರೈ
ಪುತ್ತೂರು: ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 3 ರಿಂದ 5 ಕೆಪಿಎಸ್ ಮಾದರಿ ಶಾಲೆಗಳಿಗೆ ಈಗಾಗಲೇ ಸರಕಾರ ಮಂಜೂರಾತಿ ನೀಡಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 5 ಕೆಪಿಎಸ್ ಮಾದರಿ ಶಾಲೆಗಳು ಬರಲಿದೆ. ತಾಲೂಕಿನ ಬೆಟ್ಟಂಪಾಡಿ, ನೆಟ್ಟಣಿಗೆ ಮುಡ್ನೂರು, ಬಜತ್ತೂರು, ಕೋಡಿಂಬಾಡಿ ಮತ್ತು ಪಾಣಾಜೆ ಇಲ್ಲಿಗೆ ಕೆಪಿಎಸ್ ಮಾದರಿ ಶಾಲೆಗಳು ಬರಲಿವೆ ಎಂದು ಶಾಸಕರಾದ ಅಶೋಕ್ ಕುಮಾರ್ ರೈಯವರು ತಿಳಿಸಿದರು.
ಅವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ 84 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಶಾಲಾ ಕೊಠಡಿಗಳಿಗೆ ದ.13 ರಂದು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವುದು ಸರಕಾರ ಮತ್ತು ಹೆತ್ತವರ ಕರ್ತವ್ಯವಾಗಿದ್ದು ಸರಕಾರ ಈಗಾಗಲೇ 2ಸಾವಿರದ 400 ಕೋಟಿ ರೂ.ಅನುದಾನವನ್ನು ಶಿಕ್ಷಣಕ್ಕಾಗಿ ಮೀಸಲಿರಿಸಿದ್ದು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಎಲ್ಲಾ ರೀತಿಯಿಂದಲೂ ಅನುದಾನವನ್ನು ನೀಡುತ್ತಿದೆ ಎಂದ ಅಶೋಕ್ ಕುಮಾರ್ ರೈಯವರು ಮಕ್ಕಳಿಗೆ 12 ನೇ ತರಗತಿ ತನಕ ಉತ್ತಮ ಶಿಕ್ಷಣವನ್ನು ಕೊಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಬಡವರ ಮಕ್ಕಳು ಕೂಡ ವೈದ್ಯಕೀಯದಂತಹ ಉನ್ನತ ಶಿಕ್ಷಣವನ್ನು ಪಡೆಯಬೇಕು ಎಂಬ ಕಾರಣಕ್ಕಾಗಿ ವೀರಪ್ಪ ಮೊಯಿಲಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಿಇಟಿ, ನೀಟ್ನಂತಹ ವ್ಯವಸ್ಥೆಯನ್ನು ಜಾರಿಗೆ ತಂದರು ಇದರಿಂದ ಇಂದು ಅದೆಷ್ಟೋ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ ಎಂದು ಶಾಸಕರು ಹೇಳಿದರು.
ಕೆಪಿಎಸ್ಗೆ ಇನ್ನಷ್ಟು ಅನುದಾನ
ಕೆಪಿಎಸ್ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರಿ 8 ರಿಂದ 10 ಕೋಟಿ ರೂ.ಅನುದಾನವನ್ನು ಮೀಸಲಿರಿಸಿದ್ದು ಶಾಲೆಗಳಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಅನುದಾನವನ್ನು ಕೊಡುವ ಕೆಲಸ ಆಗಲಿದೆ ಎಂದ ಶಾಸಕ ಅಶೋಕ್ ರೈಯವರು ಕುಂಬ್ರ ಕೆಪಿಎಸ್ ಶಾಲೆಗೆ ಈಗಾಗಲೇ 84 ಲಕ್ಷ ರೂ.ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದ್ದು ಉತ್ತಮ ರೀತಿಯಲ್ಲಿ ಕೊಠಡಿಗಳ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ನ್ಯಾಯವಾದಿ ಕುಂಬ್ರ ದುರ್ಗಾಪ್ರಸಾದ್ ರೈ, ಫುಡಾ ಅಧ್ಯಕ್ಷ ಅಮಲ ರಾಮಚಂದ್ರ, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ, ಸುಂದರಿ ಪರ್ಪುಂಜ, ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ, ಮಹಮ್ಮದ್ ಬೊಳ್ಳಾಡಿ, ರಝಾಕ್ ಪರ್ಪುಂಜ, ಕೆಪಿಎಸ್ ಉಪ ಪ್ರಾಂಶುಪಾಲೆ ಮಮತಾ, ಗುತ್ತಿಗೆದಾರ ಜಲೀಲ್, ಕೆಪಿಎಸ್ ಮುಖ್ಯಗುರು ಜೂಲಿಯಾನ ಮೊರಾಸ್, ಚೆನ್ನ ಬಿಜಳ, ಸುಜಾತ ಸಂತೋಷ್ ಕುಮಾರ್, ಆಶಾ, ಶಿಕ್ಷಕ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸದಿಂದ ಭಾರತ ವಿಶ್ವಗುರು
ರಾಜಕೀಯದವರು ಭಾಷಣ ಮಾಡಿದರೆ ಈ ದೇಶ ಉದ್ದಾರ ಆಗೋದಿಲ್ಲ, ಐಎಎಸ್ ಆಫೀಸರ್ಗಳು ಎಸಿ ಕಛೇರಿಯಲ್ಲಿ ಕೂತುಕೊಂಡು ಆದೇಶ ನೀಡಿದ ಕೂಡಲೇ ದೇಶ ಉದ್ದಾರ ಆಗೋದಿಲ್ಲ, ಜನರ ಆರ್ಥಿಕ ಪರಿಸ್ಥಿರಿ ಸುಧಾರಿಸಲು ಸಾಧ್ಯವಿಲ್ಲ ಯಾವಾಗ ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುತ್ತೇವೋ ಆಗ ನಮ್ಮ ದೇಶ ವಿಶ್ವಗುರು ಆಗುವ ಕನಸಿದೆಯೋ ಅದು ನನಸಾಗುತ್ತದೆ. ಆದ್ದರಿಂದ ನಾವೆಲ್ಲರೂ ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ಕೊಡುವ ಕೆಲಸ ಆಗಬೇಕು, ಇದಕ್ಕಾಗಿಯೇ ಸರಕಾರ ಕೆಪಿಎಸ್ ಮಾದರಿ ಶಾಲೆಗಳನ್ನು ಜಾರಿಗೆ ತರುತ್ತಿದೆ ಎಂದು ಶಾಸಕ ಅಶೋಕ್ ಕುಮಾರ್ ರೈಯವರು ಹೇಳಿದರು.
