ನೆಲ್ಯಾಡಿ: ಬೇಕರಿ ತಿಂಡಿ ತಿನಿಸು ಸಾಗಾಟದ ಅಶೋಕ್ ಲೇಲ್ಯಾಂಡ್ ಹಾಗೂ ಯಮಹ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರು ಎಂಬಲ್ಲಿ ಡಿ.12ರಂದು ಮಧ್ಯಾಹ್ನ ನಡೆದಿದೆ.
ಯಶವಂತ ವಿ.ಜೆ.ಎಂಬವರು ಬೆಳ್ತಂಗಡಿ ತಾಲೂಕಿನ ಪಿಲಾತಬೆಟ್ಟು ನಯನ ಬೇಕರಿಯಿಂದ ನೆಲ್ಟಿಸ್ಟರ್ ಪಿಂಟೋ ಎಂಬವರ ಅಶೋಕ್ ಲೇಲ್ಯಾಂಡ್ (ಕೆಎ19, ಎಎ 6512)ವಾಹನದಲ್ಲಿ ಚಾಲಕನಾಗಿ ಬೇಕರಿ ತಿಂಡಿ ತಿನಿಸುಗಳನ್ನು ಅಂಗಡಿಗಳಿಗೆ ಸೇಲ್ ಮಾಡುತ್ತಿದ್ದು ಡಿ.12 ರಂದು ಬೆಳಿಗ್ಗೆ ಉಪ್ಪಿನಂಗಡಿಯಲ್ಲಿ ತಿಂಡಿ ತಿನಿಸುಗಳನ್ನು ಅಂಗಡಿಗೆ ಕೊಟ್ಟು ಮಧ್ಯಾಹ್ನ 1 ಗಂಟೆಗೆ ಕುಂತೂರು ತಲುಪಿದ್ದು ಅಲ್ಲಿ ರಸ್ತೆ ಎಡಬದಿ ವಾಹನ ನಿಲ್ಲಿಸಲು ಹೋದಾಗ ಹಿಂದಿನಿಂದ ಅಂದರೆ ಉಪ್ಪಿನಂಗಡಿ ಕಡೆಯಿಂದ ಕಡಬ ಕಡೆಗೆ ಅವಿನಾಶ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಯಮಹ ಎಫ್ಝೆಡ್ ಬೈಕ್(ಕೆಎ 21, ವೈ 4439) ಡಿಕ್ಕಿಯಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಅವಿನಾಶ್ರನ್ನು ಚಿಕಿತ್ಸೆಗೆ ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಅಶೋಕ್ ಲೇಲ್ಯಾಂಡ್ ಚಾಲಕ ಯಶವಂತ ವಿ.ಜೆ. ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
