ಆಲಂಕಾರು: ಆಲಂಕಾರು ವಲಯ ಬಂಟರ ಸಂಘ ಹಾಗೂ ಯುವ ಬಂಟರ ಸಂಘದ ಆಶ್ರಯದಲ್ಲಿ ವಲಯ ಬಂಟರ ಕ್ರೀಡಾಕೂಟವು ಆಲಂಕಾರು ಶ್ರೀ ದುರ್ಗಾಂಬಾ ಕ್ರೀಡಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.
ಬೆಳಿಗ್ಗೆ ಆಲಂಕಾರು ಶತಾಕ್ಷಿ ಕ್ಲಿನಿಕ್‌ನ ವೈದ್ಯೆ ಡಾ. ಕೃತಿ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ವಲಯದ ಬಂಟ ಬಾಂಧವರು ಆಕರ್ಷಕ ಪಥ ಸಂಚಲನ ನಡೆಸಿದರು. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪ ರೈ ಕೆ ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೊಣಾಲುಗುತ್ತು ವಿಠಲ ರೈ ಅವರು ಕ್ರೀಡಾಕೂಟದ ಮಹತ್ವವನ್ನು ವಿವರಿಸಿದರು. ಕ್ರೀಡಾಜ್ಯೋತಿ ಹಸ್ತಾಂತರದೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.

ಕ್ರೀಡಾಕೂಟದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಬಕೆಟ್‌ಗೆ ಬಾಲ್ ಹಾಕುವುದು, ಬಾಟಲಿಗೆ ನೀರು ತುಂಬಿಸುವುದು, ಐದು ವರ್ಷ ಮೇಲ್ಪಟ್ಟವರಿಗೆ ಪಟ್ಟಣಕ್ಕೆ ಬಾಂಬ್, 50 ಮೀಟರ್ ಓಟ, 11 ರಿಂದ 16 ವಯಸ್ಸಿನ ಹುಡುಗರಿಗೆ ವಾಲಿಬಾಲ್, ಕಬಡ್ಡಿ ಹಾಗೂ ಹುಡುಗಿಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, 100 ಮೀಟರ್ ಓಟ ನಡೆಯಿತು. ಪುರುಷರಿಗೆ ಗುಂಡೆಸೆತ, ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಕಬಡ್ಡಿ, 100 ಮೀಟರ್ ಓಟ ಹಾಗೂ ಮಹಿಳೆಯರಿಗೆ ಗುಂಡೆಸೆತ, ತ್ರೋಬಾಲ್, ಹಗ್ಗಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿ ಹಿಮ್ಮುಖ ಓಟ, ಡಾಡ್ಜ್ ಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಿತು. ಸಭಾಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ವಹಿಸಿದ್ದರು. ಪ್ರಮುಖರಾದ ರಾಧಾಕೃಷ್ಣ ರೈ ಪರಾರಿಗುತ್ತು, ಶಶಿಧರ ರೈ ಮನವಳಿಕೆಗುತ್ತು, ಗಣೇಶ್ ರೈ ಕೆ ಹಾಗೂ ವಿನೋದ್ ಕುಮಾರ್ ರೈ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮವನ್ನು ಸಂಘದ ಕೋಶಾಧಿಕಾರಿ ಲೋಕನಾಥ ರೈ ಕೇಲ್ಕ ನಿರೂಪಿಸಿದರು. ಧನ್ಯಶ್ರೀ ರೈ ಬಹುಮಾನ ಪಟ್ಟಿಯನ್ನು ವಾಚಿಸಿದರು. ಯುವ ಬಂಟರ ಸಂಘದ ಅಧ್ಯಕ್ಷ ಗುರುಕಿರಣ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ ಗುತ್ತುಪಾಲು, ಉಪಾಧ್ಯಕ್ಷ ಪ್ರಭಾ ರಘುನಾಥ ಚೌಟ, ಯುವ ಬಂಟರ ಸಂಘದ ಕಾರ್ಯದರ್ಶಿ ಕವನ್ ರೈ, ಕೋಶಾಧಿಕಾರಿ ಯತೀಶ್ ರೈ ಕಲ್ಕಾಡಿ ಸೇರಿದಂತೆ ಹಲವರು ಸಹಕರಿಸಿದರು.
ಕಾರ್ಯಕ್ರಮದ ಬಳಿಕ ರಾಮಕುಂಜ, ಕೊಯಿಲ, ಹಳೆನೇರೆಂಕಿ, ಆಲಂಕಾರು, ಪೆರಾಬೆ ಹಾಗೂ ಕುಂತೂರು ಗ್ರಾಮದ ಬಂಟ ಬಾಂಧವರು ಸೇರಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದರು.