ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಕ್ಯಾಂಪಸ್‌ಗೆ ಆಗಮಿಸಿದ ಆದಿಯೋಗಿ ರಥದ ಶಿವಯಾತ್ರೆ

0

ಪುತ್ತೂರು: ಈಶ ಯೋಗ ಕೇಂದ್ರವು ಮಹಾಶಿವರಾತ್ರಿ ಶಿವಾಂಗ ಸಾಧನದ ಭಾಗವಾಗಿ ಉಡುಪಿಯಿಂದ ಕೊಯಂಬತ್ತೂರಿನ ಈಶ ಯೋಗ ಕೇಂದ್ರಕ್ಕೆ ಆದಿಯೋಗಿ ರಥದ 70 ದಿನಗಳ ಶಿವಯಾತ್ರೆಯನ್ನು ಹಮ್ಮಿಕೊಂಡಿದೆ.ಈ ಯಾತ್ರೆಯು ಡಿ.16 ರಂದು ತೆಂಕಿಲದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣಕ್ಕೆ ಆಗಮಿಸಿತು.ವಿದ್ಯಾರ್ಥಿಗಳ ಮಂತ್ರ ಪಠಣ, ಭಜನೆ, ಡೋಲುವಾದನ, ಶಂಖ ನಾದದೊಂದಿಗೆ ರಥವನ್ನು ಸ್ವಾಗತಿಸಲಾಯಿತು.


ಈ ಸಂದರ್ಭದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ , ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ನರೇಂದ್ರ ಪದವಿ ಪೂರ್ವ ಕಾಲೇಜು ಇದರ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯ ಗುರುಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳೆಲ್ಲರೂ ಆದಿಯೋಗಿ ರಥಕ್ಕೆ ಪುಷ್ಪಾರ್ಚಣೆಯನ್ನು ಮಾಡಿ, ಆರತಿ ಬೆಳಗಿ ಭಕ್ತಿಯಿಂದ ನಮಿಸಿದರು.


ಈ ರಥ ಸುಳ್ಯ, ಮಡಿಕೇರಿ, ಮೈಸೂರು ,ಚಿಕ್ಕಬಳ್ಳಾಪುರ ಮತ್ತು ಇತರ ಹಲವು ಪ್ರಮುಖ ಪಟ್ಟಣಗಳ ಪ್ರಯಾಣಿಸಿ ಈಶ ಯೋಗ ಕೇಂದ್ರವು ನೆಲೆಸಿರುವ ವೆಳ್ಳಿ ಯಂಗಿರಿ ಪರ್ವತದ ತಪ್ಪಲನ್ನು ತಲುಪಲಿದೆ. 1,೦೦೦ ಕಿ.ಮೀ.ಗೂ ಅಧಿಕ ದೂರದ ತೀರ್ಥಯಾತ್ರೆಯನ್ನು ಮಹಾಶಿವರಾತ್ರಿ ಹಬ್ಬಕ್ಕೂ ಮೊದಲು ಫೆ.13ರಂದು, ವೈಭವಯುತ ಕೊಯಂಬತ್ತೂರಿನ ಈಶ ಯೋಗ ಕೇಂದ್ರದ ಬಳಿ ಇರುವ ಆದಿಯೋಗಿಯ ಬಳಿ ಯಾತ್ರೆ ಪೂರ್ಣಗೊಳ್ಳಲಿದೆ. ಎಂದು ಶಿವಾಂಗ ಸಂಘಟನೆಯ ಪ್ರಮುಖರಾದ ಪ್ರವೀಣ್ ಕುಮಾರ್ ತಿಳಿಸಿದರು.


ಈ ಸಮಾರಂಭದಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ರವೀಂದ್ರ ಪಿ, ನರೇಂದ್ರ ಪದವಿ ಪೂರ್ವ ಕಾಲೇಜಿನ ಸಂಚಾಲಕರಾದ ಸಂತೋಷ್ ಬಿ., ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕರಾದ ರವಿ ನಾರಾಯಣ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ಚಂದ್ರ, ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ರಘುರಾಜ್ ಉಬರಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here