ಕೃಷಿಸಿರಿ – ಉಸಿರು ಉಸಿರಲಿ ಹಸಿರ ಮಾರ್ದನಿ… ವಿಶೇಷ ಪುರವಣಿ

ಕಡಿಮೆ ಪರಿಶ್ರಮದಲ್ಲಿ ಹೆಚ್ಚು ಪ್ರತಿಫಲ ವೈಜ್ಞಾನಿಕ ಗೇರು ಕೃಷಿ
ಹೆಚ್ಚಾಗಿ ತೋಟಗಾರಿಕಾ ಬೆಳೆಗಳನ್ನು ಆಶ್ರಯಿಸಿರುವ ಅವಿಭಜಿತ ದ.ಕ. ಉಡುಪಿ ಜಿಲ್ಲೆಯಲ್ಲಿ ಆ ಬೆಳೆಗಳ ಪೋಷಣೆ ಮತ್ತು ಫಸಲು ಬೆಲೆಯಲ್ಲಿನ ಅಜಗಜಾಂತರಕ್ಕೆ ತತ್ತರಿಸಿರುವ ಕೃಷಿಕರು ಪರ್ಯಾಯ ಕೃಷಿಯತ್ತ ಮುಖ ಮಾಡಿರುವುದು ಸಹಜವಾಗಿದೆ. ಅದರಲ್ಲೂ ಹೆಚ್ಚು ಪೋಷಣೆಯ ಖರ್ಚು ಇಲ್ಲದೆ ಬಂದ ಫಸಲಿನಲ್ಲಿ ಅತ್ಯಧಿಕ ಲಾಭ ಪಡೆಯುವ ನಿಟ್ಟಿನಲ್ಲಿ ಗೇರು ಕೃಷಿಯನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ. ಅನಾದಿ ಕಾಲದಿಂದ ಸಾಂಪ್ರದಾಯಿಕ ರೀತಿಯಲ್ಲಿ ಗೇರು ಬೆಳೆಯಲಾಗುತ್ತಿತ್ತು. ಈ ಪದ್ದತಿಯಲ್ಲಿ ಕಚ್ಚಾ ಗೇರು ಬೀಜದಿಂದ ಮೊಳಕೆ ಬಂದ ಗೇರು ಗಿಡದಿಂದ ಗೇರು ಬೆಳೆ ಬೆಳೆಯಲಾಗುತ್ತಿತ್ತು. ಈ ವಿಧಾನದಲ್ಲಿ ೧೦ ವರ್ಷಗಳ ನಂತರ ಫಸಲು ದೊರೆಯುತ್ತದೆ. ಪ್ರಕೃತ ಗೇರು ಬೆಳೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲು ರೈತ ಪ್ರಾರಂಭಿಸಿದ್ದಾನೆ. ಸರಕಾರ ಕೂಡ ಗೇರು ಸಂಶೋಧನಾ ನಿರ್ದೇಶನಾಲಯವನ್ನು ಸ್ಥಾಪಿಸಿ ವೈಜ್ಞಾನಿಕವಾಗಿ ಗೇರು ಬೆಳೆಸಲು ಸಹಕಾರ ನೀಡುತ್ತಿದೆ.
ಕಸಿ ಕಟ್ಟಿದ ಗೇರು ಗಿಡಗಳ ಮೂಲಕವಾಗಿ ಗೇರು ಬೆಳೆಯನ್ನು ಬೆಳೆಯಲು ಪ್ರಾರಂಭಿಸಲಾಯಿತು. ಕಸಿ ಕಟ್ಟಿದ ಗೇರು ಗಿಡಗಳನ್ನು ನೆಟ್ಟು ೩ ವರ್ಷದಲ್ಲಿ ಫಸಲನ್ನು ಪಡೆಯಲಾಗುತ್ತಿದೆ. ಅತ್ಯಧಿಕ ಫಸಲನ್ನು ಕೊಡುವ ತಳಿಗಳಾದ ಉಳ್ಳಾಲ-೧, ಉಳ್ಳಾಲ ೨, ಉಳ್ಳಾಲ ೩, ಉಳ್ಳಾಲ ೪…, ಭಾಸ್ಕರ, ವಿ.ಆರ್.ಐ. ೩, ಸೆಲೆಕ್ಷನ್ ೨, ವೆಂಗುರ್ಲ ೧, ೨, ೩, ೪…., ಮೊಡಕ್ಕತ್ತರ ಮತ್ತಿತರ ಗೇರು ತಳಿಗಳನ್ನು ರೈತರಿಗೆ ಪರಿಚಯಿಸಿ ಇಡೀ ಭಾರತದಾದ್ಯಂತ ವೈಜ್ಞಾನಿಕ ರೀತಿಯಲ್ಲಿ ಬೆಳೆಸಲಾಗುತ್ತಿದೆ. ಇನ್ನೂ ಹೆಚ್ಚಿನ ಸಂಶೋಧನೆಯಿಂದ ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಉತ್ಪಾದನೆಯನ್ನು ಪಡೆಯುವ ಉದ್ದೇಶದಿಂದ ಘನ ಸಾಂದ್ರ ಪದ್ದತಿ, ಸಾಂದ್ರ ಪದ್ದತಿ ಮೂಲಕ ಹೆಚ್ಚು ಇಳುವರಿಯನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ. ಘನ ಸಾಂದ್ರ ಪದ್ಧತಿಯಲ್ಲಿ ೩x೩ ಮೀ, ಸಾಂದ್ರ ಪದ್ದತಿಯಲ್ಲಿ ೫x೫ ಮೀ ದೂರದಲ್ಲಿ ಗೇರು ಗಿಡಗಳನ್ನು ನೆಟ್ಟು ವಿಸ್ತೀರ್ಣವಾರು ಜಾಸ್ತಿ ಉತ್ಪಾದನೆ ಯನ್ನು ಪಡೆದು ರೈತನ ಆರ್ಥಿಕತೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.
ಗೇರು ಗಿಡಗಳಿಗೆ ಅತ್ಯಧಿಕ ನೀರಾವರಿ ಅವಶ್ಯಕತೆ ಇರುವುದಿಲ್ಲ. ಗೇರು ಗಿಡಗಳನ್ನು ಜನವರಿ ತಿಂಗಳಲ್ಲಿ ನಡೆಸುವುದು ಉತ್ತಮ. ವಿಜ್ಞಾನಿಗಳ ಶಿಫಾರಸ್ಸಿನಂತೆ ಸಪ್ಟಂಬರ್, ಅಕ್ಟೋಬರ್ ತಿಂಗಳಲ್ಲಿ ಗೇರು ಗಿಡಗಳಿಗೆ ಗೊಬ್ಬರ ಕೊಡುವುದು ಸೂಕ್ತ. ಗೇರು ಮರಕ್ಕೆ ಟಿ ಸೊಳ್ಳೆಯ ಬಾಧೆ ಇರುತ್ತದೆ. ಇದಕ್ಕೆ ಔಷಧಿ ಸಿಂಪಡಣೆ ಅತೀ ಅಗತ್ಯ. ಘನ ಸಾಂದ್ರ ಪದ್ದತಿಗೆ ವಿಆರ್‌ಐ ೩ ಅತ್ಯಂತ ಸೂಕ್ತ ಎಂಬುದು ಜೀವನಾನುಭವದಿಂದ ಅನುಭವಕ್ಕೆ ಬಂದಿರುತ್ತದೆ. ವಿಆರ್‌ಐ ೩ ಗೆಲ್ಲು ಸವರುವಿಕೆಗೆ (ಪ್ರೋನಿಂಗ್) ಒಗ್ಗುತ್ತದೆ. ವೆಂಗುರ್ಲ, ಉಳ್ಳಾಲ ೩ ತಳಿ ಸಾಂಪ್ರದಾಯಿಕ ಪದ್ದತಿಗೆ ಸೂಕ್ತ ತಳಿ. ಈ ತಳಿಯನ್ನು ೮x೮ ಮೀ ಅಳತೆಯಲ್ಲಿ ನೆಟ್ಟರೆ ಉತ್ತಮ. ಒಂದು ವೇಳೆ ಈ ತಳಿಗಳನ್ನು ೫x೫ ಮೀ ಅಳತೆಯಲ್ಲಿ ನೆಟ್ಟರೆ ೧೦ನೇ ವರ್ಷದಲ್ಲಿ ಗಿಡ ಬಿಟ್ಟು ಗಿಡವನ್ನು ತೆಗೆಯಲೇ ಬೇಕಾಗುತ್ತದೆ. ಇಲ್ಲವಾದರೆ ಗಾಳಿ ಮತ್ತು ಬೆಳಕಿನ ಕೊರತೆ ಉಂಟಾಗಿ ಇಳುವರಿ ಕಡಿಮೆಯಾಗುತ್ತದೆ. ಅನುಕೂಲಕರವಾದ ಹವಾಮಾನ ಗೇರು ಬೆಳೆಗೆ ಅತೀ ಅಗತ್ಯ. ಚಳಿ ಮತ್ತು ಸೆಖೆಗೆ ಪೂರಕವಾಗಿ ಗೇರು ಫಸಲು ನೀಡುತ್ತದೆ. ಭಾಸ್ಕರ ತಳಿ ಫೆಬ್ರವರಿಯಲ್ಲಿ ಫಸಲು ಕೊಟ್ಟರೆ, ಉಳ್ಳಾಲ ೩ ಮೇ ತಿಂಗಳಲ್ಲಿ ಫಸಲು ಕೊಡುತ್ತದೆ. ಗೇರು ಕೃಷಿ ಮಾಡುವ ಗುಡ್ಡವನ್ನು ಗಿಡ ಗಂಟಿಗಳನ್ನು ಸವರಿ ತೆಗೆದು ನೀರು ಇಂಗುವ ರೀತಿಯಲ್ಲಿ ಸಮತಟ್ಟು ಮಾಡಬೇಕು. ಗೇರು ಬೆಳೆಯುವ ರೈತನಿಗೆ `ಪರಿಣತಿ, ಪರಿಜ್ಞಾನ, ಪರಿಶ್ರಮ, ಪರಿಪೂರ್ಣ ನಿರ್ವಹಣೆಯ ಗುಣ ಹೊಂದಿದ್ದರೆ ಸೂಕ್ತ ಪ್ರತಿಫಲವನ್ನು ಪಡೆಯಲು ಸಾಧ್ಯ.

ಕಡಿಮೆ ವಿಸ್ತೀರ್ಣದಲ್ಲಿ ಹೆಚ್ಚು ಉತ್ಪಾದನೆಯನ್ನು ಪಡೆಯುವ ಉದ್ದೇಶದಿಂದ ಘನ ಸಾಂದ್ರ ಪದ್ಧತಿಯಲ್ಲಿ 3×3 ಮೀ, ಸಾಂದ್ರ ಪದ್ದತಿಯಲ್ಲಿ 5×5 ಮೀ ದೂರದಲ್ಲಿ ಗೇರು ಗಿಡಗಳನ್ನು ನೆಟ್ಟು ವಿಸ್ತೀರ್ಣವಾರು ಜಾಸ್ತಿ ಉತ್ಪಾದನೆಯನ್ನು ಪಡೆದು ರೈತನ ಆರ್ಥಿಕತೆಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ.

ಮಾಹಿತಿ: ಕಡಮಜಲು ಸುಭಾಸ್ ರೈ, ವೈಜ್ಞಾನಿಕ ರೀತಿಯ ಪ್ರಗತಿಪರ ಗೇರು ಕೃಷಿಕರು

———————————————————————————————

———————————————————————————————

ಮಳೆನೀರು ಕೊಯ್ಲಿನ ಪ್ರಯೋಜನಗಳೇನು? ಅದರ ಚರಿತ್ರೆಯೇನು? ಮಳೆ ನೀರು ಮತ್ತು ಇತರ ಮೂಲದ ನೀರಿನಲ್ಲಿ ಆಯ್ಕೆ ಯಾವುದು? ಯಾಕೆ?

– ಡಾ. ಯು.ಪಿ. ಶಿವಾನಂದ, ಸಂಪಾದಕರು
ಮುಂದಿನ ಮಹಾಯುದ್ಧವಾದರೆ ಅದು ನೀರಿಗಾಗಿ ಎಂದು ನೀರಿನ ಮಹತ್ವವನ್ನು ತಿಳಿದವರು ಹೇಳಿದ ಮಾತನ್ನು ಉಲ್ಲೇಖಿಸುತ್ತಾ ಮಳೆ ಕೊಯ್ಲಿನ ಅಗತ್ಯದ ಮತ್ತು ಮಹತ್ವದ ಬಗ್ಗೆ ಈ ಕೆಳಗಿನ ಲೇಖನವನ್ನು ನೀಡುತ್ತಿದ್ದೇನೆ.
ಮಳೆ ನೀರು ಹರಿದು ಹೋಗದಂತೆ ಶೇಖರಿಸಿ ಉಪಯೋಗಕ್ಕೆ ಬೀಳುವಂತೆ ಮಾಡುವ ಕ್ರಿಯೆಯೇ ಮಳೆ ಕೊಯ್ಲು. ಇದು ಹೊಸ ಪ್ರಕ್ರಿಯೆಯೇನಲ್ಲ. ಕ್ರಿ.ಪೂ.೪೦೦೦ ವರ್ಷಗಳ ಮೊದಲೇ ಪಶ್ಚಿಮ ಏಷ್ಯಾದ ದೇಶಗಳಲ್ಲಿ ನಂತರ ಜೆರುಸಲೇಮ್, ಗ್ರೀಸ್, ಬಲೂಚಿಸ್ಥಾನ, ರೋಮ್ ಸಾಮ್ರಾಜ್ಯದಲ್ಲಿ ವೆನಿಸ್ ಮೊದಲಾದ ದೇಶಗಳಲ್ಲಿ ಕ್ರಿ.ಶ ಕದಲ್ಲಿಯೂ ಮಳೆನೀರನ್ನು ಉಪಯೋಗಕ್ಕೆ ಶೇಖರಿಸಿದ ಕುರುಹುಗಳಿವೆ. ಭಾರತದಲ್ಲಿ ಚೋಳರಾಜರು ತಮಿಳುನಾಡಿನಲ್ಲಿ ನೀರಿನ ಟ್ಯಾಂಕುಗಳನ್ನು ಕಟ್ಟಿಸಿ ಕುಡಿಯಲು ಮತ್ತು ಇತರ ಕಾರ್‍ಯಗಳಿಗೆ ಮಳೆನೀರನ್ನು ಉಪಯೋಗಿಸಿದ್ದಾರೆ. ಇಂದಿನ ಎಲ್ಲಾ ಅಣೆಕಟ್ಟುಗಳು ಮಳೆನೀರಿನ ಆಶ್ರಯವನ್ನೇ ನಂಬಿವೆ. ಇಸ್ರೇಲ್, ನ್ಯೂಜಿಲ್ಯಾಂಡ್, ಶ್ರೀಲಂಕಾ, ದ.ಆಫ್ರಿಕ, ಚೈನಾ, ಥೈಲ್ಯಾಂಡ್ ಮೊದಲಾದ ದೇಶಗಳು ಮಳೆಕೊಯ್ಲನ್ನು ಗಣನೀಯ ಮಟ್ಟದಲ್ಲಿ ಮಾಡುತ್ತಿವೆ. ಆಸ್ಟ್ರೇಲಿಯ ದೇಶ ಬೇರೆ ನೀರಿನ ವ್ಯವಸ್ಥೆ ಇದ್ದರೂ ಮಳೆ ನೀರನ್ನು ಉಪಯೋಗಿಸುವುದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದೆ.

ನಮ್ಮ ದೇಶದಲ್ಲಿ ತಮಿಳುನಾಡು 2001 ಇಸವಿಯಲ್ಲಿಯೇ ಎಲ್ಲಾ ಮನೆಗಳಿಗೆ, ಕಟ್ಟಡಗಳಿಗೆ ಮಳೆಕೊಯ್ಲನ್ನು ಕಡ್ಡಾಯ ಮಾಡಿದೆ. ಮಳೆಕೊಯ್ಲು ಮಾಡದಿದ್ದರೆ ಕ್ರಮಕೈಗೊಳ್ಳುತ್ತದೆ. ಅದರಿಂದಾಗಿ ಅಲ್ಲಿಯ ಅಂತರ್ಜಲ ಶೇ.೫೦ರಷ್ಟು ಮೇಲಕ್ಕೆ ಬಂದಿದೆ. ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿದೆ. ಅದಲ್ಲದೆ ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಮಳೆಕೊಯ್ಲನ್ನು ಕಡ್ಡಾಯಗೊಳಿಸಿದೆ. ಬೆಂಗಳೂರಿನಲ್ಲಿ ಕೂಡ ಈಗ ಕಟ್ಟುತ್ತಿರುವ ಕಟ್ಟಡ, ಮನೆಗಳಿಗೆ ಮಳೆಕೊಯ್ಲನ್ನು ಸರಕಾರ ಕಡ್ಡಾಯಗೊಳಿಸಿದೆ. ದೆಹಲಿ ಸರಕಾರ ಮಳೆಕೊಯ್ಲಿಗೆ ಖರ್ಚಿನ ಶೇ.೫೦ರಷ್ಟು(೧ ಲಕ್ಷದವರೆಗೆ) ಸಬ್ಸಿಡಿ ನೀಡುತ್ತಿದೆ. ಕೆಲವು ರಾಜ್ಯಗಳು ಅದಕ್ಕೆ ತೆರಿಗೆಯಲ್ಲಿ ರಿಯಾಯಿತಿ ನೀಡುತ್ತಿವೆ. ಸಬ್ಸಿಡಿ ನೀಡಲಾರಂಭಿಸಿದೆ. ಬೆಂಗಳೂರಿನ ಶಿವಕುಮಾರ್ ಎಂಬವರು ಕಳೆದ ೨೩ವರ್ಷಗಳಿಂದ ಕಾರ್ಪರೇಶನ್ ನೀರಿನ ಕನೆಕ್ಷನ್ ಪಡೆದುಕೊಳ್ಳದೆ ಮಳೆನೀರನ್ನೇ ಅವಲಂಬಿಸಿ ಸಂತುಷ್ಟವಾದ ಜೀವನ ನಡೆಸುತ್ತಿದ್ದಾರೆ. ೧೯೯೫ರಲ್ಲಿ ನೀರಿಲ್ಲದೆ ಬರಡಾಗಿದ್ದ ಮಹಾರಾಷ್ಟ್ರದ ಹಿವಾರ್ ಬಜಾರ್ ಎಂಬ ಹಳ್ಳಿ ಇಂದು ಸಾಮೂಹಿಕ ಮಳೆಕೊಯ್ಲಿನ-ನೀರನ್ನು ಶೇಖರಿಸುವ, ಇಂಗಿಸುವ ಪರಿಣಾಮವಾಗಿ ಫಲವತ್ತಾದ ಕೃಷಿಭೂಮಿಯಾಗಿದೆ. ಅಂತರ್ಜಲ ಮಟ್ಟ ಏರಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಹೊಂದಿದೆ.
ದ.ಕ. ಜಿಲ್ಲೆಯಲ್ಲಿ ಅಗಾಧ ಪ್ರಮಾಣದಲ್ಲಿ ಮಳೆಬಿದ್ದರೂ ಮಳೆ ನೀರು ಉಪಯೋಗಕ್ಕೆ ಬೀಳದೆ, ಇಂಗದೆ ಸಮುದ್ರ ಸೇರುವುದರಿಂದ ಬೇಸಿಗೆಯಲ್ಲಿ ನೀರಿನ ಕೊರತೆ ಎದುರಿಸುತ್ತಿದೆ. ಅಂತರ್ಜಲ ಕುಸಿಯುತ್ತಿದೆ. ನಮ್ಮ ತಾಲೂಕಿನಲ್ಲಿ ಕಳೆದ ವರ್ಷ ೪೭೦೮ಮಿ.ಮೀ.(೧೮೫.೩ ಇಂಚು) ಮಳೆಯಾಗಿದೆ. ಬೆಳ್ತಂಗಡಿಯಲ್ಲಿ ಕಳೆದ ವರ್ಷ ೫೮೬೧ಮಿ.ಮೀ.(೨೩೦.೭ ಇಂಚು) ಮಳೆಯಾಗಿದೆ. ಆದರೂ ಅಂತರ್ಜಲ ಮಟ್ಟ ಕುಸಿದಿದೆ. ಮೊದಮೊದಲು ೧೦೦-೧೫೦ ಅಡಿಯ ಬೋರ್‌ವೆಲ್‌ಗಳು ಈಗ ೩೦೦-೫೦೦ ಅಡಿಗಿಳಿದಿವೆ. ಇಳಿಯುತ್ತಲೇ ಇವೆ. ಈಗಾಗಲೇ ಪುತ್ತೂರಿನಲ್ಲಿ ಒಳ್ಳೆಯ ನೀರಿನ ಸರಬರಾಜು ಅಲ್ಲದೆ ಕುಡಿಯುವ ನೀರಿಗಾಗಿ ೧೬೪ ಬೋರ್‌ವೆಲ್‌ಗಳಿವೆ. ಸಾಕಷ್ಟು ಸಂಖ್ಯೆಯ ಖಾಸಗಿ ಬೋರ್‌ವೆಲ್‌ಗಳೂ ಇವೆ. ಹೀಗೆ ಮುಂದುವರಿದರೆ ಎಷ್ಟೇ ಮಳೆಬಂದರೂ ಭೂಮಿ ಬರಡಾಗಲಿದೆ. ಕುಡಿಯುವ ನೀರಿಗೂ ಬರ ಬರಬಹುದು. ಕನಿಷ್ಠ ಪಕ್ಷ ನಾವು ಮಳೆ ಮತ್ತು ಕಟ್ಟಡದ ಛಾವಣಿಯ ಮೇಲೆ ಬೀಳುವ ನೀರಿನ ಮಳೆಕೊಯ್ಲು ಮಾಡಿದರೂ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಸಾಕಷ್ಟು ನೀರನ್ನು ಉಪಯೋಗಿಸಿಯೂ ಅಂತರ್ಜಲದ ಮಟ್ಟವನ್ನು ಏರಿಸಬಹುದು. ನಮ್ಮ ತಾಲೂಕಿನಲ್ಲಿ ವರ್ಷಕ್ಕೆ ಸರಾಸರಿ ೧೭೦ ಇಂಚು ಮಳೆ ಬಿದ್ದರೂ ೩೦ಗಿ೪೦ ಅಡಿ ಛಾವಣಿಯ ಮೇಲೆ ವರ್ಷಕ್ಕೆ ೪೮೦೦೦೦.ಲೀ. ನೀರು ಬಿದ್ದು ಹರಿದು ಹೋಗುತ್ತದೆ. ೪ ಜನರು ವಾಸಿಸುವ ಮನೆಗೆ ದಿನಕ್ಕೆ ೬೬೦.ಲೀ. ನೀರು ಉಪಯೋಗಿಸಿದರೂ ವರ್ಷಕ್ಕೆ ೨೪೦೯೦೦.ಲೀ. ನೀರು ಮಾತ್ರ ಖರ್ಚಾಗುತ್ತದೆ. ಅಂದರೆ ಅವರು ಉಪಯೋಗಿಸುವುದಕ್ಕಿಂತ ಎರಡುಪಟ್ಟು ನೀರು ಛಾವಣಿಗೆ ಬಿದ್ದು, ನೆಲಕ್ಕೆ ಹರಿದು ಹೋಗುತ್ತದೆ. ಆ ನೀರನ್ನು ಮಳೆಕೊಯ್ಲು ಮಾಡಿ ಕುಡಿಯಲು ಮತ್ತು ಇತರ ಕಾರ್‍ಯಗಳಿಗೆ ಉಪಯೋಗಿಸಿ ಬೋರ್‌ವೆಲ್, ಬಾವಿ, ಕೆರೆಗಳಿಗೆ ಮರುಪೂರಣ ಮಾಡಿದರೆ ಯಾವ ಸಮಸ್ಯೆಯೂ ಇರಲಾರದು. ಅಂತರ್ಜಲ ಮಟ್ಟ ಏರುವುದಂತು ಖಂಡಿತ. ಭೂಮಿಗೆ(ನೆಲಕ್ಕೆ) ಬಿದ್ದ ನೀರನ್ನು ಇಂಗಿಸಿ, ಶುದ್ಧೀಕರಿಸಿ ಬೋರ್‌ವೆಲ್, ಕೆರೆಬಾವಿಗಳಿಗೆ ಮರುಪೂರಣಗೊಳಿಸಿದರೆ ನೀರಿನ ಆಶ್ರಯಕ್ಕೆ ಎಂದೂ ತೊಂದರೆಯಾಗಲಾರದು.
ಈ ಮಳೆ ನೀರು ಉಳಿದ ಮೂಲಗಳ ನೀರಿಗಿಂತ ಆರೋಗ್ಯಕ್ಕೆ ಉತ್ತಮ: ಯಾಕೆಂದರೆ ಮಳೆ ನೀರು ಆವಿಯಾಗಿ ಮೋಡವಾಗಿ ಗಣೀಕರಿಸಿ ಭೂಮಿಗೆ ಸುರಿದ ನೀರಾದ್ದರಿಂದ ಅದು ಶುದ್ಧ ನೀರಾಗಿರುತ್ತದೆ. ಪ್ರಾರಂಭದ ಮಳೆಯಲ್ಲಿ ಸ್ವಲ್ಪಮಟ್ಟಿನ ವಾಯುಮಾಲಿನ್ಯ ಇದ್ದರೂ, ನಂತರದ ಮಳೆ ನೀರು ಶುದ್ಧವಾಗಿರುತ್ತದೆ. ಆಧುನಿಕ ಫಿಲ್ಟರ್‌ಗಳ ಮೂಲಕ ಅದನ್ನು ಎಲ್ಲಾ ಉಪಯೋಗಕ್ಕೆ ಬಳಸುವುದು ಮಾತ್ರವಲ್ಲ, ಕುಡಿಯುವ ನೀರಾಗಿಯೂ ಉಪಯೋಗಿಸಬಹುದು. ಶೇಖರಣೆ ವ್ಯವಸ್ಥೆ ಇಲ್ಲದಿದ್ದರೂ ಮಳೆಗಾಲ ಪೂರ್ಣ ಯಾವುದೇ ಇತರ ಮೂಲದ ನೀರಿನ ಬಳಕೆ ಮಾಡದೆ ಈ ನೀರನ್ನೇ ಬಳಸಿ ಖರ್ಚನ್ನು ಕಡಿಮೆ ಮಾಡಬಹುದು. ಮಳೆ ನೀರು ಸಾಫ್ಟ್‌ವಾಟರ್ ಆಗಿರುವುದರಿಂದ ಸಾಬೂನಿನ ಬಾಳಿಕೆ ಜಾಸ್ತಿ (ನೊರೆ ಜಾಸ್ತಿ ಉಂಟಾಗುತ್ತದೆ) ಪಾತ್ರೆಗಳ ಬಾಳಿಕೆ ಹೆಚ್ಚು. ತಲೆಕೂದಲು ಮತ್ತು ಚರ್ಮಕ್ಕೆ ಹಾರ್ಡ್‌ವಾಟರ್ ಉಪಯೋಗಕ್ಕಿಂತ ಇದು ಹೆಚ್ಚು ಆರೋಗ್ಯಕಾರಿ. ಈ ಮಳೆ ನೀರಿನಲ್ಲಿ ಪಿ.ಎಚ್. ಆಲ್ಕಲೈನ್ ಆಗಿರುವುದರಿಂದ ಆಹಾರದ ಜೀರ್ಣಿಸುವಿಕೆಗೆ ಹೆಚ್ಚು ಸಹಕಾರಿ. ಇತರ ಮೂಲಗಳ ಶುದ್ಧೀಕರಿಸಿದ ನೀರಿನಲ್ಲಿರಬಹುದಾದ ಪ್ಲೋರೈಡ್ ಮತ್ತು ಕ್ಲೋರೈಡ್ ಲವಣಗಳು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಕರ ಪರಿಣಾಮ ಬೀರುತ್ತವೆ. ಆದರೆ ಆ ಲವಣಗಳು ಮಳೆನೀರಿನಲ್ಲಿ ಇಲ್ಲದೇ ಇರುವುದರಿಂದ ಆ ಯಾವ ಸಮಸ್ಯೆಯೂ ಬರಲಾರದು. ಮಳೆ ನೀರನ್ನು ಉಪಯೋಗಿಸುವುದರಿಂದ ಇತರ ಮೂಲದ ನೀರುಗಳ ಅವಶ್ಯಕತೆ ಕಡಿಮೆಯಾಗಿ ನೀರು ಸರಬರಾಜಿನ ಒತ್ತಡ ಆಡಳಿತ ಸಂಸ್ಥೆಗಳಿಗೆ ಕಡಿಮೆಯಾಗುತ್ತದೆ. ಅಂತರ್ಜಲದ ಉಳಿತಾಯವಾಗುತ್ತದೆ. ಮಟ್ಟ ಏರುತ್ತದೆ. ಈ ಮೇಲಿನ ಎಲ್ಲಾ ಕಾರಣಗಳಿಗಾಗಿ ಕನಿಷ್ಠ ಪಕ್ಷ ಛಾವಣಿಗೆ ಬಿದ್ದ ಮಳೆನೀರಿನ ಕೊಯ್ಲನ್ನಾದರೂ ಎಲ್ಲರೂ ಮಾಡುವಂತಾಗಿ, ಇಡೀ ತಾಲೂಕು ಮಳೆಕೊಯ್ಲಿನ ತಾಲೂಕಾಗಿ ನೀರಿನ ಸುಭಿಕ್ಷೆ ಉಂಟಾಗಲಿ ಎಂದು ಹಾರೈಸುತ್ತೇನೆ. ಆ ಕಾರಣಕ್ಕಾಗಿ ಈ ಮಳೆನೀರಿನ ಕೊಯ್ಲಿನ ವಿಚಾರವಾಗಿ ಸಾಕಷ್ಟು ಪರಿಣತಿಯನ್ನು ಮತ್ತು ತಂತ್ರಜ್ಞಾನವನ್ನು ಹೊಂದಿರುವ ಹಾಗೂ ಹಲವು ಕಡೆ ಯಶಸ್ವಿ ಕಾರ್‍ಯಾಚರಣೆ ನಡೆಸಿರುವ `ಫಾರ್ಮ್‌ಲ್ಯಾಂಡ್ ರೈನಿ ಸಿಸ್ಟಮ್’ ಅದರ ಮುಖ್ಯಸ್ಥರನ್ನು ಮಾಹಿತಿ ಕಾರ್‍ಯಗಾರಕ್ಕಾಗಿ ತಾಲೂಕಿಗೆ ಆಹ್ವಾನಿಸಿದ್ದೇವೆ. ಅವರ ಮಾಹಿತಿಯ ಪ್ರಯೋಜನವನ್ನು ತಾಲೂಕಿನ ಜನರು ಪಡೆಯಬೇಕೆಂದು ಆಶಿಸುತ್ತೇವೆ.

ಛಾವಣಿ ಮಳೆನೀರು ಕೊಯ್ಲುಗಾಗಿ ರೈನಿ ಫಿಲ್ಟರ್
ಬೆಂಗಳೂರಿನ ಫಾರ್ಮ್‌ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್‌ನವರು ನೂತನ ತಂತ್ರಜ್ಞಾನದಲ್ಲಿ ಕಂಡುಹಿಡಿದಿರುವ `ರೈನಿ’ ಫಿಲ್ಟರ್‌ಗಳು (ಛಾವಣಿ ಮಳೆನೀರು ಕೊಯ್ಲಿನ ಫಿಲ್ಟರ್‌ಗಳು) ಗೋಡೆಗೆ ಅಳವಡಿಸಬಹುದಾದ ದೇಶದಲ್ಲೇ ಪ್ರಥಮ ಹಾಗೂ ವಿಶೇಷ ವೈಜ್ಞಾನಿಕ ವಿನ್ಯಾಸದಲ್ಲಿ ರಚಿಸಲಾಗಿರುವ ಫಿಲ್ಟರ್‌ಗಳು. ಇವು ಗುರುತ್ವಾಕರ್ಷಣೆಯ ಆಧಾರದ ಮೇಲೆ ಕಾರ್ಯ ನಿರ್ವಹಿಸುವುದರಿಂದ ಮೇಲ್ಛಾವಣಿಯ ನೀರಿನಲ್ಲಿ ಇರುವ ಅತಿಸೂಕ್ಷ್ಮ ಕಸ, ಕಡ್ಡಿ, ಎಲೆ ಮತ್ತು ಧೂಳನ್ನು ಪ್ರತ್ಯೇಕಿಸುತ್ತದೆ. ಇದರ ಕಾರ್ಯದಕ್ಷತೆ ಶೇಕಡ ೯೦ಕ್ಕಿಂತ ಅಧಿಕವಾಗಿದೆ. ಈ ಫಿಲ್ಟರಿನ ನಿರ್ವಹಣಾ ವೆಚ್ಚ ಅತೀ ಕಡಿಮೆಯಾಗಿರುತ್ತದೆ. ಮತ್ತು ವಿಶೇಷ ವೈಜ್ಞಾನಿಕ ವಿನ್ಯಾಸದಲ್ಲಿ ರಚಿಸಲಾಗಿರುವುದರಿಂದ ಸ್ವಚ್ಛ ಮಾಡಲು ಸುಲಭ. ರೈನಿ ಫಿಲ್ಟರ್ ಮಾಹಿತಿಗಾಗಿ 7829668949ಗೆ ಸಂಪರ್ಕಿಸಬಹುದಾಗಿದೆ.

: ವಿಶೇಷತೆ :
* ಗುರುತ್ವಾಕರ್ಷಣೆಯ ಆಧಾರದ ಮೇಲೆ ಕಾರ್ಯ ನಿರ್ವಹಣೆ
* ಮೇಲ್ಛಾವಣಿಯ ನೀರಿನಲ್ಲಿ ಇರುವ ಕಸ, ಕಡ್ಡಿ, ಧೂಳನ್ನು ಪ್ರತ್ಯೇಕಿಸುತ್ತದೆ.
* ಸೋಸುವಿಕೆಗಾಗಿ ೨೫೦ ಮೈಕ್ರಾನ್ಸ್‌ನ ತುಕ್ಕುರಹಿತ ಎಸ್.ಎಸ್. ೩೦೪ ಸ್ಟೀಲ್ ಸ್ಕ್ರೀನ್ ಅಳವಡಿಕೆ
* ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸಣ್ಣ ಅಥವಾ ವಿಶಾಲ ಛಾವಣಿಗೆ ಸೂಕ್ತವಾಗಿ ರಚಿಸಲಾಗಿದೆ.
* ಈಗಿರುವ ಛಾವಣಿಯ ನೀರು ಕೆಳಗಿಳಿಯುವ ಪೈಪಿಗೆ ಈ ಫಿಲ್ಟರ್ ಜೋಡಿಸಿದರೆ, ನೀರು ಸಂಗ್ರಹಿಸುವ ತೊಟ್ಟಿ (ಸಂಪ್)ಗೆ ಅಥವಾ ಕೊಳವೆ ಬಾವಿಗೆ ನೇರವಾಗಿ ಮಳೆ ನೀರನ್ನು ಬಿಡಬಹುದು.

———————————————————————————————

ಕೃಷಿಕರ ಬದುಕಿನ ಉನ್ನತಿಗೆ ಏಣಿಯಾದ ಎಸ್. ಆರ್.ಕೆ. ಲ್ಯಾಡರ್ಸ್
ಹೆಲೆನ್ ಕೆಲ್ಲರ್‌ಅವರು ಹೇಳಿರುವ ಮಾತುಗಳಿವು- “ದೃಷ್ಟಿಯಿಲ್ಲದೆ ಬದುಕುವುದು ಕೆಟ್ಟದಲ್ಲ. ದೂರದೃಷ್ಟಿಯಿಲ್ಲದೆ ಬದುಕುವುದು ಎಲ್ಲದಕ್ಕಿಂತ ಕೆಟ್ಟದ್ದು.” ಹೌದು, ಬದುಕಿನ ಬಗೆಗಿನ ದೂರದರ್ಶಿತ್ವವನ್ನು ಇಟ್ಟುಕೊಂಡವರನ್ನು ಯಾವುದೇ ಬಗೆಯ ನ್ಯೂನ್ಯತೆಗಳು, ಕೊರತೆಗಳು ಬಾಧಿಸುವುದಿಲ್ಲ. ಇದಕ್ಕೆ ನಿದರ್ಶನವಾಗಿ ನಮ್ಮ ಮುಂದಿರುವವರು ಎಸ್. ಆರ್. ಕೆ.ಲ್ಯಾಡರ್‍ಸ್‌ನ ಕೇಶವರವರು. ಇವರಿಗೆ ದೃಷ್ಟಿದೋಷವಿದೆ ನಿಜ. ಆದರೆ ತಮ್ಮ ಬದುಕಿನುದ್ದಕ್ಕೂ ದೂರದೃಷ್ಟಿಯನ್ನು ಇರಿಸಿಕೊಂಡು ಜೀವನ ನಡೆಸಿದ್ದಾರೆ ಎನ್ನುವುದೂ ಅಷ್ಟೇ ಸತ್ಯ.

ಬಾಲ್ಯದಿಂದಲೇ ಕೃಷಿಕರ ಸಮಸ್ಯೆಗಳನ್ನು, ಕೃಷಿ ಚಟುವಟಿಕೆಗಳ ನಿರ್ವಹಣೆಯಲ್ಲಿರುವ ಕುಂದುಕೊರತೆಗಳನ್ನು ಅರಿತುಕೊಳ್ಳುತ್ತಾ ಬಂದ ಇವರು ಅವುಗಳಿಗೆ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ತಮ್ಮದೇ ಆದ ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದಾರೆ, ಕಂಡುಕೊಳ್ಳುತ್ತಿದ್ದಾರೆ. ‘ಎಸ್.ಆರ್.ಕೆ. ಲ್ಯಾಡರ್‍ಸ್’ ಎಂಬ ಸಂಸ್ಥೆಯ ಮೂಲಕ ಕೃಷಿಕರ ಬದುಕಿಗೆ ಬಹು ಆಯಾಮಗಳಲ್ಲಿ ನೆರವಾಗುತ್ತಿರುವ ಇವರ ಪ್ರಯತ್ನ ಗಮನಾರ್ಹವಾಗಿದೆ. “ನಾನು ವಿಶ್ವವಿದ್ಯಾಲಯದಲ್ಲಿ ಕಲಿತವನಲ್ಲ. ವಿಶ್ವವನ್ನೇ ವಿದ್ಯಾಲಯವನ್ನಾಗಿ ಮಾಡಿಕೊಂಡವನು”- ಇವು ಶಿವರಾಮ ಕಾರಂತರು ತಮ್ಮ ಬದುಕಿನ ಕುರಿತು, ತಮ್ಮ ವ್ಯಕ್ತಿತ್ವವನ್ನು ರೂಪಿಸಿದ ಸಂಗತಿಯನ್ನು ಕುರಿತು ಸಾಂದರ್ಭಿಕವಾಗಿ ಆಡಿದ ಮಾತು. ಕೇಶವರ ವಿಚಾರದಲ್ಲೂ ಅಷ್ಟೇ, ಔಪಚಾರಿಕ ಶಿಕ್ಷಣಕ್ಕಿಂತಲೂ ಹೆಚ್ಚಾಗಿ ಜೀವನಾನುಭವ- ಲೋಕಾನುಭವಗಳ ಶಕ್ತಿ ಅವರ ಕೈಹಿಡಿದಿದೆ. ಈ ಕಾರಣದಿಂದಲೇ ವಿಕಲತೆ ಉಂಟುಮಾಡಿರುವ ಅಡೆತಡೆಗಳನ್ನು ದಾಟಿ ಉದ್ಯಮ ಕ್ಷೇತ್ರದಲ್ಲಿ ಅವರು ಯಶಸ್ಸನ್ನು ಕಾಣುವಂತಾಗಿದೆ.

ಕೇಶವ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡ ಕೃಷಿಕ ಸ್ನೇಹಿ ಏಣಿಯು ಬೆಂಗಳೂರಿನಲ್ಲಿ ನಡೆದ ಕೃಷಿ ವಿಜ್ಞಾನ ಸಮ್ಮೇಳನದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿದೆ. ತಾನೂ ಉತ್ತಮವಾಗಿ ಬದುಕನ್ನು ನಡೆಸುತ್ತಾ, ೫೦ಕ್ಕೂ ಅಧಿಕ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿ ಕೊಟ್ಟಿರುವ ಕೇಶವ ಅವರ ವ್ಯಕ್ತಿತ್ವವನ್ನು ಬಹುಪ್ರಮುಖ ಮಾದರಿಯಾಗಿ ಗಮನಿಸಿಕೊಳ್ಳಬಹುದಾಗಿದೆ.
ಒಂದು ಕಾಲವಿತ್ತು. ಅಡಿಕೆ, ತೆಂಗು, ಹಣ್ಣುಗಳನ್ನು ಕೊಯ್ಯುವ ಸಂದರ್ಭದಲ್ಲಿ ವಿದ್ಯುತ್‌ತಂತಿ ಸ್ಪರ್ಶಿಸಿ ಅದೆಷ್ಟೋ ಜನ ಪ್ರಾಣ ಕಳೆದುಕೊಳ್ಳುವಂತಾಗುತ್ತಿತ್ತು. ಅಲ್ಯೂಮಿನಿಯಂ ಕೊಕ್ಕೆಗಳನ್ನು ಬಳಸುವುದರಿಂದ ಉಂಟಾಗುತ್ತಿರುವ ಇಂತಹ ದುರಂತಗಳಿಗೆ ಸಮರ್ಪಕವಾದ ಪರಿಹಾರವನ್ನು ಎಸ್. ಆರ್.ಕೆ. ಕಂಡುಕೊಂಡಿದೆ. ವಿದ್ಯುತ್ ಶಾಕ್ ಹೊಡೆಯದಂತೆ ಪ್ಲಾಸ್ಟಿಕ್ ಕವಚಗಳನ್ನು ಹೊಂದಿರುವ ಅಲ್ಯೂಮಿನಿಯಂ ದೋಟಿಗಳನ್ನು ರೂಪಿಸಲಾಗಿದೆ. ಈ ಮೂಲಕ ಅದೆಷ್ಟೋ ಕೃಷಿಕರ ಜೀವವನ್ನು, ಜೀವನವನ್ನು ರಕ್ಷಿಸಿದ ಕೀರ್ತಿ ಕೇಶವ ಅವರಿಗೆ ಸಲ್ಲುತ್ತದೆ.
ಕೇಶವರ ಪರಿಕಲ್ಪನೆಯಲ್ಲಿ ರೂಪುಗೊಂಡ ಅಲ್ಯೂಮಿನಿಯಂ ಏಣಿ ಹಲವು ಬಗೆಯಲ್ಲಿ ಕೃಷಿಕರಿಗೆ ನೆರವಾಗಬಲ್ಲದು. ಅತ್ಯಂತ ಹಗುರವಾಗಿರುವುದು ಈ ಏಣಿಗಳ ಬಹುಮುಖ್ಯ ಪ್ರಯೋಜನವಾಗಿದೆ. ಇದರಿಂದಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಕೊಂಡೊಯ್ಯಬಹುದಾಗಿದೆ. ಒಬ್ಬರೇ ಸ್ಥಳಾಂತರಿಸಬಹುದಾಗಿದೆ. ಇವುಗಳಿಗೆ ತುಕ್ಕು ಹಿಡಿಯುವ ಸಾಧ್ಯತೆ ಇಲ್ಲ. ನಿರ್ವಹಣೆ ವೆಚ್ಚ ಇಲ್ಲದೆ ದೀರ್ಘ ಬಾಳಿಕೆ ಬರುತ್ತವೆ. ದೊಡ್ಡಗಾತ್ರದ ಏಣಿಗಳು ಮಾತ್ರವಲ್ಲದೆ ಮನೆ, ಅಂಗಡಿ, ಕೈಗಾರಿಕಾ ಕಾರ್ಯಗಳಲ್ಲಿ ಬಳಸುವ ವಿವಿಧ ಮಾದರಿಯ ಏಣಿಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ.

ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸಂಸ್ಥೆ ಹೊಸ ರೀತಿಯ ಉತ್ಪನ್ನಗಳನ್ನು ಪರಿಚಯಿಸುತ್ತಲೇ ಬಂದಿದೆ. ವಿದ್ಯುತ್ ರಕ್ಷಾ ಕವಚ ಹೊಂದಿರುವ ಸ್ಪ್ರೇಯರ್ (ಸಿಂಪಡಣಾ ಯಂತ್ರ), ಎಲ್ಲಾ ಮಾದರಿಯ ಕೈಗಾಡಿಗಳು, ಪಿ. ವಿ. ಸಿ. ಇನ್ಸ್ಯುಲೇಶನ್ ಹೊಂದಿರುವ ಫೈಬರ್ ಮೆಟ್ಟಿಲಿನ ಏಣಿಗಳು, ಅಡಿಕೆ, ಗೊಬ್ಬರ, ಕೆಂಪುಕಲ್ಲು ಸಾಗಿಸಲು ಅನುಕೂಲವಾಗುವ ಏಕಚಕ್ರ- ದ್ವಿಚಕ್ರ ಗಾಡಿಗಳು ಮೊದಲಾದವುಗಳು ಸಂಸ್ಥೆ ಕಾಲದ ಅಗತ್ಯಕ್ಕೆ ತಕ್ಕಂತೆ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ರೂಪಿಸಿರುವ ಉತ್ಪನ್ನಗಳಾಗಿವೆ. ಕೃಷಿ ಮೇಳ, ಕೃಷಿ ವಸ್ತು ಪ್ರದರ್ಶನ ಮೊದಲಾದ ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಉತ್ಪನ್ನಗಳ ಡೆಮೋ ಕಾಣಸಿಗುತ್ತದೆ. ಇಂತಹ ಉತ್ಪನ್ನಗಳ ಅನುಕೂಲತೆಯನ್ನು ಮನಗಂಡ ಕೃಷಿಕರಿಂದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಬೇಡಿಕೆಗನುಗುಣವಾಗಿ ಉತ್ಪಾದನೆಯನ್ನು ಹೆಚ್ಚಿಸುವ ಕಾರಣಕ್ಕಾಗಿ ಎಸ್. ಆರ್.ಕೆ. ಲ್ಯಾಡರ್‍ಸ್‌ನ ಉತ್ಪಾದನಾ ಘಟಕದ ನೂತನ ಘಟಕವನ್ನು ೨೦೧೦ರಲ್ಲಿ ಮುಕ್ರಂಪಾಡಿಯ ಕೈಗಾರಿಕಾ ಆವರಣದಲ್ಲಿ ಪ್ರಾರಂಭಿಸಲಾಗಿದೆ. ಸಂಸ್ಥೆ ಕೇಶವರ ಮುಂದಾಳತ್ವದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೆ ಏರಿರುವುದಕ್ಕೆ ಇದು ಸಾಕ್ಷಿಯಾಗಿದೆ.
ವಿಶ್ವನಾಥ ಎನ್. ನೇರಳಕಟ್ಟೆ, ಕನ್ನಡ ಉಪನ್ಯಾಸಕ,  ವಿವೇಕಾನಂದ ಪಾಲಿಟೆಕ್ನಿಕ್‌ ಕಾಲೇಜು, ನೆಹರುನಗರ, ಪುತ್ತೂರು

———————————————————————————————

ತರಕಾರಿ ಕೃಷಿಯಲ್ಲಿ ಖುಷಿ ಕಂಡ ಬಲ್ನಾಡಿನ ಸತೀಶಣ್ಣ… ಬಸಳೆ ಕೃಷಿಗೂ ಸೈ, ಬದನೆ ಕೃಷಿಗೂ ಸೈ ಎನಿಸಿದ ತರಕಾರಿ ಮಾಸ್ತರ್..!
ಮನೆಯಲ್ಲಿ ತರಕಾರಿ ಕೃಷಿ ಮಾಡುವುದೆಂದರೆ ಗೊಣಗುವವರೇ ಹೆಚ್ಚಾಗುವ ಈ ಕಾಲದಲ್ಲಿ ಸತೀಶಣ್ಣನ ಕೃಷಿ ಕಾಯಕ ಈ ಮಾತಿಗೆ ತದ್ವಿರುದ್ದವಾಗಿದೆ. ಸತೀಶ್‌ರವರ ಜಮೀನಿಗೆ ಒಮ್ಮೆ ಭೇಟಿಕೊಟ್ಟು ಅವರ ಕ್ರಿಯಾಶೀಲತೆಯನ್ನು ಪರಿಚಯ ಮಾಡಿ ಕೊಳ್ಳಬೇಕು. ಇಲ್ಲಿ ಶ್ರಮವೂ ಅವರದ್ದೇ, ಯಶಸ್ವಿ ಫಲವೂ ಅವರದ್ದೇ ಆಗಿದೆ.
ಸತೀಶ್‌ರವರು ತರಕಾರಿ ಕೃಷಿ ಕೇತ್ರಕ್ಕೆ ಬಂದಿದ್ದು ಆಕಸ್ಮಿಕವೇನಲ್ಲ. ತಂದೆ ದಿ. ತನಿಯಪ್ಪ ಗೌಡರವರು ಬದನೆ ಕೃಷಿಕರಾಗಿದ್ದು ಬದನೆ ಮಾಸ್ತರ್ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದವರಾಗಿದ್ದರು ಮತ್ತು ತಾಯಿ ದಿ. ಭವಾನಿ ಬಸಳೆ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿದ್ದರು. ಇವರಿಬ್ಬರ ಕೃಷಿ ಪರಂಪರೆಯಲ್ಲೇ ಹುಟ್ಟಿ ಬೆಳೆದ ಮಗ ಸತೀಶ್ ಇದೇ ಪರಂಪರೆಯನ್ನು ಆರಿಸಿಕೊಂಡರು, ಮುಂದು ವರಿಸಿದರು.
ಪುತ್ತೂರು ತಾಲೂಕಿನ ಪುಟ್ಟಗ್ರಾಮ ಬಲ್ನಾಡು. ಇಲ್ಲಿ ಹಚ್ಚಹಸುರಿನಿಂದ ಕೂಡಿದ ಅಡಿಕೆ ತೋಟಗಳಿವೆ, ವಿಸ್ತಾರ ಗದ್ದೆಗಳಿವೆ, ತರಕಾರಿ ಕೃಷಿಗಳನ್ನು ನಂಬಿಕೊಂಡು ಬದುಕುವ ಕುಟುಂಬಗಳಿವೆ. ಇದಕ್ಕೆ ಮಾದರಿ ಎಂಬಂತೆ ಬದುಕನ್ನು ಹಸುರು ಮಾಡುತ್ತಿರುವವರು ಸತೀಶ್‌ರವರು. ಇಲ್ಲಿನ ಕಾರಣಿಕ ಭಟ್ಟಿವಿನಾಯಕ ದೇವಸ್ಥಾನದ ಸಮೀಪದಲ್ಲಿ ಇವರ ಮನೆಯಿದ್ದು ದೇವಾಲಯದ ಪರಿಸರಕ್ಕೆ ಒಮ್ಮೆ ಕಣ್ಣಾಯಿಸಿದಾಗ ಅಲ್ಲಿ ಕಾಣಸಿಗುವುದು ಬದನೆ, ಮುಳ್ಳು ಸೌತೆ, ಬಸಳೆ, ಅಲಸಂಡೆ ಇತ್ಯಾದಿ ತರಕಾರಿ ಕೃಷಿಗಳು. ಇದು ಅವರ ಮನೆಯ ಅಂದವನ್ನು ಹೆಚ್ಚಿಸಿದೆ. ಡಿಸೆಂಬರ್ ತಿಂಗಳಿಂದ ಎಪ್ರಿಲ್, ಮೇ ತಿಂಗಳವರೆಗೆ ಇವರ ಮನೆಗೆ ಬಂದರೆ ತರಕಾರಿಗಳದ್ದೇ ರಾಶಿ ರಾಶಿ. ಇದನ್ನು ನೋಡಿದವರ ಮನಸ್ಸನ್ನು ಮುದಗೊಳಿಸುತ್ತದೆ.

ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ತರಕಾರಿ ಕಾಯಕವನ್ನು ಮಾಡುತ್ತಾ ಬಂದಿರುವ ಇವರು ಬಸಳೆ ಕೃಷಿಗೂ ಸೈ, ಬದನೆ ಕೃಷಿಯಲ್ಲೂ ಸೈ ಎನಿಸಿದ್ದಾರೆ. ತನ್ನ ಮನೆಯಲ್ಲೇ ಉತ್ಪತ್ತಿಯಾಗುವ ಹಟ್ಟಿಗೊಬ್ಬರವನ್ನು ಕೃಷಿಗೆ ಬಳಕೆ ಮಾಡುತ್ತಾರೆ. ಪುತ್ತೂರು, ಮಾಣಿ, ಉಪ್ಪಿನಂಗಡಿ ಹೀಗೆ ವಾರದ ಸಂತೆಗಳಲ್ಲಿ ಇವರದ್ದೇ ಹೆಸರು. ಸಾಂಪ್ರದಾಯಿಕವಾಗಿ ಬಂದ ಈ ತರಕಾರಿ ಕೃಷಿ ಸತೀಶ್‌ರವರ ಆದಾಯದ ಮೂಲವೂ ಆಗಿದೆ. ವರ್ಷದ 5 ತಿಂಗಳು ತರಕಾರಿ ಬೆಳೆಯುವ ಇವರು ಇದರಿಂದ ಕನಿಷ್ಟ ರೂಪಾಯಿ ೫ಲಕ್ಷ ಸಂಪಾದನೆ ಮಾಡುತ್ತಾರೆ. ತರಕಾರಿ ಬೆಳೆಯಲು ೧ಲಕ್ಷ ಖರ್ಚಾದರೂ ರುಪಾಯಿ ೪ಲಕ್ಷ ನಿವ್ವಳ ಲಾಭ ದೊರಕುತ್ತದೆ.
ತಂಪಾದ ಹಳ್ಳಿಪರಿಸರದಲ್ಲಿ ಬದುಕಿನ ಜಂಜಾಟವಿಲ್ಲ. ಅರ್ಧದಷ್ಟು ಬದುಕನ್ನು ಹರಟೆಯಲ್ಲೋ, ತಿರುಗಾಟದಲ್ಲೋ ಕಳೆಯುವ ನಾವು ಒಂದಷ್ಟು ಹೊತ್ತು ತರಕಾರಿ ಕೃಷಿಯಲ್ಲೋ, ಸ್ವಚ್ಛತೆ ಮಾಡುವುದರಲ್ಲೋ ಕಾಲ ಕಳೆದರೆ ಜೀವನ ಖುಷಿಯಲ್ಲಿರಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ಕೃಷಿ ಕಾಯಕವಿದ್ದರೂ ಮನೆಬಿಟ್ಟು ಪೇಟೆ ಸೇರುವ ಯುವಕರ ನಡುವೆ ಸತೀಶ್ ಭಿನ್ನವಾಗಿ ಕಾಣುತ್ತಾರೆ. ಎಲ್ಲಿಯೂ ಕೆಲಸವಿಲ್ಲ ಎಂದು ದಿನ ದೂಡುವ ಹಲವರಿಗೆ ಮಾದರಿಯಾಗಿ ನಿಲ್ಲುತ್ತಾರೆ.

“ತರಕಾರಿ ಕೃಷಿ ಇದ್ದರೆ ಲಾಭವಲ್ಲದೇ, ನಷ್ಟವಿಲ್ಲ ಇದು ಯಶಸ್ವಿ ಕೃಷಿಕ, ತರಕಾರಿ ಮಾಸ್ಟರ್ ಎಂದು ಖ್ಯಾತಿಯಾಗಿರುವ ಬಲ್ನಾಡಿನ ಸತೀಶ್‌ರವರ ಅನುಭವದ ನುಡಿ. ಸತೀಶಣ್ಣರವರದ್ದು ಪ್ರಯೋಗ ಶೀಲ ಮನಸ್ಸು. ಮನೆಯಲ್ಲಿದ್ದು ಮಣ್ಣಿನಲ್ಲಿ ಬದುಕು ಕಟ್ಟುವ ಸತೀಶ್‌ರವರು ತರಕಾರಿ ಕೃಷಿಗೆ ಹೆಚ್ಚು ಒತ್ತು ನೀಡಿ ವಿವಿಧ ತರಕಾರಿಗಳನ್ನು ತನ್ನ ಮನೆಯ ಪರಿಸರದಲ್ಲಿ ಬೆಳೆಸುತ್ತಿದ್ದಾರೆ. ತರಕಾರಿ ಕೃಷಿಯನ್ನು ಬೆಳೆಸಿ ಭೂಮಿಯ ಫಲವತ್ತತೆ ಹೆಚ್ಚಿಸಿದ್ದಾರೆ. ಅಡಿಕೆ ತೋಟ, ತರಕಾರಿ ತೋಟವು ಇವರ ಮನೆಯ ಅಂದವನ್ನು ಹೆಚ್ಚಿಸಿದೆ.

@ ಶರತ್ ಆಳ್ವ ಚನಿಲ ಉಪನ್ಯಾಸಕರು, ಸಂತ ಫಿಲೋಮಿನಾ ಪಿ.ಯು. ಕಾಲೇಜು, ಪುತ್ತೂರು

———————————————————————————————

ಸಾವಯವ ಕೃಷಿಕರಲ್ಲಿ ಅಭೂತಪೂರ್ವ ಯಶಸ್ಸು ಬಹುಮುಖ ಪ್ರತಿಭೆಯ ಕೃಷಿಕ ಜಯರಾಜ್ ಸುವರ್ಣ

ಸಂಪೂರ್ಣ ಸಾವಯವ ಕೃಷಿ ಮಾಡಿ ಯಶಸ್ವಿಯಾದ ಎಲೆಮರೆ ಕಾಯಿಯಂತಿರುವ ಬಹುಮುಖ ಪ್ರತಿಭೆಯ ಕೃಷಿಕರೋರ್ವರು ಸರ್ವೆ ಗ್ರಾಮದ ಸೊರಕೆಯಲ್ಲಿದ್ದಾರೆ. ಅವರ ಹೆಸರು ಜಯರಾಜ್ ಸುವರ್ಣ ಸೊರಕೆ. ಅಂದ ಹಾಗೆ ಇವರು ಈ ವರೆಗೂ ತಮ್ಮ ಕೃಷಿ ಚಟುವಟಿಕೆಗಳಿಗೆ ರಾಸಾಯನಿಕ ಪದಾರ್ಥಗಳನ್ನು ಬಳಸಿಯೇ ಇಲ್ಲ. ಸಾವಯವ ಗೊಬ್ಬರಗಳಿಂದಲೇ ತರಕಾರಿ ಕೃಷಿಯಲ್ಲೂ ಸಾಧನೆ ಮಾಡಬಹುದು ಎಂಬುವುದ್ನು ತೋರಿಸಿಕೊಟ್ಟಿದ್ದು ತನ್ನ ಸಾವಯವಯುಕ್ತ ಕೃಷಿಯಿಂದ ಸಾಕಷ್ಟು ವರಮಾನವನ್ನೂ ಅವರು ಪಡೆಯುತ್ತಿದ್ದಾರೆ.
ಜಯರಾಜ್ ಸುವರ್ಣರವರು ಕೇವಲ ಕೃಷಿಯಲ್ಲಿ ಯಶಸ್ವಿಯಾಗಿರುವುದು ಮಾತ್ರವಲ್ಲ, ತನ್ನ ಕೃಷಿ ಚಟುವಟಿಕೆ ಯಶಸ್ಸಿನ ಬಗ್ಗೆ ಇತರರಿಗೂ ಪಾಠ ಮಾಡಿ ಅವರನ್ನೂ ಸಾವಯವ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ, ಅನೇಕ ಯುವಕರನ್ನು, ಸಂಘ ಸಂಸ್ಥೆಯವರನ್ನು ತನ್ನ ಕೃಷಿ ತೋಟಕ್ಕೆ ಕರೆಸಿ ಉಪಯುಕ್ತ ಮಾಹಿತಿಗಳನ್ನು ನೀಡಿ ಸಾವಯವ ಕೃಷಿ ಚಟುವಟಿಕೆ ಪ್ರಯೋಜನದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಜೊತೆಗೆ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಅಗತ್ಯ ಮಾಹಿತಿಯನ್ನೂ ಇವರು ನೀಡುತ್ತಾ ಬಂದಿದ್ದಾರೆ.
ಇವರ ಜಮೀನಿನಲ್ಲಿ ಒಂದು ಸಾವಿರದಷ್ಟು ಅಡಿಕೆ ಮರಗಳಿದ್ದು ಸಾಕಷ್ಟು ತೆಂಗೂ ಇದೆ. ಕೊಕ್ಕೋ, ಮಾವು, ಹಲಸು, ಪೆಪ್ಪರ್, ಚಿಕ್ಕು, ಪುನರ್‌ಪುಳಿ ಮೊದಲಾದವುಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ತರಕಾರಿ ಕೃಷಿಯಲ್ಲಿ ಬೆಂಡೆಕಾಯಿ, ಬಸಳೆ, ಅರಿವೆ, ಪೀರೆ, ಮರಗೆಣಸು ಸೇರಿದಂತೆ ಅನೇಕ ತರಕಾರಿಗಳನ್ನು ಮಾಡಿದ್ದಾರೆ. ಊರಿನ ಪಪ್ಪಾಯಿ ಜೊತೆಗೆ ತೈವಾನ್ ಪಪ್ಪಾಯಿ ಇವರ ಕೃಷಿಯಲ್ಲಿ ಸಾಕಷ್ಟು ಬೆಳೆಯುತ್ತಿದ್ದು ಅದಕ್ಕೆ ಭಾರೀ ಬೇಡಿಕೆಯೂ ಇದೆಂದು ಅವರು ತಿಳಿಸಿದ್ದಾರೆ. ವಿಶಾಲ ಪ್ರದೇಶದಲ್ಲಿ ತೊಂಡೆಕಾಯಿ ತೋಟ ಮಾಡಿರುವ ಇವರು ಅದರಿಂದ ಸಾಕಷ್ಟು ವರಮಾನ ಪಡೆಯುತ್ತಿದ್ದಾರೆ. ಈ ವರ್ಷ ಸುಮಾರು ೧೫ ಕ್ವಿಂಟಾಲ್ ತೊಂಡೆಕಾಯಿ ಇವರ ತೋಟದಲ್ಲಿ ಆಗಿರುವುದು ವಿಶೇಷ. ಇನ್ನು ವಿವಿಧ ರೀತಿಯ ಬಾಳೆಗಿಡಗಳು ಇವರ ತೋಟದಲ್ಲಿದೆ, ಊರಿನ ಬಾಳೆಗಳಲ್ಲದೇ, ಅವುಡಾ ಬಾಳೆ, ಚಂದ್ರಬಾಳೆ(ಕೆಂಪು), ಹೂ ಬಾಳೆ ಜೊತೆಗೆ ೫೦೦ಕ್ಕೂ ಮಿಕ್ಕ ಊರ ಬಾಳೆ(ಕದಳಿ)ಯನ್ನೂ ಇವರು ಬೆಳೆದಿದ್ದಾರೆ. ಸಾಕಷ್ಟು ಕಬ್ಬು ಬೆಳೆಯುತ್ತಿರುವ ಇವರು ಉತ್ತಮ ವರಮಾನ ಪಡೆಯುತ್ತಿದ್ದಾರೆ. ಹೈನುಗಾರಿಕೆಯಲ್ಲೂ ಇವರದ್ದು ಎತ್ತಿದ ಕೈ. ಗೋ ಮೂತ್ರ, ಸೆಗಣಿ ಮಿಶ್ರಿತ ಗೊಬ್ಬರವನ್ನು ದೊಡ್ಡ ಟ್ಯಾಂಕ್‌ನಲ್ಲಿ ಶೇಖರಿಸಿ ಫಿಲ್ಟರ್ ಮೂಲಕ ಹರಿಯುವಂತೆ ಮಾಡಿ ಪೈಪ್ ವ್ಯವಸ್ಥೆ ಅಳವಡಿಸಿ ತೋಟಕ್ಕೆ ಸುಲಭವಾಗಿ ಗೊಬ್ಬರ ವ್ಯವಸ್ಥೆ ಮಾಡಿದ್ದಾರೆ.
೨೦೦೬ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನನಗೆ ಕೃಷಿ ಬಗ್ಗೆ ಹೆಚ್ಚಿನ ಆಸಕ್ತಿ ಉಂಟಾಯಿತು ಎನ್ನುವ ಇವರು ತನ್ನ ಕೃಷಿ ಚಟುವಟಿಕೆ ಯಶಸ್ಸಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳೇ ಪ್ರೇರಣೆ ಎನ್ನುತ್ತಾರೆ. ಯೋಜನೆಯ ವಲಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಇವರು ಕೃಷಿಯ ಬಗ್ಗೆ ಅಧ್ಯಯನವನ್ನೂ ನಡೆಸಿದ್ದಾರೆ.
ಸಂಶೋಧನಾತ್ಮಕ ಯುವ ಕೃಷಿಕ:
ಜಯರಾಜ್ ಸುವರ್ಣರವರು ಓರ್ವ ಸಂಶೋಧನಾತ್ಮಕ ಯುವ ಕೃಷಿಕ ಎಂದರೂ ತಪ್ಪಲ್ಲ. ಹೊಸ ಹೊಸ ಕೃಷಿ ಬಗ್ಗೆ ಇವರಿಗೆ ಬಹಳ ಆಸಕ್ತಿ, ಕೃಷಿ ಬಗ್ಗೆ ಸಂಶೋಧನೆ ಮಾಡುವ ಹವ್ಯಾಸವನ್ನೂ ಇವರು ಬೆಳೆಸಿಕೊಂಡಿದ್ದಾರೆ. ಯುವಕರಿಗೆ ಕೃಷಿ ಬಗ್ಗೆ ತರಬೇತಿ ನೀಡುತ್ತಾರೆ. ಸಂಘ ಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಅನೇಕ ಬಾರಿ ಕೃಷಿ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ. ೨೦೦೬ರಿಂದಲೇ ತನ್ನ ಜಮೀನಿನ ಸುತ್ತ ನೀರಿಂಗಿಸುವ ಕಾರ್ಯವನ್ನು ಮಾಡಿಕೊಂಡು ಬಂದಿರುವ ಇವರು ಇದೀಗ ಸರಕಾರಿ ಸೌಲಭ್ಯ ಪಡೆದುಕೊಂಡು ತನ್ನ ಜಮೀನಿನಲ್ಲಿ ಬೃಹದಾಕಾರದ ನೀರಿಂಗಿಸುವ ಗುಂಡಿ ನಿರ್ಮಿಸಿ ನೀರಿನ ಸಂರಕ್ಷಣೆಗೆ ಮುನ್ನುಡಿ ಬರೆದಿದ್ದಾರೆ. ಎಳೆ ಪ್ರಾಯದಿಂದಲೇ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇವರು ಇದೀಗ ಸರ್ವೆ ಷಣ್ಮುಖ ಯುವಕ ಮಂಡಲದ ಜೊತೆಗೂಡಿ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸಂಪೂರ್ಣ ಸಾವಯವ ಗೊಬ್ಬರ ಬಳಕೆಯಿಂದ ವಿಷ ನಮ್ಮ ಶರೀರಕ್ಕೆ ಸೇರುವುದಿಲ್ಲ, ಆರೋಗ್ಯ ದೃಷ್ಟಿಯಲ್ಲಿ ಸಾವಯವ ಕೃಷಿ ನೂರಕ್ಕೆ ನೂರು ಉತ್ತಮ ಎನ್ನುವ ಜಯರಾಜ್ ಸುವರ್ಣರವರು ನಾನು ಕೃಷಿಯಲ್ಲಿ ಸಿಗುವ ಆದಾಯದ ಶೇ.100ರಲ್ಲಿ ಶೇ.40ನ್ನು ವಾಪಸ್ ಕೃಷಿ ಅಭಿವೃದ್ಧಿಗೆ ವಿನಿಯೋಗಿಸುತ್ತಿದ್ದೇನೆ. ಬ್ಯಾಕ್ಟೀರಿಯಾಗಳಿಂದ ತರಕಾರಿ ಕೃಷಿ ನಾಶವಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿಯೂ ಅನೇಕ ಕ್ರಮಗಳನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಜಯರಾಜ್ ಸುವರ್ಣರು ಕೃಷಿ ಜೊತೆಯಲ್ಲಿ ಸಮಾಜ ಸೇವೆಯನ್ನೂ ಮಾಡಿಕೊಂಡು ಬಂದವರು, ತಾನು ಬೆಳೆದ ತರಕಾರಿಗಳನ್ನು ಸ್ಥಳೀಯವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುವುದಲ್ಲದೇ ಊರಿನಲ್ಲಿ ಹತ್ತಾರು ಮಂದಿಗೆ ಉಚಿತವಾಗಿ ತರಕಾರಿಗಳನ್ನು ನೀಡುವ ಗುಣವನ್ನು ಬೆಳೆಸಿಕೊಂಡಿದ್ದಾರೆ. ಕೃಷಿ ತರಬೇತಿ ಕೊಟ್ಟು, ಕೃಷಿ ಚಟುವಟಿಕೆ ನಡೆಸಿ ಯಶಸ್ವಿಯಾಗುವುದು ಹಾಗೂ ತಾನು ಬೆಳೆದ ತರಕಾರಿಗಳನ್ನು ಸ್ಥಳೀಯವಾಗಿ ಆ ಬಳಿಕ ಊರಿನ ಬಹಳಷ್ಟು ಮಂದಿಗೆ ಉಚಿತವಾಗಿ ನೀಡುವ ಇಂತಹ ಬಹುಮುಖ ಪ್ರತಿಭೆ ಹೊಂದಿರುವ ಕೃಷಿಕರು ಬಹಳ ಅಪರೂಪ ಎಂದರೂ ತಪ್ಪಾಗದು.

@ ಯೂಸುಫ್ ರೆಂಜಲಾಡಿ

ಜಾಹೀರಾತು

ಜಾಹೀರಾತು

———————————————————————————————

ಗುಣಮಟ್ಟದ ಯಂತ್ರೋಪಕರಣಗಳಿಗಾಗಿ ದ.ಕ. ಕನ್ನಡ ಕೃಷಿ ಅಭಿವೃದ್ಧಿ ಸಹಕಾರಿ ಸಂಘ ಲಿ.


ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ರೈತರ ಸಂಸ್ಥೆಯಾದ ಪಂಪುಸೆಟ್ ಸೊಸೈಟಿ ಎಂದೇ ಖ್ಯಾತಿ ಪಡೆದ ಸ್ಕ್ಯಾಡ್ಸ್ ಸಂಸ್ಥೆಯು ೫೮ ವರ್ಷಗಳಿಂದ ರೈತರಿಗೆ ಉತ್ತಮ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಬೆಲೆಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಪೂರೈಸುತ್ತಿದೆ. ಸೀಮೆಎಣ್ಣೆ /ಡೀಸೆಲ್ ಪಂಪುಸೆಟ್‌ಗಳು, ಮಿಟ್ಸುಬಿಷಿ ಪವರ್ ಟಿಲ್ಲರ್, ಟ್ರ್ಯಾಕ್ಟರ್, ರೀಪರ್, ಕಟಾವು ಯಂತ್ರ, ನೇಜಿ ನೆಡುವ ಯಂತ್ರ ಇತ್ಯಾದಿ ಮತ್ತು ಆಸ್ಟೀ ಕಂಪೆನಿಯ ಸ್ಪ್ರೇಯರ್‌ಗಳು ಇತರ ಕಂಪೆನಿಗಳ ಪವರ್ ಸ್ಪ್ರೇಯರ್‌ಗಳು, ತೋಟಕ್ಕೆ ಅಗತ್ಯವಿರುವ ಕೇರ್ಪು, ಏಣಿಗಳು, ಅಡಿಕೆ, ತೆಂಗಿನ ಮರ ಹತ್ತುವ ಯಂತ್ರ, ಗೊಬ್ಬರ ಸಾಗಿಸಲು ಕೈಗಾಡಿ, ಎಲ್ಲಾ ಯಂತ್ರಗಳ ಬಿಡಿಭಾಗಗಳ ಮಾರಾಟ ವ್ಯವಸ್ಥೆ, ನುರಿತ ತಂತ್ರಜ್ಞರಿಂದ ಟಿಲ್ಲರ್ ಟ್ರ್ಯಾಕ್ಟರ್ ಮತ್ತು ಇತರ ಯಂತ್ರೋಪಕರಣಗಳ ರಿಪೇರಿ ವ್ಯವಸ್ಥೆ ಇದೀಗ ರೈತರಿಗೆ ಸೌರ ವಿದ್ಯುತ್ ತಂತ್ರಜ್ಞಾನದ ಬಗ್ಗೆ ತಿಳಿಸಿ ತೋಟಗಳಿಗೆ ಅಳವಡಿಸುವ ಯೋಜನೆ ಪ್ರಾರಂಭಿಸಿದೆ. ಈ ವ್ಯಾಪಾರಗಳಿಗೆ ಪೂರಕವಾಗಿ ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಿಂದ ಪಂಪ್‌ವೆಲ್, ಬ್ರಹ್ಮಾವರ, ಪರಂಗಿಪೇಟೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಸಂಘದಲ್ಲಿ ಮಾರಾಟ ಮಾಡುವ ಪವರ್ ಟಿಲ್ಲರ್, ರೀಪರ್, ನೇಜಿ ನೆಡುವ ಯಂತ್ರ ಟ್ರ್ಯಾಕ್ಟರ್, ಕೈಗಾಡಿ ಹಾಗೂ ಏಣಿ ಮುಂತಾದ ಆಯ್ದ ಕೃಷಿ ಯಂತ್ರೋಪಕರಣಗಳಿಗೆ ಸರಕಾರದ ಸಹಾಯಧನ ಲಭ್ಯವಿದೆ. ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಕೆ. ರವೀಂದ್ರ ಕಂಬಳಿ, ಉಪಾಧ್ಯಕ್ಷರಾಗಿ ಅಶೋಕ್ ಕುಮಾರ್ ಶೆಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಕಾರ್ಯದರ್ಶಿ ಸಿಬ್ಬಂದಿ ವರ್ಗದ ಸಹಕಾರದಿಂದ ಮುನ್ನಡೆಯುತ್ತಿದೆ.
ಸಮೃದ್ಧ ವ್ಯವಸಾಯಕ್ಕಾಗಿ ಉನ್ನತ ಗುಣಮಟ್ಟದ ಸಾಧನಗಳು :
ಸಂಘದಲ್ಲಿ ಮಿಟ್ಸುಬಿಷಿ ಟ್ರ್ಯಾಕ್ಟರ್ ಮತ್ತು ಪವರ್ ಟಿಲ್ಲರ್, ಪವರ್ ಟಿಲ್ಲರ್ ಟ್ರೈಲರ್ (ಸ್ಯ್ಕಾಡ್ಸ್ ತಯಾರಿ) ಗ್ರೀವ್ಸ್ ವಿಲ್ಲಿಯರ್‍ಸ್ ಹೋಂಡಾ, ಸೀಮೆಎಣ್ಣೆ ಪಂಪುಸೆಟ್‌ಗಳು, ಡೀಸೆಲ್ ಪಂಪುಸೆಟ್‌ಗಳು, ವಿದ್ಯುತ್ ಪಂಪುಸೆಟ್‌ಗಳು, ಸಬ್ ಮರ್ಸಿಬಲ್ ಪಂಪುಸೆಟ್‌ಗಳು, ಆಸ್ಟೀ ಸ್ಪ್ರೇಯರ್‌ಗಳು, ಸ್ಪ್ರಿಂಕ್ಲರ್ ಮತ್ತು ಡ್ರಿಪ್ ನೀರಾವರಿ ಸಲಕರಣೆಗಳು, ಪೈಪುಗಳು ಮತ್ತು ಫಿಟ್ಟಿಂಗ್ಸ್‌ಗಳು, ಭತ್ತ ಕಟಾವು ಯಂತ್ರ, ನೇಜಿ ನೆಡುವ ಯಂತ್ರ, ಸೋಲಾರ್ ಉಪಕರಣಗಳು, ಗೋಬರ್ ಗ್ಯಾಸ್ ಸ್ಟವ್, ಹಾರೆ, ಪಿಕ್ಕಾಸು ಮೊದಲಾದ ಕೃಷಿ ಉಪಕರಣಗಳು TATA ಮತ್ತು TIMKEN BEARINGS  ಅಸಲಿ ಬಿಡಿಭಾಗಗಳು ಅನುಭವೀ ತಂತ್ರಜ್ಞರಿಂದ ಮಾರಾಟ ನಂತರ ಸೇವೆಯೂ ದೊರಕುತ್ತಿದೆ.

ಜಾಹೀರಾತು

ಜಾಹೀರಾತು

———————————————————————————————

ರಬ್ಬರ್ ಬೆಳೆಗಾರರ ಆಶಾಕಿರಣ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ

ನೆಲ್ಯಾಡಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ರಬ್ಬರ್ ಬೆಳೆಗಾರರಿಗೆ ಆಶಾಕಿರಣವಾಗಿದೆ.

ಹಿರಿಯ ಸಹಕಾರಿ ಮುಂದಾಳು ದಿ.ಡಾ.ಕೆ.ಎನ್.ವಿ.ಪಿಳ್ಳೆಯವರ ನೇತೃತ್ವದಲ್ಲಿ ೧೯೮೯ರಲ್ಲಿ ಪುತ್ತೂರು ತಾಲೂಕಿನ ರಬ್ಬರ್ ಬೆಳೆಗಾರರ ಹಿತದೃಷ್ಟಿಯಿಂದ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಸ್ಥಾಪನೆಗೊಂಡಿತು. ಪ್ರಕೃತ ಸಂಘದ ಕೇಂದ್ರ ಕಚೇರಿಯ ನೆಲ್ಯಾಡಿಯಲ್ಲಿ ಇದ್ದು ಕಡಬ ಮತ್ತು ಪುತ್ತೂರುಗಳಲ್ಲಿ ಸಂಘವು ಪೂರ್ಣ ಪ್ರಮಾಣದ ಶಾಖೆಗಳನ್ನು ಹೊಂದಿದೆ. ಅಲ್ಲದೆ ಇಚ್ಲಂಪಾಡಿ, ಕೆಯ್ಯೂರು, ಈಶ್ವರಮಂಗಲದಲ್ಲಿ ರಬ್ಬರ್ ಖರೀದಿ ಕೇಂದ್ರಗಳನ್ನು ಹೊಂದಿದೆ. ಸಂಘದಲ್ಲಿ ೧೭೦೦ ಎ ತರಗತಿ ಸದಸ್ಯರಿದ್ದು ೧೭ ಬಿ ತರಗತಿ ಸದಸ್ಯರಿದ್ದಾರೆ. ಸಂಘವು ಅವಧಿ ಠೇವಣಿ, ಸಂಚಯ ಠೇವಣಿ, ದೈನಿಕ ಠೇವಣಿ, ಆವರ್ತನಾ ಠೇವಣಿಗಳನ್ನು ಸ್ವೀಕರಿಸುತ್ತಿದೆ. ಸಂಘದಲ್ಲಿ ಚಿನ್ನಾಭರಣ ಈಡಿನ ಸಾಲ, ಠೇವಣಿ ಆಧಾರಿತ ಸಾಲ, ರಬ್ಬರ್ ರೋಲರ್ ಖರೀದಿಗೆ ಸಾಲ, ಗೃಹೋಪಯೋಗಿ ಸಾಮಗ್ರಿ ಖರೀದಿಗೆ ಸಾಲ, ಮನೆ ರಿಪೇರಿ ಸಾಲದ ಯೋಜನೆಗಳಿವೆ. ಸಂಘವು ರಬ್ಬರ್ ಕೃಷಿ ಸಲಕರಣೆಗಳನ್ನು ಕೃಷಿಕರಿಗೆ ಒದಗಿಸುತ್ತಿದೆ. ಕೃಷಿಕರಿಂದ ಕಚ್ಚಾ ರಬ್ಬರ್ ಖರೀದಿಸುತ್ತಿದೆ. ಪುತ್ತೂರು ವಾಣಿಜ್ಯ ತೆರಿಗೆ ವ್ಯಾಪ್ತಿಯಲ್ಲಿ ಸಂಘವು ಅತ್ಯುನ್ನತ ಸ್ಥಾನ ಗಳಿಸಿಕೊಂಡಿದೆ.
ಸಂಘದ ಕೇಂದ್ರ ಕಚೇರಿಗೆ ನೆಲ್ಯಾಡಿಯಲ್ಲಿ ಸ್ವಂತ ನಿವೇಶನವಿದ್ದು ಸುಮಾರು ೬೫ ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು ಸುಮಾರು ೪೦೦೦ ಚದರ ಅಡಿ ವಿಸ್ತೀರ್ಣ ಹೊಂದಿದೆ. ರಬ್ಬರ್ ಕೃಷಿಕರಿಗೆ ಅಗತ್ಯವಿರುವ ಅನುಕೂಲಕರಾದ ಆಲಂಕಾರು, ಉದನೆ, ಶಿರಾಡಿ, ಕೊಕ್ಕಡ, ಉಪ್ಪಿನಂಗಡಿ, ಪಾಣಾಜೆ, ಬಂಟ್ವಾಳ ತಾಲೂಕಿನ ವಿಟ್ಲ, ಅಡ್ಯನಡ್ಕದಲ್ಲಿ ಹಂತ ಹಂತವಾಗಿ ರಬ್ಬರ್ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ರಬ್ಬರ್ ಕೃಷಿಕರಿಗೆ ರಸಗೊಬ್ಬರ, ಸಾವಯವ ಗೊಬ್ಬರ ಒದಗಿಸುವ ಬಗ್ಗೆಯೂ ಚಿಂತನೆ ನಡೆಸಿದೆ.
ಆಡಳಿತ ಮಂಡಳಿ: ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಬಿ.ಪ್ರಸಾದ್ ಕೌಶಲ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಯ್ ಅಬ್ರಹಾಂ, ನಿರ್ದೇಶಕರುಗಳಾಗಿ ಸಿ.ಜೋರ್ಜ್ ಕುಟ್ಟಿ, ಎನ್.ವಿ.ವ್ಯಾಸ, ಸತ್ಯಾನಂದ ಬಿ., ಸುಭಾಷ್ ನಾಯಕ್ ಎನ್., ರಮೇಶ ಕಲ್ಪುರೆ, ಗಿರೀಶ್ ಸಾಲಿಯಾನ್ ಬಿ., ಶ್ರೀರಾಮ ಪಕ್ಕಳ, ಜಯರಾಮ ಬಿ., ಶ್ರೀಮತಿ ಅರುಣಾಕ್ಷಿ, ಶ್ರೀಮತಿ ಗ್ರೇಸಿ ನೈನಾನ್, ಬೈರ ಮುಗೇರರವರು ಸೇವೆ ಸಲ್ಲಿಸುತ್ತಿದ್ದು ಸಂಘವನ್ನು ಯಶಸ್ವಿ ಪಥದಲ್ಲಿ ಮುನ್ನಡೆಸುತ್ತಿದ್ದಾರೆ. ಶಶಿಪ್ರಭಾ ಕೆ.,ಪ್ರಭಾರ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

@ ಹರೀಶ್ ಬಾರಿಂಜ

ಜಾಹೀರಾತು
ಜಾಹೀರಾತು

———————————————————————————————

ಕೃಷಿಕರಲ್ಲಿ ಸ್ವಾಭಿಮಾನ ಸೃಜಿಸಿದ ಕ್ಯಾಂಪ್ಕೋ

ಕೃಷಿಕರಲ್ಲಿ ಸ್ವಾಭಿಮಾನವನ್ನು ಸೃಜಿಸಿದಲ್ಲದೇ ಸಹಕಾರಿ ಮನೋಭಾವವನ್ನು ಹುಟ್ಟುಹಾಕಿದ ದಕ್ಷಿಣ ಕನ್ನಡದ ಕ್ಯಾಂಪ್ಕೋ ಕೃಷಿಕರ ಅಚ್ಚುಮೆಚ್ಚಿನ ಬಹುರಾಜ್ಯ ಸಹಕಾರಿ ಸಂಸ್ಥೆಯಾಗಿ ಬೆಳೆದು ಬಂದಿದೆ. ೧೧ ಜುಲೈ ೧೯೭೩ರಂದು ಸ್ಥಾಪನೆಯಾಗಿ ೪೬ ವರ್ಷಗಳ ಸಾರ್ಥಕ ಸೇವೆಯನ್ನು ಮುಂದುವರಿಸಿರುವ ಹೆಮ್ಮೆಯ ಕೃಷಿಕರ ಕಣ್ಮಣಿ. ಒಂದೇ ಸೂರಿನಡಿ ಕೃಷಿಕರು ಬೆಳೆದ ಅಡಿಕೆ, ಕೊಕ್ಕೋ ರಬ್ಬರ್ ಮತ್ತು ಕಾಳುಮೆಣಸು ಖರೀದಿಸಿ ಸಂಸ್ಕರಿಸಿ ಮಾರಾಟಮಾಡುವ ಏಕೈಕ ಬೃಹತ್ ಸಂಸ್ಥೆ. ಕೊಕ್ಕೋ ಬೆಳೆಗಾರರು ಬೆಳೆದ ಕೊಕ್ಕೋ ಬೀಜಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಪುತ್ತೂರಿನಲ್ಲಿರುವ ಬೃಹತ್ ಸುಸಜ್ಜಿತ ಚಾಕೊಲೇಟ್ ಫ್ಯಾಕ್ಟರಿ ಮೂಲಕ ಉತ್ಪಾದಿಸುತ್ತಿರುವ ಸಹಕಾರಿ ವಲಯದ ಮುಕುಟಮಣಿ ಎಂದೇ ಪ್ರಸಿದ್ಧಿಯಾಗಿದೆ.


ಸಹಕಾರಿ ಕ್ಷೇತ್ರದ ದಿಗ್ಗಜ ವಾರಾಣಾಶಿ ಸುಬ್ರಾಯ ಭಟ್ಟರ ದೂರದರ್ಶಿತ್ವದ ಮೂಲಕ ಹಾಕಿದ ಭದ್ರ ತಳಪಾಯ ಇಂದು ಕ್ಯಾಂಪ್ಕೋ ಸಂಸ್ಥೆಯನ್ನು ಅದ್ಭುತವಾಗಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಲ್ಲುವಂತೆ ಮಾಡಿದೆ. ಆಡಳಿತ ನಡೆಸಿದ ಮತ್ತು ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಅನೇಕ ಹಿರಿಯರ ದಣಿವರಿಯದ ನಿಸ್ವಾರ್ಥ ಸೇವೆಯಿಂದಾಗಿ ಕ್ಯಾಂಪ್ಕೊ ಹೆಮ್ಮರವಾಗಿ ನಾಲ್ದೆಸೆಗಳಿಗೆ ಹರಡಿತು, ಖ್ಯಾತಿವೆತ್ತಿತು. ಅಡಿಕೆ ಮಾರುಕಟ್ಟೆಯಂತೆ ಕೊಕ್ಕೊ ರಬ್ಬರ್ ಹಾಗು ಕಾಳುಮೆಣಸಿನ ಮಾರುಕಟ್ಟೆಯಲ್ಲಿ ಕ್ಯಾಂಪ್ಕೊ ಇರುವುದರಿಂದಲೆ ಅಲ್ಲಿ ಧಾರಣೆಗೊಂದು ಸ್ಥಿರತೆಯಿದೆ. ಯಾವ ಕ್ಷೇತ್ರಕ್ಕೆ ಕ್ಯಾಂಪ್ಕೊ ಕೈ ಹಾಕಿದರೂ ಆ ಕ್ಷೇತ್ರ ಯಶಸ್ವಿಯಾಗುತ್ತದೆ ಎಂಬುದು ಕೃಷಿಕರ ವಿಶ್ವಾಸ. ಈ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕ್ಯಾಂಪ್ಕೊ ವರ್ಷದಿಂದ ವರ್ಷಕ್ಕೆ ವ್ಯವಹಾರ ಹೆಚ್ಚಿಸಿಕೊಳ್ಳುತ್ತಿದೆ. ಹೊಸ ಹೊಸ ಕ್ಷೇತ್ರದತ್ತ ಬೆಳೆಯುತ್ತಿದೆ ಮತ್ತು ಕೃಷಿಕರ ಜೀವನಾಡಿಯಾಗಿ ಸ್ಪಂದಿಸುತ್ತಿದೆ.
ಕೃಷಿಕ ತಂದ ಕೃಷಿ ಉತ್ಪನ್ನಗಳನ್ನು ತಿರಸ್ಕರಿಸದೆ ನ್ಯಾಯಯುತ ಬೆಲೆ ನೀಡುವುದು ಕ್ಯಾಂಪ್ಕೊದ ಹೆಚ್ಚುಗಾರಿಕೆ. ಇಲ್ಲಿ ಬಿಳಿ ಚೀಟಿನ ವ್ಯವಹಾರವಿಲ್ಲ. ಸರಕಾರಕ್ಕೆ ನೂರಕ್ಕೆ ನೂರು ತೆರಿಗೆ ಪಾವತಿಸಿ ದೇಶದ ಆರ್ಥಿಕ ಸಬಲತೆಗೆ ತನ್ನದೇ ಕಾಣಿಕೆ ನೀಡುವುದು ಪಾರದರ್ಶಕ ವ್ಯವಹಾರವಿರುವ ಕ್ಯಾಂಪ್ಕೊದ ಹೆಗ್ಗಳಿಕೆ. ನೋಟು ಅಮಾನ್ಯೀಕರಣಗೊಂಡಾಗ ಮಾರುಕಟ್ಟೆ ತಲ್ಲಣಗೊಂಡಿತ್ತು. ಆದರೆ ಕೃಷಿಕರ ಕ್ಯಾಂಪ್ಕೊ ಕೇಂದ್ರ ಸರಕಾರದ ವ್ಯವಸ್ಥೆಗೆ ನೂರಕ್ಕೆ ನೂರು ಬೆಂಬಲವಾಗಿ ನಿಂತು ಎಲ್ಲವನ್ನೂ ಸಮಾಧಾನವಾಗಿ ವ್ಯವಹರಿಸಿ ಕೃಷಿಕರ ಉತ್ಪನ್ನಗಳನ್ನು ಸರಕಾರ ಹೊರಡಿಸಿದ ನೀತಿ ನಿಯಮಗಳ ಪ್ರಕಾರ ಖರೀದಿಸಿತು. ಅಂದು ಕ್ಯಾಂಪ್ಕೊ ಕೊಕ್ಕೊ ಖರೀದಿ ಮಾಡದೆ ಇರುತ್ತಿದ್ದರೆ ಕೊಕ್ಕೊ ಬೀಜಗಳನ್ನು ಕೃಷಿಕ ರಸ್ತೆಗೆ ಸುರಿಯುವ ಪ್ರಮೇಯ ಬರುತ್ತಿತ್ತು ಎಂಬುದು ಕೃಷಿಕರೇ ಹೇಳುವ ಮಾತು.
ಕ್ಯಾಂಪ್ಕೊ ಕೃಷಿಕರು ಬೆಳೆದ ಉತ್ಪನ್ನಗಳನ್ನು ಖರೀದಿಸುವುದು ಮಾತ್ರ ಅಲ್ಲ. ಕೃಷಿಕರಿಗೆ ಅನ್ಯಾನ್ಯ ರೀತಿಯಲ್ಲಿ ನೆರವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ರಿಯಾಯಿತಿ ದರದಲ್ಲಿ ಕೊಕ್ಕೊ ಮತ್ತು ಕಾಳುಮೆಣಸಿನ ಗಿಡ, ಬಳ್ಳಿಗಳನ್ನು ವಿತರಿಸುತ್ತಾ ಬಂದಿದೆ. ಸ್ಪರ್ಧಾತ್ಮಕ ದರದಲ್ಲಿ ಉತ್ತಮ ಗುಣಮಟ್ಟದ ಮೈಲುತುತ್ತು ತನ್ನ ಶಾಖೆಗಳಲ್ಲಿ ಕ್ಲಪ್ತ ಸಮಯಕ್ಕೆ ದೊರಕುಂತೆ ಮಾಡುತ್ತಿದೆ. ಸಕ್ರಿಯ ಕೃಷಿಕ ಸದಸ್ಯನ ಕುಟುಂಬದ ಬಗೆಗೂ ಕ್ಯಾಂಪ್ಕೊ ಕಾಳಜಿ ದೊಡ್ಡದು. ಕಿಡ್ನಿ ಕಸಿ ಚಿಕಿತ್ಸೆಗೆ ರೂ. ೧,೦೦,೦೦೦, ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ರೂ. ೫೦,೦೦೦ ಮತ್ತು ಹತ್ತು ಡಯಾಲಿಸ್‌ಗೆ ಒಟ್ಟು ೧೦,೦೦೦ ರೂಪಾಯಿಗಳನ್ನು ಕಳೆದ ಕೆಲವು ವರ್ಷಗಳಿಂದ ನೀಡುತ್ತ ಬಂದಿದೆ. ಕೃಷಿಕ ಮತ್ತು ಅವನ ಕುಟುಂಬ ಸದಸ್ಯರು ಅಪಮೃತ್ಯುವಾದರೆ ೫೦,೦೦೦ ರೂಪಾಯಿಗಳ ನೆರವು. ಕೃಷಿಕನ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕ ಅಪಮೃತ್ಯುವಿಗೆ ಸಿಲುಕಿದರೆ ಆತನ ಕುಟುಂಬಕ್ಕೆ ೫೦,೦೦೦ ರೂಪಾಯಿಗಳ ನೆರವನ್ನು ಹೊಸದಾಗಿ ಕ್ಯಾಂಪ್ಕೊ ಜಾರಿಗೆ ತಂದಿದೆ. ಕ್ಯಾಂಪ್ಕೊದ ಮುಂದೆ ಹೊಸ ಹೆಜ್ಜೆ ಹೊಸ ಹಾದಿಗಳಿವೆ. ಕೃಷಿಕ ಸ್ನೇಹಿ ಯೋಜನೆಗಳಿವೆ. ಪುತ್ತೂರಿನ ಕಾವುವಿನಲ್ಲಿ ಸುಮಾರು ೨೫ ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ವ್ಯವಸ್ಥೆಗಳಿರುವ ಗೋಡೌನ್ ಕೆಲಸ ನಡೆಯುತ್ತಿದ್ದು ತೆಂಗಿನಕಾಯಿಗೆ ಸಂಬಂಧಿಸಿ ಅತ್ಯಾಧುನಿಕ ಪೂರ್ಣಪ್ರಮಾಣದ ಫ್ಯಾಕ್ಟರಿ ನಿರ್ಮಾಣದ ಕಾರ್ಯ ಸಧ್ಯೋಭವಿಷ್ಯದಲ್ಲಿ ಆಗಲಿದೆ. ಕೃಷಿಕಪರ, ಕೃಷಿಕ ಸ್ನೇಹಿ ಕ್ಯಾಂಪ್ಕೊ ಸದಾ ಕೃಷಿಕರ ಅಭ್ಯುದಯ ಆಕಾಂಕ್ಷಿಯಾಗಿ ಬೆಳೆಯಲಿ, ಬೆಳಗಲಿ.

@ ಶಂ.ನಾ.ಖಂಡಿಗ ಕ್ಯಾಂಪ್ಕೋ ಉಪಾಧ್ಯಕ್ಷರು

ಜಾಹೀರಾತು
ಜಾಹೀರಾತು

———————————————————————————————

88ರ ಹರೆಯದಲ್ಲೂ ಬತ್ತದ ಭತ್ತದ ಕೃಷಿ ಪ್ರೀತಿ… ಅಂಗಡಿಯಿಂದ ಅಕ್ಕಿ ತರದೆ 30 ವರ್ಷಗಳಾಯಿತು…
ತನ್ನ 88ರ ಇಳಿ ವಯಸ್ಸಿನಲ್ಲೂ ಭತ್ತದ ಕೃಷಿ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿರುವ ಒಬ್ಬರು ಹಳ್ಳಿ ಅಜ್ಜನ ಕಥೆ ಇದು. ಕಳೆದ 30 ವರ್ಷಗಳಿಂದ ಅಂಗಡಿಯಿಂದ ಒಂದು ಕೆ.ಜಿ ಅಕ್ಕಿ ತಂದಿಲ್ಲ ಎನ್ನುವ ಈ ಅಜ್ಜನ ಗದ್ದೆ ಬೇಸಾಯಕ್ಕೆ ಹ್ಯಾಟ್ಸಫ್ ಹೇಳಲೇಬೇಕು. ಬನ್ನಿ ಆ ಮಹಾನ್ ಸಾಧಕನ ಬಗ್ಗೆ ತಿಳಿದುಕೊಳ್ಳೋಣ. ಇವರ ಹೆಸರು ಆದಂ ಕುಂಞ. ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಉಜಿರೋಡಿ ಸಮೀಪದ ಆಲಂಬಾಡಿ ನಿವಾಸಿಯಾಗಿರುವ ಇವರು ಬಡ ಕುಟುಂಬದಿಂದ ಬಂದವರು. ಯೌವನದಲ್ಲೇ ಕೃಷಿ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ಇವರು ಪ್ರಸ್ತುತ ಉಜಿರೋಡಿಯ ಆಲಂಬಾಡಿ ಎಂಬಲ್ಲಿ ಒಂದು ಎಕರೆ ಜಾಗದಲ್ಲಿ ಮನೆ ಮಾಡಿಕೊಂಡು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ಹಿರಿಯರು ತೋರಿಸಿಕೊಟ್ಟ ಗದ್ದೆ ಬೇಸಾಯವನ್ನು ತನ್ನ ಆಯಸ್ಸು ಇರುವ ತನಕ ಮಾಡಿಕೊಂಡು ಬರುತ್ತೇನೆ ಎನ್ನುವ ಈ ಕಾಯಕಯೋಗಿಯು ಕಳೆದ 30 ವರ್ಷಗಳಿಂದ ಗದ್ದೆಯೊಂದನ್ನು ಗೇಣಿಗೆ ಪಡೆದುಕೊಂಡು ಬೇಸಾಯ ಮಾಡುತ್ತಾ ಬಂದಿದ್ದಾರೆ. ಉದ್ಯಮಿ ಚಿಕ್ಕಪ್ಪ ನೈಕ್ ಎಂಬವರಿಗೆ ಸೇರಿದ ಗದ್ದೆಯನ್ನು ಆದಂ ಕುಂಞಯವರು ಗೇಣಿಗೆ ಪಡೆದುಕೊಂಡು ಸುಮಾರು 1 ಎಕ್ರೆ ಪ್ರದೇಶದಲ್ಲಿ ಬೇಸಾಯ ಮಾಡುತ್ತಿದ್ದಾರೆ.

* ಎಷ್ಟು ವರ್ಷಗಳಿಂದ ಬೇಸಾಯ ಕಾರ್ಯದಲ್ಲಿ ತೊಡಗಿದ್ದೀರಾ?
ನಮ್ಮ ಹಿರಿಯರು ಬೇಸಾಯ ಮಾಡುತ್ತಿದ್ದರು. ಗದ್ದೆ ಬೇಸಾಯದ ಪ್ರೀತಿ ನನಗೆ ನನ್ನ ಹಿರಿಯರಿಂದ ಬಂದ ಕೊಡುಗೆಯಾಗಿದೆ. ನನಗೆ ನನ್ನದೇ ಆದ ಸ್ವಂತ ಗದ್ದೆ ಇಲ್ಲ. ಗಣ್ಯರಾದ ಅರಿಯಡ್ಕ ಚಿಕ್ಕಪ್ಪ ನಾಕ್ ಎಂಬವರಿಗೆ ಸೇರಿದ ಗದ್ದೆಯಲ್ಲಿ ನಾನು ಬೇಸಾಯ ಮಾಡುತ್ತಿದ್ದೇನೆ. ಕಳೆದ ೩೦ ವರ್ಷಗಳಿಂದ ಬೇಸಾಯದಲ್ಲಿ ತೊಡಗಿಕೊಂಡಿದ್ದೇನೆ, ನನಗೆ ಈಗ ೮೮ ವರ್ಷ. ಆರೋಗ್ಯ ಚೆನ್ನಾಗಿ ಇರುವ ತನಕ ಬೇಸಾಯ ಮಾಡಿಕೊಂಡು ಹೋಗುತ್ತೇನೆ.
* ಎಷ್ಟು ಬೆಳೆ ಮಾಡುತ್ತೀರಾ?
ಮೊದಲೆಲ್ಲ ಎರಡು ಬೆಳೆ ಮಾಡುತ್ತಿದ್ದೆ. ಆದರೆ ಈಗ ಒಂದೇ ಬೆಳೆ ಮಾಡುತ್ತಿದ್ದೇನೆ. ಹಿಂದೆ ಮಳೆ ಸರಿಯಾಗಿ ಬರುತ್ತಿತ್ತು ಗದ್ದೆಯಲ್ಲಿ ನೀರು ಕೂಡ ಆಗುತ್ತಿತ್ತು. ಆದರೆ ಈಗ ಮಳೆ ಸರಿಯಾಗಿ ಬರದೇ ಇರುವುದರಿಂದ ನೀರಿನ ಕೊರತೆ ಇದೆ. ಚಿಕ್ಕಪ್ಪ ನೈಕ್‌ರವರ ತೋಟದ ಕೆರೆಯಿಂದ ಪಂಪು ಮೂಲಕ ಗದ್ದೆಗೆ ನೀರು ಹಾಯಿಸಿ ಬೇಸಾಯ ಮಾಡುತ್ತಿದ್ದೇನೆ. ಒಂದು ಬೆಳೆ ಮಾಡುವುದೇ ಬಹಳ ಕಷ್ಟವಾಗುತ್ತಿದೆ.
*  ಯಾವ ಭತ್ತದ ತಳಿ ಬಳಕೆ ಮಾಡುತ್ತಿದ್ದೀರಾ?
ಇಂದಿನ ದಿನಗಳಲ್ಲಿ ಬೇರೆ ಬೇರೆ ಹೈಬ್ರೀಡ್ ಭತ್ತದ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆದರೆ ನಮ್ಮ ಮಣ್ಣಿಗೆ ಸರಿ ಹೊಂದುವಂತಹ ತಳಿಗಳ ಬೀಜಗಳನ್ನೇ ಬಿತ್ತಬೇಕಾಗುತ್ತದೆ. ಇಲ್ಲದಿದ್ದರೆ ಸಮಸ್ಯೆಗಳು ಉಂಟಾಗುತ್ತದೆ. ಕೆಲವೊಮ್ಮೆ ಬೀಜ ಸರಿಯಾಗಿ ಮೊಳಕೆ ಬರದೇ ಇರಬಹುದು ಅಥವಾ ಕೀಟಗಳ ಹಾವಳಿ ಜಾಸ್ತಿಯಾಗಿ ಬಿಡಬಹುದು. ಆದ್ದರಿಂದ ಯಾವ ಭತ್ತದ ತಳಿ ನಮ್ಮ ಮಣ್ಣಿಗೆ ಸೂಕ್ತ ಎಂಬುದನ್ನು ಕೃಷಿ ತಜ್ಞರಿಂದ ತಿಳಿದುಕೊಂಡು ಬಿತ್ತನೆ ಮಾಡಬೇಕು. ನಾನು ಕಳೆದ ೩೦ ವರ್ಷಗಳಿಂದಲೂ ಮಡಿಕೇರಿ ಕಜೆ ಎಂಬ ಭತ್ತದ ತಳಿಯನ್ನೇ ನಾಟಿ ಮಾಡುತ್ತಿದ್ದೇನೆ.
* ಗದ್ದೆ ಉಳುಮೆ ಯಾವ ರೀತಿಯಲ್ಲಿ ಮಾಡುತ್ತಿದ್ದೀರಾ?
ನನ್ನಲ್ಲಿ ಗದ್ದೆ ಉಳುಮೆಗಾಗಿಯೇ ಸಾಕಿದ ಕಂಬಳದ ಕೋಣಗಳಿದ್ದವು. ಕೋಣಗಳ ಮೂಲಕವೇ ಗದ್ದೆ ಉಳುಮೆ ಮಾಡುತ್ತಿದ್ದೆ. ಆದರೆ ಕೋಣಗಳನ್ನು ಸಾಕುವುದೇ ದೊಡ್ಡ ಕಷ್ಟದ ಕೆಲಸವಾಯಿತು. ಅದಕ್ಕಾಗಿ ಅವುಗಳನ್ನು ಮಾರಾಟ ಮಾಡಿಬಿಟ್ಟೆ. ಈಗ ಟ್ರ್ಯಾಕ್ಟರ್ ಮೂಲಕ ಗದ್ದೆ ಉಳುಮೆ ಮಾಡುತ್ತಿದ್ದೇನೆ. ಎತ್ತುಗಳು ಇರುವಾಗ ಸ್ವತಃ ನಾನೇ ಎತ್ತುಗಳನ್ನು ಕಟ್ಟಿ ಗದ್ದೆ ಉಳುಮೆ ಮಾಡುತ್ತಿದ್ದೆ.
* ನೇಜಿ ಹೇಗೆ ತಯಾರು ಮಾಡುತ್ತೀರಾ?
ಹಿಂದಿನ ಕಾಲದಲ್ಲಿ ಭತ್ತದ ಬೀಜವನ್ನು ಬಿತ್ತನೆ ಮಾಡಿ ಅದು ದೊಡ್ಡದಾದ ಬಳಿಕ ನೇಜಿಯನ್ನು ತೆಗೆದು ಮತ್ತೆ ನಾಟಿ ಮಾಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಇದು ಸ್ವಲ್ಪ ಕಷ್ಟ. ಆದ್ದರಿಂದ ಆಧುನಿಕ ರೀತಿಯನ್ನು ಬಳಸಿಕೊಳ್ಳಬೇಕಾಗಿದೆ.ನಾನು ಪ್ಲೇಟ್‌ಗಳಲ್ಲಿ ನಾಟಿ ಮಾಡಿ ಬಳಿಕ ನೇಜಿಯನ್ನು ತೆಗೆದು ನಾಟಿ ಮಾಡುತ್ತಿದ್ದೇನೆ. ಆದರೆ ನನಗೆ ಪ್ಲೇಟ್‌ಗಳು ಸಿಗುತ್ತಿಲ್ಲ ದೂರದ ಸುಳ್ಯದಲ್ಲಿ ಪ್ಲೇಟ್ ಇದೆಯಂತೆ ಆದರೆ ತರುವುದು ತುಂಬಾ ಖರ್ಚು ಆಗುತ್ತದೆ. ಅದಕ್ಕಾಗಿ ನಾನು ಟಾರ್ಪಲ್ ಹಾಕಿ ಅದರ ಮೇಲೆ ಗೊಬ್ಬರ ಮಣ್ಣು ಹಾಕಿ ಬೀಜ ಬಿತ್ತನೆ ಮಾಡಿ ಅದರಲ್ಲಿ ನೇಜಿ ಮಾಡುತ್ತಿದ್ದೇನೆ. ಬಳಿಕ ಅದನ್ನು ತೆಗೆದು ನಾಟಿ ಮಾಡುತ್ತೇನೆ. ಇದರಿಂದ ನನಗೆ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ನೇಜಿ ಕೂಡ ಒಳ್ಳೆಯ ರೀತಿಯಲ್ಲಿ ಬೆಳವಣಿಗೆಯಾಗುತ್ತದೆ.
* ಯಾವ ರೀತಿಯ ಗೊಬ್ಬರ ಬಳಕೆ ಮಾಡುತ್ತಿದ್ದೀರಾ?
ಯಾವುದೇ ಕೃಷಿ ಮಾಡುವಾಗ ನಾವು ಮೊದಲು ಗೊಬ್ಬರಗಳ ಬಗ್ಗೆ ಚಿಂತನೆ ಮಾಡಬೇಕು. ಈಗ ಬೇಕಾದಷ್ಟು ರಾಸಾಯನಿಕ ಗೊಬ್ಬರಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವ ಮೂಲಕ ಅಧಿಕ ಇಳುವರಿ ಕೂಡ ಪಡೆಯಬಹುದು. ಆದರೆ ರಾಸಾಯನಿಕ ಗೊಬ್ಬರಗಳ ಅಧಿಕ ಬಳಕೆ ಆರೋಗ್ಯಕ್ಕೂ ಹಾನಿಕರ. ಆದ್ದರಿಂದ ಸಾಧ್ಯವಾದಷ್ಟು ಸಾವಯವ ಗೊಬ್ಬರಗಳನ್ನೇ ಬಳಕೆ ಮಾಡಬೇಕು. ನಾನು ಹೆಚ್ಚಾಗಿ ಹಟ್ಟಿ ಗೊಬ್ಬರ ಬಳಕೆ ಮಾಡುತ್ತಿದ್ದೇನೆ. ನೇಜಿ ದೊಡ್ಡದಾಗಲು ಮಾತ್ರ ರಾಸಾಯನಿಕ ಗೊಬ್ಬರ ಹಾಕುತ್ತಿದ್ದೇನೆ. ಸಾವಯವ ಗೊಬ್ಬರವನ್ನೇ ಹೆಚ್ಚು ಬಳಕೆ ಮಾಡುತ್ತಿದ್ದೇನೆ. ಆದ್ದರಿಂದಲೇ ಅಕ್ಕಿಯ ಊಟ ತುಂಬಾ ರುಚಿಯಾಗಿರಲು ಸಾಧ್ಯವಾಗಿದೆ.
*  ಕೂಲಿ ಕಾರ್ಮಿಕರಿಗಾಗಿ ಏನು ಮಾಡುತ್ತೀರಾ?
ಅದೇ ದೊಡ್ಡ ಮಟ್ಟದ ಸಮಸ್ಯೆಯಾಗಿರುವುದು. ಇಂದಿನ ದಿನಗಳಲ್ಲಿ ಬೇಸಾಯದ ಬಗ್ಗೆ ಅಷ್ಟಾಗಿ ಯಾರಿಗೂ ಸರಿಯಾಗಿ ಗೊತ್ತಿಲ್ಲ. ನೇಜಿ ನಾಟಿ ಮಾಡುವುದಾಗಲಿ, ಭತ್ತ ಕೊಯ್ಯುವುದಾಗಲಿ ಇದೆಲ್ಲ ಎಲ್ಲರಿಗೆ ಮಾಡಲು ಆಗುವುದಿಲ್ಲ. ಆದರೆ ನನಗೆ ಅಂತಹ ಸಮಸ್ಯೆ ಬಂದಿಲ್ಲ ಸ್ಥಳೀಯವಾಗಿ ಭತ್ತ ಕೃಷಿಯ ಬಗ್ಗೆ ಅನುಭವ ಇರುವ ಕೂಲಿ ಕಾರ್ಮಿಕರು ನನಗೆ ಸಿಕ್ಕಿದ್ದಾರೆ. ಅವರೇ ಎಲ್ಲಾ ಕೆಲಸ ಮಾಡಿಕೊಡುತ್ತಿದ್ದಾರೆ. ಸುಮಾರು ೧೫ ಮಂದಿ ಕೂಲಿ ಕಾರ್ಮಿಕರು ಬೇಕಾಗುತ್ತದೆ.
*  ಖರ್ಚು ವೆಚ್ಚದ ಬಗ್ಗೆ ಸ್ವಲ್ಪ ಹೇಳಿ
ಖರ್ಚು ವೆಚ್ಚದ ಬಗ್ಗೆ ಹೇಳಿ ಯಾವುದೇ ಪ್ರಯೋಜನವಿಲ್ಲ. ಸರಕಾರ ಗದ್ದೆ ಕೃಷಿಗೆ ಬೆಂಬಲ ಕೊಡಬೇಕು. ಬೇಸಾಯ ಮಾಡುವವರಿಗೆ ಸಹಾಯಧನ ಕೊಡಬೇಕು ಎಂದೆಲ್ಲಾ ಹೇಳುತ್ತದೆ ಆದರೆ ಸಹಾಯಧನ ಮಾತ್ರ ಸಿಗುತ್ತಿಲ್ಲ. ಒಂದೊಮ್ಮೆ ೨ ಸಾವಿರದಷ್ಟು ಸಹಾಯಧನ ಕೃಷಿ ಇಲಾಖೆಯಿಂದ ದೊರೆತದ್ದು ಬಿಟ್ಟರೆ ಇದುವರೆಗೆ ಬೇರೆ ಯಾವುದೇ ಸಹಾಯಧನ ಸಿಕ್ಕಿಲ್ಲ. ಕೂಲಿ ಕಾರ್ಮಿಕರಿಂದ ಹಿಡಿದು ಟ್ರ್ಯಾಕ್ಟರ್ ಉಳುಮೆ ತನಕ ನನಗೆ ಎಲ್ಲಾ ಸೇರಿ ಸುಮಾರು ೫೦ ಸಾವಿರದಷ್ಟು ಖರ್ಚು ಆಗುತ್ತದೆ. ಆದರೆ ನಾನು ಖರ್ಚು ವೆಚ್ಚದ ಬಗ್ಗೆ ಇದುವರೆಗೆ ತಲೆ ಕೆಡಿಸಿಕೊಂಡಿಲ್ಲ. ನಷ್ಟ ಆದರೂ ಒಳ್ಳೆಯ ಅಕ್ಕಿ ಸಿಗುತ್ತದೆ ಅಲ್ಲದೆ ಗದ್ದೆ ಬೇಸಾಯ ಉಳಿಯಬೇಕು ಎಂಬುದಷ್ಟೇ ನನ್ನ ಆಶಯ.
* ಎಷ್ಟು ಕ್ವಿಂಟಾಲ್ ಅಕ್ಕಿ ಸಿಗುತ್ತದೆ?
ಗದ್ದೆ ಬೇಸಾಯಕ್ಕೆ ವಿನಿಯೋಗಿಸಿದ ಖರ್ಚು ಮತ್ತು ಅದರಿಂದ ಸಿಗುವ ಅಕ್ಕಿಯನ್ನು ತಾಳೆ ಮಾಡಿದರೆ ಬೇಸಾಯ ಬೇಕಾ ಎಂಬ ಭಾವನೆ ಬರುತ್ತದೆ. ಆದರೆ ಬೇಸಾಯದಿಂದ ಮನಸ್ಸಿಗೆ ಏನೋ ಖುಷಿ ಸಿಗುತ್ತದೆ. ನನಗೆ ಪ್ರತಿ ವರ್ಷ ಸುಮಾರು ೧೦ ಕ್ವಿಂಟಾಲ್ ಅಕ್ಕಿ ಸಿಗುತ್ತದೆ. ಕೆಲವೊಮ್ಮ ಸ್ವಲ್ಪ ಕಡಿಮೆ ಸಿಕ್ಕಿದ್ದು ಇದೆ. ಆದರೆ ಸರಾಸರಿ ೧೦ ಕ್ವಿಂಟಾಲ್ ಬರುತ್ತದೆ.
* ನೀವು ಅಂಗಡಿಯಿಂದ ಅಕ್ಕಿ ತಂದಿದ್ದೆ ಇಲ್ವಂತೆ ಹೌದಾ?
ಹ್ಹಹ್ಹಹ್ಹ… ನಿಜ. ಕಳೆದ 30 ವರ್ಷಗಳಿಂದ ನಾನು ಒಮ್ಮೆಯೂ ಅಂಗಡಿಯಿಂದ ಅಕ್ಕಿ ತಂದ ನೆನಪಿಲ್ಲ. ಮನೆಯಲ್ಲಿ ಅಂಗಡಿ ಅಕ್ಕಿ ಊಟ ಮಾಡಿದ ದಿನಗಳೇ ಇಲ್ಲ. ಬೇಸಾಯದಿಂದ ಸಿಗುವ ಅಕ್ಕಿಯಿಂದಲೇ ನಮ್ಮ ಮೂರು ಮನೆ ನಿರ್ವಹಣೆಯಾಗುತ್ತಿದೆ. ಮತ್ತೊಂದು ವಿಷಯವೆಂದರೆ ಮಡಿಕೇರಿ ಕಜೆ ತಳಿಯ ಅಕ್ಕಿ ಊಟ ಮಾಡಲು ತುಂಬಾ ರುಚಿ ಇರುತ್ತದೆ. ಇದರ ಅನ್ನ ದೊಡ್ಡದಾಗಿದ್ದು ಸ್ವಲ್ಪ ಊಟ ಮಾಡಿದರೂ ಹೊಟ್ಟೆ ತುಂಬುತ್ತದೆ. ಏನೇ ಹೇಳಿ ನಾವೇ ಬೆಳೆದ ಅಕ್ಕಿಯ ಅನ್ನಕ್ಕೂ ಅಂಗಡಿಯಿಂದ ತಂದ ಅಕ್ಕಿಯ ಅನ್ನಕ್ಕೂ ಬಹಳಷ್ಟು ವ್ಯತ್ಯಾಸವಿದೆ.
*  ನಿಮ್ಮ ಸಂಸಾರದ ಬಗ್ಗೆ …
ನಾನು ಬಡತನದಿಂದ ಮೇಲೆ ಬಂದವ. ನಮ್ಮ ಹಿರಿಯರು ಬೇಸಾಯ ಮಾಡಿಕೊಂಡಿದ್ದರು. ನನಗೆ ೪ ಗಂಡು ಹಾಗೂ ೫ ಮಂದಿ ಹೆಣ್ಣು ಮಕ್ಕಳು ಒಟ್ಟು ೯ ಮಂದಿ ಮಕ್ಕಳಿದ್ದಾರೆ. ಮಕ್ಕಳೆಲ್ಲ ಅವರವರ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಗದ್ದೆ ಬೇಸಾಯಕ್ಕೆ ಒಂದಿಷ್ಟು ಸಹಾಯ ಮಾಡುತ್ತಾರೆ. ಪತ್ನಿ ಬೀಪಾತುಮ್ಮಳೊಂದಿಗೆ ಆಲಂಬಾಡಿಯಲ್ಲಿ ವಾಸ್ತವ್ಯವಿದ್ದೇನೆ.
*  ಯುವ ಜನತೆಗೆ ನಿಮ್ಮ ಕಿವಿ ಮಾತು…
ಯುವ ಜನತೆಗೆ ನಾನು ಏನನ್ನು ಹೇಳುವುದು. ನಾನೊಬ್ಬ ೮೮ರ ವೃದ್ಧ. ಚಿಕ್ಕಂದಿನಲ್ಲೇ ಬೇಸಾಯದ ಪ್ರೀತಿ ಬೆಳೆಸಿಕೊಂಡವ. ಆದರೆ ಇಂದಿನ ಯುವಜನಾಂಗಕ್ಕೆ ಕೆಸರು ಮೆತ್ತಿಕೊಳ್ಳುವುದು ಎಲ್ಲಿ ಇಷ್ಟವಾಗುತ್ತೆ. ಎಲ್ಲರಿಗೂ ವೈಟ್ ಕಾಲರ್ ಜಾಬ್ ಬೇಕು. ಆದರೆ ಒಂದು ಮಾತು ಹೇಳುತ್ತೇನೆ. ಭತ್ತದ ಕೃಷಿ ಮಾಡಿದರೆ ಒಳ್ಳೆಯ ಸಾವಯವ ಅಕ್ಕಿ ಪಡೆಯಬಹುದು. ನಮಗೆ ಬೇಕಾದ ಅಕ್ಕಿಯನ್ನು ನಾವೇ ಬೆಳೆಯಬಹುದಾಗಿದೆ ಎಂಬುದಕ್ಕೆ ನಾನೇ ಉದಾಹರಣೆ. ಯುವ ಜನತೆ ಗದ್ದೆ ಬೇಸಾಯದತ್ತ ಮನಸ್ಸು ಮಾಡಬೇಕಾಗಿದೆ. ಅದೆಷ್ಟೋ ಕಡೆಗಳಲ್ಲಿ ಗದ್ದೆಗಳು ಅಡೀಲು ಬಿದ್ದಿವೆ. ಅವುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಭತ್ತ ಕೃಷಿ ಮಾಡಬೇಕು. ಅಳಿದು ಹೋಗುತ್ತಿರುವ ಭತ್ತ ಬೇಸಾಯ ಮತ್ತೆ ಜೀವ ಪಡೆದುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಜನತೆ ಮನಸ್ಸು ಮಾಡಬೇಕು ಎಂಬುದು ನನ್ನ ಮನವಿ. ಆಲಂಬಾಡಿ ಆದಂ ಕುಂಞಯವರನ್ನು ಸಂಪರ್ಕಿಸಲು ಅವರ ಮೊಬೈಲ್ ಸಂಖ್ಯೆ 9632738263 ಗೆ ಕರೆ ಮಾಡಬಹುದಾಗಿದೆ.
“ನನ್ನ ಅಜ್ಜ ಆದಂಕುಂಞಯವರು ತನ್ನ ೮೮ರ ವಯಸ್ಸಿನಲ್ಲೂ ಭತ್ತದ ಕೃಷಿ ಮಾಡುತ್ತಿರುವುದು ನಮಗೆ ಹೆಮ್ಮೆ ತಂದಿದೆ. ಚಿಕ್ಕಪ್ಪ ನೈಕ್ ಎಂಬವರಿಂದ ಗದ್ದೆಯನ್ನು ಪಡೆದುಕೊಂಡು ಅದರಲ್ಲಿ ನೇಜಿ ನಾಟಿ ಮಾಡುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿ. ಕೃಷಿ ಇಲಾಖೆ ಇವರ ಬಗ್ಗೆ ಗಮನಹರಿಸಬೇಕಾಗಿದೆ. ಜಾಹೀರಾತುನಲ್ಲಿ ಭತ್ತದ ಕೃಷಿಗೆ ಬೆಂಬಲ ಕೊಡುತ್ತೇವೆ ಎಂದು ಹೇಳಿದರೆ ಸಾಲದು ನಿಜವಾದ ಕೃಷಿಕನನ್ನು ಹುಡುಕಿ ಗೌರವಿಸಿ, ಅವರಿಗೆ ಸಹಾಯಧನ ನೀಡಬೇಕಾದ ಅಗತ್ಯತೆ ಇದೆ.” – ರಫೀಕ್ ಅಲ್‌ರಾಯ, ಕುಂಬ್ರ ಹೋಟೆಲ್ ಉದ್ಯಮಿ

@ ಸಿಶೇ ಕಜೆಮಾರ್

ಜಾಹೀರಾತು
ಜಾಹೀರಾತು

———————————————————————————————

ಅಡಿಕೆ, ರಬ್ಬರ್ ಧಾರಣೆ ಕುಸಿತಕ್ಕೆ ಚಿಂತಿಸದಿರಿ, ಲಾಭದಾಯಕ ರಂಬೂಟಾನ್ ಹಣ್ಣು ಬೆಳೆಯಿರಿ
ದಕ. ಜಿಲ್ಲೆಯ ರೈತರು ದೊಡ್ಡ ಪ್ರಮಾಣದಲ್ಲಿ ಅಡಿಕೆ, ರಬ್ಬರ್ ವಾಣಿಜ್ಯ ಬೆಳೆಯ ಹಿಂದೆ ಬಿದ್ದು ಸಾಕಷ್ಟು ಕಷ್ಟ ನಷ್ಟ ಅನುಭವಿಸಿದ್ದಾರೆ. ರೈತನ ಜೀವನಧಾರಕ್ಕೆ ಬೇರೆ ಬೇರೆ ಬೆಳೆಗಳನ್ನು ಬೆಳೆಯುವ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಮತ್ತು ಮುಂದಿನ ದಿನಗಳಲ್ಲಿ ಹಣ್ಣು ಹಂಪಲುಗಳಿಗೆ ಭಾರಿ ಬೇಡಿಕೆ ಇದೆ. ಅಡಿಕೆಗೆ ಶಾಶ್ವತ ಮಾರುಕಟ್ಟೆ ಇಲ್ಲ, ಭವಿಷ್ಯತ್ತಿನ ದಿನಗಳಲ್ಲಿ ಅಡಿಕೆ ಬೆಳೆಯುವುದರಿಂದ ಗಂಡಾಂತರ ಎದುರಾಗಬಹುದು, ಒಂದು ಕಡೆಯಿಂದ ಹಳದಿ ರೋಗ ಸೇರಿದಂತೆ ವಿವಿಧ ಬಗೆಯ ರೋಗಗಳು, ದೇಶದಲ್ಲಿ ಎಲ್ಲಾ ರಾಜ್ಯಗಳು ಗುಟ್ಕಾ ನಿಷೇಧಕ್ಕೆ ಮುಂದಾಗಿರುವುದು ರೈತನಿಗೆ ಮುಂದಿನ ದಿನಗಳಲ್ಲಿ ಗಂಡಾಂತರ ಕಾದಿರುವ ಮುನ್ಸೂಚನೆ ಆಗಿದೆ. ಇಂತಹ ಪ್ರಸ್ತುತ ಸಮಯದಲ್ಲಿ ರೈತನ ಮನಸ್ಥಿತಿಯೂ ಬದಲಾಗಬೇಕು. ಮಿಶ್ರ ಬೆಳೆಗಳು, ಹಣ್ಣಿನ ಬೆಳೆಗಳನ್ನು ಬೆಳೆಯುವುದು ಒಂದು ರೈತನ ಉನ್ನತಿಗೆ ದಾರಿ.

ಲಾಭದಾಯಕ ಬೆಳೆ “ರಂಬುಟಾನ್
ಕೇರಳ, ಕರ್ನಾಟಕ ರಾಜ್ಯಗಳ ಬೇರೆ ಬೇರೆ ಜಿಲ್ಲೆಗಳಲ್ಲಿ ರಂಬುಟಾನ್ ಬೆಳೆ ಪ್ರಾರಂಭವಾಗಿದೆ. ಜಿಲ್ಲೆಯ ಕಾರ್ಕಳ, ಕರಾಯ, ಇನ್ನಿತರ ಹಲವಾರು ಕಡೆಗಳಲ್ಲಿ ರಂಬುಟಾನ್ ಹಣ್ಣಿನ ಬೆಳೆ ಪ್ರಾರಂಭವಾಗಿ ಏಳೆಂಟು ವರ್ಷ ಕಳೆದಿದೆ, ಈಗಾಗಲೇ ಕಡಬ, ಕೊಂಬಾರು ಸೇರಿದಂತೆ ಹಲವಾರು ಕಡೆಗಳಲ್ಲಿ ಈ ಹಣ್ಣಿನ ಬೆಳೆ ಪ್ರಾರಂಭವಾಗಿದೆ. ಅತ್ಯಂತ ಲಾಭದಾಯಕ ಮತ್ತು ಭಾರಿ ಬೇಡಿಕೆ ಇರುವ ಬೆಳೆಯೇ ರಂಬುಟಾನ್, ೧ ಎಕರೆ ಜಮೀನಿನಲ್ಲಿ ಸುಮಾರು ೧೮೦ ಗಿಡಗಳನ್ನು ಬೆಳೆಸಬಹುದು, ೩ ವರ್ಷದ ಒಳಗಡೆ ೮ ರಿಂದ ೧೦ ಲಕ್ಷ ರೂಪಾಯಿ ಇಳುವರಿ ತೆಗೆಯಬಹುದು ಎಂದು ಕೃಷಿಕರೋರ್ವರ ಅಭಿಪ್ರಾಯ, ಯಾವುದೇ ಕೀಟನಾಶಕವನ್ನು ಸಿಂಪಡನೆ ಮಾಡದೆ ಸಾವಯವ ಗೊಬ್ಬರ ಉಪಯೋಗಿಸುವ ಮೂಲಕ ಅತೀ ಸುಲಭ ವಿಧಾನದಲ್ಲಿ ಬೆಳೆ ತೆಗೆಯಬಹುದು.
ಉತ್ತಮ ಧಾರಣೆ: ಪ್ರಕೃತ ೧ ಕೆ.ಜಿ. ರಂಬುಟಾನ್‌ಗೆ ೨೦೦ ರಿಂದ ೨೫೦ ಧಾರಣೆ ಇದೆ. ಇದು ಆಹಾರ ಬೆಳೆ ಆಗಿರುವುದರಿಂದ ಈ ಹಣ್ಣಿನ ಬೆಳೆಗೆ ಉತ್ತಮ ಭವಿಷ್ಯತ್ ಇದೆ, ಮುಂದಿನ ದಿನಗಳಲ್ಲಿ ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇಲ್ಲ, ಧಾರಣೆಯಲ್ಲಿ ವ್ಯತ್ಯಾಸ ಆಗಬಹುದು. ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ರಂಬುಟಾನ್‌ಗೆ ಅತೀ ಹೆಚ್ಚು ಬೇಡಿಕೆ ಇದ್ದು ಈಗಾಗಲೇ ಬೇಡಿಕೆಯಲ್ಲಿ ೧೦ ಶೇ. ಮಾತ್ರ ಉತ್ಪತ್ತಿಯಾಗುತ್ತದೆ ಎಂದು ತಜ್ಞರ ಅಭಿಪ್ರಾಯ. ಭಾರತದಲ್ಲಿ ಕೂಡ ಈ ಹಣ್ಣಿಗೆ ಉತ್ತಮ ಬೇಡಿಕೆ ಇದ್ದು ಈ ಬೆಳೆ ಅಡಿಕೆ, ರಬ್ಬರ್ ಬೆಳೆಗೆ ಪರ್‍ಯಾಯ ಬೆಳೆಯಾಗಿ ಬೆಳೆಯಬಹುದು.
ಬೆಳೆಯುವ ವಿಧಾನ: ಒಂದೂವರೆ ವರ್ಷದ ರಂಬುಟಾನ್ ಕಸಿ ಗಿಡವನ್ನು ಅಗೆತ ಮಾಡಿದ ಭೂಮಿಯಲ್ಲಿ ೨೦/೨೦ ಅಳತೆಯಲ್ಲಿ ೨.೫ ಅಡಿಯಷ್ಟು ಗುಂಡಿಯಲ್ಲಿ ನೆಡಬೇಕು. ನೆಟ್ಟ ಬಳಿಕ ಭೂಮಿಗೆ ಸಮಾನಾಂತರಗೊಳಿಸಿ ಮಣ್ಣು ಹಾಕಬೇಕು, ಆದರೆ ಕಸಿ ಮಾಡಿದ ಭಾಗಕ್ಕೆ ಮಾತ್ರ ಮಣ್ಣು ತಾಗದಂತೆ ಎಚ್ಚರಿಕೆ ವಹಿಸಬೇಕು. ಈ ಗಿಡಗಳಿಗೆ ಕುರಿಗೊಬ್ಬರ, ಕೋಳಿ ಗೊಬ್ಬರ, ಸೊಪ್ಪುಗಳನ್ನು ಹಾಕಬಹುದು. ಗೆಲ್ಲು ಸಾಯುವ ರೋಗ ಬಂದರೆ ಎಂಡೋಪಿಲ್ ಎಂಬ ಔಷಧಿಯನ್ನು ಸಿಂಪಡನೆ ಮಾಡಬೇಕಾಗುತ್ತದೆ.
ನಿಸರ್ಗದತ್ತ ಫಲ: ರಂಬುಟಾನ್ ನಮ್ಮ ದೇಶದ ಹಣ್ಣು ಅಲ್ಲ, ಇಂಡೋನೇಷ್ಯದಲ್ಲಿ ಕಾಡಿನಲ್ಲಿ ಸಹಜವಾಗಿ ಬೆಳೆಯುವ ನಿಸರ್ಗದತ್ತ ಫಲ, ಮಲೇಷ್ಯದಲ್ಲೂ ಸಾಕಷ್ಟು ಬೆಳೆಯುತ್ತದೆ. ಉಷ್ಣ ವಲಯದ ಸಸ್ಯವಾಗಿರುವುರಿಂದ ಮ್ಯಾನ್ಮಾರ್, ವಿಯೆಟ್ನಾಂ, ಶ್ರೀಲಂಕಾ, ಭಾರತ ಮೊದಲಾದ ಕಡೆಗಳಲ್ಲೂ ಯಶಸ್ವಿಯಾಗಿ ಈ ಗಿಡಗಳು ಹಣ್ಣು ಕೊಡುತ್ತಿವೆ. ವೈಜ್ಞಾನಿಕವಾಗಿ “ನೆಫಿಲಿಯಂ ಲೆಪ್ಪಾಸಿಯಂ” ಎಂಬ ಹೆಸರಿರುವ ಅದು ಸಪಿಂಡೆಸಿಯೇ ಸಸ್ಯ ವರ್ಗಕ್ಕೆ ಸೇರಿದೆ, ನಿತ್ಯ ಹರಿದ್ವರ್ಣದಲ್ಲಿ ಮರ ೨೦ ಮೀಟರ್ ಬೆಳೆಯುತ್ತದೆ. ೧೫ ಸೆಂ. ಅಗಲ.೧೦ ಸೆಂ.ಮೀ ಉದ್ದವಿರುವ ಎಲೆಗಳು ಇರುತ್ತದೆ. ನೀಲಾವತಿ ಚಾಚಿದ ಕೊಂಬೆಗಳಲ್ಲಿ ಗೊಂಚಲು ಗೊಂಚಲಾಗಿ ಹಣ್ಣುಗಳಾಗುತ್ತದೆ. ಹಸುರಾದ ಕಾಯಿ ಮಾಗುತ್ತ ಬಂದ ಹಾಗೆ ಕೆಂಪು ಬಣ್ಣ ಆಗುತ್ತದಾದರೂ ಅಪರೂಪವಾಗಿ ಹಳದಿ ಮತ್ತು ಕಿತ್ತಾಳೆ ಬಣ್ಣದ ಹಣ್ಣಿನ ಜಾತಿಯೂ ಇದೆ. ಆದರೆ ಒಳಗಿನ ತಿರುಳಿನ ರುಚಿಯಲ್ಲಿ ಮಾತ್ರ ಯಾವುದೇ ವ್ಯತ್ಯಾಸವಿಲ್ಲ.
ಪೋಷಕಾಂಶಯುಕ್ತ ಸಿಹಿ ಸಿಹಿ ಹಣ್ಣು: ಮುಳ್ಳು ಮುಳ್ಳಾಗಿ ಆಕ್ಟೋಪಸ್‌ನಂತೆ ಕಾಣುವ ವಿಚಿತ್ರ ಹಣ್ಣಿನ ದಪ್ಪ ತೊಗಟೆಯನ್ನು ಒಡೆದರೆ ಒಳಗೆ ಮುತ್ತಿನಂತಿರುವ ಅಂಡಾಕೃತಿಯ ತಿರುಳಿದೆ. ಬೀಜದ ಸುತ್ತಲೂ ಹೊಂದಿಕೆಯಾಗಿರುವ ಬಿಳಿ ಬಣ್ಣದ ಈ ತಿರುಳಿನ ಪ್ರಮಾಣ ತೀರಾ ಅಲ್ಪವಾದರೂ, ನಸು ಹುಳಿ ಮಿಶ್ರಿತವಾಗಿ ತುಂಬಾ ಸಿಹಿ ಇದೆ. ಹಾಗೇಯೇ ತಿನ್ನಬಹುದು, ತಿರುಳನ್ನು ಮಿಲ್ಕ್ ಶೇಖ್, ಜಾಮ್, ಐಸ್ ಕ್ರೀಂ, ಜಲ್ಲಿ ಇದೆಲ್ಲ ತಯಾರಿಸಬಹುದು. ಪ್ರೋಟಿನ್, ಕೊಬ್ಬು, ಸುಣ್ಣ, ಮೆಗ್ನೇಶಿಯಂ, ರಂಜಕ, ಮ್ಯಾಂಗನಿಸ್, ಪೋಟಾಶಿಯಂ, ನಿಯಾಸಿನ್ ಮುಂತಾದ ದೇಹಾರೋಗ್ಯಕ್ಕೆ ಅನುಕೂಲವಾದ ಹೇರಳ ಪೋಷಕಾಂಶಗಳ ಜತೆಗೆ ಬಿ ಮತ್ತು ಸಿ. ಜೀವ ಸತ್ವಗಳಿವೆ. ತಿರುಳಿನ ಒಳಗಿರುವ ಬೀಜವನ್ನು ಕೂಡ ಹಾಗೆಯೇ ತಿನ್ನಬಹುದು. ಹಸಿ ಶೇಂಗದ ಹಾಗೆ ರುಚಿ ಇದೆ.
ಕಠಿಣ ನಿರ್ವಹಣೆ ಇಲ್ಲದೆ ಕೃಷಿ: ರಂಬುಟಾನ್ ಗಿಡಕ್ಕೆ ದೊಡ್ಡ ಪ್ರಮಾಣದ ಕೃಷಿ ನಿರ್ವಹಣೆ ಇರುವುದಿಲ್ಲ, ಬೇಸಿಗೆಯಲ್ಲಿ ಬುಡಕ್ಕೆ ನೀರು ಬೇಕು, ಸಾವಯವ ಗೊಬ್ಬರವೇ ಸಾಕು, ಫೆಬ್ರವರಿ ತಿಂಗಳಿನ ವೇಳೆ ಹೂ ಬಿಡುತ್ತದೆ, ಕೊಂಬೆಗಳಲ್ಲಿ ಕಾಯಿಗಳಾಗುತ್ತದೆ. ಕಾಯಿ ಹಣ್ಣಾಗಲು ೧೮ ವಾರ ಬೇಕಾಗುತ್ತದೆ. ಹಸಿರಾದ ಕಾಯಿ ಬಣ್ಣ ಬದಲಾಗುತ್ತಿರುವುದು ಪಕ್ವವಾಗುತ್ತಿರುವುದರ ಗುರುತು. ಜೂನ್ ತಿಂಗಳಿನಿಂದ 3 ತಿಂಗಳ ಕಾಲ ಹಣ್ಣಿನ ಸುಗ್ಗಿ, ಹಣ್ಣಿಗೆ ಕ್ರೀಮಿ ಕೀಟಗಳ ಹಾವಳಿ ಇಲ್ಲದಿದ್ದರೂ ಬಾವಲಿ ಮತ್ತು ಕೋತಿಗಳಿಂದ ರಕ್ಷಿಸಲು ಬಲೆಯಿಂದ ಮುಚ್ಚುವುದು ಅನಿವಾರ್‍ಯವಾಗುತ್ತದೆ. ಪ್ರಕೃತ ಮಂಗಳೂರು, ಬೆಂಗಳೂರು, ಚೆನ್ನೈಗಳಲ್ಲಿ ಮಾರುಕಟ್ಟೆ ಇದ್ದು, ದೊಡ್ಡ ಪ್ರಮಾಣದಲ್ಲಿ ಇಳುವರಿ ಬಂದಾಗ ಸ್ಥಳಕ್ಕೆ ಬಂದು ಖರೀದಿ ಮಾಡುವವರು ಇದ್ದಾರೆ.

@ ವಿಜಯಕುಮಾರ್ ಕಡಬ

———————————————————————————————

ರಾಜಕೀಯ ಜತೆಗೆ ಕೃಷಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿ.. ರಂಬೂಟಾನ್ ಹಣ್ಣಿನ ಗಿಡ ಬೆಳೆದಿರುವ ಕೃಷಿಕ ಕೃಷ್ಣಶೆಟ್ಟಿ ಕಡಬ

ಕೃಷ್ಣ ಶೆಟ್ಟಿ ಕಡಬ ಇವರು ಓರ್ವ ನಾಯಕತ್ವ ಗುಣವುಳ್ಳ ವ್ಯಕ್ತಿ, ಅಂತೆಯೇ ರಾಜಕೀಯ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡು ಹಲವಾರು ಜವಾಬ್ದಾರಿಯನ್ನು ನಿಭಾಯಿಸಿದವರು. ರಾಜಕೀಯ ಕ್ಷೇತ್ರದಲ್ಲಿ ತೊಡಗಿಸುವುದರ ಜತೆಗೆ ಕೃಷಿ ಚಟುವಟಿಯಲ್ಲೂ ಅಷ್ಟೆ ಮುಂಚೂಣಿಯಲ್ಲಿದ್ದಾರೆ. ಅವರ ಹಿರಿಯರ ಸುಮಾರು ೧೫ ಎಕರೆ ಕೃಷಿ ಜಮೀನಿನಲ್ಲಿ ಒಂದಲ್ಲ ಒಂದು ಬಗೆಯ ಕೃಷಿ ಮಾಡಿಕೊಂಡಿದ್ದಾರೆ. ಅಡಿಕೆ, ರಬ್ಬರ್, ತೆಂಗು ಮೊದಲಾದ ಕೃಷಿಯ ಜತೆಗೆ ಕಳೆದ ಒಂದೂವರೆ ವರ್ಷಗಳ ಹಿಂದೆ ತಮ್ಮ ಭೂಮಿಯಲ್ಲಿ ಸುಮಾರು ೫೫೦ ರಂಬುಟಾನ್ ಗಿಡಗಳನ್ನು ಬೆಳೆಸಿದ್ದಾರೆ. ರಂಬುಟಾನ್ ಕೃಷಿಯ ಬಗ್ಗೆ ಮಾಹಿತಿ ನೀಡಿದ ಅವರು ೫ ವರ್ಷಗಳ ಹಿಂದೆ ನನ್ನ ಮಿತ್ರರೊಬ್ಬರು ರಂಬುಟಾನ್ ಬೆಳೆಯ ಬಗ್ಗೆ ತಿಳಿಸಿದರು. ಈ ಹಿನ್ನಲೆಯಲ್ಲಿ ನಾನು ಎರಡೂವರೆ ವರ್ಷಗಳ ಹಿಂದೆ ಪರೀಕ್ಷಾರ್ಥವಾಗಿ ೨-೩ ಗಿಡಗಳನ್ನು ಬೆಳೆದಿದ್ದೇನೆ, ಆ ಗಿಡಗಳಲ್ಲಿ ಈಗಾಗಲೇ ಹಣ್ಣು ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಡಿಕೆ, ರಬ್ಬರ್ ಬೆಲೆಗಳ ಧಾರಣೆಯಲ್ಲಿ ಕುಸಿತ ಕಂಡು ಬಂದಾಗ ನಿಜವಾಗಿಯೂ ಬಹಳ ತೊಂದರೆಯಾಗುತ್ತಿದೆ, ಅಲ್ಲದೆ ವಾಣಿಜ್ಯ ಬೆಳೆಗಳ ನಿರ್ವಹಣೆಯೂ ಅಷ್ಟೆ ತ್ರಾಸದಾಯವಾಗಿರುತ್ತದೆ. ರಂಬುಟಾನ್ ಹಣ್ಣಿನ ಬೆಳೆಯಂತೆಯೇ ಲಿಚಿ, ಮ್ಯಾಮಗೋಸ್ಟಿನ್, ಬಟರ್‌ಪ್ರುಟ್ಸ್, ಡ್ರಾಗನ್‌ಫ್ರುಟ್ ಮೊದಲಾದ ಬೆಳೆಗಳನ್ನು ಬೆಳೆಯುವ ಮೂಲಕ ರೈತನು ಲಾಭದಾಯಕವಾಗಿ ಸುಖ ಜೀವನ ನಡೆಸಬಹುದು ಎಂದು ಕೃಷ್ಣ ಶೆಟ್ಟಿ ಅವರು ಹೇಳುತ್ತಾರೆ.
@ ವಿಜಯಕುಮಾರ್ ಕಡಬ

———————————————————————————————

ಸ್ವಾದಿಷ್ಟ ರುಚಿ ಶೀಘ್ರ ಫಸಲು ಅಧಿಕ ಇಳುವರಿ ಜಾಕ್ ಅನಿಲ್‌ರವರ `ನಿನ್ನಿಥಾಯಿ’ ಹಲಸು

ಪೆಲಕಾಯಿ. ಬಡವರ ಹಣ್ಣು ಎಂದೇ ಖ್ಯಾತಿಯಾಗಿರುವ ಹಲಸು ಮಲೆನಾಡಿನ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತವೆಯಾದರೂ ರುಚಿಯಾದ ಹಲಸು ಸಿಗುವುದು ಬಹಳ ಅಪರೂಪ. ಒಂದೇ ರೀತಿಯ ರುಚಿಯ ಹಣ್ಣು ನೀಡುವ ಹಲಸು ಬೆಳೆಸಿ ಹಲಸಿನ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿ ಜೀವನ ಸಾಗಿಸುವ ಅದೆಷ್ಟೋ ಮಂದಿ ಇದ್ದಾರೆ. ಹಲಸಿನ ಹಣ್ಣಿನಿಂದ ೩೦೦ ಕ್ಕೂ ಅಧಿಕ ಖಾದ್ಯಗಳನ್ನು ತಯಾರಿಸಬಹುದಾಗಿದೆ. ಸಾಮಾನ್ಯವಾಗಿ ಹಳ್ಳಿಯ ತೋಟಗಳಲ್ಲಿ ಬೆಳೆಯುವ ಹಲಸಿಗೂ ಸಂವರ್ಧಿತ ತಳಿಯ ಹಲಸಿಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಈ ದಿಶೆಯಲ್ಲಿ ನಡೆದಿರುವ ಪ್ರಯೋಗ ಯಶಸ್ವಿಯಾಗಿದ್ದು, ಕೈಗೆ ಎಟುಕುವಷ್ಟೇ ಎತ್ತರದಲ್ಲಿ ಕೊಯ್ಯುಬಹುದಾದ ಹಲಸಿನ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಹಲಸು ಕೃಷಿಯಲ್ಲಿ ಕಬಕ ವಿಟ್ಲ ರಸ್ತೆಯ ಅಳಕೆಮಜಲಿನಲ್ಲಿರುವ ನಿನ್ನಿಕಲ್ಲು ನರ್ಸರಿಯ ಜಾಕ್ ಅನಿಲ್‌ರವರು ಹೊಸ ಪ್ರಯೋಗ ಮಾಡಿದ್ದಾರೆ. ಕಸಿ ಹಲಸು ಗಿಡಗಳನ್ನು ಕರ್ನಾಟಕ, ಕೇರಳ ಸೇರಿದಂತೆ ದೇಶದ ನಾನಾ ಕಡೆ ರೈತರಿಗೆ ಹಾಗು ಕೃಷಿ ಇಲಾಖೆಗಳಿಗೆ ಸರಬರಾಜು ಮಾಡುತ್ತಿರುವ ನಿನ್ನಿಕಲ್ಲು ನರ್ಸರಿ, ಈಗ ಹೊಸ ಪ್ರಯೋಗದಲ್ಲೂ ಯಶಸ್ವಿಯಾಗಿದೆ. ಎತ್ತರಕ್ಕೆ ಬೆಳೆಯದೆ ಕೇವಲ ಆಳೆತ್ತರದಲ್ಲಿ ಬೆಳೆದು ನಿಲ್ಲುವ ಈ ಹಲಸಿನ ಮರ ಕೇವಲ ಎರಡು ವರ್ಷ ಪ್ರಾಯದಲ್ಲೇ ಹಣ್ಣು ನೀಡುತ್ತಿದ್ದು, ಇದೀಗಾಗಲೇ ಈ ಭಾಗದ ಹಲವರು ಈ ಗಿಡವನ್ನು ನೆಟ್ಟಿದ್ದು ಅದರಲ್ಲಿ ಫಲನೀಡುತ್ತಿದೆ.
`ನಿನ್ನಿಥಾಯಿ’ ತಳಿ ಅಭಿವೃದ್ಧಿ: ಥಾಲ್ಯಾಂಡ್ ದೇಶದಿಂದ ತಂದ ತಳಿಗಳ ಪೈಕಿ ಕೆಲವೊಂದು ತಳಿಯನ್ನು ಆಯ್ದು ಇಲ್ಲಿ ಪ್ರಯೋಗಕ್ಕೆ ಒಳಪಡಿಸಿ ಅಭಿವೃದ್ಧಿಪಡಿಸಲಾಗಿದೆ. ಕೈಗೆಟಕುವ ಎತ್ತರದಲ್ಲಿ ಬೆಳೆದ ಹಲಸು ತಿನ್ನಲು ಕೂಡ ರುಚಿಕರವಾಗಿದೆ ಎಂಬುದು ಅನುಭವಿಗಳ ಮಾತು. ನರ್ಸರಿಯ ರೂವಾರಿ ಜಾಕ್ ಅನಿಲ್ ಅವರ ಈ ಪ್ರಯೋಗದಿಂದ ನಗರ ಪ್ರದೇಶದ ಹಲಸು ಪ್ರಿಯರಿಗೆ ತುಂಬಾ ಅನುಕೂಲವಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಹಲಸಿನ ಗಿಡ ನೆಟ್ಟು ಮರ ಮಾಡಲು ಕಷ್ಟವಿಲ್ಲವಾದರೂ, ನಗರ ಪ್ರದೇಶದಲ್ಲಿ ಮರ ಬೆಳೆಸಲು ಕಷ್ಟ ಇಂಥವರಿಗೆ ಈ ಗಿಡ ಜಾತಿಯ ಮರ ತುಂಬಾ ಸಲೀಸು. ಒಂದೂವರೆ ವರ್ಷದಲ್ಲಿ ಫಸಲು ನೀಡಲಾರಂಭಿಸುತ್ತದೆ. ಥಾಲ್ಯಾಂಡ್ ಮತ್ತು ದೇಶಿ ತಳಿಯ ಸಂವರ್ಧಿತ ತಳಿಯಾಗಿರುವುದರಿಂದ ಇದನ್ನು `ನಿನ್ನಿಥಾಯಿ’ ಎಂದು ಹೆಸರಿಸಲಾಗಿದೆ.
ಚಂದ್ರ ಹಲಸು: ಕೆಂಪು ವರ್ಣದ ಹಲಸು ಇದಾಗಿದ್ದು ೩ ವರ್ಷದಲ್ಲಿ ಫಸಲು ನೀಡಲಾರಂಭಿಸುತ್ತದೆ.
ಹಲವಾರು ತಳಿಗಳ ಸಂರಕ್ಷಣೆ : ನಿನ್ನಿಕಲ್ಲು ಜಾಕ್ ಅನಿಲ್‌ರವರು ಕೆಂಪು ಬಣ್ಣದ ಚಂದ್ರ ಹಲಸು, ಹಲಸಿನ ಹಣ್ಣುಗಳಿಲ್ಲದ ಸಮಯದಲ್ಲಿ ಆಗುವ ಆಫ್‌ಸೀಸನ್ ಹಲಸುಗಳು ಸಹಿತ ೩೦ ಅಪರೂಪದ ಹಲಸು ತಳಿಗಳೂ ಸೇರಿದಂತೆ ಹಲವಾರು ಹಲಸು ತಳಿಗಳ ಸಂರಕ್ಷಣೆ ಮಾಡಿದ್ದಾರೆ. ಪತ್ರಕರ್ತ ಶ್ರೀಪಡ್ರೆ ಹಾಗು ಅಡಿಕೆ ಪತ್ರಿಕೆ ಬಳಗದಿಂದ ಕೆಲವು ವರ್ಷಗಳ ಹಿಂದೆ ದೊರೆತ ಪ್ರೇರಣೆಯನ್ನು ಸ್ಪೂರ್ತಿಯಾಗಿ ಬಳಸಿಕೊಂಡ ಜಾಕ್ ಅನಿಲ್‌ರವರು ಹಲಸಿನ ತಳಿಗಳ ಮೇಲೆ ಪ್ರಯೋಗ ಮಾಡಲಾರಂಭಿಸಿ ಯಶಸ್ಸು ಪಡೆದುಕೊಂಡರು. ಹಲಸು ಕಸಿಯಲ್ಲೂ ಇವರ ಪ್ರಯೋಗ ಫಲ ನೀಡಿತು. ಈಗ ದೇಶದಾದ್ಯಂತ ಕಸಿ ಹಲಸು ಗಿಡಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಇಲ್ಲಿನ ಮಣ್ಣಿಗೆ ಹೊಂದಿಕೊಳ್ಳುವ ಮತ್ತು ಗ್ರಾಹಕರಿಗೆ ಇಷ್ಟವಾಗುವ ಹಲಸು ಸಸಿಗಳನ್ನೇ ಹೆಚ್ಚಾಗಿ ಅಭಿವೃದ್ಧಿಗೊಳಿಸಿದ್ದಾರೆ. ಜಾಕ್ ಅನಿಲ್‌ರವರು ಹಲಸಿನ ಗಿಡಗಳನ್ನು ಕಸಿ ಕಟ್ಟುತ್ತಿರುವ ಹಾಗು ವಿವಿಧ ತಳಿಗಳನ್ನು ಸಂಶೋಧಿಸುತ್ತಿರುವುದನ್ನು ಗುರುತಿಸಿ ಉಭಯ ರಾಜ್ಯಗಳಲ್ಲಿ ಇವರಿಗೆ ಹಲವಾರು ಸನ್ಮಾನ, ಪುರಸ್ಕಾರಗಳು ಲಭಿಸಿದೆ. ಕೇರಳ ರಾಜ್ಯ `ಪನಸ ಸೇವಾ ಪುರಸ್ಕಾರ’ ನೀಡಿ ಗೌರವಿಸಿದ್ದಾರೆ. ಕೇರಳ ವಿವಿ, ಬಾಗಲಕೋಟೆ ವಿವಿ, ಬೆಂಗಳೂರು ಕೃಷಿ ವಿವಿ ಸೇರಿದಂತೆ ಹಲವು ವೈಜ್ಞಾನಿಕ ಕೃಷಿ ಅಧ್ಯಯನ ಕೇಂದ್ರಗಳಿಗೆ ಇವರಲ್ಲಿಂದ ಹಲಸಿನ ಸಸಿಗಳು ಪೂರೈಕೆಯಾಗಿವೆ. ಬಾಗಲಕೋಟೆ ವಿವಿಗೆ ಸುಮಾರು ೧೦೦ ವೆರೈಟಿ ಗಿಡಗಳನ್ನು ಪೂರೈಸಿದ್ದಾರೆ. ಮಾತ್ರವಲ್ಲದೇ ದೇಶದ ನಾನಾ ಕಡೆ ಹಲಸು ತಳಿ ಅಭಿವೃದ್ಧಿಯ ಅಧ್ಯಯನಕ್ಕಾಗಿ ಜಾಕ್ ಅನಿಲ್‌ರವರು ಪ್ರವಾಸ ಮಾಡುತ್ತಿರುತ್ತಾರೆ. ಇವರ ಹಲಸು ಗಿಡಗಳನ್ನು ಕಸಿ ಕಟ್ಟುವ ಸಂಖ್ಯೆ ಸುಮಾರು ಎರಡು ಲಕ್ಷಕ್ಕಿಂತಲೂ ಮೀರಿದೆ. ಇವರ ನರ್ಸರಿ ಸುಮಾರು ೪ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ.
ಹಲಸು ಅಧ್ಯಯನಕ್ಕಾಗಿ ಸನ್ಮಾನ : ಕೇರಳದಲ್ಲಿ ನಡೆದ ರಾಜ್ಯಮಟ್ಟದ ಹಲಸು ಮೇಳದಲ್ಲಿ ಕರ್ನಾಟಕದಲ್ಲಿ ಹಲಸು ತಳಿಯ ಅಧ್ಯಯನ ಮತ್ತು ಹಲಸು ಬೆಳೆಗೆ ಪ್ರೋತ್ಸಾಹ ನೀಡುತ್ತಿರುವ ನಿಟ್ಟಿನಲ್ಲಿ ಈರ್ವರನ್ನು ವಿಶೇಷವಾಗಿ ಸನ್ಮಾನಿಸಲಾಗಿದ್ದು, ಅದರಲ್ಲಿ ಶ್ರೀಪಡ್ರೆಯವರು ಓರ್ವರಾಗಿದ್ದು, ಜಾಕ್ ಅನಿಲ್‌ರವರು ಇನ್ನೋರ್ವರಾಗಿದ್ದಾರೆ. ಬಾಗಲಕೋಟೆ ವಿವಿ ಕುಲಪತಿಗಳ ಮಗನ ಮದುವೆಗೆ ಬಂದ ಮುಖ್ಯಮಂತ್ರಿ ಸಹಿತ ಗಣ್ಯಾತಿಗಣ್ಯರಿಗೆ ವಿತರಿಸಲು ಸುಮಾರು ೨೦೦೦ ಕ್ಕೂ ಅಧಿಕ ಹಲಸು ಗಿಡಗಳು ಇವರಲ್ಲಿಂದ ಪೂರೈಕೆಯಾಗಿವೆ. ಹೊಸಗುಂದ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಇವರಲ್ಲಿಂದ ೧೫೦೦೦ ಹಲಸು ಗಿಡಗಳು ಹೋಗಿವೆ.
ರಂಬುಟಾನ್ ಸಸಿಗಳು: ಕೇರಳದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಎನ್೧೮ ರಂಬುಟಾನ್ ಹಣ್ಣಿನ ಸಸಿಗಳು ಇವರ ನರ್ಸರಿಯಲ್ಲಿವೆ. ದ.ಕ. ಜಿಲ್ಲೆಯಲ್ಲಿ ರಂಬುಟಾನ್ ಹಣ್ಣನ್ನು ಎಕರೆಗಟ್ಟಲೆ ಪ್ರದೇಶದಲ್ಲಿ ಬೆಳೆಯಲು ಈಗಾಗಲೇ ಕೆಲ ರೈತರು ಮನಸ್ಸು ಮಾಡಿದ್ದು, ಅತ್ಯಂತ ಉತ್ತಮ ತಳಿಯಾದ ಕೇರಳ ರಂಬುಟಾನ್ ತಳಿ ಜಾಕ್ ಅನಿಲ್‌ರವರಲ್ಲಿದೆ.
ಹೈಬ್ರಿಡ್ ತೆಂಗು ಸಸಿಗಳು: ೩ ವರ್ಷದಲ್ಲಿಯೇ ಫಸಲು ನೀಡುವ `ಡೀಜೆ ಸಂಪೂರ್ಣ ತಳಿ ಸೇರಿದಂತೆ ಡ್ಠಿಟಿ ಹೈಬ್ರೀಡ್ ಗೆಂದಾಳಿ, ಸೀತಾಳಿ, ಕೂಂತ್ರಿ, ಇತ್ಯಾದಿ ಹೈಬ್ರಿಡ್ ತಳಿಗಳು ಇವರ ನರ್ಸರಿಯಲ್ಲಿ ಲಭ್ಯವಿದೆ.
ಮಾವು ಸಸಿಗಳು: ಅಧಿಕ ಫಸಲು ಮತ್ತು ರುಚಿಕರವಾದ ಮಲ್ಲಿಕಾ, ಕಾಲಪ್ಪಾಡಿ, ನೀಲಂ, ತೋತಾಪುರಿ, ಬಂಗಾನ್ ಪಲ್ಲಿ, ಅಲ್ಫೋನ್ಸಾ, ಕರ್ಪೂರ ಹಾಗೂ ಥಾಯ್ಲೆಂಡ್ ತಳಿಗಳು ಇಲ್ಲಿ ಲಭ್ಯವಿದೆ. ೧೨ ತಿಂಗಳೂ ಫಸಲು ಹಿಡಿಯುವ ಹೈಬ್ರಿಡ್ ಅಂಬಟೆ ಸಸಿಗಳೂ ಇಲ್ಲಿ ದೊರೆಯುತ್ತವೆ. ಮಾತ್ರವಲ್ಲದೇ ಎಲ್ಲಾ ಬಗೆಯ ತೋಟಗಾರಿಕಾ ಗಿಡಗಳು ಇವರ ನರ್ಸರಿಯಲ್ಲಿವೆ. ತಮ್ಮ ನರ್ಸರಿಗೆ ಬರುವವರಿಂದ ಹಾಗು ವಿವಿಧ ಕೃಷಿ ಮೇಳಗಳಿಂದಲೂ ಸಂಗ್ರಹಿಸಿದ ಅತ್ಯಪೂರ್ವ ಗಿಡಗಳ ಸಂಗ್ರಹವು ಜಾಕ್ ಅನಿಲ್‌ರವರ ಅಳಕೆಮಜಲುವಿನಲ್ಲಿರುವ ನಿನ್ನಿಕಲ್ಲು ನರ್ಸರಿಯಲ್ಲಿ ಲಭ್ಯವಿದೆ. ಕಬಕ-ವಿಟ್ಲ ರಸ್ತೆಯ ಅಳಕೆಮಜಲುವಿನಲ್ಲಿರುವ ನಿನ್ನಿಕಲ್ ನರ್ಸರಿ ರಸ್ತೆ ಬದಿಯಲ್ಲೆ ಇರುವುದರಿಂದ ಗ್ರಾಹಕರಿಗೆ ಮತ್ತಷ್ಟು ಉಪಕಾರಿಯಾಗಿದೆ. ಕಳೆದ ೨೦ ವರ್ಷಗಳಿಂದ ಇಲ್ಲಿರುವ ಜಾಕ್ ಅನಿಲ್‌ರವರು ಮೂಲತಃ ಕೇರಳದ ತಿರುವನಂತಪುರದವರಾಗಿದ್ದಾರೆ.
ಹೊರದೇಶದ ಹಣ್ಣಿನ ಗಿಡಗಳು ಲಭ್ಯ: ಹೊರದೇಶದಲ್ಲಿ ಬೆಳೆಯುವ ಜಬೋಟಿಕಾಬ, ಮಿರಾಕಲ್ ಫ್ರುಟ್ಸ್, ಲಾಂಗ್ ಸಾಟ್, ಲೋಂಗನ್ ಇತ್ಯಾದಿ ಹಣ್ಣಿನ ಗಿಡಗಳು ನರ್ಸರಿಯಲ್ಲಿ ಲಭ್ಯವಿದೆ. ಮುಖ್ಯವಾಗಿ ಇಂತಹ ಅಪರೂಪದ ಗಿಡಗಳನ್ನು ಶಾಲಾ ಮಕ್ಕಳಿಗೆ ನರ್ಸರಿಯಲ್ಲಿ ವೀಕ್ಷಣೆ ಮಾಡಲು ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ.

ನಿನ್ನಿಕಲ್ಲು ನರ್ಸರಿ:
ಕಬಕ ವಿಟ್ಲ ರಸ್ತೆಯ ಅಳಕೆಮಜಲಿನಲ್ಲಿರುವ ನಿನ್ನಿಕಲ್ ನರ್ಸರಿಯಲ್ಲಿ ಎಲ್ಲಾ ಬಗೆಯ ತೋಟಗಾರಿಕಾ, ಹಣ್ಣಿನ ಗಿಡಗಳು ಲಭ್ಯವಿದ್ದು, ಸ್ಥಳೀಯ ಮಣ್ಣಿನ ಗುಣಕ್ಕೆ ಹೊಂದಾಣಿಕೆಯಾಗುವ ರೀತಿಯಲ್ಲಿ ಸಂವರ್ಧನೆ ಮಾಡಿದ ಸಸಿಗಳು ಇವರ ವಿಶೇಷವಾಗಿದೆ. ಕೇರಳದ ಪ್ರಸಿದ್ಧ ಹೋಮ್ ಗ್ರೋನ್ ಕಂಪೆನಿಯ ರಂಬೂಟನ್ ಗಿಡ ಸಹಿತ ಇನ್ನಿತರ ಹಣ್ಣಿನ ಗಿಡಗಳು ನರ್ಸರಿಯಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಜಾಕ್ ಅನಿಲ್‌ರವರನ್ನು ಸಂಪರ್ಕಿಸಲು 9448778497ಗೆ ಕರೆ ಮಾಡಬಹುದಾಗಿದೆ.

ನಾನು ಸುಮಾರು 20 ಬಗೆಯ ಹಲಸಿನ ಗಿಡಗಳನ್ನು ಬೇರೆ ಬೇರೆ ಕಡೆಗಳಿಂದ ತಂದು ನೆಟ್ಟಿದ್ದು, ಅದರಲ್ಲಿ ನಿನ್ನಿಥಾಯಿ ಹಲಸು ಒಂದೂವರೆ ವರ್ಷದಲ್ಲಿ ಫಸಲು ನೀಡಿದೆ. ಉತ್ತಮ ಗುಣಮಟ್ಟ ಮತ್ತು ಸ್ಥಳೀಯವಾಗಿ ಬೆಳೆಯಬಲ್ಲ ಗಿಡವಾಗಿದೆ. ಇದರಲ್ಲಿ ಬೆಳೆದ ಹಣ್ಣು ಕೂಡಾ ಉತ್ತಮ ರುಚಿಯನ್ನು ಹೊಂದಿದ್ದು, ಪ್ರಶಂಸೆಗೆ ಒಳಗಾಗಿದೆ. – ಕತ್ರಿಬೈಲು ಡಾ. ಶ್ರೀಕುಮಾರ್

ಜಾಹೀರಾತು
ಜಾಹೀರಾತು

———————————————————————————————

ದಕ್ಷಿಣ ಕನ್ನಡ ಜಿಲ್ಲೆಯ ರೈತರ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ಜಿಲ್ಲೆಯಾದ್ಯಂತ ಹೆಚ್ಚಿನವರು ಬೆಳೆಯುತ್ತಾರೆ. ಅಡಕೆ ಕೊಯ್ಲು ಶುರುವಾದರೆ, ರಸ್ತೆಯ ಪಕ್ಕ, ಜಮೀನಿನ ಮೂಲೆಯಲ್ಲಿ ಬಿಸಾಡುವ ‘ಸಿಪ್ಪೆ ಬೆಳೆಗಾರರ ಪಾಲಿಗೆ ತ್ಯಾಜ್ಯ. ಆದರೆ, ಇದನ್ನೇ ಬಳಸಿ ಪೌಷ್ಟಿಕಾಂಶಯುಕ್ತ ಗೊಬ್ಬರ ತಯಾರಿಸಬಹುದಾಗಿದೆ. ಇದು ಹೇಗೆ ಅಂತೀರಾ? ಇಲ್ಲಿದೆ ನೋಡಿ ಆ ಬಗೆಗಿನ ಒಂದು ಸ್ಟೋರಿ.
ರಾಜ್ಯದಲ್ಲಿ ೨.೧೭ ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಅಡಕೆಯನ್ನು ಬೆಳೆಯುತ್ತಿದ್ದು, ೩.೨೪ ಲಕ್ಷ ಟನ್ ಅಡಕೆ ಉತ್ಪಾದಿಸಲಾಗುತ್ತಿದೆ. ಆದರೆ, ಈ ವೇಳೆ ಹಸಿ ಅಡಕೆ ಸುಲಿದಾಗ ಬಹಳ ದೊಡ್ಡ ಪ್ರಮಾಣದಲ್ಲಿ ಸಿಪ್ಪೆಯ ರಾಶಿಯೇ ನಿರ್ಮಾಣವಾಗುತ್ತದೆ. ಇದನ್ನು ವಿಲೇವಾರಿ ಮಾಡುವುದೇ ಬೆಳೆಗಾರರಿಗೆ ದೊಡ್ಡ ಸವಾಲು ಆಗಿರುತ್ತದೆ. ಕೆಲವೆಡೆ ಇದಕ್ಕೆ ಬೆಂಕಿ ಹಾಕಿ ಸುಡಲಾಗುತ್ತದೆ. ಇದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ) ಮಹತ್ವದ ಹೆಜ್ಜೆ ಇಟ್ಟಿದೆ. ಆದ್ದರಿಂದ ಇಂಥಹ ತ್ಯಾಜ್ಯವನ್ನು ಬಳಸಿಕೊಂಡು ಇದೀಗ ಗೊಬ್ಬರ ಮಾಡಲು ಹೊರಟಿದ್ದಾರೆ ರೈತರು. ಪ್ರತಿ ಹೆಕ್ಟೆರ್ ತೋಟದಲ್ಲಿ ೭೦೧೫ ಕೆಜಿ ಎಲೆ, ೩೭೫ ಕೆಜಿ ಗೊನೆ ಹಾಗೂ ೧೪೦೪ ಕೆಜಿ ಅಡಕೆ ಸಿಪ್ಪೆಯ ಅಂದಾಜು ಒಣ ತ್ಯಾಜ್ಯ ಲಭ್ಯ ಇರುತ್ತದೆ. ಇದರ ಮಹತ್ವ ಅರಿಯದೇ ಅನಾವಶ್ಯಕವಾಗಿ ರಸ್ತೆಯ ಬದಿ ಖಾಲಿ ಜಾಗದಲ್ಲಿ ಸುರಿಯಲಾಗುತ್ತದೆ. ಸರಿಯಾಗಿ ತ್ಯಾಜ್ಯ ವಿಲೇವಾರಿ ಆಗದೇ ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಜತೆಗೆ, ಸಿಪ್ಪೆಯು ನೀರು ಹೋಗುವ ಚರಂಡಿ, ಬಾವಿ, ಹೊಂಡ, ನದಿಗಳಲ್ಲಿ ಶೇಖರಣೆಯಾಗುತ್ತದೆ. ಇದೆಲ್ಲದ್ದಕ್ಕೂ `ಅಡಕೆ ಸಿಪ್ಪೆ ಗೊಬ್ಬರ’ ಪರಿಹಾರಾತ್ಮಕ ದಾರಿ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ಮೊದಲಿಗೆ ೨೦ ಅಡಿ, ೫ ಅಡಿ, ೫ ಅಡಿ ಅಳತೆಯ ತೊಟ್ಟಿಗಳನ್ನು ನಿರ್ಮಿಸಿಕೊಳ್ಳಬೇಕು. ಈ ತೊಟ್ಟಿಗಳಲ್ಲಿ ಒಣಗಿದ ಅಡಕೆಯ ಸಿಪ್ಪೆ ಹಾಗೂ ಇತರೆ ತ್ಯಾಜ್ಯಗಳನ್ನು ಹಾಕಬೇಕು. ೧೦ ಕೆಜಿ (ಪ್ಲೋರೊಟಸ್ ಸಾಜರ್‌ಕಾಜು: ಪೆನೆರೊಕೇಟೆ ಕ್ರೈಸೋಸ್ಟೋರಿಯಂ) ಸೂಕ್ಷ್ಮಾಣುಜೀವಿಗಳ ಸಂಕೀರ್ಣ, ೧೦ ಕೆಜಿ ಎರೆಹುಳು, ಒಂದು ಟ್ರ್ಯಾಕ್ಟರ್ ಕೆಂಪು ಮಣ್ಣು, ಹಾಗೂ ಸೆಗಣಿ. ಇವುಗಳನ್ನು ಹಾಕುವ ಮೂಲಕ ಐದಾರು ತಿಂಗಳಲ್ಲೇ ಗೊಬ್ಬರ ಪಡೆಯಬಹುದು. ಎಕರೆಗೆ ಸುಮಾರು ಒಂದೂವರೆಯಿಂದ ೨ ಟನ್ ಗೊಬ್ಬರ ತಯಾರಿಸಬಹುದಾಗಿದೆ. ಅಡಕೆ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ಗೊಬ್ಬರದ ಅಗತ್ಯ ಇರುವುದರಿಂದ ಸಾಕಷ್ಟು ಹಣ ವ್ಯಯವಾಗುವುದು ತಪ್ಪಲಿದೆ. ಈಗಾಗಲೇ ಶಿಕಾರಿಪುರ ಮತ್ತು ಸಾಗರದಲ್ಲಿ ಪ್ರಾಯೋಗಿಕವಾಗಿ ಇದನ್ನು ತಯಾರಿಸಲಾಗಿದ್ದು ಉಪಯುಕ್ತವಾದ ಗೊಬ್ಬರವಾಗಿದೆ ಎನ್ನುತ್ತಾರೆ ಕೃಷಿ ತಜ್ಞರು.
ಉಳಿದ ಗೊಬ್ಬರಕ್ಕಿಂತ ಹೇಗೆ ಭಿನ್ನವಾಗಿದೆ :
ಕೊಟ್ಟಿಗೆ ಗೊಬ್ಬರ ಮತ್ತು ಅಡಕೆ ಸಿಪ್ಪೆ ಗೊಬ್ಬರದಲ್ಲಿ ಕ್ರಮವಾಗಿ ಕಾರ್ಬನ್ ಮತ್ತು ನೈಟ್ರೋಜನ್ (೧೦:೧, ೨೦:೧), ನೈಟ್ರೋಜನ್ (೦.೫೬, ೦.೮೬), ಪ್ರಾಸ್ಟರಸ್ (೦.೨೫, ೦.೫೮), ಪೊಟಾಶಿಯಂ (೦.೩೭, ೧.೮೫), ಕಾರ್ಬನ್ (೨.೧, ೨.೬೭), ಸಾವಯವ ಇಂಗಾಲ (೧೦.೮, ೨೫.೭೫) ಹಾಗೂ ರಸಸಾರದ ಪ್ರಮಾಣ ೭.೮, ೭.೨ ಇರುತ್ತದೆ. ಕೊಟ್ಟಿಗೆ ಗೊಬ್ಬರಕ್ಕಿಂತ ಹೆಚ್ಚು ಪೋಷಕಾಂಶ ಇರುವುದರಿಂದ ಬೆಳೆಗಳಿಗೂ ಹೆಚ್ಚು ಉಪಯುಕ್ತ. ಇದರಲ್ಲಿ ನಾರಿನಾಂಶವೂ ಇರುವುದರಿಂದ ಅಡಕೆ ಬೆಳೆಗೆ ಹೇಳಿ ಮಾಡಿಸಿದ ಗೊಬ್ಬರ ಎನ್ನಬಹುದು. ಭೂಮಿಯಲ್ಲಿ ನೀರಿನಾಂಶ ಸಮೃದ್ಧವಾಗಿ ಇರಿಸುವಲ್ಲಿ ಅಡಿಕೆ ಸಿಪ್ಪೆ ಗೊಬ್ಬರ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂಬುದು ಕೃಷಿಪಂಡಿತರ ಮಾತಾಗಿದೆ.
ಅಡಿಕೆ ಸಿಪ್ಪೆ ಕಾಂಪೋಸ್ಟ್ ತಯಾರಿಸುವ ವಿಧಾನ :
೧. ಕಾಂಪೋಸ್ಟ್ ತಯಾರಿಕೆಗಾಗಿ ಭಾಗಶಃ ಒಣಗಿದ ಅಡಕೆ ಸಿಪ್ಪೆಯನ್ನು ಮಾತ್ರ ಉಪಯೋಗಿಸಬೇಕು. ಹಸಿ ಅಡಕೆಯನ್ನು ಸುಲಿದು ೨-೩ ತಿಂಗಳು ಸಿಪ್ಪೆಯನ್ನು ಒಣಗಿಸಬೇಕು. ಚಾಲಿ ಅಡಕೆ ನೇರವಾಗಿ ಉಪಯೋಗಿಸಬಹುದು.
೨ . ಗುಂಡಿಯ ತಳಭಾಗದಲ್ಲಿ ನೆಲದ ಮೇಲೆ ತೆಳುವಾಗಿ ಒಣ ಎಲೆ, ಸ್ವಲ್ಪ ಪ್ರಮಾಣದ ಕೆಂಪು ಮಣ್ಣು ಹರಡಿ, ಇದರ ಮೇಲೆ ೧/೩ ಭಾಗ ತುಂಬುವವರೆಗೆ ಅಡಕೆ ಸಿಪ್ಪೆ ತುಂಬಬೇಕು. ನಂತರ, ೧ ಕೆ.ಜಿ.ಸೂಕ್ಷ್ಮಜೀವಿಗಳ ಮಿಶ್ರಣ, ಒಂದು ಕೆಜಿ ಯೂರಿಯಾ ಹಾಕಿ, ಸಗಣಿ ಬಗ್ಗಡ ಸಿಂಪರಿಸಿ, ಪುನಃ ಎರಡು ಸಲ ೧/೩ ಭಾಗದಷ್ಟು ಅಡಕೆ ಸಿಪ್ಪೆ ತುಂಬಿ ಯೂರಿಯಾ, ಸೂಕ್ಷ್ಮಜೀವಿಗಳ ಮಿಶ್ರಣ, ಸೆಗಣಿ ಬಗ್ಗಡ ಹಾಕಿ ಮೇಲ್ಭಾಗವನ್ನು ತೆಂಗಿನ ಸೋಗಿಯಿಂದ ಮುಚ್ಚಬೇಕು. ಸಾಧ್ಯವಾದರೆ, ಚಪ್ಪರ ಮಾಡಿ ಸೂರ್ಯನ ಬಿಸಿಲು ಭಾಗಶಃ ಬೀಳುವಂತೆ ಮಾಡಬೇಕು.
೩. ೩ ದಿನಗಳಿಗೊಮ್ಮೆ ನೀರನ್ನು ಹಾಕಿ ತೇವಾಂಶ ಕಾಪಾಡಿಕೊಳ್ಳಬೇಕು. ತಿಂಗಳಿಗೊಮ್ಮೆ ೩ ತಿಂಗಳವರೆಗೆ ಗುದ್ದಲಿಯಿಂದ ಅಡಕೆಯಿಂದ ಅಡಕೆ ಸಿಪ್ಪೆಯನ್ನು ತಿರುವಬೇಕು.
೪. ೩ ತಿಂಗಳ ನಂತರ ಪ್ರತಿ ಗುಂಡಿಗೆ ೫ ಕೆಜಿ ಎರೆಹುಳುಗಳನ್ನು ಬಿಡಬೇಕು. ಪ್ರತಿವಾರ ತೆಳುವಾಗಿ ಸಗಣಿ ಬಗ್ಗಡ ಹಾಕಿ ಹಾಗೂ ತೇವಾಂಶ ಕಾಪಾಡಿಕೊಳ್ಳಬೇಕು. ಎರೆಹುಳು ಹಾಕಿದ ಬಳಿಕ ಯಾವುದೇ ರೀತಿಯ ಮಿಶ್ರಣ ಮಾಡಬಾರದು. ಮಳೆಗಾಲದಲ್ಲಿ ನೀರು ನಿಂತರೆ ಕೆಳಭಾಗದಲ್ಲಿ ಒಂದು ಪೈಪ್ ಹಾಕಿ ಹೆಚ್ಚಾದ ನೀರನ್ನು ತೆಗೆಯಬೇಕು. ಅಲ್ಲಿಗೆ ಕಾಂಪೋಸ್ಟ್ ಜಮೀನಿಗೆ ಹಾಕಲು ಸಿದ್ಧ.

@ ಸಿಶೇ ಕಜೆಮಾರ್


: ಪುರವಣಿ ನಿರ್ವಹಣೆ :
ಎನ್. ಮೋಹನ್ ಶೆಟ್ಟಿ ಉರುವಾಲು, ಶ್ರೇಯಸ್ ಸೂತ್ರಬೆಟ್ಟು