ಪುತ್ತೂರು: ತಾಲೂಕು ಪಂಚಾಯತ್ ಮತ್ತು ನಗರಸಭೆಯ ಮಾಜಿ ಸದಸ್ಯೆ ಝೊಹರಾ ನಿಸಾರ್ ಅಹಮ್ಮದ್ ಅವರು ಕಾಂಗ್ರೆಸ್ ಪಕ್ಷ ತೊರೆದು ಜಾತ್ಯಾತೀತ ಜನತಾದಳ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಝೊಹರಾ ನಿಸಾರ್ ಅಹಮ್ಮದ್ ಅವರು ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ, ಪುತ್ತೂರು ತಾಲೂಕು ಪಂಚಾಯತಿನ ಉಪ್ಪಿನಂಗಡಿ ಮತ್ತು ಕಬಕ ಕ್ಷೇತ್ರದ ಸದಸ್ಯರಾಗಿ, ಪುತ್ತೂರು ನಗರಸಭೆಯ ಸಾಮೆತ್ತಡ್ಕ ವಾರ್ಡ್ ಸದಸ್ಯೆಯಾಗಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಅಧ್ಯಕ್ಷರಾಗಿ, ಸ್ತ್ರೀಶಕ್ತಿ ಸಹಕಾರಿ ಸಂಘದ ಅಧ್ಯಕ್ಷರಾಗಿ, ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕಿಯಾಗಿ, ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಸದಸ್ಯರಾಗಿ, ಉಪ್ಪಿನಂಗಡಿ ಅರಫಾ ವಿದ್ಯಾ ಕೇಂದ್ರದ ನಿರ್ದೇಶಕಿಯಾಗಿ, ಮಹಿಳಾ ಸಾಂತ್ವನ ಕೇಂದ್ರದ ನಾಮನಿರ್ದೇಶಿತ ಸದಸ್ಯರಾಗಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನಾ ಶಿಬಿರದ ಕೌಟುಂಬಿಕ ಸಲಹೆಗಾರರಾಗಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡ ಅನುಭವವುಳ್ಳ ಝೊಹರಾ ನಿಸಾರ್ ಅಹಮ್ಮದ್ ಅವರು ಪುತ್ತೂರಿನ ಅಕ್ಷತಾ ಕೊಲೆ ಪ್ರಕರಣ, ರಾಮಕುಂಜ ಕುಂಡಾಜೆಯ ಶಮೀಮಾ ಕೊಲೆ ಪ್ರಕರಣ ಮತ್ತು ಕರಾಯದ ಮಹಿಳೆಯೊಬ್ಬರ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ನಡೆದಿದ್ದ ಬೃಹತ್ ಹೋರಾಟದ ಮುಂಚೂಣಿಯಲ್ಲಿದ್ದರು. ಇತ್ತೀಚೆಗೆ ಬಹುತೇಕವಾಗಿ ಕಾಂಗ್ರೆಸ್ ಪಕ್ಷದ ಚಟುವಟಿಕೆಯಲ್ಲಿ ತಟಸ್ಥರಾಗಿದ್ದ ಝೊಹರಾ ನಿಸಾರ್ ಅವರು
ಜೆಡಿಎಸ್ ರಾಷ್ಟ್ರೀಯ ವರಿಷ್ಠರಾದ ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರವರನ್ನು ಅವರ ಬೆಂಗಳೂರಿನ ಪದ್ಮನಾಭನಗರದ ನಿವಾಸದಲ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಬೆಂಗಳೂರು ಜೆಡಿಎಸ್ ಕಛೇರಿಯಲ್ಲಿ ಭೇಟಿಯಾಗಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ರಾಜ್ಯ ಜೆಡಿಎಸ್ ವಕ್ತಾರ ಎಂ.ಬಿ.ಸದಾಶಿವ ಸುಳ್ಯರವರ ಶಿಫಾರಸ್ಸಿನಂತೆ ಜೆಡಿಎಸ್ ಸೇರ್ಪಡಗೊಂಡ ಝೊಹರಾ ಅವರನ್ನು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಮತ್ತಿತರರು ಪಕ್ಷಕ್ಕೆ ಬರಮಾಡಿಕೊಂಡರು.
ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಶನಿವಾರಸಂತೆ ನಿವಾಸಿಯಾದ ಝೊಹರಾ ಅವರು ಬೆಂಗಳೂರಿನ ನಿಸಾರ್ ಅಹಮ್ಮದ್ ಅವರನ್ನು ವಿವಾಹವಾಗಿದ್ದರು. ಬಳಿಕ ಪುತ್ತೂರಿಗೆ ಆಗಮಿಸಿದ್ದ ಅವರು ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದರು. ಪುತ್ತೂರು ಸಾಮೆತ್ತಡ್ಕ ವಾರ್ಡ್ ಮತದಾರರಾಗಿರುವ ಝೊಹರಾ ನಿಸಾರ್ ಅವರು ಬೆಂಗಳೂರಿನಲ್ಲಿ ಮಗಳು ಶಬನಾ, ಅಳಿಯ ಕಬೀರ್ ಮಾನವ ಮತ್ತು ಮೊಮ್ಮಗ ಇಲನ್ ಅವರೊಂದಿಗೆ ವಾಸವಾಗಿದ್ದಾರೆ.