ಇರ್ದೆ ಗ್ರಾಮ

ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲ ಕ್ಷೇತ್ರ, ಇರ್ದೆ, ಪುತ್ತೂರು, ದ.ಕ. ಫೋನ್: 08251-288771

ಇರ್ದೆ ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಪಶ್ಚಿಮ ಭಾಗದಲ್ಲಿ ಚೆಲ್ಯಡ್ಕ, ಬೈಲಾಡಿ ಮತ್ತು ಬೆಟ್ಟಂಪಾಡಿ ನದಿಗಳು ಸೇರುವುದರಿಂದ ಇದೊಂದು ಪವಿತ್ರವಾದ ತ್ರಿವೇಣಿ ಸಂಗಮವಾಗಿದೆ. ಈ ತ್ರಿವೇಣಿ ಸಂಗಮಕ್ಕೆ ದೇವಾಲಯದ ಕೆಳಭಾಗದಿಂದ ಗುಪ್ತಗಾಮಿನಿಯಾಗಿ ಸೇರುವ ‘ವಿಷ್ಣುತೀರ್ಥ ನದಿಯ ದಡದಲ್ಲಿರುವ ಬಿಸಿನೀರ ‘ಬೆಂದ್ರ್‌ತೀರ್ಥ ಇವುಗಳ ಕೂಡುವಿಕೆಯೊಂದಿಗೆ ಪಂಚಮುಖಿ ತೀರ್ಥ ಕ್ಷೇತ್ರವೂ ಆಗಿದೆ. ಮುಂದೆ ಹರಿಯುವ ನದಿಯನ್ನು ಸೀರೆ ನದಿ ಅಥವಾ ವರದಾ ನದಿ ಎಂದು ಕರೆಯಲಾಗುತ್ತಿದೆ. ದೇವಾಲಯದ ಪಶ್ಚಿಮ ಭಾಗಕ್ಕೆ ನಂಬಿದವರ ಇಷ್ಟಾರ್ಥವನ್ನು ನಡೆಸಿಕೊಡುವ ತುಳುನಾಡ ಕಾರಣಿಕ ದೈವಗಳಾದ ‘ಶ್ರೀ ಪೂಮಾಣಿ-ಕಿನ್ನಿಮಾಣಿ, ರಾಜನ್ ದೈವಗಳ ಕದಿಕೆ ಚಾವಡಿ’ ಇದೆ. ಹೀಗೆ ಭಕ್ತರು ತೀರ್ಥಸ್ನಾನದಿಂದ ಪರಿಶುದ್ಧರಾಗಿ ಹರಕೆ, ಸೇವೆ ಒಪ್ಪಿಸಿ ತಮ್ಮ ಸಕಲ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸುವ ದೈವ ದೇವರ ಈ ಪವಿತ್ರ ನೆಲೆಯೆ ‘ಗೋಪಾಲ ಕ್ಷೇತ್ರ.
ಇರ್ದೆ-ಬೈಲಾಡಿ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಮತ್ತು ಪೂಮಾಣಿ ಕಿನ್ನಿಮಾಣಿ ದೈವಗಳ ಕದಿಕೆ ಚಾವಡಿಗೆ ಮಕರಮಾಸ ೧೦ರಂದು ಗೊನೆ ಕಡಿದು ವರ್ಷಾವಧಿ ಉತ್ಸವಗಳಿಗೆ ನಾಂದಿ ಹಾಕಲಾಗುವುದು.
ರಾಜ್ಯ ಹೆದ್ದಾರಿ, ಪುತ್ತೂರು ಸುಳ್ಯದ ಹಂಟ್ಯಾರಿನಿಂದ ೬ ಕಿ.ಮೀ. ದೂರದಲ್ಲಿ ಪಾಣಾಜೆ ಮಾರ್ಗದಲ್ಲಿ ಬಂದಾಗ ಬಲಕ್ಕೆ ಬೈಲಾಡಿಯಲ್ಲಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಮಹಾದ್ವಾರ, ೭೫ ಗಜ ಪಶ್ಚಿಮಕ್ಕೆ ಮನಮೋಹಕ ಚಕ್ರಧರ ವಿಷ್ಣುಮೂರ್ತಿಯ ಸುಂದರ ತಾಣ.
ಸಿಂಹಮಾಸದ ಅಮಾವಾಸ್ಯೆ ಎಳ್ಳಮಾವಾಸ್ಯೆಯಂತಹ ದಿನಗಳಲ್ಲಿ ಉಷಃಕಾಲದಲ್ಲಿ ಭಕ್ತರು ತೀರ್ಥ ಸ್ನಾನ ಮಾಡುವುದು. ಅಶ್ವತ್ಥಕಟ್ಟೆಯಲ್ಲಿ ಅರ್ಚಕರಿಂದ ದೇವತಾ ಪ್ರಸಾದ ಸ್ವೀಕರಿಸುವ ಪದ್ಧತಿ. ಹಾಗೆಯೇ ಉತ್ಸವದ ದಿನ ದೇವಸ್ಥಾನಕ್ಕೆ ಬೇಂದ್ರ್ ತೀರ್ಥವನ್ನು ವಿಷ್ಣುಮೂರ್ತಿಗೆ ಅಭಿಷೇಕಕ್ಕೆ ಕೊಂಡುಹೋಗಿ ಅಭಿಷೇಕ ಮಾಡುವುದು ವಾಡಿಕೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು-ವಿಠಲ ರೈ ಬಾಲ್ಯೊಟ್ಟುಗುತ್ತು, ಸದಸ್ಯರು-ಶಶಿಕುಮಾರ್ ರೈ ಬಾಲ್ಯೊಟ್ಟು, ರಾಧಾಕೃಷ್ಣ ರೈ ಆನಾಜೆ, ತುಕಾರಾಮ ಗೌಡ ರಂಗಯ್ಯಕಟ್ಟೆ, ಸರೋಜಿನಿ ಡಿ. ರೈ ಪಾಪನಡ್ಕ, ಬಾಲಕೃಷ್ಣ ಭಟ್ ಘಾಟೆ, ಅನಂತರಾಮ ಮಡುಕುಳ್ಳಾಯ, ಈಶ್ವರ ನಾಯ್ಕ

ಶ್ರೀ ಶಾಸ್ತಾವು ದೇವಸ್ಥಾನ ಬೈಲಾಡಿ, ಇರ್ದೆ, ಮೊ:  9449102937

ಬೆಂದ್ರ್‌ತೀರ್ಥ (ಬಿಸಿನೀರಿನ ಊಟೆ) ಅಷ್ಟೇ ಅಲ್ಲ ಇನ್ನೂ ಹಲವಾರು ವಿಶೇಷತೆಗಳನ್ನು ಹೊಂದಿರುವ ಗ್ರಾಮ ಇರ್ದೆ. ಬೆಂದ್ರ್‌ತೀರ್ಥದ ಪೂರ್ವಕ್ಕೆ ಇತಿಹಾಸ ಪ್ರಸಿದ್ಧ ಶ್ರೀ ವಿಷ್ಣುಮೂರ್ತಿ ದೇವಸ್ಥಾನ. ಪಶ್ಚಿಮಕ್ಕೆ ಮುಸಲ್ಮಾನರ ದರ್ಗಾ, ಪಕ್ಕದ ಬೈಲಾಡಿಯಲ್ಲಿ ಶ್ರೀ ಶಾಸ್ತಾವು ದೇವರು ನೆಲೆಯಾಗಿದ್ದಾರೆ. ಬೈಲಾಡಿ ಶ್ರೀ ಶಾಸ್ತಾವು ದೇವಸ್ಥಾನದ ಹಿನ್ನಲೆ ನೋಡಿದಾಗ ಆದಿಯಲ್ಲಿ ಬೈಲಾಡಿ ಶ್ರೀ ಶಾಸ್ತಾವು ದೇವರನ್ನು ಗುರುಕುಲದ ಆಚಾರ್ಯರು ಪೂಜಿಸುತ್ತಿದ್ದು, ನಂತರ ಜೈನರಾಜ ಮನೆತನದವರು ಪೂಜಿಸುತ್ತಿದ್ದರು ಎಂಬುದು ತಿಳಿದು ಬರುತ್ತದೆ. ಕಾಲಾನಂತರ ಬೈಲಾಡಿ ಮಡ್ಕುಳ್ಳಾಯ ವಂಶಜರು ಪೂಜಿಸುತ್ತಾ ಬಂದಿರುವ ಶ್ರೀ ಶಾಸ್ತಾವು ದೇವರನ್ನು ಅದೇ ವಂಶದ ಯೋಗಿಯೊಬ್ಬರು ಹಲವಾರು ವರ್ಷಗಳವರೆಗೆ ಪೂಜಿಸುತ್ತಾ ಬಂದರು. ಶ್ರೀ ಶಾಸ್ತಾವು ನದೀತೀರದ ಕಾಡಿನ ಮಧ್ಯೆ ಇದ್ದುದರಿಂದ “ವನಶಾಸ್ತಾರ”ನೆಂದೇ ಕರೆಯಲ್ಪಡುತ್ತಾನೆ. ಯೋಗಿಯ ಕಾಲಾನಂತರ ಶ್ರೀ ದೇವರಿಗೆ ಸಲ್ಲುತ್ತಿದ್ದ ಪೂಜೆ ಪುನಸ್ಕಾರಗಳು ನಿಂತುಹೋಗಿ ದೇವರ ಅಸ್ತಿತ್ವದ ಬಗ್ಗೆ ಕುರುಹು ಕೂಡಾ ಇಲ್ಲದಂತಾಗಿತ್ತು. ತನ್ನ ಆರಾಧ್ಯ ಮೂರ್ತಿಯ ಪರಿಸರದಲ್ಲೇ ಯೋಗಿಯೂ ಕೂಡಾ ಬ್ರಹ್ಮರಕ್ಷಸ್ಸು ರೂಪದಲ್ಲೇ ಸುತ್ತಾಡುತ್ತಿದ್ದನೆಂಬ ಬಗ್ಗೆಯೂ ನಂಬಿಕೆ ಇತ್ತು. ನಂತರ ಬೈಲಾಡಿ ಗೌಡ ಮನೆತನದವರು ನೋವಿನ ಎಣ್ಣೆ ಸಿದ್ಧಪಡಿಸುವ ವೃತ್ತಿಯನ್ನು ನಡೆಸುತ್ತಾ ಬಂದಿದ್ದು ಇಲ್ಲಿ ವಾಸ್ತವ್ಯವನ್ನು ಹೊಂದಿ ಈ ಮನೆತನದ ದಿ. ಕೊರಗ ಗೌಡರ ಕಾಲದಲ್ಲಿ ಅಂದರೆ ೧೯೩೮ರಲ್ಲಿ ಕಾಡುಗಳಿಂದ ತುಂಬಿದ್ದ ಈ ದೇವಸ್ಥಾನದ ಜಾಗವನ್ನು ಉತ್ಖನನಗೊಳಿಸಿದಾಗ ವಿವಿಧ ಅವಶೇಷಗಳು ಸಿಕ್ಕಿದ ನೆಲೆಯಲ್ಲಿ ಅಷ್ಟಮಂಗಲ ಪ್ರಶ್ನೆ ಕೇಳಿದಾಗ ಗತ ಇತಿಹಾಸವು ಬೆಳಕಿಗೆ ಬಂತು. ನಂತರ ವೇದಮೂರ್ತಿ ಗುಮ್ಮಟೆಗದ್ದೆ ನಾರಾಯಣ ಮರಡಿತ್ತಾಯರ ಮಾರ್ಗದರ್ಶನದಲ್ಲಿ ಅನುಕೂಲಕ್ಕೆ ತಕ್ಕಂತೆ ಶ್ರೀ ಶಾಸ್ತಾವು ದೇವಸ್ಥಾನವು ಪುನರ್ ಸ್ಥಾಪನೆಗೊಂಡಿತು. ಅಂದಿನಿಂದ ಬೈಲಾಡಿ ಮನೆತನದವರು ವಂಶ ಪಾರಂಪರ್ಯವಾಗಿ ಶ್ರೀ ದೇವರ ಪೂಜೆ, ಪುರಸ್ಕಾರಗಳನ್ನು ಶ್ರದ್ಧಾಪೂರ್ವಕವಾಗಿ ನಡೆಸುತ್ತಾ ಬಂದಿದ್ದಾರೆ. ಪ್ರತಿ ಶನಿವಾರ, ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಮಣಗಳಲ್ಲಿ ಪೂಜೆಗಳು ನಡೆಯುತ್ತಾ ಬಂದಿದ್ದು ಮಕರ ಸಂಕ್ರಮಣದಂದು ಶ್ರೀ ದೇವರ ವಿಶೇಷ ಉತ್ಸವ ನಡೆಯುತ್ತಾ ಇತ್ತು. ೧೯೯೮ರಲ್ಲಿ ಅಷ್ಟಮಂಗಲ ಚಿಂತನೆ ನಡೆಸಿ ಜೀರ್ಣೋದ್ಧಾರ ಕಾರ್‍ಯ ಹಾಗೂ ಶ್ರೀ ವನದುರ್ಗಾದೇವಿಯ ಸಾನಿಧ್ಯ ಸ್ಥಾಪಿಸಬೇಕು ಎಂದು ಕಂಡುಬಂದ ಹಿನ್ನಲೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್‍ಯ ನಡೆದು ೧೯೯೯ರಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ಕೇಶವ ತಂತ್ರಿಗಳ ನೇತೃತ್ವದಲ್ಲಿ ಪುನರ್‌ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ ನಡೆಯಿತು. ಪ್ರಸ್ತುತ ಶ್ರೀ ದೇವಳದಲ್ಲಿ ಪೂರ್ವಾಹ್ನ ನಿತ್ಯಪೂಜೆ, ಮಕರ ಸಂಕ್ರಮಣದಂದು ವಾರ್ಷಿಕ ಉತ್ಸವ, ಕುಂಭ ಮಾಸ ೧೯ರಂದು ಪ್ರತಿಷ್ಠಾ ವರ್ಧಂತಿ ಉತ್ಸವ, ನವರಾತ್ರಿಯ ಮೂಲ ನಕ್ಷತ್ರ ದಿನದಂದು ನವರಾತ್ರಿ ವಿಶೇಷ ಪೂಜೆ ನಡೆಯುತ್ತಾ ಇದೆ. ಶ್ರೀ ದೇವಳದಲ್ಲಿ ಪ್ರಾರ್ಥನೆ ಮಾಡಿ ಸೇವೆ ಸಲ್ಲಿಸಿದಲ್ಲಿ ಸಕಲ ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಈಡೇರುವುದಲ್ಲದೆ. ವಿಶೇಷವಾಗಿ ಶನಿ ದೋಷ ಪರಿಹಾರ, ಕಂಕಣಭಾಗ್ಯ, ಸಂತತಿ ಭಾಗ್ಯ, ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ೨೦೦೭ರಲ್ಲಿ ಬ್ರಹ್ಮಶ್ರೀ ನಾಗೇಶ ತಂತ್ರಿಗಳು ಮತ್ತು ಬ್ರಹ್ಮಶ್ರೀ ದಿನೇಶ ಮರಡಿತ್ತಾಯ ಗುಮ್ಮಟೆಗದ್ದೆ ಇವರ ನೇತೃತ್ವದಲ್ಲಿ ವನದುರ್ಗಾ ಬಿಂಬ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ನಡೆಯಿತು. ತದನಂತರ ಅಷ್ಟಬಂಧ ಪ್ರಶ್ನೆಯಲ್ಲಿ ಕಂಡು ಬಂದಂತೆ ದಿನಾಂಕ: ೦೯-೦೨-೨೦೧೪ರಲ್ಲಿ ಮತ್ತೆ ಅಷ್ಟಬಂಧ ಬ್ರಹ್ಮಕಲಶ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪ್ರಸ್ತುತ ಕುಟುಂಬದ ಹಿರಿಯ ಯಜಮಾನ ರಾಮಣ್ಣ ಗೌಡ ಬೈಲಾಡಿ, ಪಲ್ಲತ್ತಡ್ಕ ಇವರನ್ನು ಮುಂದಿಟ್ಟು ಕೊಂಡು ಶಶಿಕುಮಾರ್ ಬೈಲಾಡಿ ಅವರು ಆಡಳಿತ ಮೊಕ್ತೇಸರರಾಗಿ ದೇವಾಲಯದ ಕೆಲಸ ಕಾರ್‍ಯಗಳನ್ನು ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕೃಷ್ಣ ಮಡುಕ್ಕುಲ್ಲಾಯರವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-

* ಶ್ರೀ ಪೂಮಾಣಿ – ಕಿನ್ನಿಮಾಣಿ ದೈವಗಳ ಕದಿಕೆ ಚಾವಡಿ ಬೆಂದ್ರ್ ತೀರ್ಥ ಇರ್ದೆ ಪುತ್ತೂರು ದ.ಕ-574259, 08251-288771, 9449104399
* ಶ್ರೀ ಉಳ್ಳಾಕ್ಲು, ಮಹಿಷಂದಾಯ, ಶ್ರೀ ಸತ್ಯದೇವತೆ, ಕಲ್ಕುಡ ದೈವಸ್ಥಾನ ಇರ್ದೆ ಬೆಟ್ಟಂಪಾಡಿ, (ರಾಮಣ್ಣ ಪೂಜಾರಿ) 288434, 9449282776
* ಶ್ರೀ ಇರ್ದೆ ಗೋಳಿಪದವು ಭಜನಾ ಮಂದಿರ (ಸುಂದರ) 9880661048
* ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ಕುಂಞಮಲೆ ದರ್ಭೆ, ಇರ್ದೆ (ಡಿ. ಶಂಭು ಭಟ್) 9449554050
* ಪಂಜೊಟ್ಟು ತರವಾಡು ದೈವಸ್ಥಾನ ಪಂಜೊಟ್ಟು, ಇರ್ದೆ – ಗಣೇಶ ರೈ ಆನಾಜೆ