ಕೆಯ್ಯೂರು ಗ್ರಾಮ

ಶ್ರೀ ದುರ್ಗಾಪರಮೇಶ್ವರಿ ಮಹಿಷಮರ್ಧಿನಿ ದೇವಸ್ಥಾನ, ಶ್ರೀ ಕ್ಷೇತ್ರ ಕೆಯ್ಯೂರು, ಫೋ: 08251-276327, 9164585373, 9686947408

ಪುತ್ತೂರು ಕುಂಬ್ರ ಬೆಳ್ಳಾರೆ ಸುಬ್ರಹ್ಮಣ್ಯ ರಸ್ತೆಯಲ್ಲಿ ಕುಂಬ್ರದಿಂದ ಬೆಳ್ಳಾರೆ ಮಾರ್ಗವಾಗಿ ಚಲಿಸಿದಾಗ 6 ಕಿ.ಮೀ. ದೂರದಲ್ಲಿ ಕೆಯ್ಯೂರು ಸಿಗುತ್ತದೆ. ಅಲ್ಲೇ ಬಲಬದಿಗೆ ಶ್ರೀದೇವಿಯ ಮಹಾದ್ವಾರವಿದೆ. ಅದರ ಮೂಲಕ ಒಂದು ಫರ್ಲಾಂಗ್ ದೂರ ಸಾಗಿದರೆ ಶ್ರೀದೇವಿಯ ಸನ್ನಿಧಿಯಿದೆ. ತುಳುನಾಡಿನ ಶಕ್ತಿ ಶೋಧನೆಯಲ್ಲಿ ಮುಖ್ಯವಾಗುವ ನೂರಾರು ದೇವಿಯರಲ್ಲಿ ಕೆಯ್ಯೂರಿನ ಶ್ರೀ ದುರ್ಗಾಪರಮೇಶ್ವರಿಯೂ ಒಬ್ಬಳು.
ಈ ದೇವಾಲಯ ಪೂರ್ವಾಭಿಮುಖವಾಗಿದ್ದು ಬಹುಶ ಇಡೀ ತಾಲೂಕಿನಲ್ಲಿ ಇಷ್ಟೊಂದು ಎತ್ತರದ ಪೀಠವಿರುವ ದೇವಸ್ಥಾನ ಇನ್ನೊಂದಿಲ್ಲ. ಪಾದ ಸಮೂಲವಾಗಿ ದರ್ಶನವೀಯುವ ಶ್ರೀ ದೇವಿಯದು ಮಂದಹಾಸದ ಮುಖ. ೧೯೦೬ರಲ್ಲಿ ದೇವಾಲಯದ ಹೊಸ ಕಟ್ಟಡ ನಿರ್ಮಾಣಗೊಂಡು ೧೯೦೭ರಲ್ಲಿ ಬ್ರಹ್ಮಕಲಶ ನಡೆದಿದೆ. ಪ್ರಸ್ತುತ ೨೦೦೬ ಮಾರ್ಚ್‌ನಲ್ಲಿ ಪುನಃಪ್ರತಿಷ್ಠಾ ಬ್ರಹ್ಮಕಲಶ ಉತ್ಸವ ನಡೆದಿದೆ. ಶ್ರೀ ಕ್ಷೇತ್ರದಲ್ಲಿ ಮುರಕ್ಕಲಿನ ನಾಗಬಿಂಬವಿದ್ದು, ಈ ನಾಗನ ಕಲ್ಲಿಗೆ ದೀರ್ಘ ಇತಿಹಾಸವಿದೆ. ಸಕಲ ದೇವರುಗಳ ಸಾನಿಧ್ಯವಿರುವ ಶ್ರೀ ಚಕ್ರ ಮೇರುಪ್ರಸ್ಥ ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠೆಗೊಂಡಿರುವುದು ಇಲ್ಲಿನ ಇನ್ನೊಂದು ವೈಶಿಷ್ಠ್ಯ. ಸುಮಾರು ೭ ದೈವಗಳು ಇಲ್ಲಿವೆ. ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಈ ಭೂತಗಣಗಳಿಗೆ ನಿಯತ ನೇಮ ಅರ್ಚನೆಗಳು ನಡೆಯುತ್ತವೆ.
ಇಲ್ಲಿಯವರೆಗೆ ಅಧ್ಯಕ್ಷರು – ಕೆ. ಮೋಹನ ರೈ ಓಲೆಮುಂಡೋವು, ಅರ್ಚಕ – ಶ್ರೀನಿವಾಸ ರಾವ್, ಸದಸ್ಯರು – ಬಾಬು ನೈಕ್, ಎಟ್ಯಡ್ಕ ದೇರ್ಲ, ಸುಶೀಲಾ ಸಿ. ಶೆಟ್ಟಿ ದೇವಿನಗರ, ಜಯಂತಿ ಎಸ್. ಭಂಡಾರಿ ಮಾಡಾವು, ಶಿವರಾಮ ರೈ ಬೊಳಿಕ್ಕಳ ಕಜೆ, ಕೆ. ತಾರಾನಾಥ ಕಂಪ, ಗುಡ್ಡಪ್ಪ ರೈ ಕೊರಿಕ್ಕಾರು, ರಮೇಶ ಗೌಡ ಉದ್ದೋಳೆ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಮಿತಿಯ ಆಡಳಿತಾವಧಿ ಮುಕ್ತಾಯವಾದುದರಿಂದ ಕೆಯ್ಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಜಿ.ಕೆ. ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತ್ತಡ್ಕ, ಫೋನ್: 272002 

ಪರಶುರಾಮನ ಸೃಷ್ಠಿ ತುಳುನಾಡು. ದೈವ ದೇವರುಗಳ ನೆಲೆವೀಡು. ಇಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ತನ್ನದೇ ಆದ ಇತಿಹಾಸ ಕಾರಣಿಕತೆ ಇದೆ. ಅಂತಹ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಪಲ್ಲತ್ತಡ್ಕ ಹೊಸಮ್ಮ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವ ಸಂಭ್ರಮ ಆಚರಣೆಯಾಗುತ್ತಿದೆ.
ಪ್ರಕೃತಿ ರಮಣೀಯವಾಗಿ ಕಂಗೊಳಿಸುತ್ತಿರುವ ಸುಂದರ ಪ್ರಶಾಂತ ಪರಿಸರದಲ್ಲಿ ನೆಲೆ ನಿಂತ ಶ್ರೀ ದುರ್ಗಾಪರಮೇಶ್ವರಿ ಈ ಪ್ರದೇಶದ ಅನುಗ್ರಹ ದೇವತೆ. ಇದು ದೇವತಾರಾಧನಾ ಕ್ಷೇತ್ರ. ಬಹುತೇಕ ದೈವ ದೇವರುಗಳು ನೆಲೆ ನಿಂತ ಮಾಡಗಳಿರುವ ಈ ಪರಿಸರಕ್ಕೆ ಮಾಡಾವು ಎಂಬ ಹೆಸರು ಬಂದಿರಬಹುದು. ಕಾಡುಮೇಡುಗಳ ಮಧ್ಯೆ ಹರಿಯುತ್ತಿರುವ ಹಳ್ಳದ ಪಕ್ಕದಲ್ಲಿರುವ ಮೈದಾನ ‘ಪಲ್ಲತ್ತಡ್ಕ’ದಲ್ಲಿ ನೆಲೆನಿಂತವಳೇ ಶ್ರೀ ಹೊಸಮ್ಮ ದೇವಿ.
ಹೀಗೆ ಬಂದಳು ದೇವಿ: ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಾಕಿಲ ಎಂಬುವುದು ಪಾರಂಪರಿಕ ಪ್ರಸಿದ್ಧಿ ಪಡೆದ ಮನೆತನ. ಅನಂತಾಡಿಯ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ದೀವಟಿಗೆ ಹಿಡಿದು ದಾರಿ ತೋರಿಸಿದ ಬಿಲ್ಲವ ಜಾತಿಯ ಸಾಲ್ಯಾನ್ ಕುಟುಂಬಸ್ಥರ ತರವಾಡು ಮನೆಯೇ ಈ ಬಾಕಿಲ. ಅಂದಿನ ಅಳಿಯ ಕಟ್ಟು ಕುಟುಂಬ ಪದ್ಧತಿಯ ಪ್ರಕಾರ ಗಂಡ ಮರಣ ಹೊಂದಿದಾಗ ಪತ್ನಿ ತನ್ನ ತವರು ಮನೆ ಸೇರಬೇಕಾಗಿತ್ತು. ಆ ಪ್ರಕಾರ ಬಾಕಿಲದಲ್ಲಿ ದೈವ ಭಕ್ತೆಯಾಗಿದ್ದ ಮಹಿಳೆಯೊಬ್ಬರು ತನ್ನ ಗಂಡ ಮರಣಹೊಂದಿದಾಗ ದೈವವನ್ನು ಸ್ಮರಿಸುತ್ತಾ ತವರು ಮನೆಗೆ ಹೊರಡಲು ಸಿದ್ದರಾದರು. ಆ ಸಂದರ್ಭದಲ್ಲಿ ಮನೆಯ ಹಿರಿಯರೊಬ್ಬರು ಆಕೆಯ ಗಂಡ ಕುಳಿತುಕೊಳ್ಳುತ್ತಿದ್ದ ಮರದ ಮಣೆಯನ್ನು ಆತನ ನೆನಪಿಗಾಗಿ ತನ್ನೊಂದಿಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದರು. ಅದರಂತೆ ಗಂಡನ ನೆನಪಿಗಾಗಿ ಆ ಮಣೆಯನ್ನು ದೈವ ಸಂಕಲ್ಪ ಮಾಡಿ ತನ್ನ ತವರು ಮನೆಗೆ ಕೊಂಡುಹೋದರಂತೆ. ಕೆಲವು ದಿವಸಗಳು ಕಳೆದಾಗ ತನ್ನ ತವರು ಮನೆಯಲ್ಲಿ ಕೆಲವೊಂದು ಅಲೌಕಿಕ ಸಂಜ್ಞೆಗಳು ಕಂಡು ಬಂದು ಪ್ರಶ್ನೆಯಲ್ಲಿ ಕೇಳಿದಾಗ ದೈವವು ತಾನು ತಂದ ಮಣೆಯೊಂದಿಗೆ ಬೆನ್ನು ಹತ್ತಿ ಬಂದಿರುವುದಾಗಿ ಮಾತ್ರವಲ್ಲದೆ ಅದನ್ನು ನಂಬಿ ಪರಿಪಾಲಿಸಬೇಕೆಂದು ತಿಳಿದುಬಂತು. ಮುಂದೆ ಅವರು ದೈವವನ್ನು ನಂಬಿಕೊಂಡು ತನ್ನ ಜೀವನ ಸಾಗಿಸಿದರು. ತದನಂತರ ಬೇರೆ ಬೇರೆ ಮನೆಗಳಲ್ಲಿ ಜೀವನ ಸಾಗಿಸಬೇಕಾದ ಸಂದಿಗ್ಧತೆ ಎದುರಾಗಿ ನಾಲ್ಕನೆಯ ಮನೆಯಾಗಿ ಪಲ್ಲತ್ತಡ್ಕಕ್ಕೆ ಬಂದರು. ಪಲ್ಲತ್ತಡ್ಕದಲ್ಲಿ ಆರಾಧನೆಗೊಳ್ಳುತ್ತಿದ್ದ ದೇವಿ ಕ್ಷೇತ್ರ ಸಾನಿಧ್ಯದಿಂದಲೋ ಅಥವಾ ಭಕ್ತರ ಕೇಳಿಕೆಯಿಂದಲೋ ಅಗಾಧವಾದ ಶಕ್ತಿ ದೇವತೆಯಾಗಿ ಮೂಡಿ ನಾಡಿನಾದ್ಯಂತ ಪ್ರಸಿದ್ದಿ ಪಡೆದಿದ್ದಾಳೆ.
ದೈವದ ಕಾರಣಿಕ: ಹೊಸಮ್ಮ ದೈವ ತನ್ನದೇ ಆದ ಕಾರಣಿಕ ಶಕ್ತಿ ಪಡೆದಿದ್ದಾಳೆ, ಇಲ್ಲಿಯ ಹೆಸರು ಹೇಳಿದರೆ ಸಕಲ ಸಂಕಷ್ಟ ದುರಿತಗಳು ನಿವಾರಣೆಯಾಗುತ್ತದೆ. ಸತ್ಯ, ಧರ್ಮ, ನ್ಯಾಯಕ್ಕೆ ಜಯ ದೊರೆಯುತ್ತದೆ. ಅಧರ್ಮ, ಅಸತ್ಯ, ಅನ್ಯಾಯಗಳ ವಿರುದ್ಧ ದೇವಿ ಉಗ್ರಳಾಗಿ ಶಪಿಸುತ್ತಾಳೆ. ಭಕ್ತವರ್ಗದ ಸಕಲ ಕಷ್ಟಗಳನ್ನೂ, ದಾರಿದ್ರ್ಯಗಳನ್ನೂ ನಿವಾರಣೆ ಮಾಡುವ ಮಹಾ ಶಕ್ತಿಯಾಗಿ, ಶಮಂತಕ ಮಣಿಯಾಗಿ ಭಕ್ತಿಯಿಂದ ಅಮ್ಮಾ… ಎಂದು ಕರೆದರೆ ತಕ್ಷಣ ಓ.. ಎಂದು ಓಗೊಡುವ ಪೂರ್ಣ ಚೈತನ್ಯಮಯಿಯಾದ ತಾಯಿಯಾಗಿ ಪಲ್ಲತ್ತಡ್ಕದಲ್ಲಿ ನೆಲೆಯಾಗಿರುವುದಾಗಿದೆ. ಪ್ರಸ್ತುತ ಪಲ್ಲತ್ತಡ್ಕ ರಾಮಪ್ಪ ಪೂಜಾರಿಯವರು ತನ್ನ ಕುಟುಂಬದ ಸದಸ್ಯರೊಂದಿಗೆ, ಆಡಳಿತ ಸಮಿತಿ ಅಧ್ಯಕ್ಷ ಎಸ್.ಬಿ. ಜಯರಾಮ ರೈ ಹಾಗೂ ಕಾರ್‍ಯದರ್ಶಿ ಗೋಪಾಲಕೃಷ್ಣ ಪೂಜಾರಿಯವರ ನೇತೃತ್ವದಲ್ಲಿ ವರ್ಷಂಪ್ರತಿ ನೇಮೋತ್ಸವ ಹಾಗೂ ಪ್ರತೀ ಸಂಕ್ರಮಣ ಪೂಜೆ, ನೈಮಿತ್ಯಾದಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಮೊಕ್ತೇಸರರು – ರಾಮಪ್ಪ ಪೂಜಾರಿ ಪಲ್ಲತ್ತಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು- ಎಸ್.ಬಿ. ಜಯರಾಮ ರೈ, ಕಾರ್ಯದರ್ಶಿ – ಗೋಪಾಲಕೃಷ್ಣ ಪೂಜಾರಿ ಮಾಡಾವು, ಫೋನ್ :08251 – 272002

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:

* ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನ ಕಣಿಯೂರು
* ಶ್ರೀ ಮಲರಾಯ ದೈವಸ್ಥಾನ ನಂಜೆ
* ಶ್ರೀ ಬ್ರಹ್ಮಬೈದರ್ಕಳ ನೇತ್ರಾವತಿ ಗರಡಿ ಪೂಂಜಿರೋಟು ಅಂಕತ್ತಡ್ಕ ಕೋಟಿ ಚೆನ್ನಯ ನಗರ, ಕೆಯ್ಯೂರು ಮಾಡಾವು
* ಶ್ರೀ ಧರ್ಮ ದೈವ ಶ್ರೀ ವರ್ಣರ ಪಂಜುರ್ಲಿ ಮತ್ತು ಕಲ್ಲುರ್ಟಿ ದೈವಸ್ಥಾನ ಸಣಂಗಳ ಮನೆ, ಕೆಯ್ಯೂರು ಗ್ರಾಮ, ಪುತ್ತೂರು 08251-272245
* ದೇರ್ಲ ಶ್ರೀ ಕ್ಷ್ಮೀ ವೆಂಕಟ್ರಮಣ ಮಠ
* ಶ್ರೀ ಸುಬ್ರಹ್ಮಣ್ಯ ದೇವರ ಮಠ ಬೊಳಿಕ್ಕಳ
* ಶ್ರೀ ಅಯ್ಯಪ್ಪ ಭಜನಾ ಮಂದಿರ ಮಾಡಾವು
* ಶ್ರೀ ಭಜನಾ ಮಂದಿರ ಕಣಿಯೂರು
* ಶ್ರೀ ಆಂಜನೇಯ ಗುಡಿ ಇಳಂತಾಜೆ
* ಶ್ರೀ ಚಾಮುಂಡಿ ಗುಡಿ ವಿಟ್ಯಡ್ಕ
* ಶ್ರೀ ಮಾರಿಯಮ್ಮ ಗುಡಿ ದೇರ್ಲ