ಕೊಂಬಾರು ಗ್ರಾಮ

ಕೂತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕೊಂಬಾರು, ಪುತ್ತೂರು, ದ.ಕ. ಮೊ: 9741504609

 ಪುತ್ತೂರು-ಉಪ್ಪಿನಂಗಡಿ-ಸುಬ್ರಹ್ಮಣ್ಯ ರಸ್ತೆಯಲ್ಲಿ ಬರುವ ನೆಟ್ಟಣ ಎಂಬಲ್ಲ್ಲಿಂದ ದಕ್ಷಿಣಕ್ಕೆ ಮೂರು ಮೈಲು ಹೋದರೆ ಕೊಂಬಾರು ಗ್ರಾಮ ಸಿಗುವುದು. ಅಲ್ಲಿನ ಕೂತೂರಿನಲ್ಲಿ ಅತೀ ಪುರಾತನವಾದ ಪಂಚಲಿಂಗೇಶ್ವರ ದೇವಾಲಯವಿದೆ ಅಥವಾ ಸುಬ್ರಹ್ಮಣ್ಯದಿಂದ ಗುಂಡ್ಯ-ಕೈಕಂಬ ಮಾರ್ಗವಾಗಿ ಧರ್ಮಸ್ಥಳ ರಸ್ತೆಯಲ್ಲಿ ಹೋದರೆ ಸುಬ್ರಹ್ಮಣ್ಯದಿಂದ ಸುಮಾರು ೧೪ ಕಿ.ಮೀ. ದೂರದಲ್ಲಿ ರಸ್ತೆ ಬದಿಯಲ್ಲಿ ಈ ದೇವಸ್ಥಾನ ಸಿಗುತ್ತದೆ. ದೇವಾಲಯದ ಸುತ್ತಲೂ ಅರಣ್ಯವಿದ್ದು, ದೇವಳದ ಮುಂಭಾಗದಲ್ಲಿ ನದಿಯೊಂದು ಹರಿಯುತ್ತಿದೆ.
ಪಂಚಲಿಂಗೇಶ್ವರ ದೇವಳದಲ್ಲಿ ಐದು ಲಿಂಗಗಳಿವೆ. ಪಂಚಲಿಂಗಗಳೂ ಲಿಂಗಾಕಾರವೇ ಆಗಿದ್ದು, ಅನುಕ್ರಮವಾಗಿ ಒಂದಕ್ಕಿಂತ ಒಂದು ಚಿಕ್ಕದಾಗಿವೆ ಮತ್ತು ಸುಂದರವಾಗಿವೆ.
ದೇವಾಲಯದಲ್ಲಿ ಗಣಪತಿ ಬಿಂಬವಿದೆ. ವೀರಭದ್ರ ಸ್ವಾಮಿಯ ಬಿಂಬವೂ ಜತೆಯಲ್ಲಿ ಕಂಡುಬರುತ್ತದೆ. ದೇವಾಲಯದ ಹೊರಭಾಗದಲ್ಲಿ ಮಹಾಕಾಳಿ ಕಟ್ಟೆ, ಪಶ್ಚಿಮ ಭಾಗದಲ್ಲಿ ಪುರುಷ ದೈವ, ಗುಳಿಗ ಸಾನಿಧ್ಯವೂ ಇದೆ.
ಪ್ರಥಮವಾಗಿ ಈ ದೇವಾಲಯದ ಆಡಳಿತವನ್ನು ಜೈನ ವಂಶದವರು ನಡೆಸುತ್ತಿದ್ದರೆಂದೂ, ತರುವಾಯ ದೇವಳ ಆಡಳಿತಕ್ಕಾಗಿ ಜೈನರಿಗೂ, ಶಿವಬ್ರಾಹ್ಮಣರಿಗೂ ಹೋರಾಟ ನಡೆದು ಅಧಿಕಾರ ಮತ್ತು ಅರ್ಚನೆ ಶಿವಬ್ರಾಹ್ಮಣರ ಕೈಗೆ ಹೋಯಿತೆಂದು ತಿಳಿದು ಬರುತ್ತದೆ. ಹೀಗೆ ಎಷ್ಟೋ ಕಾಲ ಬ್ರಾಹ್ಮಣರ ವಶವಿದ್ದ ದೇವಾಲಯ ಪ್ರಗತಿಯನ್ನು ಹೊಂದುತ್ತಾ ಸಾಗುತ್ತಿರಲು, ಈ ಭಾಗದಲ್ಲಿ ಲಿಂಗಾಯತರು ಪಿತೂರಿ ನಡೆಯಿಸಿದರು. ಆ ಕಾಲದಲ್ಲಿ ದೇವಾಲಯಗಳೇ ಊರಿನ ಮುಖ್ಯ ಕೇಂದ್ರವಾಗಿದ್ದು, ದೇವಾಲಯಗಳಿಗೆ ಜನರ ಮೇಲೆ ಪೂರ್ಣ ಹತೋಟಿ ಇರುತ್ತಿತ್ತು. ಬ್ರಾಹ್ಮಣರಿಗೂ, ಲಿಂಗಾಯತರಿಗೂ ಘರ್ಷಣೆ ಉಂಟಾಗಿ, ಬ್ರಾಹ್ಮಣ ಮೊಕ್ತೇಸರನೊಬ್ಬನ ಕೊಲೆಯೂ ನಡೆಯಿತು. ಅಲ್ಲಿಂದ ಅಧಿಕಾರ ಲಿಂಗಾಯತರಿಗಾಯಿತು. ಕೊಲೆಯಾದ ಬ್ರಾಹ್ಮಣ ಬ್ರಹ್ಮರಕ್ಷಸನಾಗಲು ಆಡಳಿತ ಕಸಿದುಕೊಂಡ ಲಿಂಗಾಯತ ರಾಜನ ಕುಟುಂಬವೆಲ್ಲಾ ಕಾಲಕ್ರಮೇಣ ನಾಶವಾಗುತ್ತಾ ಬಂತು. ಕೊನೆಗೆ ಲಿಂಗಯತ ಆಡಳಿತಗಾರರಲ್ಲಿ ಗಂಡು ಸಂತಾನ ಇಲ್ಲದಿರಲು ದೇವಾಲಯದ ಆಡಳಿತ ಲಿಂಗಾಯತ ಸ್ತ್ರೀಯೊಬ್ಬಳ ಕೈಗೆ ಬಂತು. ಆಕೆಗೂ ಗಂಡು ಸಂತಾನವಿಲ್ಲದಿರಲು ಸಮೀಪವಿದ್ದ ಗೌಡ ಮನೆತನದ ಓರ್ವ ಬಾಲಕನನ್ನು ದತ್ತು ಸ್ವೀಕಾರ ಮಾಡಿಕೊಂಡಳೆಂದೂ ತಿಳಿದುಬರುತ್ತದೆ. ಅಂದಿನಿಂದ ಈವರೇಗೂ ಕೂತೂರು ಶ್ರೀ ಪಂಚಲಿಂಗೇಶ್ವರ ದೇವರ ಮೊಕ್ತೇಸರಿಕೆಯು ಗೌಡರ ಕೈಯಲ್ಲಿದೆ.
ಆಡಳಿತ ಮೊಕ್ತೇಸರ – ಸುಬ್ರಾಯ ಗೌಡ ಕೂತೂರು, ಅಧ್ಯಕ್ಷರು – ಗುಡ್ಡಪ್ಪ ಗೌಡ ಕೂತೂರು, ಗೌರವಾಧ್ಯಕ್ಷರು – ಕೈಕುರೆ ಕುಶಾಲಪ್ಪ ಗೌಡ.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಬೋಳ್ನಡ್ಕ-ಕೊಂಬಾರು, ಅಂಚೆ : ಕೊಂಬಾರು – 574 230, ಪುತ್ತೂರು ತಾಲೂಕು, ದ.ಕ.


ಕಡಬ ಸುಬ್ರಹ್ಮಣ್ಯ ರಸ್ತೆಯ ಸುಂಕದಕಟ್ಟೆ ಎಂಬಲ್ಲಿಂದ ೩ ಕಿ.ಮೀ. ದೂರದಲ್ಲಿಯೂ, ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಕೆಂಜಾಳ ಎಂಬಲ್ಲಿಂದ ೧ ಕಿ.ಮೀ. ದೂರದಲ್ಲಿರುವ ಸ್ಥಳವೇ ಬೋಳ್ನಡ್ಕ. ಶ್ರೀ ದುರ್ಗಾಪರಮೇಶ್ವರಿ ದೇವಿ ಇಲ್ಲಿನ ಅಧಿದೇವತೆ.
ಸ್ಥಳ ಪುರಾಣ: (ಸುಮಾರು ಒಂದು ಸಾವಿರ ವರ್ಷಗಳ ಪುರಾತನದ್ದಾಗಿದ್ದು) ಪ್ರಕೃತ ಶ್ರೀ ದುರ್ಗಾಪರಮೇಶ್ವರಿ ದೇವಾಲಯ ನೈರುತ್ಯ ದಿಕ್ಕಿನಲ್ಲಿ ಇರುವ ಕಮಾರ್ಕಜೆಯ ಮಠ ಎಂಬ ಸ್ಥಳದಲ್ಲಿ ಸಾನಿಧ್ಯ ಹೊಂದಿದ್ದು, ಶ್ರೀ ದುರ್ಗಾಪರಮೇಶ್ವರಿ ಅಮ್ಮನವರನ್ನು ಒಲಿಸಿಕೊಳ್ಳಲು ಕೊಂಬಾರು ಮಲೆಯ ಮಂಚಮ ಎಂಬಲ್ಲಿ ಶ್ರೀ ಸಿದ್ಧಪ್ಪನೆಂಬ ಬ್ರಾಹ್ಮಣ ಭಕ್ತನೊಬ್ಬ ತಪಸ್ಸು ಆಚರಿಸುತ್ತಿದ್ದ. ಶ್ರೀ ದೇವಿಯ ಆರಾಧಕರಾದ ಅಣ್ಣ-ತಮ್ಮ ಉಳ್ಳಾಕ್ಲು ರಾಜರು ರಾಜ್ಯ ವಿಸ್ತರಣೆಗಾಗಿ ತುಳುನಾಡಿಗೆ ದಂಡೆತ್ತಿ ಬರುತ್ತಿರುವ ಸಂದರ್ಭ ಶ್ರೀ ದೇವಿಯ ಭಕ್ತ ಸಿದ್ಧಪ್ಪನನ್ನು ಅನ್ಯಥಾ ಗ್ರಹಿಸಿ ರುಂಡ ಚ್ಛೇದನ ಮಾಡಿದಾಗ ದೇವಿಯು ಪ್ರತ್ಯಕ್ಷಗೊಂಡು ಇತ್ತಂಡದವರೂ ತನ್ನ ಭಕ್ತರೆಂದು ತಿಳಿದು ಆಗಿರುವ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಸಿದ್ಧಪ್ಪನನ್ನು ದೇವರಾಗಿ ಕೊಂಬಾರು ಬೀಡುವಿನಲ್ಲಿ ನೆಲೆಗೊಳಿಸಿ ಆರಾಧಿಸುವಂತೆ ಉಳ್ಳಾಕ್ಲು ರಾಜರಿಗೆ ಅಭಯ ನೀಡಿದಳು. ಶ್ರೀ ದೇವಿಯ ಆದೇಶದಂತೆ ಕೊಂಬಾರು ಬೀಡುವಿನಲ್ಲಿ ಶ್ರೀ ಸಿದ್ಧಪ್ಪ ದೇವರನ್ನು ನೆಲೆಗೊಳಿಸಿ, ಪ್ರಪ್ರಥಮವಾಗಿ ಆರಾಧಿಸಿ, ನಂತರ ಬೀಡುವಿನಲ್ಲಿ ಉಳ್ಳಾಕ್ಲು ರಾಜರಿಗೆ ಪಟ್ಟಾಭಿಷೇಕ ನಡೆಯಿತು. ಬಚ್ಚನಾಯಕರು ಪಟ್ಟದ ಪ್ರಧಾನಿಯಾದರು. ನಂತರ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಉತ್ಸವ ನಡೆಸಲಾಯಿತು. ಕಾಲಾ ನಂತರ ಶ್ರೀ ದೇವಿಯ ಇಚ್ಚೆಯಂತೆ ಉಳ್ಳಾಕ್ಲು ಹಾಗೂ ಬಚ್ಚನಾಯಕರಿಗೆ ದೈವಸ್ಥಾನ ಪ್ರಾಪ್ತವಾಯಿತು.
ಹರಕೆ ಹೊತ್ತು ಮದುವೆಯಾಗದ ಕನ್ಯೆಯರಿಗೆ ಕಂಕಣಭಾಗ್ಯ, ಮಕ್ಕಳಿಲ್ಲದವರಿಗೆ ಸಂತತಿ ಭಾಗ್ಯ ಪ್ರಾಪ್ತವಾಗುತ್ತದೆ ಎಂಬುದು ಇಲ್ಲಿನ ಸ್ಥಳ ಮಹಾತ್ಮೆ. ಪ್ರಕೃತ ಚಾಂದ್ರಮಾನ ಯುಗಾದಿ ಪಾಡ್ಯದಿಂದ ಹುಣ್ಣಿಮೆಯವರೆಗೆ ೧೫ ದಿನಗಳ ಜಾತ್ರೋತ್ಸವ ನಡೆಯುತ್ತಿದೆ.
ಆಡಳಿತ ಮೊಕ್ತೇಸರರು: ಸುಬ್ರಾಯ ಗೌಡ, ಕಾರ್ತಿಕ್ ಗೌಡ, ಪುಟ್ಟಣ್ಣ ಗೌಡ, ಭಾಸ್ಕರ ರಾವ್, ಡೊಂಬಣ್ಣ ಗೌಡ, ಅಣ್ಣಯ್ಯ ಗೌಡ, ಮೋನಪ್ಪ ಗೌಡ, ಲಿಂಗಪ್ಪ ಗೌಡ, ಅಣ್ಣಪ್ಪ ಗೌಡ, ಅಧ್ಯಕ್ಷರು-ಚಿದಾನಂದ ಗೌಡ (ಮೊ: ೯೯೦೧೯೬೨೪೮೧), ಉಪಾಧ್ಯಕ್ಷರು-ವಿಶ್ವನಾಥ ಗೌಡ ಕೊಡಂಕಿರಿ, ಕಾರ್ಯದರ್ಶಿ-ಕೃಷ್ಣಪ್ಪ ಪೂಜಾರಿ ಕೊಂಬಾರು ಗದ್ದೆ, ಜತೆ ಕಾರ್ಯದರ್ಶಿ- ರಾಮಯ್ಯ ಗೌಡ ಕಮರ್ಕಜೆ, ಕೋಶಾಧಿಕಾರಿ-ಮಾಯಿಲಪ್ಪ ಗೌಡ ಕೊಂಬಾರುಗದ್ದೆ, ಸದಸ್ಯರು- ಕೃಷ್ಣಪ್ಪ ಗೌಡ ಪೊರ್ದೇಳು, ರೇಗಪ್ಪ ಗೌಡ ಕಮರ್‌ಕಜೆ, ಜನಾರ್ದನ ಪೂಜಾರಿ ಕಲ್ಲಗುಡ್ಡೆ, ಶೀನಪ್ಪ ಗೌಡ ಮಿತ್ತಬೈಲು, ಸೆಲ್ವಕುಮಾರ್ ಅಡ್ನಾರ್ ಸಿಆರ್‌ಸಿ ಬೊಳ್ನಡ್ಕ, ಸುಶೀಲ ಕೆಂಜಾಲ.