ಕೊಡಿಪ್ಪಾಡಿ ಗ್ರಾಮ

ಶ್ರೀ ಲಕ್ಷ್ಮೀ ಜನಾರ್ದನ ಕ್ಷೇತ್ರ, ಕೊಡಿಪ್ಪಾಡಿ ಅಂಚೆ, ಪುತ್ತೂರು ದ.ಕ.-574 220. ಫೋನ್: 08251-236999, 9741379398

ಪುತ್ತೂರು ಪೇಟೆಯ ಮಂಜಲ್ಪಡ್ಪುವಿನಿಂದ ಸುಮಾರು ಮೂರು ಕಿಲೋ ಮೀಟರ್ ದೂರ ಕ್ರಮಿಸಿದರೆ ಸಿಗುವ ಶ್ರೀ ಜನಾರ್ದನ ದೇವಸ್ಥಾನವು ವಿಟ್ಲ ಅರಸು ಮನೆತನದ ಆಳ್ವಿಕೆಗೆ ಒಳಪಟ್ಟ ದೇವಸ್ಥಾನದಲ್ಲೊಂದಾಗಿತ್ತು. ಈ ದೇವಸ್ಥಾನದಲ್ಲಿ ಆರಾಧಿಸಲ್ಪಡುವ ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿಯು ಜನಾರ್ದನ ಎಂಬ ಋಷಿಯಿಂದ ಪ್ರತಿಷ್ಠಾಪಿಸಲ್ಪಟ್ಟಿದ್ದು, ಈ ದೇವಸ್ಥಾನಕ್ಕೆ ಸರಿ ಸುಮಾರು ೩೦೦೦ ವರ್ಷಗಳ ಇತಿಹಾಸವಿರುವ ಕುರಿತು ಹಿರಿಯ ಸಂಶೋಧಕ ದಿ.ಗುರುರಾಜ ಭಟ್‌ರವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಚಾರ್ಯ ಮಧ್ವರು ಸುಮಾರು ೭೦೦ ವರ್ಷಗಳ ಹಿಂದೆ ಇಲ್ಲಿ ಚಾತುರ್ಮಾಸ ವೃತ ಕೈಗೊಂಡಿದ್ದರು. ಪ್ರತಿ ವರ್ಷ ಸಿಂಹ ಮಾಸದ ಅಮಾವಾಸ್ಯೆಯಂದು ಆಚಾರ್ಯ ಮಧ್ವರು ಗಂಗಾ ಸ್ನಾನ ಮಾಡುತ್ತಿದ್ದು ಇಲ್ಲಿ ಚಾತುರ್ಮಾಸ ವೃತ ಕೈಗೊಂಡ ಸಂದರ್ಭದಲ್ಲಿ ಗಂಗಾ ಸ್ನಾನ ಗೈಯಲು ಸಾಧ್ಯವಾಗಲಿಲ್ಲ. ಆಗ ಗಂಗಾಮಾತೆ ಅವರ ಕನಸಿನಲ್ಲಿ ಕಾಣಿಸಿಕೊಂಡು, ಶ್ರೀ ಜನಾರ್ದನ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ಕೆರೆಯ ಸಮೀಪವಿರುವ ಕುಂಡಿಗೆಯಲ್ಲಿ ಸಿಂಹಮಾಸದ ಅಮಾವಾಸ್ಯೆಯ ದಿನ ತಾನು ಹರಿದು ಬರುತ್ತೇನೆ, ಅದರಲ್ಲಿ ಸ್ನಾನ ಮಾಡಿ ಪವಿತ್ರನಾಗು ಎಂದು ಅಭಯವಿತ್ತಳು ಎಂಬ ಪ್ರತೀತಿ ಇದೆ. ಅದರಂತೆ ಪ್ರತೀ ವರ್ಷ ಅಮಾವಾಸ್ಯೆಯ ದಿನ ಇಲ್ಲಿ ತೀರ್ಥಸ್ನಾನ ನಡೆಯುತ್ತಿದ್ದು ಸಾವಿರಾರು ಜನರು ತೀರ್ಥಸ್ನಾನ ಮಾಡಿ ಕೃತಾರ್ಥರಾಗುತ್ತಿದ್ದಾರೆ. ಇಲ್ಲಿಯ ಕೆರೆಯ ನೀರಿಗೆ ಮೂಡೆ ಅಕ್ಕಿ ಸಮರ್ಪಿಸುವುದರಿಂದ ಹಲವು ನಮೂನೆಯ ಚರ್ಮವ್ಯಾಧಿಗಳು, ಕೆಡು, ಆಣಿ ಮೊದಲಾದುವುಗಳು ಗುಣಮುಖವಾಗುತ್ತವೆ. ಇಂದಿಗೂ ಊರ-ಪರವೂರ ಭಕ್ತಾದಿಗಳು ಬಂದು ತೀರ್ಥ ಸ್ನಾನಗೈಯುತ್ತಿರುವುದು ಇವೆಲ್ಲದಕ್ಕೆ ಸಾಕ್ಷಿಯಾಗಿದೆ.ದೇವಸ್ಥಾನದಲ್ಲಿ ಪ್ರಧಾನ ಆರಾಧ್ಯ ದೇವರು ಶ್ರೀ ಲಕ್ಷ್ಮೀಜನಾರ್ದನ ಸ್ವಾಮಿಯ ಜೊತೆಗೆ ಶ್ರೀ ಮಹಾಗಣಪತಿ, ಶ್ರೀ ಪಾರ್ಥಸಾರಥಿ ಶ್ರೀ ಶಾಸ್ತಾವು ದೇವರ ಗುಡಿ ಇದ್ದು, ಶ್ರೀ ಶಾಸ್ತಾವು ದೇವರು ವಿಗ್ರಹ ರೂಪದಲ್ಲಿ ಆರಾಧಿಸಲ್ಪಡುವ ಅಪರೂಪದ ದೇವಸ್ಥಾನವಾಗಿದೆ. ಜೊತೆಗೆ ನಾಗದೇವರು ಹಾಗೂ ಹುಲಿ ಭೂತದ ಸಾನಿಧ್ಯವಿದೆ. ದೇವಸ್ಥಾನದ ಪೂರ್ವಭಾಗದಲ್ಲಿ ಸ್ವಲ್ಪ ದೂರದಲ್ಲಿ ರಕ್ತೇಶ್ವರಿ ಹಾಗೂ ಗುಳಿಗ ದೈವದ ಸಾನಿಧ್ಯವಿದೆ. ಬಹಳ ಹಿಂದೆ ದೇವಾಲಯದ ಮುಂದಿನ ಅಂಗಣದಲ್ಲಿ ಉತ್ಸವ ನಡೆಯುತ್ತಿದ್ದಾಗ ಹಿಂಭಾಗದ ಅಂಗಣದಲ್ಲಿ ಹುಲಿ ಘರ್ಜಿಸುತ್ತಿತ್ತು. ಇದನ್ನು ಕಂಡವರು ಇಂದಿಗೂ ಗ್ರಾಮದಲ್ಲಿದ್ದಾರೆ.
ಊರ ಪರವೂರ ಭಕ್ತರ ನೆರವಿನಿಂದ ದೇವಳವನ್ನು ಹಂತ ಹಂತವಾಗಿ ನವೀಕರಿಸಿ ಎರಡು ಬಾರಿ ಬ್ರಹ್ಮಕಲಶ (೧೯೮೧, ೧೯೯೫) ನಡೆಸಲಾಗಿದೆ. ಪ್ರಸ್ತುತ ದೇವಳದಲ್ಲಿ ಮೂರು ದಿವಸ ಉತ್ಸವಗಳು ನಡೆಯುತ್ತವೆ.
ಇಲ್ಲಿಯವರೆಗೆ ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರು-ಕೆ. ಜನಾರ್ದನ ಎರ್ಕಾಡಿತ್ತಾಯ, ಸದಸ್ಯರು-ಎನ್. ಕೃಷ್ಣ ಬಡಿಕಿಲ್ಲಾಯ (ಅರ್ಚಕರು), ರಂಗನಾಥ ರಾವ್, ಸುಬ್ರಹ್ಮಣ್ಯ ಗೌಡ, ಪುರುಷೋತ್ತಮ ನಾಕ್, ಗಿರಿಧರ ಗೌಡ ಗೋಮುಖ, ಲೀಲಾವತಿ ಗೌಡ, ಶ್ರೀಮತಿ ಸುಂದರಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಮಿತಿಯ ಆಡಳಿತಾವಧಿ ಮುಕ್ತಾಯವಾದುದರಿಂದ ಕಬಕ ಗ್ರಾಮ ಕರಣಿಕ ಪೃಥ್ವಿರಾಜ್ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಮಹಾದೇವಿ ಭಜನಾ ಮಂದಿರ ಅರ್ಕ