ಚಾರ್ವಾಕ ಗ್ರಾಮ

ಶ್ರೀ ಕಪಿಲೇಶ್ವರ ದೇವಸ್ಥಾನ
ಚಾರ್ವಾಕ, ಪುತ್ತೂರು ದ.ಕ.-574 328. ಫೋ: 08251-284215

ಪುತ್ತೂರು-ಕಾಣಿಯೂರು-ಸುಬ್ರಹ್ಮಣ್ಯ ರಸ್ತೆಯಲ್ಲಿ ಕಾಣಿಯೂರು ಎಂಬಲ್ಲಿಂದ ಮುದ್ವ ರಸ್ತೆಯಲ್ಲಿ ಸುಮಾರು 5 ಕಿ.ಮೀ. ದೂರ ಸಾಗಿದಾಗ ಸಿಗುವ ಪುಣ್ಯಕ್ಷೇತ್ರವೇ ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ.
ಜೋಡು ದೈವಗಳು (ಉಳ್ಳಾಕುಲು): ದೇವಾಲಯಕ್ಕೆ ಸಂಬಂಧಪಟ್ಟಂತೆ ಕ್ಷೇತ್ರ ರಕ್ಷಕರಾಗಿ ಶ್ರೀ ಜೋಡು ದೈವಗಳ (ಉಳ್ಳಾಕುಲು) ಕ್ಷೇತ್ರವಿದ್ದು, ಒಂದು ಸಾವಿರ ವರ್ಷಗಳ ಹಿಂದೆ ಬಲ್ಲಾಳ ಅರಸರಿಂದ ಸ್ಥಾಪಿಸಲ್ಪಟ್ಟಿತು. ದೈವಗಳ ನುಡಿಕಟ್ಟು ಪ್ರಕಾರ ಪೂಮಾಣಿ, ಕಿನ್ನಿಮಾಣಿ ಜೋಡು ದೈವಗಳು ಕಂಚೀದೇಶ (ಕಾಂಜೀವರಂ)ದಲ್ಲಿ ಅವತರಿಸಿ ಧರ್ಮ ಸ್ಥಾಪನೆಗೆ ಲೋಕ ಸಂಚಾರ ಕೈಗೊಂಡರು. ಕುಮಾರ ಪರ್ವತದಿಂದ ತುಳುನಾಡಿಗೆ ದೃಷ್ಟಿ ಹಾಯಿಸಿ ತಮಗೆ ನೆಲೆ ನಿಲ್ಲಲು ಆರಿಸಿದ ಕೆಲವು ಕ್ಷೇತ್ರಗಳಲ್ಲಿ ಅಮರ ಕಾಸ್ಪಾಡಿಯೂ ಒಂದಾಗಿದೆ. ಉಳ್ಳಾಕುಲುಗಳು ತಂಗಿಯಾದ ಪೋಲಂಕಮ್ಮ ದೈಯದಯರೆ (ದೇವಿ)ಯೊಂದಿಗೆ ಸಂಚರಿಸುತ್ತಾ ಇಡ್ಯಡ್ಕ, ಚಾವಡಿತ್ತಾರು ಎಂಬಲ್ಲಿ ವಿಶ್ರಮಿಸಿದ್ದ ಸಂದರ್ಭದಲ್ಲಿ ಆಕೆಯ ಮುಡಿಯಿಂದ ಬಿದ್ದ ಹೂವೊಂದು ಅಶೋಕ (ಅಚ್ಚಗೆ) ವೃಕ್ಷವಾಗಿ ಬೆಳೆದಿದ್ದು ಈಗಲೂ ಜಾತ್ರೆಯ ಸಂದರ್ಭದಲ್ಲಿ ಅಲ್ಲಿಂದ ತಂದ ಅಚ್ಚಗೆಯ ಹೂವನ್ನು ದೈವಕ್ಕೆ ಒಪ್ಪಿಸುವ ಪದ್ಧತಿ ನಡೆದುಬಂದಿದೆ.
ಜೋಡು ದೈವಗಳೊಂದಿಗೆ ಮಿತ್ತೂರ್ ಚಂದು ನಾಯರ್ ಮತ್ತು ಮರ್‍ಲ್‌ಮಾಣಿ ದೈವಗಳೂ ಬಂದು ನೆಲೆ ನಿಂತ ಬಗ್ಗೆ ಪುರಾವೆಗಳು ಇವೆ. ಜೋಡು ದೈವಗಳ ಮೂಲ ಕ್ಷೇತ್ರವು ಕಾಸ್ಪಾಡಿಗುತ್ತು ಎಂಬಲ್ಲಿದ್ದು ನೇಲ್ಯಾರ್ ದೈವಸ್ಥಾನವು ಕೀಲೆ ಎಂಬಲ್ಲಿದೆ. ಕಳಂಗಾಜೆ ಎಂಬಲ್ಲಿ ಎಲ್ಯಾರ್ ದೈವ ಮತ್ತು ಇತರ ಉಪದೈವಗಳ ಗುಡಿಗಳಿವೆ. ಗಾಳಿಬೆಟ್ಟಿನಲ್ಲಿ ಶ್ರೀ ದೇವಿ (ಅಮ್ಮನವರು)ಯ ಮತ್ತು ಶಿರಾಡಿ ದೈವಸ್ಥಾನವಿದೆ. ಶ್ರೀ ಕಪಿಲೇಶ್ವರ ದೇವರ ಗರ್ಭಗುಡಿಯ ದಕ್ಷಿಣಭಾಗದಲ್ಲಿ ಗಣಪತಿ ಮತ್ತು ಶಾಸ್ತಾವು ಗುಡಿಗಳಿವೆ. ಪಶ್ಚಿಮಕ್ಕೆ ದೇವೀ ಗುಡಿ ಹಾಗೂ ಆಗ್ನೇಯದಲ್ಲಿ ನಾಗ ಬನವಿದೆ. ಶ್ರೀ ಕಪಿಲೇಶ್ವರನ ಅನುಗ್ರಹದಿಂದ ಇಷ್ಟಾರ್ಥಗಳು ಈಡೇರುತ್ತಿರುವ ಬಗ್ಗೆ ಸಾಕಷ್ಟು ಉದಾಹರಣೆಗಳಿವೆ.
ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ ಅವರು ಆಡಳಿತ ಮೊಕ್ತೇಸರರಾಗಿದ್ದಾರೆ. ಕುಸುಮಾಧರ ರೈ ಕಾಸ್ಪಾಡಿಗುತ್ತು ಅವರು ಶ್ರೀ ಜೋಡು ದೈವಗಳ ಕ್ಷೇತ್ರದ ಮುಖ್ಯಸ್ಥರಾಗಿದ್ದಾರೆ.

ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನ ಕುಂಬ್ಲಾಡಿ, ಚಾರ್ವಾಕ ಪುತ್ತೂರು. ಫೋನ್: 284699

 ಕುಮಾರಧಾರಾ ನದಿಯ ಎಡ ದಂಡೆಯಲ್ಲಿರುವ ಪ್ರಶಾಂತ ಪರಿಸರದಲ್ಲಿ ಶೋಭಿಸುತ್ತಿರುವ ಈ ದೇವಸ್ಥಾನಕ್ಕೆ ಸುಮಾರು ೧೬೦೦ಕ್ಕೂ ಅಧಿಕ ವರ್ಷಗಳ ಇತಿಹಾಸವಿದ್ದು ಬಲ್ಲಾಳರ ಕಾಲದಲ್ಲಿ ಕಟ್ಟಲ್ಪಟ್ಟಿತ್ತೆಂದು ಇತಿಹಾಸದ ಮೂಲಗಳಿಂದ ತಿಳಿದು ಬರುತ್ತದೆ. ಪುರಾತನ ಕಾಲದಲ್ಲಿ ಕುಕ್ಕೆನಾಥ ಎಂಬ ಹೆಸರಿನಲ್ಲಿ ಅರ್ಚಿಸಲ್ಪಡುತ್ತಿದ್ದ ಈ ದೇವರ ಮೂಲ ವಿಗ್ರಹವನ್ನು ಇದೀಗ ಬಾಲಸುಬ್ರಹ್ಮಣ್ಯ ಎಂಬ ಹೆಸರಿನಿಂದ ಪೂಜಿಸಲಾಗುತ್ತಿದೆ.
ಭಕ್ತರೇ ಆಸ್ತಿ: ಈ ದೇವಳದ ಕೂಡುಗಟ್ಟಿಗೆ ಸೇರಿರುವ ಈ ಗ್ರಾಮದ ೨೪೨ ಮನೆಗಳ ಭಕ್ತರೇ ದೇವಾಲಯದ ಆಸ್ತಿ. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾದರೂ ಈ ಮನೆಗಳವರೇ ಹನಿ ಹನಿ ಕೂಡಿ ಹಳ್ಳ ಎನ್ನುವಂತೆ ತಾವೇ ಸೇರಿಕೊಂಡು ಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆ.
ಹನ್ನೆರಡು ಬೈಲುಗಳು: ದೇವಳಕ್ಕೆ ಸಂಬಂಧಿಸಿದಂತೆ ಊರನ್ನು ಬೈಲುಗಳಾಗಿ ವಿಂಗಡಿಸಲಾಗಿದೆ. ಕಂಪ, ಕರಂದ್ಲಾಜೆ, ಗೌಡಮನೆ, ಕುಂಬ್ಲಾಡಿ-೧, ಕುಂಬ್ಲಾಡಿ-೨, ಮಾಚಿಲ, ಅಂಬುಲ,
ಓಡದಕೆರೆ, ಅರುವ, ಕಂಡಿಗ, ನಾಣಿಲ-೧, ನಾಣಿಲ-೨, ಉಳವ ಮತ್ತು ಕೊಪ್ಪ ಬೈಲಗಳಾಗಿ ವಿಂಗಡಿಸಲಾಗಿದೆ.
ಪ್ರತ್ಯಕ್ಷವಾಯಿತು ನವಿಲು…: ದೇವಳವು ಅಜೀರ್ಣ ಸ್ಥಿತಿಯಲ್ಲಿದ್ದು ಊರಲ್ಲಿ ಒಂದಿಲ್ಲೊಂದು ಸಂಕಷ್ಟಗಳು ಎದುರಾದ ಹಿನ್ನಲೆಯಲ್ಲಿ ೧೯೮೮ರಲ್ಲಿ ಶೇಖರ್ ನಾಯರ್ ಅವರನ್ನು ಕರೆಸಿ ಪ್ರಶ್ನೆ ಇರಿಸಲಾಯಿತು. ದೇವಸ್ಥಾನ ಐತಿಹ್ಯ, ಕಾರಣಿಕ, ದೇವರ ಇರುವಿಕೆ, ವಿಶೇಷತೆ ಇತ್ಯಾದಿಗಳೆಲ್ಲವನ್ನೂ ಪ್ರಶ್ನೆ ಚಿಂತನೆಯಲ್ಲಿ ವಿವರಿಸಿದ್ದ ನಾಯರ್ ಅವರು ದೇವರ ಸಾನ್ನಿಧ್ಯದ ಬಗ್ಗೆ ಭಕ್ತರಿಗೆ ನಂಬಿಕೆ ಬರಬೇಕು ಎಂದಾದರೆ ಇಲ್ಲಿ ತಿಂಗಳೊಳಗೆ ನಾಗರಹಾವು ಪ್ರತ್ಯಕ್ಷವಾಗಬಹುದು ಇಲ್ಲವೇ ನವಿಲು ಕಾಣಿಸಿಕೊಳ್ಳಬಹುದು ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳ ಬಳಿಕ ಪರಿಸರದಲ್ಲಿ ನಾಗರಹಾವು ಕಾಣಿಸಿಕೊಂಡಿತಾದರೂ ಅದು ಸಾಮಾನ್ಯ ಎಂದು ಯಾರೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಸುಮಾರು ೨೦ ದಿನಗಳ ಬಳಿಕ ಅದೊಂದು ದಿನ ಕುಂಬ್ಲಾಡಿಯಲ್ಲಿ ದೇವಸ್ಥಾನದ ದೇವರ ಕೆರೆಯ ಬಳಿ ಅದುವರೆಗೆ ಕಾಣಿಸಿಕೊಳ್ಳದೇ ಇದ್ದ ಜೋಡಿ ನವಿಲುಗಳು ಪ್ರತ್ಯಕ್ಷವಾಗಿದ್ದವು. ಈ ಬಗ್ಗೆ ತಿರಸ್ಕೃತ ಮನೋಭಾವದಲ್ಲಿ ಮಾಡನಾಡಿದವರ ಮನೆ ಬಾಗಿಲಿನಲ್ಲಿ ಮರು ದಿನ ನವಿಲು ಕಾಣಿಸಿಕೊಂಡಿತ್ತಂತೆ ಎನ್ನುವುದನ್ನು ದೇವಳದ ಆಡಳಿತ ಮೊಕ್ತೇಸರ ಸಿ.ಪಿ.ಜಯರಾಮ ಗೌಡರು ಈಗಲೂ ನೆನಪಿಸುತ್ತಾರೆ.
ನಾಲ್ಕಂಬದಲ್ಲಿ ಪ್ರತಿ ಶುಕ್ರವಾರ ಸಂಜೆ ಭಜನೆ, ಪೂಜೆ ನಡೆಯುತ್ತದೆ. ಸಂಕ್ರಮಣದ ದಿವಸ ದೇವಿಗೆ ತಂಬಿಲ ಪೂಜೆ, ದೈವಗಳಿಗೆ ತಂಬಿಲ ಜರಗುತ್ತದೆ. ಊರಿನವರ ಸಹಕಾರದೊಂದಿಗೆ ದೇವರಿಗೆ ನಿತ್ಯ ಪೂಜೆ ನಡೆಯುತ್ತಿದೆ. ಪ್ರತಿ ರಾತ್ರಿ ಊರಿನ ಎರಡು ಮನೆಯವರು ಸರದಿಯ ಮೇಲೆ ದೇವಸ್ಥಾನದಲ್ಲಿ ಕಾವಲು ಕಾಯುತ್ತಾರೆ. ದೇವಾಲಯದ ಪಕ್ಕದಲ್ಲಿ ಕೊಟ್ಟಿಗೆ, ಅಡುಗೆ ಕೋಣೆ, ಗೋದಾಮು ಮತ್ತು ಪಾಕ ಶಾಲೆಯನ್ನು ನಿರ್ಮಿಸಲಾಗಿದೆ.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ – ಸಿ.ಪಿ. ಜಯರಾಮ ಗೌಡ, ಸದಸ್ಯರುಗಳು: ವಿಜಯಕುಮಾರ್ ಸೊರಕೆ, ಯು.ಪಿ.ರಾಮಕೃಷ್ಣ, ಕೆ.ವಿ.ವೆಂಕಪ್ಪ ಕಂಪ, ಶೇಖರ ಅಂಬುಲ, ತನಿಯ ಮುದ್ವ, ಲೀಲಾವತಿ ಕುಂಬ್ಲಾಡಿ, ಜಯಂತಿ ಮಾಚಿಲ, ಯೋಗೀಶ್ ಭಟ್ (ಅರ್ಚಕ) ದೇವಳದ ಆಡಳಿತ ನಿರ್ವಹಿಸುತ್ತಿದ್ದಾರೆ.

ಶ್ರೀ ದೈಪಿಲ ಶಿರಾಡಿ ರಾಜನ್ ದೈವಸ್ಥಾನ ಚಾರ್ವಾಕ ಗ್ರಾಮ & ಅಂಚೆ, ಪುತ್ತೂರು

ಶ್ರೀ ಶಿರಾಡಿ ದೈವ ಸಾನಿಧ್ಯವಿರುವ ದೈಪಿಲ ಕ್ಷೇತ್ರಕ್ಕೆ ೮೦೦ ವರ್ಷಗಳ ಇತಿಹಾಸ ಇದೆ. ಶ್ರೀ ಶಿರಾಡಿ ಗ್ರಾಮ ದೈವವು ದೈಪಿಲ ಅಲ್ಲದೆ ಅಂಕದ ಕೂಟೇಲುವಿನಲ್ಲಿಯೂ ದೈವದ ನೇಮ ಹಿಂದಿ ನಿಂದಲೂ ನಡೆದು ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ಕೊಪ್ಪದ ಭಂಡಾರದ ಮನೆಯಲ್ಲಿ ವರ್ಷಂಪ್ರತಿ ನೇಮ ನಡೆಯುತ್ತಿದೆ. ತುಳು ತಿಂಗಳಿನ ಪೊನ್ನಿಯಲ್ಲಿ ದೈಪಿಲದಲ್ಲಿ, ಸುಗ್ಗಿ ತಿಂಗಳಿನಲ್ಲಿ ಕೊಪ್ಪದಲ್ಲಿ, ಪಗ್ಗು ತಿಂಗಳಿನಲ್ಲಿ ಅಂಕದ ಕೂಟೇಲುವಿನಲ್ಲಿ ಸುಸೂತ್ರವಾಗಿ ನೇಮ ನಡೆಯುತ್ತದೆ.
ಫೆ.೭, ೮: ವರ್ಷಾವಧಿ ನೇಮ: ದೈಪಿಲ ಕ್ಷೇತ್ರದಲ್ಲಿ ಫೆಬ್ರವರಿ ೭, ೮ರಂದು ನೇಮೋತ್ಸವ ನಡೆಯುತ್ತದೆ. ಈ ದೈವವು ಚಾರ್ವಾಕ ಗ್ರಾಮದ ಕೊಪ್ಪ ಎಂಬಲ್ಲಿ ಪಾಜೊವುತಡ್ಕ ಮಾಲ್ಯದಲ್ಲಿ ಮೂಲ ನೆಲೆಹೊಂದಿದ್ದು. ದೈವದ ಭಂಡಾರದ ಮನೆ ಕೊಪ್ಪದಲ್ಲಿದೆ.
ನಾಲ್ಕು ಮನೆತನಗಳ ಮೂಲಕ ದೈವಸ್ಥಾನದ ಆಡಳಿತ: ದೈವಸ್ಥಾನದ ಆಡಳಿತವು ೧.ಅರುವ ಗುತ್ತಿನ ಮನೆ ೨.ಕುಂಬ್ಲಾಡಿ ೩.ತಿರ್ತಕೇರಿ ೪.ಖಂಡಿಗ ಮನೆತನಗಳ ಮೂಲಕ ನಡೆಯುತ್ತಿದ್ದು ದೈವದ ಪೂಜಾರಿಗಳಾಗಿ ಅಂಬುಲ ಮತ್ತು ಕೊಪ್ಪದ ಮನೆತನದವರು ಸೇವೆ ಸಲ್ಲಿಸುತ್ತಿದ್ದಾರೆ.ದೈವದ ನೇಮ ನಡವಳಿಕೆಗಳು ವಂತಿಗೆ ವಗೈರೆಗಳನ್ನು (ಪಡೆಚ್ಚಿಲು) ೧೩ ವರ್ಗ ನಡೆಸಿಕೊಂಡು ಬರುತ್ತಿದೆ. ಭೂತ ಕಟ್ಟುವವರು ಕಾಪೆಜಾಲುವಿನ ಅಜಿಲಾಯರು ಹಾಗೂ ಪಲ್ಲಕ್ಕಿ ಹೊರಲು ಕೊಪ್ಪದ ಜನರು ಮತ್ತು ಮಡಿವಾಳ ಸೇವೆ ಮಾಡಲು ಮಡಿವಾಳ ಪಾಲಿನ ಮಡಿವಾಳರು. ದೈಪಿಲದಲ್ಲಿ ಮಾತ್ರ ಶಿರಾಡಿ ದೈವದ ಜೊತೆಗೆ ಕೊಡಮಣಿತ್ತಾಯ ದೈವದ ನೇಮವು ನಡೆಯುತ್ತದೆ. ಇದರ ಭೂತ ಕಟ್ಟುವವರು ಮರಕ್ಕಡದ ಪರವರು.
ಪುರಾತನ ಕಾಲದಲ್ಲಿ ಸಂಪ್ರದಾಯ ರೀತಿಯಲ್ಲಿ ನೇಮೋತ್ಸವ ನಡೆಯುತ್ತಿತ್ತು. ಅರುವಗುತ್ತಿನ ದಿ| ಕುಕ್ಕಪ್ಪ ಗೌಡರ ಕಾಲದಿಂದ ನೇಮವು ಉಛ್ರಾಯ ಸ್ಥಿತಿಯಲ್ಲಿ ಜರಗುತ್ತಿತ್ತು. ಅರುವಗುತ್ತಿನ ದಿ| ಸಿ.ಕೆ. ಪದ್ಮಯ್ಯ ಗೌಡರ ಕಾಲದಲ್ಲಿ ಹೆಚ್ಚು ಜನಪ್ರಿಯತೆ ಪಡೆದು ಪ್ರಸ್ತುತ ಸಿ.ಪಿ. ಜಯರಾಮ ಗೌಡರ ನೇತೃತ್ವದಲ್ಲಿ ಎಲ್ಲರ ಸಹಕಾರದೊಂದಿಗೆ ವಿಜ್ರಂಭಣೆಯಿಂದ ನೇಮೋತ್ಸವವು ನಡೆಯುತ್ತಿದೆ. ಪ್ರಸ್ತುತ ಅರುವ ಸಿ.ಪಿ. ಜಯರಾಮ ಗೌಡ, ಕುಂಬ್ಲಾಡಿ ಮನೆತನದ ವಾಚಣ್ಣ ಗೌಡ, ತಿರ್ತಕೇರಿ ಕುಶಾಲಪ್ಪ ಗೌಡ, ಖಂಡಿಗ ರಾಮಣ್ಣ ಗೌಡ, ಕೊಪ್ಪ ತಿಮ್ಮಪ್ಪ ಕುಂಬಾರ ಹಾಗೂ ದೈವದ ಪೂಜಾರಿಗಳಾಗಿ ಅಂಬುಲ ದುಗ್ಗಣ್ಣ ಗೌಡ ಹಾಗೂ ಕೊಪ್ಪದ ಜಿನ್ನಪ್ಪ ಕುಂಬಾರ ದೈವದ ಸೇವೆ ಮಾಡುತ್ತಿದ್ದಾರೆ.
ಊರ-ಪರ ಊರ ಭಕ್ತರಿಂದ ಹರಕೆ ಮಹಾಪೂರ: ಈ ದೈವಗಳಿಗೆ ಊರ-ಪರವೂರ ಸಾವಿರಾರು ಭಕ್ತರು ಹರಕೆ ಕಾಣಿಕೆ ಒಪ್ಪಿಸುತ್ತಾರೆ. ಮದುವೆ, ಸಂತಾನ ದೋಷ, ಅನಾರೋಗ್ಯ, ಉದ್ಯೋಗ, ಕೋರ್ಟು ಕಛೇರಿ ವ್ಯವಹಾರ, ಕಳವು, ಮೋಸ, ವಂಚನೆ ಇಂತಹ ಸಮಸ್ಯೆಗಳಿಗೆ ಒಳಗಾದ ಭಕ್ತರು ಇಲ್ಲಿಗೆ ಹರಕೆ ಒಪ್ಪಿಸಿ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಪ್ರತೀತಿ.ನೇಮೋತ್ಸವದಂದು ಸುಮಾರು ೫೦೦೦ ಜನರಿಗೆ ಅನ್ನಸಂತರ್ಪಣೆ ನಡೆಯುತ್ತದೆ.
ದೈವಕ್ಕೆ ಹರಕೆ ಒಪ್ಪಿಸುವವರು ಆರಂಭದಲ್ಲಿ ಅರುವಕ್ಕೆ ಬಂದು ದೂರು ನೀಡಬೇಕು. ಅದಕ್ಕೆ ಬೇಕಾದ ಪರಿಹಾರ ಕ್ರಮವನ್ನು ಅರುವ ಮನೆಯಲ್ಲಿ ನಾಲ್ಕು ಮನೆಯವರು ಸೇರಿ ತೀರ್ಮಾನ ಕೈಗೊಳ್ಳುವುದು ವಾಡಿಕೆ. ಆಮೇಲೆ ದೈವದ ನೇಮದ ನಡೆಯಲ್ಲಿ ಒಪ್ಪಿಸಿಕೊಳ್ಳುವ ಸಂಪ್ರದಾಯ ನಡೆದು ಬರುತ್ತದೆ. ಪರವೂರಿನಿಂದ ಹರಕೆ ಒಪ್ಪಿಸಲು ಬರುವವರು ಅರುವದಲ್ಲಿ ಬಂದು ಹೇಳಿಕೊಂಡು ಬರುತ್ತಿರುವ ಸಂಪ್ರದಾಯ ಈಗಲೂ ನಡೆದುಬರುತ್ತಿದೆ. ಹೀಗೆ ಊರಿನೊಳಗಿನ ಸಮಸ್ಯೆಗಳನ್ನು ಕೂಡ ಅರುವ ಮನೆಯಲ್ಲಿ ನಾಲ್ಕು ಮನೆಯವರು ಸೇರಿ ಪರಿಹರಿಸಿಕೊಳ್ಳುವ ಸಂಪ್ರದಾಯ ಈಗಲೂ ಇದೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ದೈಪಿಲ ಶಿರಾಡಿ ರಾಜನ್ ದೈವಸ್ಥಾನ ಚಾರ್ವಾಕ ಗ್ರಾಮ & ಅಂಚೆ ಪುತ್ತೂರು
* ಶ್ರೀ ಉಳ್ಳಾಕುಲು ದೈವಸ್ಥಾನ ಕಾಸ್ಪಾಡಿಗುತ್ತು ಚಾರ್ವಾಕ
* ಶ್ರೀ ಮಾರಿಯಮ್ಮ ಗುಡಿ ಚಾರ್ವಾಕ ಟಶ್ರೀ ಶಿರಾಡಿ ದೈವಸ್ಥಾನ ಕೆಳಗಿನಕೇರಿ ಕೊಪ್ಪ 9902189432