ಪಾಣಾಜೆ ಗ್ರಾಮ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ರಣಮಂಗಲ ಪಾಣಾಜೆ ಪುತ್ತೂರು ದ.ಕ-574259

ಕೇರಳ ಗಡಿ ಪ್ರದೇಶದಲ್ಲಿರುವ ಪಾಣಾಜೆ ಗ್ರಾಮದ ಆರ್ಲಪದವು ಪೇಟೆಯಿಂದ ನೆಲ್ಲಿತ್ತಿಮಾರು ಭರಣ್ಯ ರಸ್ತೆಯಲ್ಲಿ ಸುಮಾರು 2 ಕಿ.ಮೀ. ಸಾಗಿದರೆ ದೇವಶ್ಯ ಎಂಬಲ್ಲಿ ರಣಮಂಗಲ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನವಿದೆ.

ಸುಮಾರು ೧೫೦೦ ವರ್ಷಗಳ ದೀರ್ಘ ಇತಿಹಾಸ ಈ ದೇವಾಲಯಕ್ಕಿದೆ. ಶತಮಾನಗಳ ಹಿಂದೆ ಹೆಸರಾಂತ ಅರಸ ಪೆರ್ಮಣ ಬಲ್ಲಾಳ ಘಟ್ಟದ ಕಡೆಯಿಂದ ದಿಗ್ವಿಜಯ ಗೈಯುತ್ತಾ ಸಾಗಿ ಬಂದವನು ಈ ಪ್ರದೇಶದಲ್ಲಿ ರಣ(ಯುದ್ಧ)ಕ್ಕೆ ಮಂಗಳ ಹೇಳಿದ್ದರಿಂದ ಈ ಸ್ಥಳವು ‘ರಣಮಂಗಲ’ವಾಯಿತಂತೆ. ವರ್ಷಂಪ್ರತಿ ಮಕರ ಮಾಸದಂದು ದೈವ-ದೇವರ ಉತ್ಸವ ನಡೆಯುತ್ತದೆ. ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಹಾಯಕರಾಗಿ ಇಲ್ಲಿ ಪೂಮಾಣಿ-ಕಿನ್ನಿಮಾಣಿ ದೈವಗಳ ತಾಣವಿದೆ. ಪೆರ್ಮಣ ಬಲ್ಲಾಳ ಬಹಳವಾಗಿ ನಂಬಿಕೆಯಿಟ್ಟಿದ್ದ ಮತ್ತು ಆತನ ಆರಾಧ್ಯ ಈ ಪೂಮಾಣಿ-ಕಿನ್ನಿಮಾಣಿ (ಅಣ್ಣ-ತಮ್ಮ) ದೈವಗಳು. ಬಲ್ಲಾಳರ ಆಡಳಿತಕ್ಕೊಳಪಟ್ಟಿದ್ದ ಪಡುಮಲೆಯಿಂದ ಪುತ್ತಿಗೆವರೆಗೆ ಅಲ್ಲಲ್ಲಿ ಆರಾಧಿಸಲ್ಪಡುವ ರಾಜದೈವಗಳು.
ಶ್ರೀ ಮಹಾವಿಷ್ಣುವಿನ ಅಣತಿಯಂತೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳು ತಲಕಾವೇರಿಯಿಂದ ಹೊರಟು ಕುಮಾರಗಿರಿಯ ಮೂಡುದಿಕ್ಕಿನಲ್ಲಿರುವ ಪರ್ವತ ಶಿಖರಕ್ಕೆ ತಲುಪಿದರು. ಅಲ್ಲಿಂದ ಪಶ್ಚಿಮ ದಿಕ್ಕಿಗೆ ದೃಷ್ಟಿ ಹಾಯಿಸಿದಾಗ ಅವರಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಧ್ವಜಸ್ತಂಭ ಗೋಚರಿಸಿತು. ಆ ಧ್ವಜಸ್ತಂಭವನ್ನು ತುಂಡರಿಸಿದರು. ಇದರಿಂದ ಸಿಟ್ಟಾದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಅವರೊಂದಿಗೆ ಕಾಳಗಕ್ಕಿಳಿದನು. ಹರಿಪುತ್ರರಾದ ದೈವಗಳ ಮತ್ತು ಹರಸುತನಾದ ಸುಬ್ರಹ್ಮಣ್ಯನ ಸಾಮರ್ಥ್ಯಗಳನ್ನರಿತ ಶಿವಪಾರ್ವತಿಯವರು ಅವರಿಗೆ ಪ್ರತ್ಯಕ್ಷರಾಗಿ ಯುದ್ಧ ನಿಲ್ಲಿಸಲು ಹೇಳಿದರು. ಅವರಿಂದ ಒಂದು ಬಾರಿ ತುಂಡರಿಸಲ್ಪಟ್ಟ ಧ್ವಜವು ಇನ್ನು ಸುಬ್ರಹ್ಮಣ್ಯದಲ್ಲಿ ಏರಬಾರದು, ಶಿವ ಪಾರ್ವತಿಯರ ಅಣತಿಗೆ ಶಿರಬಾಗಿದ ಸುಬ್ರಹ್ಮಣ್ಯನು ಅವರನ್ನು ಮೂರು ಊರಲ್ಲಿ ನೆಲೆಸಲು ಹೇಳಿದನಂತೆ. ಆ ಪ್ರಕಾರ ಪಡುಮಲೆ, ಪಾಣಾಜೆ, ಇರ್ದೆ ಎಂಬ ಮೂರು ಊರಿನಲ್ಲಿ ಶ್ರೀ ದೈವಗಳು ನೆಲೆಸಿಕೊಂಡರು.
ಹುಲಿಭೂತ ಮತ್ತು ಮಲರಾಯ ದೈವ: ಶ್ರೀ ಮಹಾವಿಷ್ಣುವಿನ ಒಂದು ಅಂಶವಾದ ‘ಹುಲಿಭೂತ’ವು ಹುಲಿಯ ಮುಖವಾಡವನ್ನು ಧರಿಸುವುದು. ದೈವಗಳಿಗೆ ಇಲ್ಲಿ ಹುಲಿ ಮತ್ತು ಕುದುರೆಯ ಅಂದವಾದ ಬಂಡಿಗಳಿವೆ. ಮಲರಾಯ ಪಂಜುರ್ಲಿ ದೈವದ ಇನ್ನೊಂದು ರೂಪ. ಇದರ ವಾಹನ ವರಾಹ. ವಿಟ್ಲ ಸೀಮೆಯಿಂದ ಪಡುಮಲೆಗೆ ಬಂದ ಮಲರಾಯನು ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳಿಗೆ ಸಹಾಯಕನಾಗಿ ನೆಲೆಯೂರಿದನು. ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ನೇಮದ ಮರು ದಿವಸ ಮಲರಾಯ ಮತ್ತು ಹುಲಿಭೂತದ ನೇಮ ನಡೆಯುವುದು ಇಲ್ಲಿಯ ಪೂರ್ವ ಸಂಪ್ರದಾಯದ ಪದ್ಧತಿ.
ಆಡಳಿತ ಮೊಕ್ತೇಸರರು: ಶ್ರೀಕೃಷ್ಣ ಬೊಳಿಲ್ಲಾಯ

ಭರಣ್ಯ ಶ್ರೀ ವೆಂಕಟರಮಣ ದುರ್ಗಾಪರಮೇಶ್ವರಿ ದೇವಾಲಯ, ಭರಣ್ಯ, ಪಾಣಾಜೆ, ಪುತ್ತೂರು ತಾಲೂಕು ದ.ಕ.

ಭರಣ್ಯ ಶ್ರೀ ವೆಂಕಟರಮಣ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಸುಮಾರು ೧೨೫ ವರ್ಷಗಳ ಇತಿಹಾಸವಿದ್ದು, ಪ್ರಸ್ತುತ ದೇವಾಲಯದ ಕಟ್ಟಡಗಳು ನೈಸರ್ಗಿಕವಾಗಿ ಶಿಥಿಲಗೊಂಡ ಕಾರಣ ಜ್ಯೋತಿಷ್ಯ ತಜ್ಞರ ತಂಡದಿಂದ ಅಷ್ಟಮಂಗಲ ದೇವಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಸದ್ರಿ ದೇವಾಲಯದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಪ್ರಕೃತ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ ಸಂಪೂರ್ಣ ಕಗ್ಗಲ್ಲಿನಿಂದ ಕಟ್ಟುವ ಕೆಲಸ ಮತ್ತು ಇವುಗಳ ಮುಚ್ಚಿಗೆ ಕೆಲಸ ಮುಕ್ತಾಯ ಹಂತ ತಲುಪಿದೆ. ಈಗಾಗಲೇ ಸಮಾರು ರೂ. ೧೫ ಲಕ್ಷ ಖರ್ಚಾಗಿದ್ದು, ಗರ್ಭಗುಡಿ ಹಾಗೂ ನಮಸ್ಕಾರ ಮಂಟಪಕ್ಕೆ ತಾಮ್ರದ ಮೇಲ್ಛಾವಣಿ ಹೊದಿಸುವ ಕಾರ್ಯ ಕೂಡಾ ಕೈಗೆತ್ತಿಕೊಂಡಿದೆ. ಈ ಯೋಜನೆಗೆ ಸುಮಾರು ರೂ. ೩ ಲಕ್ಷ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಸದ್ರಿ ಯೋಜನೆಗೆ ಊರ ಹಾಗೂ ಪರವೂರ ಭಕ್ತ ಜನರಿಂದ ಸಹಾಯರೂಪವಾಗಿ ರೂ. ೨೫೦/-ರ ಒಂದು ಚದರ ಅಡಿ ತಾಮ್ರವನ್ನು ದಾನ ರೂಪವಾಗಿ ಸಂಗ್ರಹಿಸುವುದೆಂದು ಅಪೇಕ್ಷಿಸಲಾಗಿದೆ.
ಸುತ್ತುಗೋಪುರದ ಕೆಲಸ ಕೂಡಾ ಪ್ರಗತಿಯ ಹಂತದಲ್ಲಿದ್ದು ಅಂದಾಜು ಖರ್ಚು ರೂ.೫ ಲಕ್ಷದಷ್ಟು ತಗಲಬಹುದೆಂದು ಜೀರ್ಣೋದ್ಧಾರ ಸಮಿತಿ ಅಂದಾಜಿಸಿದೆ. ಮುಂದಿನ ಕೆಲವು ತಿಂಗಳುಗಳೊಳಗೆ ಈ ಎಲ್ಲಾ ಕಾರ್ಯಗಳೂ ಮುಕ್ತಾಯಗೊಂಡು ೨೦೦೪ರ ಮಾರ್ಚ್ ತಿಂಗಳಲ್ಲಿ ದಿನಾಂಕ ೧೭ರಿಂದ ೨೫ರ ವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವನ್ನು ನಡೆಸಲು ಉದ್ದೇಶಿಸಲಾಗಿದೆ.
ಅಧ್ಯಕ್ಷರು : ಬಿ.ಯಂ. ಸುಬ್ರಹ್ಮಣ್ಯ ಭಟ್, ಆಡಳಿತ ಮೊಕ್ತೇಸರ ಹಾಗೂ ಕಾರ್ಯದರ್ಶಿ : ಬಿ.ಯಂ. ಕೃಷ್ಣ ಭಟ್ ಭರಣ್ಯ, ನ್ಯಾಯವಾದಿ

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಮಲರಾಯ ದೇವಸ್ಥಾನ ಗೋಳಿತ್ತಡಿ
* ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಕೋಟೆ ಪಾಣಾಜೆ
* ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಉದಯಗಿರಿ
* ಭರಣ್ಯ ಶ್ರೀ ವೆಂಕಟರಮಣ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಪಾಣಾಜೆ
* ಶ್ರೀ ಸುಬ್ರಹ್ಮಣ್ಯೆಶ್ವರ ಭಜನಾ ಮಂದಿರ ಆರ್ಲಪದವು