ಬಂಟ್ವಾಳ ತಾಲೂಕು

ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವಿಟ್ಲ, ಬಂಟ್ವಾಳ ದ.ಕ. 08255-238962

ಬಂಟ್ವಾಳ ತಾಲೂಕಿನ ಪ್ರಮುಖ ಹೋಬಳಿಯಾಗಿರುವ ವಿಟ್ಲ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದು, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದೆ. ವಿಟ್ಲ ಸೀಮೆ ಅಂದರೆ ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ಎರಡು ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ೧೭ ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ಇಂದು ಈ ಸೀಮೆಯ ಕೆಲ ಭಾಗಗಳು ಕೇರಳಕ್ಕೆ ಸೇರಿಕೊಂಡಿದೆ. ಶೈವ, ವೈಷ್ಣವ, ಸಧಾರಣ ಎಂಬ ಪ್ರಶಂಸೆಗೆ ಪಾತ್ರವಾದ ವಿಟ್ಲ ಅರಸು ವಂಶಜರು ೫ ವೈಷ್ಣವ ದೇಗುಲ ಮತ್ತು ೬ ಶಿವನ ದೇಗುಲಗಳನ್ನು ಸಂಪ್ರದಾಯನಿಷ್ಠರಾಗಿ ನಡೆಸಿಕೊಂಡು ಬಂದವರು. ಇವರ ಆಳ್ವಿಕೆಯಲ್ಲೇ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವೂ ಸಂಪ್ರದಾಯಬದ್ದವಾಗಿ ನಡೆದು ಕೊಂಡು ಬಂದಿದೆ. ವಿಟ್ಲ ಸೀಮೆಯ ದೇವಸ್ಥಾನಗಳೆಲ್ಲೆಲ್ಲ ಇದು ಪ್ರಮುಖ ಮತ್ತು ಗಾತ್ರದ ದೃಷ್ಠಿಯಿಂದಲೂ ಇದನ್ನು ಮೀರಿಸುವ ದೇಗುಲಗಳಿಲ್ಲ. ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವನ್ನು ಈ ದೇವಸ್ಥಾನ ಹೊಂದಿದೆ ಎಂದು ಹಲವಾರು ದಾಖಲೆಗಳಿಂದ ತಿಳಿದುಬಂದಿದೆ.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ವಿಟ್ಲದ ಡೊಂಬ ಹೆಗ್ಗಡೆ ಅರಸು ಮನೆತನದ ಆಡಳಿತಕ್ಕೆ ಪ್ರಾಕು ಪರಂಪರೆಯಂತೆ ಒಳಪಟ್ಟಿರುವ ವಿಟ್ಲ ಸೀಮೆಯ ೧೬ ಗ್ರಾಮಗಳನ್ನೊಳಗೊಂಡ ೧೬ ದೈವ ದೇವರುಗಳ ಆಲಯಗಳ ಪೈಕಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸೀಮೆಯ ಮುಖ್ಯ ದೇವಸ್ಥಾನ. ಈ ದೇಗುಲಕ್ಕೆ ನಿಕಟ ಸಂಪರ್ಕವಿರುವ ಬಹಳ ಕಾರಣಿಕದ ಉಳ್ಳಾಲ್ತಿ ದೈವಸ್ಥಾನ ಕೇಪು ಎಂಬಲ್ಲಿದೆ. ಇಲ್ಲಿ ಮಕ್ಕಳನ್ನು ಹರಕೆ ರೂಪದಲ್ಲಿ ದೇವರಿಗೆ ಒಪ್ಪಿಸುವ ಸಂಪ್ರದಾಯವೊಂದು ಈಗಲೂ ನಡೆದುಕೊಂಡು ಬಂದಿದೆ. ಅದಕ್ಕೆ ಕಜಂಬು ಉತ್ಸವ ಎನ್ನುತ್ತಾರೆ. ದೇಗುಲಕ್ಕೆ ಸಂಬಂಧಿಸಿದಂತೆ ಅದರದೇ ಸ್ಥಳ ಐತಿಹ್ಯವಿರುವುದು ಕಾಣ ಬಹುದು. ತಾಲೂಕು ಬಂಟ್ವಾಳವಾದರೂ ಇದು ಪುತ್ತೂರು ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಪ್ರಸ್ತುತ ಆಡಳಿತ ಮೊಕ್ತೇಸರರಾಗಿ ವಿಟ್ಲ ಅರಮನೆಯ ಜನಾರ್ಧನ ವರ್ಮ ಅರಸರು ಕಾರ್ಯನಿರ್ವಹಿಸುತ್ತಾರೆ.

ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಮಾಣಿಲ, ಶ್ರೀಧಾಮ ಮಾಣಿಲ, ಅಂಚೆ: ಮುರುವ, ಬಂಟ್ವಾಳ ದ.ಕ, ಫೋ: 08255-237477, 237446

ಇದೊಂದು ಆಧ್ಯಾತ್ಮವನ್ನು ಬೋಧನೆ ಮಾಡುವ ಕೇಸರಿಮಠವಲ್ಲ. ಸಮಾಜದಲ್ಲಿ ಶ್ರೇಷ್ಠತೆಯನ್ನು ಕಾಯ್ದುಕೊಂಡು ಪ್ರಚಾರಕ್ಕಾಗಿ ಮಾರ್ಗದರ್ಶನ ಮಾಡುವ ಉನ್ನತಪೀಠವಲ್ಲ. ಯಾವುದೇ ಜಾತಿ ಜನಾಂಗದ ಸಂಸ್ಥೆಯಲ್ಲ. ಕೆಳವರ್ಗ ಮೇಲ್ವರ್ಗ ಎಂದು ವಿಭಾಗಿಸಿ ತೀರ್ಮಾನ ಕೊಡುವ ಪಂಚಾತಿಕೆ ಕೇಂದ್ರಸ್ಥಾನವಲ್ಲ. ಎರಡು ದಶಕಗಳ ಹಿಂದೆ ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡು ಬಂಟ್ವಾಳ ತಾಲೂಕಿನ ಕುಗ್ರಾಮವೆಂದು ಮಾಧ್ಯಮಗಳಿಂದ ಗುರುತಿಸಲ್ಪಟ್ಟ ಪೆರುವಾಯಿ ಗ್ರಾಮದ ಮಾಣಿಲದಲ್ಲಿ ಕರ್ಮಯೋಗಿಯೋರ್ವರು ಕಟ್ಟಿ ಬೆಳೆಸಿದ ಅಪ್ಪಟ ಮಾನವತಾವಾದಿ ಸಂಸ್ಥೆಯೇ ಶ್ರೀಧಾಮ. ಶ್ರೀ ಮಹಾಲಕ್ಷ್ಮಿ ಇಲ್ಲಿನ ಆರಾಧ್ಯ ದೇವತೆ.
ಕೇರಳ ಗಡಿ ಪ್ರದೇಶವಾದ ಮಾಣಿಲದ ಪ್ರಕೃತಿಯ ಮಡಿಲಲ್ಲಿ ತಲೆಎತ್ತಿ ನಿಂತಿರುವ ಈ ಸೇವಾಶ್ರಮವು ಆಧ್ಯಾತ್ಮಿಕ ಚಿಂತನೆಯ ಕಡೆಗೆ ಆಸ್ತಿಕ ಬಂಧುಗಳನ್ನು ಆಕರ್ಷಿಸುತ್ತಾ ದಿನದಿಂದ ದಿನಕ್ಕೆ ಪ್ರಜ್ವಲಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ತನ್ನ ಸೇವಾ ಕಾರ್ಯಗಳ ಮೂಲಕ ಪ್ರಖ್ಯಾತಿಯನ್ನು ಪಡೆದು ಈ ಸೃಷ್ಟಿಗೆ ವರವಾದ ಪುಣ್ಯಧಾಮವಾಗಿದೆ. ತಮ್ಮ ಸೇವಾ ಕಾರ್ಯಗಳ ಮೂಲಕ ಕರ್ಮಯೋಗಿ ಎನಿಸಿಕೊಂಡಿರುವ ಯೋಗಿ ಕೌಸ್ತುಭ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರೇ ಈ ಪುಣ್ಯ ಕ್ಷೇತ್ರದ ಸಂಸ್ಥಾಪಕರು.
ಜನರಲ್ಲಿ ಸೇವಾ ಮನೋಭಾವ, ಸಮ್ಯೆಕ್ಯತೆ, ಸಹೋದರತ್ವ ಹಾಗೂ ಸಮಾನತೆಯನ್ನು ಬೆಳೆಸುವ ನಿಟ್ಟಿನಲ್ಲಿ ಹದಿಮೂರು ವರ್ಷಗಳ ಹಿಂದೆ ಸ್ವಾಮೀಜಿಯವರ ನೇತೃತ್ವದಲ್ಲಿ ಉದಯಿಸಿದ ಈ ಸಂಸ್ಥೆಯು ಜನತೆಗೆ ಶಾಂತಿ ಹಾಗೂ ನೆಮ್ಮದಿಯ ಜೀವನ ನಡೆಸಲು ದಾರಿ ತೋರಿಸುವ ಶಾಂತಿಧಾಮವಾಗಿದೆ. ನೆಮ್ಮದಿಯನ್ನು ಅನುಗ್ರಹಿಸುವ ಪ್ರಶಾಂತ ನಿಲಯವಾಗಿದೆ. ಆಶ್ರಮದ ಶ್ರೀ ಮಹಾಲಕ್ಷ್ಮೀ ಸೇವಾ ಟ್ಟಸ್ಟ್‌ನಿಂದ ಶಾಲಾ ಕಾಲೇಜಿನ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಶಾಲೆಗಳಿಗೆ ಶಿಕ್ಷಕರ ನೆರವು, ಮಹಿಳಾ ಹೊಲಿಗೆ ತರಬೇತಿ ಕೇಂದ್ರ, ವೈದ್ಯಕೀಯ ನೆರವು ಮತ್ತು ತಪಾಸಣಾ ಶಿಬಿರ, ಸೂರಿಲ್ಲದವರಿಗೆ ನೆರವು, ಶ್ರಮದಾನ ಶಿಬಿರಗಳು, ಅವಕಾಶ ವಂಚಿತ ಶಾಲಾ ಮಕ್ಕಳ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಭರಿಸುವುದು, ಸಂಸ್ಕಾರ, ಸಂಸ್ಕೃತಿ ಬಗ್ಗೆ ಸತ್ಸಂಗ, ಭಗವದ್ಗೀತೆ ಕಂಠಪಾಠ ಈ ಸಂಸ್ಥೆಯಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಸಹಸ್ರಾರು ಜನರ ನೊಂದ ದೇಹ ಮನಸ್ಸುಗಳಿಗೆ ಸ್ವಾಮೀಜಿ ತಮ್ಮ ಕರುಣೆಯ ಅಮೃತವನ್ನು ಧಾರೆ ಎರೆದಿದ್ದಾರೆ. ಖಂಡಿತಾ ಇದು ಪವಾಡವಲ್ಲ. ಆದರೆ ಸಾಮಾನ್ಯರಿಗೆ ಇದು ಪವಾಡ ಸದೃಶ. ಇಲ್ಲಿನ ಪರಿಸರದ ಜನರನ್ನು ಸೇವಾಕಾರ್ಯಗಳಿಗೆ ತೊಡಗಿಸುವ ನಿಟ್ಟಿನಲ್ಲಿ ಸ್ವಾಮೀಜಿಯವರು ಮಾಡಿರುವುದು ಒಂದು ಪವಾಡವೇ ಸರಿ. ಇದೊಂದು ಸರ್ವ ಧರ್ಮೀಯರ ಸಾಮರಸ್ಯದ ಕ್ಷೇತ್ರವಾಗಿದೆ. ಬರಿಗೈಯಲ್ಲಿ ಮಾಣಿಲಕ್ಕೆ ಬಂದ ಶ್ರೀ ಸ್ವಾಮೀಜಿಯವರ ಆಧ್ಯಾತ್ಮಿಕ ಸಾಧನೆಯಿಂದಾಗಿ ಮಾಣಿಲಕ್ಕೆ ಮಾಣಿಲವೇ ಅಭಿವೃದ್ಧಿಯಾಗಿದೆ.
ಜಿಲ್ಲೆಯಾದ್ಯಂತ ಹಾಗೂ ಸಮೀಪದ ಕೇರಳ ಗಡಿ ಪ್ರದೇಶದಲ್ಲಿರುವ ದೈವ ದೇವರುಗಳ ಜೀರ್ಣಾವಸ್ಥೆಯಲ್ಲಿದ್ದ ಅದೆಷ್ಟೋ ದೈವಸ್ಥಾನಗಳು ದೇವಾಲಯಗಳು ಸ್ವಾಮಿಗಳವರ ಮುಂದಾಳುತ್ವದಲ್ಲಿ ಜೀರ್ಣೋದ್ಧಾರಗೊಂಡಿದೆ. ವಿಟ್ಲ ಪಂಚಲಿಂಗೇಶ್ವರನ ಬ್ರಹ್ಮಕಲಶೋತ್ಸವದ ಅಧ್ಯಕ್ಷತೆಯ ಬಹುದೊಡ್ಡ ಜವಾಬ್ಧಾರಿ ಅವರ ಹೆಗಲೇರಿದಾಗ ಆ ಪಟ್ಟವನ್ನು ನಯವಾಗಿ ಬದಿಗಿರಿಸಿ ಸಾಮಾನ್ಯರಲ್ಲಿ ಸಾಮಾನ್ಯ ಭಕ್ತನಂತೆ ಜವಾಬ್ಧಾರಿಯನ್ನು ಮಾತ್ರ ಹೊತ್ತು ದೇವರ ಸೇವೆ ಮಾಡಲು ಮುಂದೆ ನಿಂತರು. ಪುತ್ತೂರು ಮಹಾಲಿಂಗೇಶ್ವರನ ಸೇವೆಯಲ್ಲಿ ತನ್ನನ್ನು ಸಮರ್ಪಿಸಿಕೊಂಡು ದೇವರ ಅನುಗ್ರಹವನ್ನು ಭಕ್ತರಿಗೆ ಧಾರೆಯೆರೆದಿದ್ದಾರೆ.

ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರು, ಅಂಚೆ : ಕನ್ಯಾನ, ಬಂಟ್ವಾಳ ತಾಲೂಕು, ದ.ಕ-574 279. ಫೋನ್: 08255-266788

ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರವು ಸುಮಾರು ಮೂವತ್ತೊಂದು ವರ್ಷಗಳಿಂದ ಪರಮ ಪೂಜನೀಯ ಶ್ರೀ ಮಹಾಬಲ ಸ್ವಾಮೀಜಿಯವರ ಸಂಕಲ್ಪ ಶಕ್ತಿ, ಮಾರ್ಗದರ್ಶನದಲ್ಲಿ ಆಸ್ತಿಕ ಬಂಧುಗಳ ಆಧ್ಯಾತಿಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಶ್ರೀ ಕ್ಷೇತ್ರದಲ್ಲಿ ಅವಿರತರಾಗಿ ಭಜನಾ ತರಬೇತಿ, ಯಕ್ಷಗಾನ ತರಬೇತಿ, ಸಾಂಸ್ಕ್ರತಿಕ ಕಾರ್ಯಕ್ರಮಗಳ ಮೂಲಕ ಸನಾತನ ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ.
ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ಪ್ರತಿ ದಿನನಿತ್ಯ ಪೂಜೆ, ಪ್ರತಿ ಶುಕ್ರವಾರ ಭಜನೆ, ವಿಶೇಷ ಪೂಜೆ, ಪ್ರತಿ ತಿಂಗಳು ಶ್ರೀ ಸತ್ಯನಾರಾಯಣ ಪೂಜೆ, ನವರಾತ್ರಿ ಉತ್ಸವ, ವರ್ಷಾವಧಿ ಮಹೋತ್ಸವ, ಸಾರ್ವಜನಿಕ ಶ್ರೀ ಶನೀಶ್ವರ ಪೂಜೆ, ನಾಗತಂಬಿಲ ಇತ್ಯಾದಿ ಪೂಜಾ ಕಾರ್ಯಗಳು ನಡೆಯುತ್ತಾ ಬರುತ್ತಿದೆ. ವಿಶೇಷ ಉತ್ಸವ ಸಂದರ್ಭಗಳಲ್ಲಿ ಸಮಾಜದ ಧರ್ಮ ಜಾಗೃತಿಗಾಗಿ ‘ಧಾರ್ಮಿಕ ಚಿಂತನಾ’ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಕಾರ್‍ಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರವ ಪೂರ್ವಕ ಸನ್ಮಾನ ಕಾರ್ಯಗಳನ್ನು ಶ್ರೀ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳುತ್ತಿದೆ.
ಶ್ರೀ ಕ್ಷೇತ್ರದ ಐತಿಹ್ಯವನ್ನು ತಿರುವಿ ಹಾಕಿದಾಗ ದೈವಜ್ಞರಿಂದ ವಿಶ್ಲೇಷಣಿ ಮತ್ತು ಚಿಂತನೆ ನಡೆಸಿದಾಗ ಕಂಡುಬಂದಂತೆ, ಹಿಂದೆ ಓರ್ವ ಮಹಾತಪಸ್ವಿಯ ಸಂಕಲ್ಪದಂತೆ ಇಲ್ಲಿ ನೆಲೆ ನಿಂತ ಶ್ರೀ ಚಾಮುಂಡೇಶ್ವರಿ ‘ಅನ್ಯಥಾ ಶರಣಂ ನಾಸ್ತಿ’ ಎಂದು ಬೇಡುವ ಭಕ್ತರಿಗೆ ಸಾಂತ್ವನದ ಅನುಗ್ರಹ ನೀಡುವ ಮಾತೆಯಾಗಿ ನೆಲೆ ನಿಂತಿದ್ದಾಳೆ.

ಶ್ರೀ ಗುರುದೇವದತ್ತ ಸಂಸ್ಥಾನಂ, ಶ್ರೀ ದತ್ತಾಂಜನೇಯ ಕ್ಷೇತ್ರ, ದಕ್ಷಿಣ ಗಾಣಗಾಪುರ, ಅಂಚೆ ಒಡಿಯೂರು ಬಂಟ್ವಾಳ ದ.ಕ. ಫೋ: 08255-266282

ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರ ಯೌಗಿಕ ಸಾಧನೆ, ಸಮಾಜ ಮುಖೀ ಜೀವನದ ದೃಷ್ಟಿ, ಅಧ್ಯಾತ್ಮ ವಿದ್ಯೆಯೊಂದಿಗೆ ಜೀವನ ಶಿಕ್ಷಣದ ಸ್ಪಷ್ಟ ಗುರಿಯ ಸಾಕ್ಷಿ ಶ್ರೀ ಗುರುದೇವದತ್ತ ಸಂಸ್ಥಾನ. ಅದು ಭಕ್ತ ಜನತೆಯ ಅಭಿಮಾನದ, ಭಕ್ತಿ-ಗೌರವದ ದಕ್ಷಿಣ ಗಾಣಗಾಪುರ. ಪಾತ್ರ-ಕ್ಷೇತ್ರಗಳ ಸಮನ್ವಯ ಶಕ್ತಿ ಇಲ್ಲಿ ರೂಪುಗೊಂಡು ಕ್ಷೇತ್ರ ನಡೆದು ಬಂದಿದೆ.
ಕರ್ನಾಟಕದ ದಕ್ಷಿಣದಲ್ಲಿ ಕೇರಳ ರಾಜ್ಯದ ಸೀಮಾವರ್ತಿ ಭಾಗವೆನಿಸಿದ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಒಡಿಯೂರಿನಲ್ಲಿ ಕಳೆದ ಎರಡು ದಶಕದಿಂದೀಚೆಗೆ ಪ್ರವರ್ಧನಮಾನ ಗೊಳ್ಳುತ್ತಿರುವ ದತ್ತ ಕ್ಷೇತ್ರವನ್ನು ನಾವು ಕಾಣಬಹುದು, ಇದೇ ಒಡಿಯೂರಿನ ಶ್ರೀ ದೇವದತ್ತ ಸಂಸ್ಥಾನ. ಪ್ರಾಣ ದೇವರ ಉಪನ್ಯಾಸಕರು, ಪ್ರಭು ದತ್ತಾತ್ರೇಯನ ಆರಾಧಕರು ಆಗಿರುವ ಪರಮಪೂಜ್ಯ ಶ್ರೀ ಗುರು ದೇವಾನಂದ ಸ್ವಾಮೀಜಿಯವರ ಸಾಧನಾ ಭೂಮಿಯಿದು. ಪೂಜ್ಯ ಶ್ರೀಗಳ ಅನನ್ಯ ಸದೃಷ್ಠಿ ಇದು. ಈ ಪುಣ್ಯ ತಾಣ ಕರ್ನಾಟಕದ ನಕಾಶೆಯಲ್ಲಿ ಅಗ್ರಮಾನ್ಯವಾಗಿ ಬೆಳಗುತ್ತಿದೆ.
ವೈರಾಗ್ಯ ಜೀವನವನ್ನು ತನ್ನದಾಗಿಸಿಕೊಂಡ ಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಆತ್ಮೋನ್ನತಿಯೊಂದಿಗೆ ಲೋಕಹಿತದ ಮಹತ್ವಾಕಾಂಕ್ಷೆಯಿರಿಸಿಕೊಂಡವರು. ಅದರ ಫಲಶ್ರುತಿ ೧೯೮೯ರಲ್ಲಿ ಶ್ರೀ ಗುರುದೇವದತ್ತ ಸಂಸ್ಥಾನ ಸ್ಥಾಪನೆ. ಇಲ್ಲಿ ಪೂಜ್ಯ ಶ್ರೀಗಳವರ ಸಂಕಲ್ಪ ಶಕ್ತಿ ಮತ್ತು ಧೀಶಕ್ತಿ ಸಮ್ಮಿಳಿತಗೊಂಡಿವೆ. ಶ್ರೀ ಸಂಸ್ಥಾನದಲ್ಲಿ ವಾರ್ಷಿಕ ಪರ್ವಗಳಾಗಿ ದತ್ತ ಜಯಂತಿ, ರಥೋತ್ಸವ, ಹನುಮಜಯಂತಿ, ನಾಗರಪಂಚಮಿ, ಲಲಿತಾ ಪಂಚಮಿಯಂತಹ ಆರಾಧನೋತ್ಸವಗಳು ವೈಭವದಿಂದ ಸಂಪನ್ನಗೊಳ್ಳುತ್ತವೆ. ಕಲಾತ್ಮಕವಾಗಿ ರೂಪುಗೊಂಡ ಇಲ್ಲಿಯ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ, ಮತ್ತಿತರ ನಿರ್ಮಾಣಗಳಲ್ಲಿ ಸಂಪ್ರದಾಯಿಕ ಬದ್ಧತೆಯಿದೆ. ಕಾಲಧರ್ಮಕ್ಕೋಪ್ಪುವ ನಾವೀನ್ಯವಿದೆ. ದೇಗುಲ ಸಂದರ್ಶನಕ್ಕೆ ಬಂದ ಯಾರೇ ಆದರೂ ಮಾನಸಿಕ ಪ್ರಸನ್ನತೆ ಪಡೆಯುತ್ತಾರೆ.

ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನ, ಅನಂತಾಡಿ ಗ್ರಾಮ ಮತ್ತು ಅಂಚೆ, ಬಂಟ್ವಾಳ – 574 253, ಮೊ: 9901150214

ಅನಂತಾಡಿಯಲ್ಲಿ ಉಳ್ಳಾಲ್ತಿ ಅಮ್ಮನವರ ಪ್ರವೇಶವಾಗುವಾಗ ಬಂಗರ ವಂಶಸ್ಥರ, ಅಧೀನರಾದ ಬಲ್ಲಾಳರು ಯಾರೊ ಇದ್ದಿರಬೇಕೆಂದು ತಿಳಿಯುತ್ತದೆ. ಅವರ ಬೀಡಿನ ಚಾವಡಿಯ ಮಂಚಮೆಯಲ್ಲಿ ವಿರಾಜಮಾನರಾದ ಅಮ್ಮರವರನ್ನು ಗೌರವಿಸದೆ, ಅನಾದರ ದಿಂದ ಕಂಡುದದರಿಂದ ಆ ಬಲ್ಲಾಳ ವಂಶವು ಅಮ್ಮನವರ ಪ್ರಕೋಪಕ್ಕೆ ಗುರಿಯಾಯಿತೆಂದು ಅಮ್ಮನವರಿಗೆ ದಾರಿಯಲ್ಲಿ ಬೆಳಕಿಗಾಗಿ ತೆಂಗಿನ ಚಪ್ಪರಿಕೆಯ ಸೂಟೆಗಳನ್ನು ಮಾಡಿಕೊಟ್ಟ ಬಿಲ್ಲವರ ಉಲ್ಲೇಖವಿರುವುದರಿಂದ ಕ್ರಮೇಣ ಬಲ್ಲಾಳರ ವಂಶ ನಿರ್ನಾಮವಾಗಿ ದೇವಿಯ ಸ್ಥಾನವು ಬಿಲ್ಲವರ ವಶಕ್ಕೆ ಬಂದಿರಬಹುದು. ಬಿಲ್ಲವ ಕಲ್ಲಾವು ತಿಮ್ಮ ಎಂಬವನ ಕಾಲದಲ್ಲಿ ದೇವಿಯ ಚಂದನನದ ಹೊಸಮೊಗವಾಯ್ತು ಎನ್ನುತ್ತಾರೆ. ಬಲ್ಲಾಳರು ಅಮ್ಮನವರನ್ನು ಆದರಿಸಿಕೊಂಡು ಬಂದು ಹಲವು ವರ್ಷಗಳು ಗತಿಸಿದ ನಂತರವೇ ಅಮ್ಮನವರಿಗೆ ಅನಾದರ ಅಥವಾ ಅವರಲ್ಲಿ ಅನಾಸ್ಥೆ ತೋರಿಸಬಹುದು. ಅಮ್ಮನವರು ಅನಂತಾಡಿಯಲ್ಲಿ ಕಾಣಿಸಿ ಕೊಂಡದನ್ನು ಪಾಡ್ಡನದಲ್ಲಿ ಕಾಲ್ಪನಿಕವಾಗಿ ಮೂವರು ಸ್ತ್ರೀಯರು ಮುಸ್ಸಂಜೆಯ ಸಮಯ ಗ್ರಾಮಕ್ಕೆ ಬಂದಾಗ ತೆಂಗಿನ ಮರದಲ್ಲಿ ಕಳ್ಳು ತೆಗೆಯುತ್ತಿದ್ದ ಪೂಜಾರಿ ನೋಡಿದನೆಂದೂ ಅವನಲ್ಲಿ ಉಳಕೊಳ್ಳಲು ಜಾಗ ಮತ್ತು ಆ ಜಾಗಕ್ಕೆ ಹೋಗುವ ದಾರಿ ಕೇಳಲು ಅವರು ರಾತ್ರಿಯಾದುದರಿಂದ ಅವರಿಗೆ ತೆಂಗಿನ ಮರದ ಚಪ್ಪರಿಕೆಯ ಸೂಟೆಗಳನ್ನು ಮಾಡಿಕೊಟ್ಟನೆಂದೂ ಅದೇ ಪೂಜಾರಿಗಳ ಮನೆತನದವರು ಇಂದಿಗೂ ನೇಮದ ಸಮಯದಲ್ಲಿ ಹಿಡಿದುಕೊಳ್ಳಲು ಸೂಟೆಗಳನ್ನು ಮಾಡಿಕೊಡುತ್ತಾರೆಂಬುದು ಐತಿಹ್ಯವಾಗಿ ಉಳಿದಿದೆ. ಅಲ್ಲದೇ ಅನಂತಾಡಿ ಗ್ರಾಮದಲ್ಲಿ ಯಾವುದೇ ಸಂದರ್ಭದಲ್ಲಿಯೂ ಇಂದಿಗೂ ತೆಂಗಿನ ಚಪ್ಪರಿಯ ಸೂಟೆ ಮಾಡುವುದಿಲ್ಲ. ಮೆಚ್ಚಿಯ ದಿನ ಬೆಳ್ಳಿ ಹಿಡಿಯ ಸೂಟೆಗಳನ್ನು ಹಿಡಿದು ದೇವಿ ಬಲಿ ಬರುವುದನ್ನು ಕಂಡು ಸಾವಿರಾರು ಜನರ ಕಣ್ಮನಗಳು ತಣಿಯುತ್ತವೆ. ಉಳ್ಳಾಲ್ತಿ ಪರಿವಾರ ದೈವಗಳಾದ ಮಲರಾಯ (ವಾರಾಹಿ) ಮತ್ತು ಪಿಲಿಚಾಮುಂಡಿ ಯರನ್ನೇ ಜನರು ಜೊತೆಯಲ್ಲಿ ಸ್ತ್ರೀರೂಪದಲ್ಲಿ ಬಂದ ದೈವಗಳೆಂದು ನಂಬಿರುತ್ತಾರೆ.
ಬಿಲ್ಲವರ ಯಜಮಾನ್ಯದ ನಂತರ ಬಂಟರ ಕಿಲ್ಲೆ ಮನೆತನವೊಂದು ದೇವಿಯ ಆರಾಧಕರಾಗಿದ್ದು ಕಂಡುಬರುತ್ತದೆ. ಸಂಕ ರೈ, ಉಮ್ಮಣ್ಣ ಕಿಲ್ಲೆ ಎಂಬವರು ಆಡಳಿತ ನಡೆಸಿ ವರ್ಷಾವಧಿ ಮೆಚ್ಚಿ ಮತ್ತಿತರ ಉತ್ಸವಗಳನ್ನು ನಡೆಸಿಕೊಂಡು ಬಂದುದಲ್ಲದೆ ದೇವಿಗೆ ಬೆಳ್ಳಿಯ ಮೊಗವನ್ನೂ ಮಾಡಿಸಿದರಂತೆ. ಸುಮಾರು 400 ವರ್ಷಗಳ ಹಿಂದೆ ಆ ಮನೆತನಕ್ಕೊದಗಿದ ಅಪಾರ ಕಷ್ಟ-ನಷ್ಟಗಳಿಂದಾಗಿ ತಮ್ಮ ಆಸ್ತಿಯನ್ನು ದೇವಿಯ ಸಹಿತ ಮಂಗಳೂರಿನ ಪೈಯವರಿಗೆ ಸಾಲಕ್ಕಾಗಿ ಹಸ್ತಾಂತರಿಸಬೇಕಾಗಿ ಬಂತು. ಇಂದಿಗೂ ಪ್ರಥಮ ಮೊಕ್ತೇಸರರಾಗಿ ದಂಡೆತ್ತಿಮಾರು ಗುತ್ತಿ ಸಾಹುಕಾರ ಪೈ ಮನೆತನವೇ ಪೂಜೆ ಮೆಚ್ಚಿಯ ಜಾತ್ರೆಯನ್ನು ನಿಯಮದಿಂದ ನಡೆಸಿಕೊಂಡು ಬರುತ್ತ್ತಿದ್ದಾರೆ. ಬೆಳ್ಳಿಪ್ಪಾಡಿ ಮನೆತನಕ್ಕೆ ಸೇರಿದ ನೇಲ್ತೊಟ್ಟು ಮನೆ ಎರಡನೇ ಗುತ್ತು. ತುಂಬೆಕೋಡಿ, ದೇಲಂತಿಮಾರು ಮತ್ತು ಕೊಂಬಿಲ ಗುತ್ತುಗಳು ಸೇರಿ ಗ್ರಾಮದ ೨೦ ಪ್ರಮುಖ ಗುತ್ತುಗಳು ಗ್ರಾಮ ಪದ್ಧತಿಯಂತೆ ಅನಂತಾಡಿ ಗ್ರಾಮದ ಒಕ್ಕೂಟಕ್ಕೂ ಬೇರೆ ಬೇರೆ ಜಾತಿಗಳ ಐಕ್ಯ ಮತ್ಯಕ್ಕೂ ಸಹಕರಿಸಿ ದೇವಿಯ ಸೇವೆಯನ್ನು ಪರಂಪರೆಯಿಂದ ನಡೆಸಿಕೊಂಡು ಬಂದಿರುತ್ತಾರೆ.
ಅನಂತಾಡಿ ಉಳ್ಳಾಲ್ತಿ ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಈ ಕ್ಷೇತ್ರವು ನಂಬಿದ ಭಕ್ತರ ಇಷ್ಠಾರ್ಥವನ್ನು ಈಡೇರಿಸುವ ಪುಣ್ಯ ಕ್ಷೇತ್ರವಾಗಿದೆ. ಸಂತಾನ ಭಾಗ್ಯ ಇಲ್ಲದ ಅದೆಷ್ಟೋ ಮಂದಿ ಇಲ್ಲಿ ಬಂದು ಭಕ್ತಿಯಿಂದ ಬೇಡಿಕೊಂಡ ಪ್ರಕಾರ ಅವರಿಗೆ ಸಂತಾನ ಭಾಗ್ಯ ಪ್ರಾಪ್ತವಾಗಿದೆ. ಸಂತಾನ ಭಾಗ್ಯ ದೊರೆತರೆ ಅಮ್ಮನಿಗೆ “ತೊಟ್ಟಿಲು ಬಾಲೆ” ಹಾಕುತ್ತೇನೆ ಎಂದು ಹರಕೆ ಹೇಳಿಕೊಂಡರೆ ಆ ದಂಪತಿಗೆ ಸಂತಾನ ಭಾಗ್ಯ ದೊರಕುತ್ತದೆ. ಪ್ರತಿ ವರ್ಷ ಇಲ್ಲಿಗೆ ಹರಕೆಯಾಗಿ ಒಪ್ಪಿಸುವ ತೊಟ್ಟಿಲು ಬಾಲೆ(ಮಗು)ಯ ಚಿನ್ನದ, ಬೆಳ್ಳಿಯ ಮೂರ್ತಿಗಳೇ ಇಲ್ಲಿ ಸಾಕ್ಷಿಯಾಗಿವೆ. ಇದಲ್ಲದೆ ದನ ಕರುಗಳಿಗೆ ಬರುವ ಖಾಯಿಲೆಗಳು, ಕಳವು ಪ್ರಕರಣ ಇತ್ಯಾದಿಗಳು ಸುಖಾಂತ್ಯವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಹೊತ್ತಿನ ಪೂಜೆ, ದೇವಸ್ಥಾನದ ರೀತಿಯಲ್ಲಿ ಇಲ್ಲಿಯೂ ಉಳ್ಳಾಲ್ತಿಗೆ ನೈವೇದ್ಯ ಅರ್ಪಣೆ ನಡೆಯುತ್ತಿದೆ. ಪ್ರತೀ ಸಂಕ್ರಮಣದಂದು ವಿಶೇಷ ಸೇವೆ ಮುಖ್ಯವಾಗಿ ಪೂತ ಪೂಜೆ, ಕುಂಕುಮಾರ್ಚನೆ ನಡೆಯುತ್ತದೆ.
ಪ್ರಸ್ತುತ ಆಡಳಿತ ಮೊಕ್ತೇಸರರಾಗಿ ಎಂ. ಮೋಹನ ಪೈ ದೊಡ್ಡಮನೆ ಹಾಗೂ ಬಿ.ನರೇಂದ್ರ ರೈ ನೆಲ್ತೊಟ್ಟು ದೈವಸ್ಥಾನದ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ವೇ.ಮೂ. ಸೀತಾರಾಮ ಬನ್ನಿಂತಾಯ ಕೊಬ್ರಿಮಠ ಪ್ರಧಾನ ಅರ್ಚಕರಾಗಿದ್ದಾರೆ.

ಶ್ರೀ ವನದುರ್ಗಾ ದೇವಸ್ಥಾನ ಪೇರಮೊಗರು, ಕೆದಿಲ ಗ್ರಾಮ, ಬಂಟ್ವಾಳ ತಾಲೂಕು. ಮೊ: 08255-262062

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೇರಮೊಗರಿನಲ್ಲಿ ಹೆದ್ದಾರಿಯಿಂದ ಸುಮಾರು ಒಂದು ಫರ್ಲಾಂಗು ದೂರದಲ್ಲಿ ಶ್ರೀ ವನದುರ್ಗಾ ದೇವಸ್ಥಾನ ಇದೆ. ಅಗಸ್ತ್ಯ ಮಹರ್ಷಿಗಳು ಭಾಗಮಂಡಲದ ತಪ್ಪಲು ಪ್ರದೇಶದಲ್ಲಿ ವಾಸಿಸಿ ಬರುತ್ತಿರುವ ಸಂದರ್ಭದಲ್ಲಿ ವನಾಸುರನೆಂಬ ರಾಕ್ಷಸ ಬ್ರಹ್ಮನ ವರಬಲದಿಂದ ಬೀಗಿ ದೇವತೆಗಳನ್ನು ಸೋಲಿಸಿದನಲ್ಲದೇ ತನ್ನ ಮಾಯಾಜಾಲದಿಂದ ಕೊಳ, ಸರೋವರಗಳನ್ನು ಸೃಷ್ಟಿಸಿ ಋಷಿಮುನಿಗಳನ್ನು ಅವುಗಳಲ್ಲಿ ಸ್ನಾನ ಮಾಡುವಂತೆ ಪ್ರೇರೇಪಿಸಿ, ಪೀಡಿಸಿ ತನ್ಮೂಲಕ ನಾನಾ ರೋಗಗಳು ಬರುವಂತೆ ಮಾಡಿ ಅವರಿಗೆ ನಾನಾ ರೀತಿಯ ಕಷ್ಟಗಳನ್ನು ಕೊಟ್ಟಾಗ ಸಂಕಷ್ಟಕ್ಕೊಳಗಾದ ದೇವ-ದೇವತೆಗಳು ಮತ್ತು ಋಷಿಗಳು ಅಗಸ್ತ್ಯ ಮಹರ್ಷಿಗಳ ಮೊರೆ ಹೋದರು. ಈ ವನಾಂತರದ ಮಧ್ಯೆ ಶ್ರೀ ಮಹಾದುರ್ಗಾಹವನವನ್ನು ಅಗಸ್ತ್ಯ ಮಹರ್ಷಿಗಳು ನೆರವೇರಿಸಿದಾಗ, ಜಗನ್ಮಾತೆಯು ಪ್ರಸನ್ನಳಾದಳೆಂದೂ, ತಮ್ಮ ಕಷ್ಟವನ್ನು ನಿವೇದಿಸಿದಾಗ ಅಭಯಪ್ರದಳಾದ ಆ ತಾಯಿಯು ವನದುರ್ಗಾ ದೇವಿಯಾಗಿ ವನಾಸುರನ್ನು ಸಂಹರಿಸಿ, ರೋಗರುಜಿನಗಳನ್ನೆಲ್ಲ ದೂರಮಾಡಿದಳೆಂದೂ ಪ್ರತೀತಿ. ಹೀಗೆ ವನದುರ್ಗೆಯಾಗಿ ರಾಕ್ಷಸರನ್ನು ಚೆಂಡಾಡಿ ನೆಲೆನಿಂತ ಕ್ಷೇತ್ರವೇ ದೇವಿಯ ಆಡುಂಬೊಲವಾಗಿ ದೇಂತಡ್ಕವಾಯಿತೆಂದು ಪ್ರತೀತಿ. ಅಂದು ತುಳುನಾಡನ್ನು ಆಳುತ್ತಿದ್ದ ವೀರ ಬಂಗರಸು ತನಗೆ ಸಂತಾನಭಾಗ್ಯವಿಲ್ಲದೇ ಕೊರಗಿ, ದೇಂತಡ್ಕದಲ್ಲಿ ವನದುರ್ಗೆಯನ್ನು ಆರಾಧಿಸಿಕೊಂಡು ಬರುತ್ತಿದ್ದ ಸಿದ್ಧ ಸನ್ಯಾಸಿಯನ್ನು ಸಂಪರ್ಕಿಸಿ ತನ್ನ ಅಳಲನ್ನು ತೋಡಿಕೊಂಡಾಗ ಅವರು ಶ್ರೀ ವನದುರ್ಗಾ ದೇವಿಗೆ ದೇವಸ್ಥಾನ ನಿರ್ಮಿಸಿಕೊಡುತ್ತೇನೆಂದು ಪ್ರಾರ್ಥಿಸಿದಲ್ಲಿ ನಿನ್ನ ಇಷ್ಟಾರ್ಥ ಪೂರೈಸುವುದಾಗಿ ಹೇಳಿದಂತೆಯೇ ಆತನಿಗೆ ಸಂತಾನ ಪ್ರಾಪ್ತಿಯಾದರೂ ಅವನ ಮಾತಿಗೆ ತಪ್ಪಿದಾಗ ಮಗು ಅನಾರೋಗ್ಯಪೀಡಿತವಾಯಿತೆಂದೂ, ಕೂಡಲೇ ಅರಸನು ದೇವಸ್ಥಾನ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು ತನ್ನ ಮಗುವಿಗೆ ಬಂದ ಆಪತ್ತನ್ನು ದೂರಮಾಡಿಕೊಂಡನೆಂದೂ ತಿಳಿದುಬರುತ್ತದೆ. ಈಗ ದೇವಾಲಯ ಜೀರ್ಣೋದ್ಧಾರಗೊಂಡು ಪ್ರತೀ ವರ್ಷ ಜಾತ್ರೆ, ಬಲಿವಾಡು ಕೂಟ ಮುಂತಾದ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ.
ಶ್ಯಾಮ ಭಟ್-೯೯೬೪೧೫೭೩೫೨, ಆಡಳಿತ ಸಮಿತಿ ಅಧ್ಯಕ್ಷರು-ಸುಂದರ ಭಟ್.

ಪುಣಚ ಶ್ರೀ ಮಹಿಷಮರ್ಧಿನಿ ದೇವಸ್ಥಾನ, ಪುಣಚ ಗ್ರಾಮ, ಬಂಟ್ವಾಳ ತಾಲೂಕು, ದೂರವಾಣಿ: 08255-262062

ಪೆರಿಯಾಲ್ತಡ್ಕ ಮಾರ್ಗವಾಗಿ ಪುತ್ತೂರಿಗೆ ಸಾಗುವ ರಸ್ತೆಯಲ್ಲಿ ಸುಮಾರು ೮ ಕಿ.ಮೀ ದೂರದಲ್ಲಿ ಪ್ರಶಾಂತ ರಮಣೀಯ ಪ್ರಕೃತಿಯ ಮಡಿಲ ಮಧ್ಯೆ ಇರುವ, ವಿಟ್ಲ ಡೊಂಬಯ್ಯ ಹೆಗ್ಗಡೆ ಅರಸು ಮೊಕ್ತೇಸರತನಕ್ಕೆ ಸೇರಿದ ೧೬ ದೇವಸ್ಥಾನಗಳಲ್ಲಿ ಪುಣಚದ ಶ್ರಿ ಮಹಿಷಮರ್ದಿನಿ ದೇವಸ್ಥಾನವೂ ಒಂದು.
ಪ್ರಾಚ್ಯ ಸಂಶೋಧಕ ದಿ| ಗುರುರಾಜ ಭಟ್ಟರು ಅಭಿಪ್ರಾಯ ಪ್ರಕಾರ ಈ ದೇಗುಲ ಸರಿ ಸುಮಾರು ೯ನೇ ಶತಮಾನದಷ್ಟು ಹಳೆಯದಾದುದು ಎನ್ನಲಾಗಿದೆ. ಇಲ್ಲಿರುವ ದ್ವಿಬಾಹುವುಳ್ಳ ಮಹಿಷಮರ್ದಿನಿ ದೇವಿಯ ಶಿಲಾಮೂರ್ತಿಯ ಕೆಳ ಭಾಗದಲ್ಲಿ ಮಹಿಷನನ್ನು ಸಂಹರಿಸುವ ಭಂಗಿ ಇದೆ. ಒಂದು ಐತಿಹ್ಯದ ಪ್ರಕಾರ ಬಹು ಶತಮಾನಗಳ ಹಿಂದೆ ಈ ಸ್ಥಳದಲ್ಲಿ ರಾಕ್ಷಸೀ ಸ್ವಭಾವದ ಕ್ರೂರವಾದ, ಅಷ್ಟೇ ಭಯಂಕರವಾದ ಮಹಿಷವೊಂದು ಊರಿನ ಜನರಿಗೆ ಕಂಟಕಪ್ರಾಯವಾಗಿತ್ತು. ಅದೆಷ್ಟೋ ಜನರನ್ನು ಬಲಿ ತೆಗೆದುಕೊಂಡಿತ್ತು. ಈ ಕೋಣನ ಉಪಟಳ ಎಲ್ಲೇ ಮೀರುತ್ತಿದ್ದಂತೆ ಇಲ್ಲಿಯೇ ತಪಸ್ಸನ್ನಾಚರಿಸುತ್ತಿದ್ದ ಸಾಧುವೊಬ್ಬರಿಗೆ ಜನ ದಾನವ ವರ್ತನೆಯ ಕೋಣನಿಂದ ಆಗುತ್ತಿರುವ ತೊಂದರೆಯನ್ನು ವಿವರಿಸಿ ಅದರಿಂದ ಮುಕ್ತರನ್ನಾಗಿಸುವಂತೆ ಮೊರೆಯಿಟ್ಟರು. ಈ ಸಾಧು ಶ್ರೀದುರ್ಗಾ ದೇವಿಯನ್ನು ಮೆಚ್ಚಿಸಿ ಜನರ ಕಷ್ಟಗಳನ್ನು ಪರಿಹರಿಸುವಂತೆ ಬೇಡಿಕೊಂಡರು ಆಗ ದೇವಿ ಅಸುರ ಪ್ರವೃತ್ತಿಯ ಮಹಿಷನನ್ನು ಸಂಹರಿಸಿದಳು ಎಂಬ ನಂಬಿಕೆಯಿದೆ.ಅನಂತರ ಆ ಸಾಧು ಮಹಿಷನನ್ನು ಸಂಹರಿಸಿದ ದೇವಿಯ ಶಿಲಾಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ವಿಟ್ಲ ಸೀಮೆಯನ್ನು ಆಳುತ್ತಿದ್ದ ಡೊಂಬಯ್ಯ ಹೆಗ್ಗಡೆ ಅರಸು ವಂಶಸ್ಥರಿಗೂ ಹಾಗೂ ಸಾಧುವಿನ ಮಧ್ಯೆ ಯಾವುದೋ ಕಾರಣದಿಂದ ವೈಷಮ್ಯ ಬಂದು ಸಾಧು ಆ ಸ್ಥಳ ತ್ಯಜಿಸಿ ಬೇರೆಡೆಗೆ ತೆರಳಿದ್ದರು.
ಮುಂದೆ ಕಾಲಕ್ರಮದಲ್ಲಿ ಎತ್ತರದ ಗುಡ್ಡ ಪ್ರದೇಶದ ಹುತ್ತದ ಮೇಲೆ ಸೊಪ್ಪನ್ನು ಹೆರೆಯುತ್ತಿದ್ದ ಹರಿಜನ ಮಹಿಳೆಯೊಬ್ಬರ ಕತ್ತಿಯ ತುದಿಗೆ ದೇವಿಯ ಮೂರ್ತಿಯು ಸ್ಪರ್ಶಿಸಿ ಅಲ್ಲಿ ರಕ್ತ ಜಿನುಗಿತೆಂದೂ, ಈ ವಿಚಾರವನ್ನು ಊರವರಿಗೆ ತಿಳಿಸಿದ ನಂತರ ಸೀಮೆಯರಸರಾದ ಡೊಂಬಯ್ಯ ಹೆಗ್ಗಡೆ ಅರಸರಿಗೆ ಸುದ್ದಿ ಮುಟ್ಟಿಸಲಾಯಿತು. ದೇವಿಯ ಮೂರ್ತಿ ದೊರೆತ ಆ ಜಾಗಕ್ಕೆ ‘ದೇವೆರೆ ಗುಡ್ಡೆ’ ಎಂಬ ಹೆಸರು ಬಂದಿತು.
ಡೊಂಬಯ್ಯ ಹೆಗ್ಗಡೆ ಅರಸರ ನೇತೃತ್ವದಲ್ಲಿ ದೇವೆರೆ ಗುಡ್ಡೆಯ ಉತ್ತರಭಾಗದಲ್ಲಿ ವಾಸ್ತು ಶಾಸ್ತ್ರ ಪ್ರಕಾರ ದೇವಳ ನಿರ್ಮಿಸಿ ದೇವಿಯ ಮೂರ್ತಿಯನ್ನು ವೈದಿಕ,ಧಾರ್ಮಿಕ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಎಂದು ತಿಳಿದು ಬಂದಿದೆ. ಹುತ್ತ ಮೃತ್ತಿಕೆಯೊಳಗೆ ದೇವಿ ಪ್ರಕಟಗೊಂಡಿದ್ದರಿಂದ ಈ ಗ್ರಾಮಕ್ಕೆ ‘ಪುಂಚ’ ಎಂದು ಹೆಸರು ಬಂದಿತು. ತದ ನಂತರ ‘ಪುಳಿಂಚ’ ಎಂದು ಸ್ಥಳನಾಮ ರೂಪಾಂತರಗೊಂಡು ಇದೀಗ ‘ಪುಣಚ’ ಎಂದು ಕರೆಯಲ್ಪಡುತ್ತಿದೆ.
ಪುಣಚ ಗ್ರಾಮ ದೇವರಾದ ಶ್ರೀಮಹಿಷಮರ್ದಿನಿ ದೇವಿಯ ವಿಗ್ರಹ ಪುರಾಣದ ಮಹಿಷಮರ್ದಿನಿಯಂತೆ ಬಹುಬಾಹು ಹೊಂದಿರದೇ ದ್ವಿಬಾಹುವಿರುವ ಮಹಿಷನನ್ನು ಸಂಹರಿಸುವ ಕೆತ್ತನೆಯುಳ್ಳ ಶಿಲಾ ವಿಗ್ರಹ. ಸಂಕಷ್ಟ, ದುರಿತಗಳಿಂದ ಜರ್ಜಾರಿತರಾದ ಭಕ್ತ ಮಂದಿ ತನ್ನಲ್ಲಿ ಇಷ್ಟಾರ್ಥವನ್ನು ಬೇಡಿಕೊಂಡರೆ ಅವರ ಬೇಡಿಕೆಗಳನ್ನು ಈಡೇರಿಸಿ ಸಾಂತ್ವನವೀಯುವ ಕರುಣಾಮಯಿ, ಸರ್ವೇಶ್ವರಿ ಆಗಿದ್ದಾಳೆ. ಎಮ್ಮೆ,ಕೋಣಗಳು ಸಾಕುವುದು ನಿಷಿದ್ಧ: ಪುಣಚ ಮಹಿಷಮರ್ದಿನಿ ದೇವಸ್ಥಾನದ ವ್ಯಾಪ್ತಿಯಲ್ಲಿ ಎಮ್ಮೆ, ಕೋಣಗಳನ್ನು ಸಾಕಬಾರದೆಂಬ ರೂಢಿಯಿದೆ. ಒಂದು ವೇಳೆ ಈ ಪದ್ಧತಿಯನ್ನು ಧಿಕ್ಕರಿಸಿದರೆ ಅನಾಹುತ ನಡೆಯುತ್ತದೆ, ಗಂಡಾಂತರ ಒದಗುತ್ತದೆ ಎಂಬ ನಂಬಿಕೆಯಿದೆ. ಬಹು ಸಮಯದ ಹಿಂದೆ ಇಲ್ಲಿ ಈ ಪದ್ಧತಿಯನ್ನು ಧಿಕ್ಕರಿಸಿ ಗದ್ದೆ ಉಳುಮೆ ಮಾಡಿದ ಜೋಡಿ ಕೋಣಗಳು ಕಲ್ಲಾಗಿ ಹೋದವು ಎಂಬುದಕ್ಕೆ ದೇವಾಲಯದ ಎದುರು ಬದಿಯ ಗದ್ದೆಯಲ್ಲಿ ಈಗಲೂ ಸಹ ಜೋಡಿ ಕಲ್ಲಿನ ಸಾಕ್ಷಿ ಇದೆ.
ಆಡಳಿತ ಮಂಡಳಿ: ವಿಟ್ಲ ಅರಮನೆಯ ಜನಾರ್ದನ ವರ್ಮರವರು ಅನುವಂಶೀಯ ಮೊಕ್ತೇಸರಾಗಿದ್ದಾರೆ. ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಎಸ್.ಆರ್. ರಂಗಮೂರ್ತಿ(ಅಧ್ಯಕ್ಷರು), ಬೈಲುಗುತ್ತು ಮಾರಪ್ಪ ಶೆಟ್ಟಿ (ಉಪಾಧ್ಯಕ್ಷರು), ಶ್ರೀಧರ ಶೆಟ್ಟಿ ದೇವರಗುಂಡಿ(ಕಾರ್‍ಯದರ್ಶಿ), ಮಲ್ಯ ಶಂಕರನಾರಾಯಣ ಭಟ್ (ಕೋಶಾಧಿಕಾರಿ)

ಶ್ರೀ ಮಹಾವಿಷ್ಣು ದೇವಸ್ಥಾನ ದೇಂತಡ್ಕ-ಕಳೆಂಜ, ಪೆರ್ನೆ-ಬಿಳಿಯೂರು, ಬಂಟ್ವಾಳ ತಾಲೂಕು – 574 279

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಜಂಕ್ಷನ್‌ನಿಂದ ಸುಮಾರು ೨ ಕಿ.ಮೀ. ದೂರದಲ್ಲಿರುವ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರು ಗ್ರಾಮದಲ್ಲಿರುವ ಕಳೆಂಜ ದೇಂತಡ್ಕ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸುಮಾರು ೬೦೦ ವರ್ಷಗಳ ಇತಿಹಾಸ ಇದೆ. ಪೂರ್ವದಿಂದ ಪಶ್ಚಿಮಕ್ಕೆ ಹರಿಯುವ ನೇತ್ರಾವತಿ ನದಿಯ ದಕ್ಷಿಣ ಭಾಗದಲ್ಲಿರುವ ಈ ದೇವಸ್ಥಾನದಲ್ಲಿ ಶಂಖ, ಚಕ್ರ ಗಧಾ, ಪದ್ಮದಾರಿಯಾದ ಶ್ರೀ ವಿಷ್ಣುವಿನ ಮೂರ್ತಿ ಇದೆ.
೧೯೯೯ರಲ್ಲಿ ಊರವರು ಸೇರಿಕೊಂ.ಡು ಬಾರಿಕೆಗುತ್ತು ರವಿರಾಜ ಆರಿಗರ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿ ಶ್ರೀ ದೇವಳದ ಪುನರ್ ನಿರ್ಮಾಣಕ್ಕೆ ಅಡಿಪಾಯ ಹಾಕಿದರು.
೨೦೧೦ನೇ ದಶಂಬರ ತಿಂಗಳಲ್ಲಿ ಈ ದೇವಸ್ಥಾನ ಪುನರ್ ನಿರ್ಮಾಣಗೊಂಡು ಶ್ರೀ ದೇವರಿಗೆ ಬ್ರಹ್ಮಕಲಶಾಭಿಷೇಕ ನಡೆದಿದೆ. ಇದರ ಹಿಂದಿನ ಆಡಳಿತದಾರರು ಪಡ್ನೂರು ಪಟ್ಟೆ ಜೈನ ಮನೆತನಕ್ಕೆ ಸೇರಿದವರಾಗಿದ್ದು ಕಾಲಕ್ರಮೇಣ ಭೂ ಸುಧಾರಣಾ ಕಾನೂನಿನಂತೆ ಉಂಬಳಿ ಬರತಕ್ಕ ಸ್ಥಳ ಗೇಣಿದಾರರ ಪಾಲಾಯಿತು. ಆಗ ಸದ್ರಿ ಮನೆತನದವರು ಪೂಜಾ ಕಾರ್ಯಗಳು ನಿಲ್ಲಬಾರದು ಎಂಬ ಕಾರಣದಿಂದ ಅಂದಿನ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಮದಾಸ ರೈ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ವ್ಯವಸ್ಥೆಯನ್ನು ವಹಿಸಿಕೊಳ್ಳುವಂತೆ ವಿನಂತಿಸಿಕೊಂಡರು. ಅಂದಿನಿಂದ ಊರವರನ್ನು ಸೇರಿಸಿಕೊಂಡು ಶ್ರೀ ದೇವರಿಗೆ ನಿತ್ಯ ಪೂಜೆ ಹಾಗೂ ನವರಾತ್ರಿ ಉತ್ಸವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ. ದೇವಾಲಯದಲ್ಲಿ ದೇವರಿಗೆ ದಿನನಿತ್ಯ ಪೂಜೆ, ಧನುರ್ಮಾಸದ ೧೩ ನೇ ತಾರೀಕಿನಂದು ವಾರ್ಷಿಕ ಜಾತ್ರೆ, ಪ್ರತೀ ಸಂಕ್ರಾತಿಯಂದು ಬೈಲುವಾರು ಸಮಿತಿಗಳ ಮೂಲಕ ವಿಶೇಷ ಪೂಜೆ, ದೇವಿಗೆ ದುರ್ಗಾ ನಮಸ್ಕಾರ ಪೂಜೆ, ಅನ್ನಸಂತರ್ಪಣೆ ನಡೆಯುತ್ತಿದೆ. ನಾಗದೇವರು, ರಕ್ತೇಶ್ವರಿ, ಚಾಮುಂಡಿ ಹಾಗೂ ಪರಿವಾರ ದೈವಗಳಿಗೆ ತಂಬಿಲಾದಿ ಕಾರ್ಯಗಳು ನಡೆಯುತ್ತಾ ಬಂದಿದೆ.

ಕೇಪು ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕೇಪು ಗ್ರಾಮ, ಬಂಟ್ವಾಳ ತಾಲೂಕು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪ್ರಶಾಂತ ಪರಿಸರದಲ್ಲಿ ನೆಲೆನಿಂತಿರುವ ಶತಮಾನಗಳ ಇತಿಹಾಸವಿರುವ ವಿಟ್ಲ ಸೀಮೆಯ ಭಕ್ತಾದಿಗಳ ಅನುಗ್ರಹಮಾತೆ ಶ್ರೀ ಉಳ್ಳಾಲ್ತಿ ದುರ್ಗಾಪರಮೇಶ್ವರೀ ದೇವಿ ಕ್ಷೇತ್ರವು ವಿಟ್ಲ ಸಮೀಪದ ಉಕ್ಕುಡದಿಂದ ಕಾಸರಗೋಡು ಮಾರ್ಗದಲ್ಲಿ ಸುಮಾರು ೩ ಕಿಮೀ ರಸ್ತೆ ಕ್ರಮಿಸಿದಾಗ ಸಿಗುವ ಕಲ್ಲಂಗಳ ಎಂಬಲ್ಲಿಂದ ಮಣ್ಣಿನ ರಸ್ತೆಯಲ್ಲಿ ೨ ಕಿ.ಮೀ. ಸಾಗಿದಾಗ ಕಾಣ ಸಿಗುತ್ತದೆ. ತುಳು ಜಿಲ್ಲೆಯಲ್ಲಿ ಪಂಚ ಉಳ್ಳಾಲ್ತಿ ಸಹೋದರಿ ದೈವ ಕ್ಷೇತ್ರಗಳಿವೆ. ಬಂಟ್ವಾಳ ತಾಲೂಕಿನ ಮಾಣಿ, ಅನಂತಾಡಿ, ಕೇಪು, ಕೆಲಿಂಜ ಮತ್ತು ಪುತ್ತೂರು ತಾಲೂಕಿನ ಬಲ್ನಾಡು ಎಂಬಲ್ಲಿ ಈ ದೈವಿಕ ಶಕ್ತಿಗಳ ದೇವಾಲಯವಿದೆ. ಕೇಪು ಉಳ್ಳಾಲ್ತಿ ಎರಡನೆಯ ಸಹೋದರಿ ಎಂಬ ನಂಬಿಕೆಯಿದೆ.
ಕಜಂಬು ಸೇವೆ : ಕೇಪು ಉಳ್ಳಾಲಿ ದೈವಿಕ ಶಕ್ತಿಗೆ ಮಕ್ಕಳಿಲ್ಲವೆಂಬ ಪ್ರತೀತಿಯಿದ್ದು, ಆ ಕಾರಣದಿಂದ ತನ್ನ ಭಕ್ತರಿಂದ ಮಕ್ಕಳನ್ನೇ ಹರಕೆಯ ರೂಪದಲ್ಲಿ ಪಡೆಯುವ ‘ಕಜಂಬು’ ಸಂಪ್ರದಾಯ ಕ್ಷೇತ್ರದಲ್ಲಿ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ. ಈ ವಿಶಿಷ್ಟ ಹರಕೆ ಜಾತ್ರೋತ್ಸವದಲ್ಲಿ ಸೀಮೆಗೆ ಸಂಬಂಧಪಟ್ಟ ಸಹಸ್ರಾರು ಮಕ್ಕಳು ಹರಕೆ ರೂಪದಲ್ಲಿ ಒಪ್ಪಿಸಿಕೊಳ್ಳುತ್ತಾರೆ. ಹರಕೆ ನಡೆದ ಬಳಿಕ ಮಕ್ಕಳ ಹೆಸರಲ್ಲಿ ನೀಡುವ ಬಲಿವಾಡು ಸೇವಾ ಪ್ರಸಾದ ಸಮೀಪದ ಸುಬ್ರಾಯ ದೇವಸ್ಥಾನದಲ್ಲಿ ಉಂಡು ಹೋಗಬೇಕು.
ಕಜಂಬು ಕಾರ್‍ಯಕ್ರಮ ರಾತ್ರಿ ಸುಮಾರು ಒಂದುವರೆ ಗಂಟೆಗೆ ಸಮಾಪ್ತಿಯಾಗುತ್ತದೆ. ಆ ಬಳಿಕ ಉಳ್ಳಾಲ್ತಿಗೆ ನೇಮೋತ್ಸವ ನಡೆಯುತ್ತದೆ. ಅದು ಹೊರಗಿನ ಅಂಗಣದಲ್ಲಿ. ಆ ದಿನವೇ ಜನ್ಮ ತಾಳಿದ ಕೋಳಿ ಮರಿಯೊಂದನ್ನು ಉಳ್ಳಾಲ್ತಿ ದೈವವು ಮೇಲಕ್ಕೆ ಹಾರಿಸುತ್ತದೆ. ಅದು ಕೆಳಗೆ ಬೀಳದೆ ಮೇಲೆಯೇ ಮಾಯವಾಗಿ ಬಿಡುತ್ತದೆ. ಅದಕ್ಕೆ ಉಳ್ಳಾಲ್ತಿ ಕಟ್ಟು ನೆರಿ ಇಳಿಯುವುದು ಎನ್ನುತ್ತಾರೆ. ಈ ಸಂದರ್ಭದಲ್ಲಿ ಯಾವುದೇ ಹೆಣ್ಣು ಸಂತಾನ ದೇವಾಲಯದ ಅಂಗಣದಲ್ಲಿರುವುದು ನಿಷಿದ್ಧವಾಗಿದೆ.
ನಂತರ `ನಾಲ್ಪೋಳು’ ಎಂಬ ದೈವಮಾನಿಗಳು ಕೇಪು ಗ್ರಾಮದ ಪಶ್ಚಿಮ ಪ್ರದೇಶಕ್ಕೆ ತೆರಳುತ್ತಾರೆ. ಸಂಪ್ರದಾಯದಂತೆ ಆಯಕಟ್ಟಿನ ದೈವ ದೇವರುಗಳ ಸನ್ನಿಧಿಗಳಿಗೆ ೩ ದಿನಗಳ ಭೇಟಿ ನೀಡಿ ಭಕ್ತರಿಗೆ ಉಳ್ಳಾಲ್ತಿ ಅಮ್ಮನ ಅಭಯ ನೀಡಿ ಕಾಣಿಕೆ, ಹರಿಕೆಗಳನ್ನು ಸ್ವೀಕರಿಸಿ ಮರಳಿ ಬಂದು ಗಣಗಳಿಗೆ ೩೯ ಕೋಳಿಗಳ ಬಲಿ ನಡೆದು, ಏರಿದ ಧ್ವಜವನ್ನು ಇಳಿಸುವಲ್ಲಿಗೆ ಕಜಂಬು ಉತ್ಸವ ಮುಕ್ತಾಯವಾಗುತ್ತದೆ. ಪ್ರತಿ ವರ್ಷ ತುಳು ತಿಂಗಳ ಜಾರ್ದೆ ೨೦ರಂದು ಅಂಗಳಕ್ಕೆ ಹಾರೆ ಹಾಕುವ ಕಾರ್ಯಕ್ರಮದಿಂದ ಜಾತ್ರೋತ್ಸವ ಆರಂಭವಾಗುತ್ತದೆ. ಜಾರ್ದೆ ಇಪ್ಪತ್ತೇಳುವರೆ ದಿನ ಅರಮನೆಯಿಂದ ಆಜ್ಞೆಯಾಗಿ `ನಾಲ್ಪೋಳು’ ಎಂಬ ದೈವಮಾನಿಗಳು ಕೇಪು ಗ್ರಾಮದ ಪೂರ್ವ ಪ್ರದೇಶಕ್ಕೆ ತೆರಳುತ್ತಾರೆ. ಸಂಪ್ರದಾಯದಂತೆ ಆಯಕಟ್ಟಿನ ದೈವ ದೇವರುಗಳ ಸನ್ನಿಧಿಗಳಿಗೆ ೩ ದಿನಗಳ ಭೇಟಿ ನೀಡಿ ಭಕ್ತರಿಗೆ ಉಳ್ಳಾಲ್ತಿ ಅಮ್ಮನ ಅಭಯ ನೀಡಿ ಕಾಣಿಕೆ, ಹರಿಕೆಗಳನ್ನು ಸ್ವೀಕರಿಸಿ ಧನು ಸಂಕ್ರಮಣದಂದು ದೇವಾಲಯದ ಸಮೀಪವಿರುವ ಮಲರಾಯ ದೈವದ ಮಾಣಿಯ ಮನೆ ಸೇರುತ್ತಾರೆ. ಅಲ್ಲಿ ಕೇಪು ಮತ್ತು ಅಳಿಕೆ ಗ್ರಾಮ ಗುರಿಕ್ಕಾರರವರು ಮತ್ತು ಊರ ಸಮಸ್ತರು ಸೇರಿ ಮಲರಾಯ ಭಂಡಾರ ಕೊಟ್ಯದಿಂದ ದೈವದ ಭಂಡಾರ ತೆಗೆದು ಅದನ್ನು ಉಳ್ಳಾಲ್ತಿ ದೇವಿಯ ಸನ್ನಿಧಿಯಲ್ಲಿರಿಸಿ ದೈವದ ಸೇವಾ ಕೈಂಕರ್ಯಾದಿಗಳು ನಡೆದಾಗ ತಡರಾತ್ರಿಯಾಗಿರುತ್ತದೆ. ನಂತರ ಉಳ್ಳಾಲ್ತಿ ದೇವಿಯ ಜಾತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತದೆ. ದೇವಸ್ಥಾನದ ಆಡಳಿತ ವಿಟ್ಲ ಅರಮನೆಗೆ ಒಳಪಟ್ಟಿದ್ದು, ಜನಾರ್ದನ ವರ್ಮರವರು ಅನುವಂಶೀಯ ಮೊಕ್ತೇಸರರಾಗಿದ್ದಾರೆ.

ಶ್ರೀ ಉಳ್ಳಾಲ್ತಿ ದೈವಸ್ಥಾನ, ಮಾಣಿ

ನಾಡಿನಾದ್ಯಂತ ವೈಭವದಿಂದ ಕಂಗೊಳಿಸುತ್ತಿರುವ ವಿವಿಧ ದೇವಸ್ಥಾನ-ದೈವಸ್ಥಾನಗಳು ಕರಾವಳಿಯ ಉದ್ದಗಲಕ್ಕೂ ಧಾರ್ಮಿಕ ಪರಂಪರೆಯಲ್ಲಿ ಹೆಸರುವಾಸಿಯಾಗಿದ್ದು ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದಲ್ಲಿ ಹಚ್ಚ ಹಸಿರಿನಿಂದ ಪ್ರಾಕೃತಿಕ ಸೌಂದರ್ಯಗಳ ಮಧ್ಯೆ ತಲೆ ಎತ್ತಿ ನಿಂತಿರುವ ಐತಿಹಾಸಿಕ ಪರಂಪರೆಯ ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿ ಅದ್ಭುತವೇ ಸರಿ. ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ರಾಮಾಯಣ-ಮಹಾಭಾರತದ ಕಾಲದಲ್ಲಿಯೂ ಗುರುತಿಸಿಕೊಂಡ ಸುಳ್ಳಮಲೆ-ಬಳ್ಳಮಲೆ ಬೆಟ್ಟ ಬೆಟ್ಟದಲ್ಲಿ ನಾಡಿನಾದ್ಯಂತ ಪ್ರಚಾರದಲ್ಲಿರುವ ಗುಹಾತೀರ್ಥಸ್ನಾನ, ವಿಶಾಲವಾದ ಸುಳ್ಳಮಲೆಯ ಪೂರ್ವ ದಿಕ್ಕಿನ ತಪ್ಪಲಿನಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನ, ಒಂದೆಡೆ ವಿಶಾಲವಾದ ಕಂಬಳ ಗದ್ದೆ- ಇನ್ನೊಂದೆಡೆ ಬಾಕಿಮಾರು ಗದ್ದೆ ಇವುಗಳ ಮಧ್ಯೆ ಮಾಣಿಗುತ್ತು ಮನೆ-ದೈವಗಳ ಚಾವಡಿ- ಭಂಡಾರದ ಮನೆ. ತುಳುನಾಡಿನ ಇತಿಹಾಸದಲ್ಲಿ ಬರುವ ಐದು ಉಳ್ಳಾಲ್ತಿ ಕ್ಷೇತ್ರಗಳಾದ ಮಾಣಿ, ಅನಂತಾಡಿ, ಕೆಲಿಂಜ, ಕೇಪು ಮತ್ತು ಬಲ್ನಾಡು ಕ್ಷೇತ್ರದಲ್ಲಿ ಮಾಣಿ ಕ್ಷೇತ್ರವು ಒಂದಾಗಿದೆ. ಬಹಳ ನಂಬಿಕೆಯ ಕಾರಣಿಕವನ್ನು ಹೊಂದಿರುವ ಕ್ಷೇತ್ರವೂ ಇದಾಗಿದೆ. ಕ್ಷೇತ್ರದ ಪ್ರಧಾನ ದೈವವಾಗಿ ಶ್ರೀ ಉಳ್ಳಾಲ್ತಿ ಅಮ್ಮನವರಾದರೆ, ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ ಮತ್ತು ಮಲೆಕೊರತಿ ಗ್ರಾಮದ ಪ್ರಧಾನ ದೈವಗಳಾಗಿವೆ. ಉಳ್ಳಾಲ್ತಿ ಮಾತೆಗೆ ಕಾಲಾವಧಿ ಒಂದು ಮೆಚ್ಚಿ ಜಾತ್ರೆಯಾದರೆ, ದೈವಗಳಿಗೆ ಗ್ರಾಮದಲ್ಲಿ ಕಾಲಾವಧಿ ಏಳು ನೇಮೋತ್ಸವಗಳು ನಡೆಯುತ್ತವೆ. ನಾಗಾರಾಧನೆ, ಕಂಬಳ ಕೋರಿ, ಪ್ರತಿ ತಿಂಗಳ ಸಂಕ್ರಮಣ ಆಚರಣೆ, ವನಭೋಜನ, ಗುಳಿಕ ದೈವಕ್ಕೆ ಅಗೇಲು ಸೇವೆ, ಮಹಾಮ್ಮಾಯಿ ಅಮ್ಮನಿಗೆ ಗೊಂದೋಳು ಸೇವೆ ಹೀಗೆ ಗ್ರಾಮದಲ್ಲಿ ಹತ್ತು ಹಲವು ಧಾರ್ಮಿಕ ಕಾರ್ಯಗಳು ನಡೆಯುತ್ತಲೇ ಇರುತ್ತದೆ.
ಉಳ್ಳಾಲ್ತಿ ಅಮ್ಮನವರ ಮೆಚ್ಚಿ ಜಾತ್ರೆ ವರ್ಷದಿಂದ ವರ್ಷಕ್ಕೆ ವಿಜ್ರಂಭಣೆಯಿಂದಲೇ ನಡೆಯುತ್ತಾ ಬರುತ್ತಿದೆ. ಮೆಚ್ಚಿ ಜಾತ್ರೆಯ ಹಿಂದಿನ ದಿನ ರಾತ್ರಿ ಮಾಣಿ ಗುತ್ತು ಮನೆಯಿಂದ ಭಂಡಾರ ಶ್ರೀ ಕ್ಷೇತ್ರಕ್ಕೆ ಬರುವುದು ನಿಜಕ್ಕೂ ಅದ್ಭುತವೇ ಹೌದು. ಶ್ರೀ ಉಳ್ಳಾಲ್ತಿ ಅಮ್ಮನವರು ಅಲಂಕಾರಗೊಂಡ ಪಲ್ಲಕಿಯಲ್ಲಿ ವಿರಾಜಮಾನರಾದರೆ, ಚಿನ್ನ-ಬೆಳ್ಳಿ-ವಜ್ರ ವೈಢೂರ್ಯಗಳ ಇನ್ನಿತರ ದೈವಗಳ ವಸ್ತುಗಳು ಮತ್ತು ಶ್ರೀ ಗುಡ್ಡೆ ಚಾಮುಂಡಿ-ಪಂಜುರ್ಲಿ ದೈವಗಳ ಮೂರ್ತಿ ಭಂಡಾರದಲ್ಲಿ ಬರುವುದು ವಾಡಿಕೆ. ಭಂಡಾರ ಆಗಮಿಸಿದ ಬಳಿಕ ಸಂಪ್ರದಾಯದಂತೆ ಕೊಡಿಯೇರುವ ಕಾರ್ಯಕ್ರಮವೂ ನಡೆಯುತ್ತದೆ. ಮೆಚ್ಚಿ ಜಾತ್ರೆಯಂದು ಆರಂಭದಲ್ಲಿ ಕ್ಷೇತ್ರಶುದ್ಧವಾದ ಬಳಿಕ ಬ್ರಹ್ಮರಿಗೆ ಸೇವೆಯಾಗಿ, ಆ ಬಳಿಕ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಬೆಳಗ್ಗಿನಿಂದಲೇ ನಡೆಯುತ್ತದೆ. ದೊಡ್ಡ ಗಾತ್ರದ ಹಳೆಯ ಅಣಿ ಹೂವು ಮತ್ತು ಚಿನ್ನ ಬೆಳ್ಳಿಗಳ ಹಲವು ಅಲಂಕಾರಿಕ ವಸ್ತುಗಳಿಂದ ಶೃಂಗಾರಗೊಂಡು ಶ್ರೀ ಉಳ್ಳಾಲ್ತಿ ಮಾತೆಯ ಮೊಗ ಧರಿಸಿ ಸೇವೆ ಮಾಡುವುದು ಅಪರೂಪ ಮತ್ತು ವಿಶೇಷತೆಯೇ ಹೌದು. ಕೊಂಬು, ವಾದ್ಯ, ಸ್ಯಾಕ್ಸೋಫೋನ್, ಶಂಖ, ಜಾಗಟೆಗಳ ಸುಮಧುರ ಸಂಗೀತದ ಮೂಲಕ ಸೇವೆ ನಡೆಯುತ್ತದೆ. ಚಪ್ಪರ ಮುಹೂರ್ತ ಮೆಚ್ಚಿಯ ಮೂರು ದಿವಸದ ಮೊದಲು, ಕ್ಷೇತ್ರದಲ್ಲಿ ಚಪ್ಪರ ಮುಹೂರ್ತ ಸಂಪ್ರದಾಯ ಹಿಂದಿನ ಕಟ್ಟುಪಾಡು ಪ್ರಕಾರ ತಂತ್ರಿಗಳು ಉಳ್ಳಾಲ್ತಿ ಅಮ್ಮನವರಲ್ಲಿ ಪ್ರಾರ್ಥಿಸಿ, ಚಪ್ಪರಕ್ಕೆ ಸಂಬಂಧಪಟ್ಟ ಗ್ರಾಮದ ಭಕ್ತರು ಒಟ್ಟು ಸೇರಿ ಚಪ್ಪರವನ್ನು ತಯಾರಿಸಿ, ಚಪ್ಪರ ಏರುವುದು ರೂಢಿ. ಆ ಬಳಿಕ ಕ್ಷೇತ್ರದಿಂದ ಕಾಲ್ನಡಿಗೆಯಲ್ಲಿ ಹೊರಟು ಉಳ್ಳಾಲ್ತಿ ಅಮ್ಮನವರ ಅಣಿಯನ್ನು ತಯಾರಿಸಬೇಕಾದ ಅಡಿಕೆ ಹಾಳೆಗೆ ಕೆದಿಲ ಗ್ರಾಮದ ಕೆದಿಲ ಶ್ರೀನಿವಾಸ ಭಟ್‌ರವರ ಮನೆಗೆ ಹೋಗಿ ಅಲ್ಲಿ ಬೆಲ್ಲ-ನೀರು ಸ್ವೀಕರಿಸಿ ಅಡಿಕೆ ಹಾಳೆಯನ್ನು ತಲೆಯಲ್ಲಿಯೇ ಹೊತ್ತುಕೊಂಡು ನಡೆದುಕೊಂಡು ಕ್ಷೇತ್ರಕ್ಕೆ ಆಗಮಿಸಿ ಸಂಪ್ರದಾಯ ಪ್ರಕಾರ ಆಗಬೇಕಾದ ವಿಧಿ ವಿಧಾನಗಳು ಕ್ಷೇತ್ರದಲ್ಲಿ ನಡೆಯುವುದು. ಅಲ್ಲದೆ ಮೂರು ದಿನ ಕ್ಷೇತ್ರದ ಬಾಕಿಮಾರು ಗದ್ದೆಯಲ್ಲಿ ಚೆಂಡು ಹಾಕುವ ಸಂಪ್ರದಾಯ ನಡೆಯುವುದು.
ಪ್ರತಿಷ್ಠಾ ದಿನಾಚರಣೆ ನೀಲೇಶ್ವರ ಉಚ್ಚಿಲತ್ತಾಯ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವೇದಮೂರ್ತಿ ಸೀತಾರಾಮ ನೂರಿತ್ತಾಯರ ಹಿರಿತನದಲ್ಲಿ ಪಳನೀರು ಅನಂತ ಭಟ್ಟರ ಉಸ್ತುವಾರಿಯಲ್ಲಿ ಕ್ಷೇತ್ರದ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ೨೦೦೬ನೇ ಇಸವಿಯ ಜನವರಿ ತಿಂಗಳ ೧೪ರಿಂದ ೧೯ರ ವರೆಗೆ ಬ್ರಹ್ಮಕಲಶೋತ್ಸವದ ಸೇವೆಯು, ನೂತನ ದೈವಸ್ಥಾನ ಜೀರ್ಣೋದ್ಧಾರ ಕಾರ್ಯಗಳೊಂದಿಗೆ ನಡೆದಿರುವುದು ಜನಮಾನಸದಲ್ಲಿ ಈಗಲೂ ಅಚ್ಚಳಿಯದೇ ಉಳಿದಿದೆ. ಪ್ರತಿಷ್ಠಾ ದಿನಾಚರಣೆಯ ನೆನಪನ್ನು ಮರುಕಳಿಸುವಂತೆ, ಪ್ರತೀ ವರ್ಷ ಜನವರಿ ತಿಂಗಳ ೧೯ರಂದು ಸಾರ್ವಜನಿಕವಾಗಿ ಚಂಡಿಕಾಹೋಮ, ಶ್ರೀ ಸತ್ಯನಾರಾಯಣ ಪೂಜೆ, ಮಹಾಅನ್ನಸಂತರ್ಪಣೆ ಅತ್ಯಂತ ಅಪೂರ್ವವಾಗಿ ನಡೆದುಕೊಂಡು ಬರುತ್ತಿದೆ. ಅಲ್ಲದೇ ಮಾಣಿಗುತ್ತಿನ ಹಿಂದಿನ ಹಿರಿಯರೂ, ಅನಾದಿಕಾಲದ ಪ್ರಮುಖರೂ ಆಗಿದ್ದ ಮಾಣಿಗುತ್ತು ನಾಗಪ್ಪ ನಾಯ್ಗರ ಸ್ಥಾನದಲ್ಲಿ ಪ್ರಸ್ತುತ, ಗುತ್ತಿನ ಮನೆಯ ಕಿರಿಯರಾದ ಸಚಿನ್ ರೈಯವರು ಎಲ್ಲ ಸೇವೆಗಳನ್ನು ಮುಂದೆ ನಿಂತು ನಡೆಸಿಕೊಂಡು ಬರುತ್ತಿದ್ದಾರೆ.