ಬಲ್ನಾಡು ಗ್ರಾಮ

ಶ್ರೀ ದಂಡನಾಯಕ-ಉಳ್ಳಾಲ್ತಿ ದೈವಸ್ಥಾನ, ಉಜ್ರುಪಾದೆ ಅಂಚೆ, ಬಲ್ನಾಡು, ಪುತ್ತೂರು -574203

ಪುರಾತನವೂ, ಅತ್ಯಂತ ಕಾರಣಿಕವೂ ಆದ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನವು ಪುತ್ತೂರು ತಾಲೂಕು ಕೇಂದ್ರದಿಂದಅಂದಾಜು ೨ ಕಿ.ಮೀ. ದೂರದಲ್ಲಿದೆ. ದಂಡನಾಯಕ ಉಳ್ಳಾಲ್ತಿ ದೈವಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸಮೀಪದ ಕುಮಾರ ಪರ್ವತದಿಂದ ಶ್ರೀ ಸುಬ್ರಹ್ಮಣ್ಯ ದೇವರ ಅಪ್ಪಣೆ ಪ್ರಕಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಬಂದು ಅಲ್ಲಿಂದ ಶ್ರೀ ದೇವರ ಅನುಜ್ಞೆಯಂತೆ ಶ್ರೀ ದೈವಗಳು ಬಲ್ನಾಡಿನಲ್ಲಿ ಬಂದು ನೆಲೆ ನಿಂತದ್ದಾಗಿರುತ್ತದೆಂದೂ, ನಂಬ್ಯರೆಂಬ ಬಲ್ಲಾಳರ ಕಾಲದಲ್ಲಿ ಶ್ರೀ ದೈವಗಳ ನೆಲೆಯಾಯಿತೆಂದೂ ಶ್ರೀ ದೈವಗಳ ನುಡಿಕಟ್ಟಿನಿಂದ ತಿಳಿದು ಬರುತ್ತದೆ.
ಪ್ರಧಾನ ದೈವಸ್ಥಾನವು ಶ್ರೀ ದಂಡನಾಯಕ ದೈವದ್ದಾಗಿದ್ದು ಶ್ರೀ ಉಳ್ಳಾಲ್ತಿಯು ತಂಗಿಯಾಗಿರುತ್ತಾಳೆ. ಸದ್ರಿ ದೈವಗಳಲ್ಲದೆ ಕಾಳರಾಹು ಮತ್ತು ಮಲರಾಯ ದೈವಸ್ಥಾನಗಳಿವೆ. ಶ್ರೀ ದೈವಗಳ ಭಂಡಾರದ ಕೊಟ್ಟಿಗೆಯು ದೈವ ಸ್ಥಾನದಿಂದ ಅಂದಾಜು ಅರ್ಧ ಫರ್ಲಾಂಗು ದೂರದಲ್ಲಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೂ ಸದ್ರಿ ದೈವಗಳಿಗೂ ಪರಸ್ಪರ ಸಂಬಂಧಗಳಿದ್ದು, ಶ್ರೀ ದೇವರ ವರ್ಷಾವಧಿ ಜಾತ್ರೆಯ ಕೆರೆ ಉತ್ಸವ ದಿವಸ ದೈವಗಳ ಕಿರುವಾಳು ಮಹಾಲಿಂಗೇಶ್ವರ ದೇವರ ಸನ್ನಿಧಿಗೆ ಹೋಗಿ ಮರುದಿವಸ ದೇವರ ರಥೋತ್ಸವದ ನಂತರ ಬಲ್ನಾಡಿಗೆ ವಾಪಾಸು ಬರುವುದು ಸಂಪ್ರದಾಯವಾಗಿದೆ.
ದೈವಸ್ಥಾನದಲ್ಲಿ ಕನ್ಯಾ ಸಂಕ್ರಮಣ, ಮಕರ ಸಂಕ್ರಮಣ, ದೀಪಾವಳಿ ಪಾಡ್ಯ ಮತ್ತು ಪತ್ತನಾಜೆಗಳಲ್ಲಿ ರಾತ್ರಿ ದೈವಗಳ ಭಂಡಾರ ತೆಗೆದು ತಂಬಿಲಗಳಿವೆ. ಅಲ್ಲದೆ ನವರಾತ್ರಿ ಸಮಯದಲ್ಲಿ ಪ್ರತಿ ದಿವಸ ರಾತ್ರಿ ನವರಾತ್ರಿ ಪೂಜೆಗಳಿವೆ. ದೈವಗಳ ವರ್ಷಾವಧಿ ನೇಮ ನಡಾವಳಿಗಳು ಪ್ರತಿ ವರ್ಷ ಎಪ್ರಿಲ್ ೨೮ರಂದು ನಡೆಯುತ್ತದೆ. ನೇಮ ನಡಾವಳಿಯ ಹಿಂದಿನ ದಿವಸ ದೈವಗಳ ಭಂಡಾರ ತೆಗೆದು ತಂಬಿಲಾದಿಗಳು ಮತ್ತು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆದು ಬರುತ್ತದೆ. ಸಿಂಹ ಮಾಸದ ಅಮವಾಸ್ಯೆಯಂದು ನೂರಾರು ಮಂದಿ ಇಲ್ಲಿ ತೀರ್ಥ ಸ್ನಾನ ಮಾಡುತ್ತಾರೆ. ಇಲ್ಲಿಯ ಯಾವುದೇ ಪಂಚ ವರ್ಷಗಳ ಸಮಯದಲ್ಲಾಗಲೀ ನೇಮ ನಡಾವಳಿಯ ಸಂದರ್ಭದಲ್ಲಾಗಲೀ ಶ್ರೀ ದೈವಸ್ಥಾನದ ಪರಿಸರದಲ್ಲಿ ವ್ಯಾಪಾರ ವಹಿವಾಟುಗಳು ಪೂರ್ವ ಕಟ್ಟಳೆಯಂತೆ ನಿಷೇಧಿಸಲ್ಪಟ್ಟಿದೆ.
ಇಲ್ಲಿಯ ಸಂಪ್ರದಾಯದಂತೆ, ನಿತ್ಯದಲ್ಲಾಗಲೀ ಪಂಚ ಪರ್ವಗಳ ದಿವಸಗಳಲ್ಲಾಗಲೀ ಸ್ತ್ರೀಯರು ಶ್ರೀ ದೈವಸ್ಥಾನದ ಗೋಪುರದ ಒಳಗೆ ಪ್ರವೇಶಿಸುವಂತಿಲ್ಲ ಅಲ್ಲದೆ ಶ್ರೀ ಉಳ್ಳಾಲ್ತಿ ದೈವದ ನೇಮವನ್ನು ಸ್ತ್ರೀಯರು ನೋಡುವಂತಿಲ್ಲ. ಇಲ್ಲಿಯ ಎಲ್ಲಾ ತಂಬಿಲಗಳು ರಾತ್ರಿ ನಡೆಯುವಂತದ್ದಾಗಿರುತ್ತದೆ. ಎಲ್ಲಾ ತಂಬಿಲಗಳಿಗೂ ಶ್ರೀ ದೈವಗಳ ಭಂಡಾರ ಕೊಟ್ಟಿಗೆಯಿಂದ ದೈವಗಳ ಕಿರುವಾಳು ತೆಗೆದು ದೈವಸ್ಥಾನಗಳಿಗೆ ಹೋಗಿ ಅಲ್ಲಿ ತಂಬಿಲಾದಿಗಳು ನಡೆಯುವಂತದ್ದಾಗಿರುತ್ತದೆ. ನವರಾತ್ರಿ ಪೂಜೆ ಆರಂಭ ಹಾಗೂ ಕೊನೆಯ ದಿವಸ ಶ್ರೀ ದಂಡ ನಾಯಕ ಮತ್ತು ಉಳ್ಳಾಲ್ತಿ ಪಾತ್ರಿಗಳಿಗೆ ದೈವಗಳ ಆವೇಶ ಬಂದು ನುಡಿಕಟ್ಟು ಮಾಡುವ ಸಂಪ್ರದಾಯವಿದೆ.
ವ್ಯವಸ್ಥಾಪನಾ ಸಮಿತಿ: ಅಧ್ಯಕ್ಷರು – ಚನಿಲ ತಿಮ್ಮಪ್ಪ ಶೆಟ್ಟಿ, ಸದಸ್ಯರು – ಬಿ. ಸೀತಾರಾಮ ಭಟ್, ಡಿ. ಸುಬ್ಬಣ್ಣ ಭಟ್, ಸದಾಶಿವ ನೆಲ್ಲಿತ್ತಾಯ, ಬಾಲಕೃಷ್ಣ ಕಟ್ಟೆಮನೆ, ಬಿ.ಕೆ. ಬಟ್ಯಪ್ಪ ಪೂಜಾರಿ, ಕೊಗ್ಗ ನಾಯ್ಕ ಪಾಲೆಚ್ಚಾರು, ಪಿ. ಮೋಹಿನಿ ನಾಯ್ಕ, ಇಂದಿರಾ ನಾಯ್ಕ, ಇಂದಿರಾ ಕೊರಗಪ್ಪ ಕುಲಾಲ್, ಕಛೇರಿ ನಿರ್ವಾಹಕರು – ಎನ್. ಚಂದ್ರಶೇಖರ ಭಟ್

ಶ್ರೀ ಭಟ್ಟಿ ವಿನಾಯಕ ದೇವಸ್ಥಾನ ಬಲ್ನಾಡು ಉಜ್ರುಪಾದೆ ಅಂಚೆ, ಪುತ್ತೂರು ದ.ಕ.-574203, ಫೋನ್: 235288

ಪುತ್ತೂರು ತಾಲೂಕು ಕೇಂದ್ರದಿಂದ ಅಂದಾಜು ೪ ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ಯಾವ ಉಪದೇವರು ಇಲ್ಲದೆ, ಇಲ್ಲಿ ಶ್ರೀ ವಿನಾಯಕ ಒಂಟಿಯಾಗಿ ನೆಲೆಸಿದ್ದಾನೆ.
ಶ್ರೀ ದೇವಸ್ಥಾನವು ೩೦೦ ವರ್ಷಗಳಿಗಿಂತಲೂ ಪುರಾತನವಾಗಿದ್ದು, ಬಲ್ನಾಡು ದೇವಸ್ಯದ ಗೌಡ ಮನೆತನದವರಿಂದ ಸ್ಥಾಪಿಸಲ್ಪಟ್ಟಿರುತ್ತದೆ. ಶ್ರೀ ರಕ್ತೇಶ್ವರಿ, ಪಂಜುರ್ಲಿ, ಗುಳಿಗಗಳು ಇಲ್ಲಿಯ ಸ್ಥಳ ದೈವಗಳಾಗಿವೆ.ಈ ದೇವಾಲಯವು ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯೇ ಇಲ್ಲಿಯ ಆಡಳಿತ ನಡೆಸಿಕೊಂಡು ಬರುತ್ತಿದೆ. ಇಲ್ಲಿಯ ವಿನಾಯಕನು ಬಾಲ ಗಣಪತಿಯಾಗಿರುತ್ತಾನೆ.
“ಅಪ್ಪ ಕಜ್ಜಾಯ”ಶ್ರೀ ದೇವರ ಅತಿ ಇಷ್ಟವಾದ ಸೇವೆ. ವಿದ್ಯೆಯ ವಿಷಯವಾಗಿ ವಿಶೇಷ ಅನುಗ್ರಹ ಸಾನಿಧ್ಯದಿಂದಾಗುತ್ತಿದೆ. ಮಕರ ಮಾಸದ ೧೬ನೇ ದಿವಸ ಇಲ್ಲಿ ವರ್ಷಾವಧಿ ಉತ್ಸವ ನಡೆಯುತ್ತದೆ. ಸೌರಮಾನ ಯುಗಾದಿ, ಭಾದ್ರಪದ ಶುಕ್ಲ ಚೌತಿ, ನವರಾತ್ರಿ ಪೂಜೆಗಳು, ದೀಪಾವಳಿ ಹಬ್ಬ ಇಲ್ಲಿಯ ವಿಶೇಷ ಪರ್ವಗಳು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:

* ಶ್ರೀ ವನಶಾಸ್ತಾರ ಕ್ಷೇತ್ರ ಬಲ್ನಾಡು, ೨೩೫೨೮೮

* ಶ್ರೀ ಕಲ್ಲಕಿನ್ನಾಯ ದೈವಸ್ಥಾನ ಬೆಳಿಯೂರುಕಟ್ಟೆ

* ಶ್ರೀ ಕಲ್ಲುರ್ಟಿ ದೈವಸ್ಥಾನ ಪದವು

* ಶ್ರೀ ಲಕ್ಷ್ಮೀ ವೆಂಕಟ್ರಮಣ ಮಠ ಸಾರ್ಯ

* ಶ್ರೀ ದುರ್ಗಾ ವೆಂಕಟ್ರಮಣ ಭಜನಾ ಮಂಡಳಿ ಸಾಜ