ಶ್ರೀ ರಾಮಕುಂಜೇಶ್ವರ ದೇವಸ್ಥಾನ, ರಾಮಕುಂಜ ಅಂಚೆ, ಪುತ್ತೂರು, ದ.ಕ-574 241. ಫೋನ್: 258050, 9845766534
ಉಪ್ಪಿನಂಗಡಿಯಿಂದ 12 ಕಿ.ಮೀ. ದೂರದಲ್ಲಿ ಶ್ರೀ ರಾಮಕುಂಜೇಶ್ವರ ದೇವಸ್ಥಾನವಿದೆ. ರಾಮ ನೆಲೆಸಿದ ಕುಂಜ (ಕಾಡು) ರಾಮಕುಂಜ. ಪುರಾತನ ಹಿನ್ನೆಲೆಯನ್ನೊಳಗೊಂಡಿರುವ ಈ ದೇವಾಲಯದಲ್ಲಿ ವರ್ಷಂಪ್ರತಿ ಮಕರ ಮಾಸದ ಹುಣ್ಣಿಮೆಯಂದು ದೇವರ ಸಂಭ್ರಮದ ರಥೋತ್ಸವ ನಡೆಯುತ್ತಾ ಬಂದಿದೆ.
ರಾಮ ಹಾಗೂ ಈಶ್ವರನಿಗೆ ಇಲ್ಲಿ ನಿತ್ಯಪೂಜೆ ನಡೆಯುತ್ತದೆ. ದೇವಾಲಯದ ವಠಾರದಲ್ಲಿ ನಾಗದೇವರ ಗುಡಿಯಿದ್ದು ಜಾತ್ರೋತ್ಸವದ ವೇಳೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಮಸ್ಕಾರ ಮಂಟಪ, ಕನ್ಯಾ ಮಂಟಪ, ಎರಡು ಅಂತಸ್ತಿನ ವಾಸ್ತುವನ್ನು ಹೊಂದಿರುವ ಈ ದೇವಾಲಯದ ಮುಂಭಾಗದಲ್ಲಿ ತಾಮ್ರ ಹೊದಿಸಿರುವ ಧ್ವಜಸ್ತಂಭ, ಗುಡಿಯೊಳಗೆ ರಾಮ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹೊರಾಂಗಣದಲ್ಲಿ ಶಾಸ್ತಾರನನ್ನು ಪ್ರತಿಷ್ಠಾಪಿಸಲಾಗಿದ್ದು ಈತ ಕ್ಷೇತ್ರ ಪಾಲಕನಾಗಿದ್ದಾನೆ. ಪ್ರವೇಶದ್ವಾರದ ಬಳಿ ಪಾದ ಮಾತ್ರದಿಂದ ಕಂಗೊಳಿಸುತ್ತಿರುವ ನಂದಿ ಇಲ್ಲಿನ ಮತ್ತೊಂದು ವಿಶೇಷತೆ. ಇಲ್ಲಿರುವ ನಂದಿಯ ಶಿರಭಾಗ ಶಿಶಿಲದ ಶ್ರೀ ಶಿಶಿಲೇಶ್ವರನ ಸನ್ನಿಧಿಯಲ್ಲೂ, ನಡುಭಾಗ ಕೊಕ್ಕಡದ ವೈದ್ಯನಾಥೇಶ್ವರ ಸನ್ನಿಧಿಯಲ್ಲೂ ಇದೆಯೆನ್ನಲಾಗಿದೆ.
ದೇವಾಲಯದ ವಾಯುವ್ಯ ದಿಕ್ಕಿನಲ್ಲಿ ಕಲೆಂಬಿತ್ತಾಯ, ರುದ್ರಚಾಮುಂಡಿ, ಶಿರಾಡಿ ದೈವ, ಪಂಜುರ್ಲಿ, ಕಲ್ಲುರ್ಟಿ, ಗುಳಿಗ ಮೊದಲಾದ ೧೬ ದೈವಗಳ ನೆಲೆ ಇದ್ದು, ಧ್ವಜಾವರೋಹಣಗೊಂಡ ಬಳಿಕ ಶ್ರೀ ದೈವಗಳಿಗೆ ನೇಮ ನಡೆಯುತ್ತದೆ. ದೈವಗಳ ತಾಣವಿರುವ ಸಮೀಪದಲ್ಲಿ ಬನವೊಂದಿದೆ.
ಶ್ರೀ ರಾಮಕುಂಜ ದೇವಾಲಯದ ನೈರುತ್ಯ ದಿಕ್ಕಿನಲ್ಲಿ ಗ್ರಾಮೀಣ ಭಾಷೆಯಲ್ಲಿ ‘ದೇಲ ಗುಡ್ಡೆ’ ಎಂದು ಕರೆಯಲ್ಪಡುವ ಗರಿಯೊಂದಿದ್ದು ಕೈಲಾಸವಾಸಿಯಾದ ಈಶ್ವರನು ಈ ಗುಡ್ಡೆಯ ಸೊಬಗನ್ನು ಕಂಡು ಸಂತಸಗೊಂಡು ಇಲ್ಲಿ ನೆಲೆಗೊಂಡ ಎಂಬ ಮಾತು ಈಗಲೂ ಪ್ರಚಲಿತದಲ್ಲಿದೆ. ಇತ್ತ ಶ್ರೀರಾಮಚಂದ್ರನು ತಂದೆ ದಶರಥನ ಮಾತು ಉಳಿಸುವುದಕ್ಕೋಸ್ಕರ ಸೀತಾನ್ವೇಷಣೆಯ ಕಾಲದಲ್ಲಿ ಈ ಪ್ರದೇಶದಲ್ಲಿ ಬಂದು ಕೆಲಕಾಲ ನೆಲೆಸಿರುವ ಬಗ್ಗೆ ಇತಿಹಾಸದಿಂದ ತಿಳಿದುಬರುತ್ತದೆ. ರಥೋತ್ಸವದ ಮೊದಲ ದಿನ ಸಂಜೆ ದೇವಾಲಯದಿಂದ ಅಲಂಕೃತಗೊಂಡು ಸವಾರಿ ಹೊರಟ ಈಶ್ವರನ ಉತ್ಸವ ಮೂರ್ತಿಗೆ ಈರಕೀ ಮಠದ ದಂಡ ತೀರ್ಥದಲ್ಲಿ ಕೆರೆ ಉತ್ಸವ ನಡೆದು ದೇಲಗುಡ್ಡೆಯಲ್ಲಿ ಕಟ್ಟೆಪೂಜೆ ನಡೆದ ಬಳಿಕ ರಥಬೀದಿಗೆ ಆಗಮಿಸುತ್ತಿರುವಂತೆಯೇ ಅತ್ತ ರಾಮನ ಅಲಂಕೃತಗೊಂಡ ಉತ್ಸವಮೂರ್ತಿ ಸಹ ರಥಬೀದಿಗೆ ಬಂದು ಈಶ್ವರನನ್ನು ಸಂದರ್ಶಿಸುವ ಕಾರ್ಯಕ್ರಮವಿದೆ. ಇದನ್ನು ‘ಶ್ರೀರಾಮ ಸಂದರ್ಶನೋತ್ಸವ’ ಎಂದು ಕರೆಯಲಾಗುತ್ತದೆ.
ಇಲ್ಲಿ ಪೂರ್ವಾಹ್ನ 9.30, ಸಾಯಂಕಾಲ ೬.೦೦ಗೆ ನಿತ್ಯಪೂಜೆ ನಡೆಯುತ್ತದೆ.
ಇಲ್ಲಿಯವರೆಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ – ರಾಮಕುಂಜ ಮುರಾರಿರಾವ್, ಸದಸ್ಯರುಗಳು: ಸಂಪ್ಯಾಡಿ ಪೂವಪ್ಪ ಗೌಡ, ಕಲ್ಲೇರಿ ಹೇಮಾವತಿ, ಕಂಪ ಪೂವಪ್ಪ ಕುಲಾಲ್, ಗುತ್ತು ಶೈಲಜಾ ಶೆಟ್ಟಿ, ಪಿ.ರಾಮಭಟ್, ಮರ್ವೋಡಿ ತಿಮ್ಮಪ್ಪಗೌಡ, ಕೋಡ್ಲ ಸಂಜೀವ, ಪ್ರಧಾನ ಅರ್ಚಕರಾಗಿ ಅನಂತ ಉಡುಪ ಸೇವೆ ಸಲ್ಲಿಸಿದ್ದು, ಪ್ರಸ್ತುತ ಸಮಿತಿಯ ಆಡಳಿತಾವಧಿ ಮುಕ್ತಾಯವಾದುದರಿಂದ ಕೊಯಿಲ ಗ್ರಾಮಕರಣಿಕ ರವೀಂದ್ರ ನಾಯ್ಕ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬದೆಂಜ ರಾಮಕುಂಜ
ಸುಮಾರು 700 ವರ್ಷಗಳ ಇತಿಹಾಸವಿರುವ ರಾಮಕುಂಜ ಗ್ರಾಮದ ಬದೆಂಜ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಳದಿ ಅರಸರ ಕಾಲದಲ್ಲಿ ವಿಜೃಂಭಣೆಯಿಂದ ಜಾತ್ರೋತ್ಸವ ನಡೆಯುತ್ತಿತ್ತು.
ಕಾಲಾನಂತರ ಅಜೀರ್ಣಾವಸ್ಥೆಯಲ್ಲಿದ್ದ ದೇವಾಲಯ ಜೀರ್ಣೋದ್ಧಾರಗೊಂಡು ಕಡಬ ಕುಂಬಾಟ ಮನೆತನದ ನಾರಾಯಣ ಶ್ಯಾನುಭೋಗ್ರವರ ಮೊಮ್ಮಕ್ಕಳು ಹಾಗೂ ಊರವರ ನೆರವಿನೊಂದಿಗೆ 2008ರ ಫೆಬ್ರವರಿಯಲ್ಲಿ ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆದಿತ್ತು.
ಅಂದಾಜು 250 ವರ್ಷಗಳಿಂದ ಕುಂಬಾಟ ಮನೆತನದ ಆಡಳಿತದಲ್ಲಿರುವ ದೇವಾಲಯದಲ್ಲಿ ನಿತ್ಯಪೂಜೆ, ಚಂಪಾಷಷ್ಠಿ, ಫೆ.೨೮ರಂದು ವಾರ್ಷಿಕ ಪ್ರತಿಷ್ಠಾ ಮಹೋತ್ಸವ, ನಾಗಸನ್ನಿಧಿಯಲ್ಲಿ ಸರ್ಪಸಂಸ್ಕಾರ, ಆಶ್ಲೇಷಬಲಿ ಸೇವೆ ನಡೆಯುತ್ತಿದೆ. ಮದುವೆ ಆಗದೇ ಇರುವ ಹುಡುಗಿಯರು ಹರಕೆ ಹೇಳಿಕೊಂಡು ರಂಗಪೂಜೆ ಸೇವೆ, ಬೋರ್ವೆಲ್ಗೆ ಪ್ರಾರ್ಥನೆಯಿಂದ ಯಥೇಚ್ಛ ನೀರು ಇಲ್ಲಿನ ವಿಶೇಷ. ನಿರಂಜನ್ ಶರ್ಮ ಅನುವಂಶೀಯ ಆಡಳಿತ ಮೊಕ್ತೇಸರರಾಗಿದ್ದು, ಲಕ್ಷ್ಮೀನಾರಾಯಣ ರಾವ್ ಆತೂರು ಆಡಳಿತ ಮಂಡಳಿ ಅಧ್ಯಕ್ಷರು.
ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು:
* ಶ್ರೀ ಈರಕೀ ಮಠ ದಂಡತೀರ್ಥ ಹನುಮಂತ ದೇವಸ್ಥಾನ
* ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನ ಗಾಂಧಿಪೇಟೆ ರಾಮಕುಂಜ 8970255880, 258044
* ಅನಂತ ಪದ್ಮನಾಭ ದೇವಸ್ಥಾನ ಕೊಂದಪ್ಪಾಡೆ 9845766534
* ಶ್ರೀ ಶಾರದಾಂಭಾ ಭಜನಾ ಮಂದಿರ ಶಾರದಾನಗರ
* ಶ್ರೀದೇವಿ ಭಜನಾಮಂದಿರ ಪರ್ನಡ್ಕ
* ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನೀರಾಜೆ