ರೆಂಜಿಲಾಡಿ ಗ್ರಾಮ

ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನ, ನೂಜಿಬೈಲು-ರೆಂಜಿಲಾಡಿ. ಮೊ: 9900889270

ಸುಮಾರು 600 ವರ್ಷಗಳ ಇತಿಹಾಸ ಇರುವ ರೆಂಜಿಲಾಡಿ ಗ್ರಾಮದ ಶ್ರೀ ನೂಜಿ ಉಳ್ಳಾಲ್ತಿ ದೇವಿ ದೈವಸ್ಥಾನವು ನೂಜಿ ಬೈಲಿನ ನಡುಭಾಗದಲ್ಲಿ ವಿಶೇಷವಾದ ನಾಗರಬೆತ್ತಗಳ ಸಾನಿಧ್ಯದಲ್ಲಿ ಅರ್ಚಕರಿಂದ ನಿತ್ಯಪೂಜೆ ನಡೆಯುತ್ತಿದ್ದ ಪವಿತ್ರ ಪುಣ್ಯ ಕ್ಷೇತ್ರ, ನಾನಾ ಕಾರಣಗಳಿಂದ ಜೀರ್ಣಾವಸ್ಥೆಗೆ ತಲುಪಿದ ದೈವಸ್ಥಾನವನ್ನು ಊರ ಭಕ್ತ ಮಹಾಶಯರು ಜೀರ್ಣೋದ್ದಾರಗೊಳಿಸಬೇಕೆಂದು ಕನಸು ಕಂಡು ಜೀರ್ಣೋದ್ದಾರಗೊಳಿಸುವ ಮೂಲಕ ಸಾಕಾರಗೊಳಿಸಿದರು….
ಹಿನ್ನಲೆ: ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಉಳ್ಳಾಲ್ತಿ ಹಲ್ಲತ್ತಾಯ ದೈವಗಳಿಗೆ ವಿಜೃಂಭಣೆಯಿಂದ ನೇಮೋತ್ಸವ ನಡೆಯುತ್ತಿತ್ತು. ಇಲ್ಲಿಗೆ ಬೇರೆ ರಾಜ್ಯದ ರಾಜರುಗಳು ಯುದ್ದಕ್ಕೆ ಬಂದಾಗ ಇಲ್ಲಿನ ಉಳ್ಳಾಲ್ತಿ ಸಾನಿಧ್ಯ ಮತ್ತು ಇತರ ಧಾರ್ಮಿಕ ಕೇಂದ್ರಗಳು ನಾಶವಾಯಿತು. ಕಾಲಾನಂತರದಲ್ಲಿ ಅಜೀರ್ಣಾವಸ್ಥೆಗೆ ತಲುಪಿದ ದೈವಸ್ಥಾನಕ್ಕೆ ಅರ್ಚಕರನ್ನು ನೇಮಿಸಿಕೊಂಡು ಪೂಜೆ ಪುರಸ್ಕಾರಾದಿಗಳನ್ನು ನಡೆಸಿಕೊಂಡು ಬರಲಾಗುತ್ತಿತ್ತು. ಆದರೂ ಗ್ರಾಮದ ಜನರು ಮಾತ್ರ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಯಿತು. ಈ ಬಗ್ಗೆ ಚಿಂತಿಸಿದ ಊರಿನ ಪ್ರಮುಖರು ಅಷ್ಟಮಂಗಲ ಪ್ರಶ್ನೆಯನ್ನು ಇಟ್ಟು ದೈವಸ್ಥಾನವನ್ನು ಜೀರ್ಣೋದ್ದಾರವನ್ನು ಮಾಡಲಾಯಿತು.
ಕ್ಷೇತ್ರದ ಇತಿಹಾಸ: ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಮೆರೆಯುತ್ತಿರುವ ಹಲವು ದೈವಿ ಕ್ಷೇತ್ರಗಳಲ್ಲಿ ಒಂದು ಪವಿತ್ರ ಕಾರಣಿಕದ ಕ್ಷೇತ್ರವೇ ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನ. ದೈವಜ್ಞರುಗಳ ಚಿಂತನೆ ಮುಖೇನ ತಿಳಿದು ಬಂದಿರುವಂತೆ ಸುಮಾರು ೮೦೦ ವರ್ಷಗಳ ಇತಿಹಾಸ ಇರುವ ಕ್ಷೇತ್ರವಿದು. ದೈವ ಭಕ್ತರ ಸಮಸ್ಯೆಗಳಾದ ಉದ್ಯೋಗ, ವಿವಾಹ, ಸಂತಾನ, ವಿದ್ಯಾಭ್ಯಾಸ, ಇತ್ಯಾದಿ ಈಗೆ ಹಲವು ಸಮಸ್ಯೆಗಳ ಭಕ್ತರು ಶ್ರೀ ಕ್ಷೇತ್ರದಲ್ಲಿ ಬಂದು ಪ್ರಾರ್ಥನೆ ಸಂಕಲ್ಪ ಮಾಡಿ ಶ್ರೀ ಉಳ್ಳಾಲ್ತಿ ಅಮ್ಮನನ್ನು ಶ್ರದ್ದೆ ಭಕ್ತಿಯಿಂದ ನಂಬಿದವರಿಗೆ ಸದಾ ಅಭಯ ನೀಡುತ್ತಾರೆ ಅನ್ನುವುದಕ್ಕೆ ಹಲವು ನಿದರ್ಶನಗಳಿವೆ. ಗದ್ದೆಗಳ ಮಧ್ಯಭಾಗದಲ್ಲಿ ಪವಿತ್ರ ನಾಗರ ಬೆತ್ತಗಳ ಬನದಲ್ಲಿ ಕಂಗೊಳಿಸುತ್ತಿರುವ ದೈವಸ್ಥಾನವು ಇಂದು ಭಕ್ತರ ಬದುಕಿನ ಬೇಡಿಕೆಗೆ ಸದಾ ಅಭಯ ನೀಡುತ್ತಿದೆ. ನಂಬಿದ ಭಕ್ತರ ಆಶೋತ್ತರಗಳನ್ನು ಅತೀ ಶೀಘ್ರ ಈಡೇರಿಸುವ ಪವಿತ್ರ ಕ್ಷೇತ್ರವಿದು ಇಲ್ಲಿ ಪ್ರತಿನಿತ್ಯ ಮಧ್ಯಾಹ್ನ ೧೨ ಗಂಟೆಗೆ ನಿತ್ಯ ಪೂಜೆ ನಡೆಯುತ್ತಿದೆ.
ಕ್ಷೇತ್ರದಲ್ಲಿ ಇನ್ನೂ ಆಗಬೇಕಾಗಿರುವ ಅಭಿವೃದ್ದಿ ಕೆಲಸಗಳು: ಅನ್ನ ಪ್ರಸಾದಕ್ಕೆ ಛತ್ರ, ಝಲಕದ ಕೆರೆ, ಜಾತ್ರೋತ್ಸವಕ್ಕೆ ಶಾಶ್ವತ ಚಪ್ಪರ
ನಾಗರ ಬೆತ್ತಗಳ ನಡುವೆ ನಾಗರಾಜ… ಈ ದೈವಸ್ಥಾನದ ಮತ್ತೊಂದು ವಿಶೇಷ ಎಂದರೆ ಉಳ್ಳಾಲ್ತಿ ಸಾನಿಧ್ಯದ ಸಮೀಪದಲ್ಲಿಯೇ ಇರುವ ನಾಗರ ಬೆತ್ತಗಳು ತುಂಬಿದ ಬನ, ಇಲ್ಲಿ ನಾಗರಾಜನ ಮಹಿಮೆ ಕೂಡ ಅಷ್ಟೇ ವಿಶೇಷ, ಅಶುದ್ದಿಯಾದರೆ ಇಲ್ಲಿ ನಾಗರಹಾವು ಪ್ರತ್ಯಕ್ಷವಾಗುತ್ತದೆ. ಹಾಗಂತ ಇಲ್ಲಿ ಹಾವು ಪ್ರತ್ಯಕ್ಷವಾದ ಅನೇಕ ಘಟನೆಗಳು ಕೂಡ ಇದೆಯಂತೆ. ಹತ್ತು ಹಲವು ವಿಶೇಷಗಳುಳ್ಳ ಇಲ್ಲಿನ ನಾಗರ ಬೆತ್ತಗಳನ್ನು ವ್ಯಾಪಾರಿಯೋರ್ವರು ಕಡಿದು ಕೊಂಡೊಯ್ಯುತ್ತಿದ್ದ ವೇಳೆ ಅವರು ಅಲ್ಲಿಂದ ಕಡಬ ತಲುಪುವ ಮೊದಲು ಅವರು ಬೆತ್ತಗಳನ್ನು ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಯಿತೆನ್ನಲಾಗಿದೆ. ಅಲ್ಲದೆ ಅವರಿಗೆ ಸಹಕರಿಸಿದ ವ್ಯಕ್ತಿಗಳ ವಂಶ ಅನೇಕ ಕಷ್ಟ ನಷ್ಟಗಳಿಗೆ ಗುರಿಯಾಯಿತಂತೆ. ಹಿಂದೊಮ್ಮೆ ಸಮೀಪದ ಕಾಡಿನಿಂದ ಮರಗಳನ್ನು ಎಳೆಯಲು ತಂದಿದ್ದ ಆನೆಯೊಂದು ಬೆತ್ತಗಳಿರುವ ನಾಗರ ಸಾನಿಧ್ಯ(ಬನ)ಕ್ಕೆ ತಪ್ಪಿ ಬಂದು ಬೆತ್ತಗಳನ್ನು ತಿಂದ ಸಂದರ್ಭದಲ್ಲಿ ಬಂಟ ದುಂಬಿ(ಹೆಜ್ಜೆನು)ಗಳು ಆನೆಯ ಮೇಲೆ ದಾಳಿ ನಡೆಸಿ ಆನೆಯ ಕಣ್ಣನ್ನೆ ಕಚ್ಚಿ ಗಾಯಗೊಳಿಸಿ ಆನೆಯನ್ನು ಕುರುಡನ್ನಾಗಿ ಮಾಡಿದೆಯಂತೆ, ಬಳಿಕ ಆನೆಯ ಮಾಲಿಕರು ಇಲ್ಲಿನ ಉಳ್ಳಾಲ್ತಿಗೆ ಬಂಗಾರದ ಬೆತ್ತವನ್ನು ಹರಕೆ ರೂಪದಲ್ಲಿ ನೀಡಿದ ಬಳಿಕ ಆನೆಯ ಕಣ್ಣು ಪುನಃ ಕಾಣುವಂತಾಯಿತು ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.
ಅಧ್ಯಕ್ಷರು-ಉಮೇಶ್ ಶೆಟ್ಟಿ ಸಾಯಿರಾಂ, ಅರ್ಚಕರು-ಕೃಷ್ಣ ಹೆಬ್ಬಾರ್, ಕಾರ್ಯದರ್ಶಿ-ಚೆನ್ನಪ್ಪ ಗೌಡ ಮಾರಪ್ಪೆ, ಖಜಾಂಜಿ-ರುಕ್ಮಯ್ಯ ಗೌಡ ನೂಜಿ ಬ್ರಂತೋಡು, ಸದಸ್ಯರು-ದೇರಣ್ಣ ಗೌಡ ಗೌಡಿಗೆ, ಲಿಂಗಪ್ಪ ಗೌಡ ಕಾನದಬಾಗಿಲು, ಪದ್ಮನಾಭ ಗೌಡ ಕೇಪುಂಜ, ದುಗ್ಗಣ್ಣ ಗೌಡ ಹೊಸಮನೆ, ಲಿಂಗಪ್ಪ ಗೌಡ ಖಂಡಿಗ, ದೇವಪ್ಪ ಗೌಡ ನಾಗಶ್ರೀ ಬರಮೇಲು, ರಾಮಚಂದ್ರ ಗೌಡ ಎಲುವಾಳೆ, ಚಿದಾನಂದ ಗೌಡ ಕುಂಡೋವು.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ನೂಜಿಬಾಳ್ತಿಲ ದೈವಸ್ಥಾನ ನೂಜಿಬೈಲ್ ರೆಂಜಲಾಡಿ ಗ್ರಾಮ ನೂಜಿಬಾಳ್ತಿಲ ಅಂಚೆ 9741483183
* ಶ್ರೀ ಅಯ್ಯಪ್ಪ ಧರ್ಮಶಿಖರ ಗೋಳಿಯಡ್ಕ
* ಶ್ರೀ ನಾರಾಯಣ ಗುರುಮಂದಿರ ಗೋಳಿಯಡ್ಕ ರೆಂಜಲಾಡಿ
* ಶ್ರೀ ಪುಂಡಿಕ್ ಮಾಡ ರಾಜನ್ ದೈವಸ್ಥಾನ ಗೋಳಿಯಡ್ಕ ರೆಂಜಿಲಾಡಿ
* ಶ್ರೀ ಮಾರಿಯಮ್ಮ ಗುಡಿ ಗೋಳಿಯಡ್ಕ ಅಂಚೆ