102 ನೆಕ್ಕಿಲಾಡಿ ಗ್ರಾಮ

ಶ್ರೀ ಮಹಾವಿಷ್ಣು ದೇವಸ್ಥಾನ ನಡುಮಜಲುಗುತ್ತು, 102 ನೆಕ್ಕಿಲಾಡಿ, ಅಂಚೆ: ಮರ್ದಾಳ, ಫೋನ್: 204086, 9481918233

ಶ್ರೀ ಕುಕ್ಕೆ ಸುಬ್ರಹ್ಮಣ್ಯದಿಂದ ಉಪ್ಪಿನಂಗಡಿಗೆ ಹೋಗುವ ಹೆದ್ದಾರಿ ರಸ್ತೆಯಲ್ಲಿ ಮರ್ದಾಳ ಎಂಬಲ್ಲಿಂದ ಒಂದು ಕಿ.ಮೀ. ಪಶ್ಚಿಮಕ್ಕೆ ಮುಂದುವರಿದರೆ ನೆಕ್ಕಿದಡ್ಕ ಬಸ್‌ನಿಲ್ದಾಣ ಸಿಗುವುದು. ಅಲ್ಲಿಂದ ದಕ್ಷಿಣಕ್ಕೆ ಒಂದು ಕಿ.ಮೀ. ಮಣ್ಣು ರಸ್ತೆಯಲ್ಲಿ ನಡೆದು ಬಂದರೆ ಸಿಗುವುದೇ ಶ್ರೀ ಮಹಾವಿಷ್ಣು ದೇವಸ್ಥಾನ. ಇಲ್ಲಿನ ದೇವರ ಶಿಲಾ ಪ್ರತಿಮೆಯು ೮೦೦ ವರ್ಷಗಳ ಹಿಂದೆ ಅರಸರ ಆಳ್ವಿಕೆಯ ಕಾಲದಲ್ಲಿ ಪ್ರತಿಷ್ಠೆಗೊಂಡದ್ದೆಂದು ತಿಳಿದುಬಂದಿದೆ.
ಕಾಲಾನುಭಾಗದಲ್ಲಿ ಅಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನವನ್ನು ಪುನಃ ಗರ್ಭಗುಡಿ ಕಟ್ಟಿಸಿ ೧೯೪೨ರಲ್ಲಿ ಬ್ರಹ್ಮ ಕಲಶವನ್ನು ನೆರವೇರಿಸಲಾಯಿತು. ೧೯೪೩ರಲ್ಲಿ ಪರಿವಾರ ದೈವಗಳ ಬ್ರಹ್ಮಕಲಶವನ್ನೂ ನೆರವೇರಿಸಿ, ಪಂಚ ಪರ್ವಾದಿಗಳನ್ನು ನಡೆಸುತ್ತಾ ಬರಲಾಗಿದೆ.
ದೇವಳದ ಬಡಗು ಈಶಾನ್ಯದಲ್ಲಿ ಬಾವಿ, ಕಲ್ಲುರ್ಟಿ ಮತ್ತು ಪಂಜುರ್ಲಿ ಗುಡಿ, ಕೆರೆ, ಮುಳ್ಳು ಗುಳಿಗ ಹಾಗೂ ಬೇತಾಳ ಕಟ್ಟೆಗಳಿವೆ. ಪೂರ್ವದಲ್ಲಿ ಅನತಿ ದೂರದಲ್ಲಿ ನಾಗಬ್ರಹ್ಮರ ಕಟ್ಟೆ, ಕೊಡಮಣಿತ್ತಾಯ ಕಟ್ಟೆ, ಲೆಕ್ಕೆಸಿರಿ ಕಟ್ಟೆ ಮತ್ತು ಐವರು ಭೂತಗಳ ಕಟ್ಟೆ ಹೊಸದಾಗಿ ನಿರ್ಮಾಣಗೊಂಡಿದೆ. ದಕ್ಷಿಣದಲ್ಲಿ ನಾಗನಕಟ್ಟೆ, ಪಶ್ಚಿಮದಲ್ಲಿ ಹೊಸಮ್ಮನ ಚಾವಡಿ ಇದರಲ್ಲಿ ದೈವಗಳ ಭಂಡಾರವಿರುವುದು. ಬಡಗು ದಿಕ್ಕಿನಲ್ಲಿ ಗುಳಿಗನ ಗುಡಿ, ಧರ್ಮದೈವಗಳ ಗುಡಿ, ಪಟ್ಟಂ ದೈವ, ಪಿಲಿಚಾಮುಂಡಿ ಗುಡಿಯಲ್ಲದೆ ಕೊಡಮಣಿತ್ತಾಯ ಗುಡಿ ಇದೆ. ವರ್ಷಂಪ್ರತಿ ದೈವಗಳ ನೇಮೋತ್ಸವ, ವಿಷ್ಣುಮೂರ್ತಿಯ ಒತ್ತೆಕೋಲ ಜರಗುತ್ತಿದ್ದು, ಹೊಸಭೂತದ ಮೂಲಸ್ಥಾನ ನಡುಮಜಲು ಕ್ಷೇತ್ರವಾಗಿದ್ದು, ವಿಶಾಲವಾದ ಮುಡಿ ಮೂಲಕ ಉತ್ಸವವನ್ನು ಇಲ್ಲಿ ಮಾತ್ರ ಜರಗಿಸುವುದು ವಾಡಿಕೆಯಾಗಿದೆ. ಆಡಳಿತದಾರರಾಗಿ ನಡುಮಜಲು ಗುತ್ತು ಎಸ್. ನಾರಾಯಣ ರೈ, ಮೊಕ್ತೇಸರರಾಗಿ ಎಸ್.ಎನ್. ಚಂದ್ರಶೇಖರ ರೈ ನಡುಮಜಲು ಗುತ್ತು ಸೇವೆ ಸಲ್ಲಿಸುತ್ತಿದ್ದಾರೆ.

ಇತರ ದೇವಸ್ಥಾನ / ದೈವಸ್ಥಾನ / ಮಂದಿರಗಳು :-
* ಶ್ರೀ ಕಲ್ಲುರ್ಟಿ ದೈವಸ್ಥಾನ ಮರ್ದಾಳ
* ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಸ್ಥಾನ