







ಪುತ್ತೂರು: ಮುಂಡೂರು ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯು ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕರಾದ ನಾಗೇಶ ಕುದ್ರೆತ್ತಾಯ ಅವರ ನೇತೃತ್ವದಲ್ಲಿ ನಡೆಯಿತು.
ಗಣೇಶ ಚತುರ್ಥಿಯ ಅಂಗವಾಗಿ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನೆರವೇರಿತು. ಮ್ಯಾರಥಾನ್ ಓಟವನ್ನು ಬ್ಯಾಂಡ್ ಸೆಟ್ ಪ್ರಾಯೋಜಕರಾದ ಕೃಷ್ಣರಾಜ ವೈಲಾಯರು ಉದ್ಘಾಟಿಸಿದರು. ವಾಲಿಬಾಲ್ ಪಂದ್ಯಾಟವನ್ನು ಪ್ರಗತಿಪರ ಕೃಷಿಕ ಹೆಗ್ಗಪ್ಪ ರೈ ಪೊನೋನಿಯವರು ಪ್ರಸಾದ ರೈ ಕೊಡಂಕಿರಿ, ಹಿರಿಯರಾದ ಸೇಸಪ್ಪ ಆಚಾರ್ಯ, ಸಾಮಾಜಿಕ ಕಾರ್ಯಕರ್ತ ಪ್ರವೀಣ ಆಚಾರ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ರಹ್ಮವಾಹಕ ರಾಧಾಕೃಷ್ಣ ಪುತ್ತೂರಾಯ ಅವರನ್ನು ವ್ಯವಸ್ಥಾಪನಾ ಸಮಿತಿ ಹಾಗೂ ಊರ ಭಕ್ತರ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನಿಸಿದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳರವರು ಮಾತನಾಡಿ, ಸನ್ಮಾನಕ್ಕೆ ರಾಧಾಕೃಷ್ಣ ಪುತ್ತೂರಾಯರಿಗಿಂತ ಅರ್ಹ ವ್ಯಕ್ತಿ ಇನ್ನೊಬ್ಬರಿಲ್ಲ. ಇಂತಹ ಸನ್ಮಾನಗಳು ಕ್ಷೇತ್ರದಲ್ಲಿ ನಡೆಯುತ್ತಿರುವುದು ಇತರರಿಗೆ ಮಾದರಿ ಎಂದು ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಸನ್ಮಾನಿತರ ಸಾಧನೆಯ ಬಗ್ಗೆ ಸಭೆಗೆ ಪರಿಚಯ ಮಾಡಿದರು. ಸನ್ಮಾನ ಸ್ವೀಕರಿಸಿದ ರಾಧಾಕೃಷ್ಣ ಪುತ್ತೂರಾಯ ಅವರು ಮಾತನಾಡಿ, ತನ್ನನ್ನು ಗುರುತಿಸಿ, ಸನ್ಮಾನಿಸಿರುವುದಕ್ಕೆ ಭಾವುಕತೆಯಿಂದ ಕೃತಜ್ಞತೆ ಸಲ್ಲಿಸಿದರು.
ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ದಾನಿ ರೇಷ್ಮಾ ಶೆಟ್ಟಿ ಕಂಪ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಪದ್ಮಯ್ಯ ನಾಯ್ಕ ಬಂಡಿಕಾನ, ಪದ್ಮಯ್ಯ ಗೌಡ ಗುತ್ತಿನಪಾಲು, ಶಾರದಾ ಬಂಡಿಕಾನ, ಜಲಜ ಕಂಪ, ಮಾಜಿ ಸದಸ್ಯ ಸದಾಶಿವ ಗೌಡ ಕೊಡಂಕಿರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿಯೇ ಗಣೇಶನ ವಿಗ್ರಹದ ಪ್ರಾಯೋಜಕ ಪ್ರಸಾದ ರೈ ಕೊಡಂಕಿರಿಯವರನ್ನೂ ಗೌರವಿಸಲಾಯಿತು. ವ್ಯವಸ್ಥಾಪನಾ ಸಮಿತಿ ಸದಸ್ಯ ಧನಂಜಯ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿದ ಬಳಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನದ ಪ್ರಾಯೋಜಕಿ ರೇಶ್ಮಾ ಶೆಟ್ಟಿ ಬಹುಮಾನ ವಿತರಿಸಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಮೇಶ ಗೌಡ ಪಜಿಮಣ್ಣು, ಶ್ರೀರಂಗ ಶಾಸ್ತಿç ಮಣಿಲ ಮತ್ತು ಶ್ರೀ ಪ್ರಸಾದ ಭಟ್ ನೀರೋಡಿ ಮುಂತಾದವರು ಉಪಸ್ಥಿರಿದ್ದರು.
ಸಂಜೆ ರಂಗಪೂಜೆಯ ಬಳಿಕ ದೇವಳದ ಬಳಿಯಿಂದ ಹೊರಟ ಶೋಭಾಯಾತ್ರೆಯು ಪಂಜಳ ಕಲ್ಲಗುಡ್ಡೆ ಮಾರ್ಗವಾಗಿ ಉದಯಗಿರಿ ಪಾದೆ ತನಕ ಸಾಗಿ ಅಲ್ಲಿ ಜಲಸ್ತಂಭನದೊಂದಿಗೆ ಕಾರ್ಯಕ್ರಮಗಳು ಸಂಪನ್ನಗೊಂಡಿತು. ಶೋಭಾಯಾತ್ರೆಗೆ ಬಾರಿಕೆ ನಾರಾಯಣ ಭಟ್ ಹಾಗೂ ಕೃಷ್ಣರಾಜ ವೈಲಾಯ ಇವರ ಪ್ರಾಯೋಜಕತ್ವದ ಬ್ಯಾಂಡ್ ಸೆಟ್ ಹಾಗೂ ಉದಯಗಿರಿ ಭಜನಾ ಮಂಡಳಿ ಮತ್ತು ಸದಾಶಿವ ಭಜನಾ ಮಂಡಳಿ ಆಲಡ್ಕ ಇವರ ಕುಣಿತ ಭಜನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಭಜನಾ ತಂಡಗಳನ್ನು ಸ್ಮರಣಿಕ ನೀಡಿ ಗೌರವಿಸಲಾಯಿತು.












