ಸವಣೂರು ಗ್ರಾಮ

ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮುಗೇರು, ಸವಣೂರು ಅಂಚೆ ಮತ್ತು ಗ್ರಾಮ, ಪುತ್ತೂರು, ದ.ಕ.-574 202. ಫೋನ್: 08251-282450, 282292

ಮುಗೇರು ಪ್ರದೇಶದ ಸಹಸ್ರ ವರುಷಗಳ ಇತಿಹಾಸವುಳ್ಳ ಮಹಾನ್ ಶ್ರೀ ಮಹಾವಿಷ್ಣು ದೇವರ ಅದ್ಭುತ ಕಲಾಕೃತಿಯ ದೇವಾಲಯ, ಶಿಲಾಹಾಸಿನ ಅಂಗಣದೊಳಗೆ ಗಣಪತಿಯ ಗುಡಿ, ದೇವಿಯ ಗುಡಿ, ನಂದಿಮಂಟಪ ನೈವೇದ್ಯ ಕೋಣೆ ಪುನಃ ನಿರ್ಮಿತಗೊಂಡಿದೆ. ವಿಜಯನಗರ ದೊರೆಗಳ ಸಾಮಂತರಾದ ಪುತ್ತೂರು ಸೀಮೆಯ ಜೈನ ಬಲ್ಲಾಳ ಅರಸರು, ಸುಮಾರು ಕ್ರಿ.ಶ. ೧೪-೧೫ನೇ ಶತಮಾನದಲ್ಲಿ ಕಟ್ಟಿಸಿದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯವು, ರಾಜರ ಪಲ್ಲಕಿ ಹೊರುತ್ತಿದ್ದ ರಾಜರ ಓಲೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದ, ಶ್ರೀದೇವರ ರಥ ಎಳೆಯುತ್ತಿದ್ದ ಬೋವಿ ಜನಾಂಗದ ಸುರ್ಪದಿಗೆ ಒಳಪಟ್ಟಿತು. ಈ ಹಿಂದೆ ಮುಗೇರುಗುತ್ತು ಮನೆತನದವರ ಆಡಳಿತಕ್ಕೆ ಒಳಪಟ್ಟಿತು. ಇದೀಗ ಸರಕಾರದ ಮುಜರಾಯಿ ಇಲಾಖೆಯ ಅಧೀನದಲ್ಲಿ ಕಾರ್‍ಯನಿರ್ವಹಿಸುತ್ತಿದೆ.
ಶ್ರೀ ಮಹಾವಿಷ್ಣುಮೂರ್ತಿಯ ಶಿಥಿಲಗೊಂಡ ಆಲಯವನ್ನು ಪುನರ್‌ನಿರ್ಮಾಣ ಮಾಡುವ ಸಂಕಲ್ಪಕ್ಕೆ ಊರಿನವರು ಒಟ್ಟಾಗಿ ಸಂಕಲ್ಪ ಮಾಡಿದರು. ಉದ್ಯಮಿ ಸವಣೂರು ಕೆ ಸೀತಾರಾಮ ರೈ ಅಧ್ಯಕ್ಷತೆಯಲ್ಲಿ, ಎಂ. ಮುರಳಿ ಮೋಹನ್ ಶೆಟ್ಟಿಯವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಎನ್. ಶಿವಪ್ರಸಾದ್ ಶೆಟ್ಟಿ ಕಿನಾರರವರ ಕಾರ್‍ಯದರ್ಶಿತನದಲ್ಲಿ ಜೀರ್ಣೋದ್ಧಾರ ಸಮಿತಿ ರಚನೆಗೊಂಡು, ಜೀರ್ಣೋದ್ಧಾರದ ಪುಣ್ಯಕಾರ್‍ಯ ಆರಂಭಗೊಂಡು, ಅದೇ ಆಯ, ವಾಸ್ತುವಿನಲ್ಲಿ ಶಿಲಾಮಯ ದೀರ್ಘ ಚೌಕಾಕಾರ ಶೈಲಿಯ ಗರ್ಭಗುಡಿಯ ದೇವಾಲಯ ನಿರ್ಮಾಣವಾಗಿದ್ದು ೨೦೧೪ನೇ ಮಾರ್ಚ್ ೨೧ರಿಂದ ೨೬ರ ತನಕ ಬ್ರಹ್ಮಕಲಶೋತ್ಸವ ನಡೆಯಿತು. ಮೇ ೧೨, ೨೦೧೪ರಂದು ದೃಢಕಲಶಾಭಿಷೇಕವು ನಡೆಯಿತು. ಪುತ್ತೂರಿನಿಂದ ಕಾಣಿಯೂರು ಮಾರ್ಗದಲ್ಲಿ ಸವಣೂರಿಗೆ ೧೬ ಕಿ.ಮಿ. ದೂರವಿದ್ದು ಅಲ್ಲಿಂದ ಕೇವಲ ೧ ಕಿ.ಮಿ. ದೂರದಲ್ಲಿ ಸವಣೂರಿನ ಮುಗೇರು ಎಂಬಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಇದೆ.
ಅಧ್ಯಕ್ಷ – ಸವಣೂರು ಕೆ.ಸೀತಾರಾಮ ರೈ, ಸದಸ್ಯರುಗಳು: ಶಿವಪ್ರಸಾದ್ ಶೆಟ್ಟಿ ಕಿನಾರ, ಶಿವರಾಮ ಗೌಡ ಮೆದು, ರಾಕೇಶ್ ರೈ ಕೆಡೆಂಜಿ, ನವೀನ್ ಕುಮಾರ್ ಶೆಟ್ಟಿ ಮುಗೇರುಗುತ್ತು, ವಿಜಯ ಈಶ್ವರ ಗೌಡ ಕಾಯರ್ಗ, ಆಶಾ ಪ್ರವೀಣ್  ಕಂಪ, ಪದ್ಮನಾಭ ಕುಂಜತ್ತಾಯ (ಅರ್ಚಕರು) ಹಾಗೂ ಕುಂಞ ಅಜಲಾಯ.

ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸವಣೂರು 08251-282040

1944ರ ಫೆ.೭ರಂದು ಸವಣೂರು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನವನ್ನು ಸವಣೂರು ಗುತ್ತು ಮಾಯಿಲಪ್ಪ ರೈಯರು ಕಟ್ಟಿಸಿದರು. ನಂಜೆಗುತ್ತು ವೆಂಕಪ್ಪ ರೈ ಮತ್ತು ಸವಣೂರು ಗುತ್ತು ಲಕ್ಷೀ ದಂಪತಿಯ ಪ್ರಥಮ ಪುತ್ರನಾದ ಮಾಯಿಲಪ್ಪ ರೈಯವರು ತನ್ನ ಸಹೋದರರಾದ ರಾಮಣ್ಣ ರೈ ಸವಣೂರುಗುತ್ತು, ತಿಮ್ಮಪ್ಪ ರೈ ಸವಣೂರುಗುತ್ತು, ಅಳಿಯ ಸವಣೂರುಗುತ್ತು ವೆಂಕಪ್ಪ ರೈಯವರ ಸಹಕಾರದಲ್ಲಿ ದೇವಸ್ಥಾನವನ್ನು ನಿರ್ಮಿಸಿದರು.
1944ರಲ್ಲಿ ಬಡಕ್ಕಿಲ್ಲಾಯ ವಂಶಸ್ಥರು ದೇವಸ್ಥಾನ ಪೂಜೆ ನಡೆಸಿಕೊಂಡು ಬರುತ್ತಿದ್ದರು. ೧೯೪೪ರಿಂದ ೧೯೯೪ತನಕ ರಾಮಕೃಷ್ಣ ಬಡಕ್ಕಿಲ್ಲಾಯರು ಪೂಜೆ ನಡೆಸುತ್ತಿದ್ದರು. ಬಳಿಕ ಅವರ ಮಕ್ಕಳಾದ ಗೋಪಾಲಕೃಷ್ಣ ಬಡಕ್ಕಿಲ್ಲಾಯರು ಪ್ರಧಾನ ಅರ್ಚಕರಾಗಿ ಮತ್ತು ನಾರಾಯಣ ಬಡಕ್ಕಿಲ್ಲಾಯರವರು ಅರ್ಚಕರಾಗಿ ಈಗ ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ದೇವಸ್ಥಾನಕ್ಕೆ ೧೪ ಸೆಂಟ್ಸ್ ಸ್ಥಳ, ಕೆರೆ, ಬಾವಿ ಇದೆ.
ಇದೀಗ ಡಾ| ರತ್ನಾಕರ ಶೆಟ್ಟಿ ಸವಣೂರುಗುತ್ತು ಆಡಳಿತ ಮೊಕ್ತೇಸರರಾಗಿದ್ದಾರೆ. ೧೯೮೪ರಿಂದ ದೇವಸ್ಥಾನದ ಪ್ರತಿಯೊಂದು ವ್ಯವಹಾರವನ್ನು ಸವಣೂರುಗುತ್ತು ವೆಂಕಪ್ಪ ಶೆಟ್ಟಿಯವರು ನೋಡಿಕೊಳ್ಳುತ್ತಿದ್ದಾರೆ. ದೇವಸ್ಥಾನದಲ್ಲಿ ವಿಷ್ಣುಮೂರ್ತಿ ದೇವರು ಪ್ರಧಾನ ದೇವರಾಗಿದ್ದು ವನಶಾಸ್ತಾವು ದೇವರು ಮತ್ತು ಮಹಾಗಣಪತಿ ದೇವರು ಪೂಜಿಸಲ್ಪಡುತ್ತಿದ್ದಾರೆ. ವರ್ಷದಲ್ಲಿ ೨ ದಿನ ಜಾತ್ರೋತ್ಸವ ನಡೆಯುತ್ತದೆ. ದೇವಳದಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ನಿತ್ಯ ಪೂಜೆ ನಡೆಯುತ್ತದೆ. ತಿಂಗಳ ಚೌತಿಯಂದು ಗಣಹೋಮ ನಡೆಯುತ್ತದೆ. ಅರ್ಧ ಏಕಾಹ ಭಜನೆ, ಚಂಡಿಕಾ ಶಾಂತಿಹೋಮ ನಡೆಯುತ್ತದೆ. ದೇವಸ್ಥಾನದಲ್ಲಿ ರಂಗ ಪೂಜೆ ಮತ್ತು ಗಣಹೋಮ ಹರಕೆ ಸಲ್ಲಿಸಿದ ಭಕ್ತರಿಗೆ ವಿಶೇಷವಾದ ಶಕ್ತಿಯನ್ನು ನೀಡಿದೆ ಎಂದು ಪ್ರತೀತಿ ಇದೆ. ವರ್ಷದಲ್ಲಿ ಧನುಪೂಜೆಯು ೧ ತಿಂಗಳು ಬೆಳಗ್ಗೆ ೫ರಿಂದ ೬ರ ತನಕ ನಡೆಯುತ್ತದೆ. ಪುತ್ತೂರಿನಿಂದ ೧೬ಕಿ.ಮೀ. ದೂರದ ಸವಣೂರಿನಿಂದ ೩ ಕಿ.ಮೀ. ದೂರದಲ್ಲಿ ಪರಣೆ ಮಾರ್ಗವಾಗಿ ಸವಣೂರು ದೇವಸ್ಥಾನಕ್ಕೆ ಹೊಗಲು ದಾರಿಯಿದೆ.
ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಮೊ: 9743581197 ಮತ್ತು ನಾರಾಯಣ ಬಡಕ್ಕಿಲ್ಲಾಯ ಮೊ:9880464034.

ಇತರ ದೈವಸ್ಥಾನ / ಮಂದಿರಗಳು :-
* ಶ್ರೀ ಶಿರಾಡಿ ದೈವಸ್ಥಾನ ಸವಣೂರು
* ಶ್ರೀ ಅರೇಲ್ತಡಿ ಗ್ರಾಮ ದೈವಸ್ಥಾನ 94492444251
* ಶ್ರೀ ಅಗರಿ ಬ್ರಹ್ಮಬೈದರ್ಕಳ ಗರಡಿ ಸವಣೂರು
* ದೆತ್ತಿ ಬಳ್ಳಿ ಉರುಸಾಗು