ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭೆ

0

  • ಪೇಟೆಯೊಳಗೆ ವರ್ತಕರಿಂದ ಫುಟ್‌ಪಾತ್ ಅತಿಕ್ರಮಣ, ಶೀಘ್ರ ತೆರವಿಗೆ ಆಗ್ರಹ-ನಿರ್ಣಯ
  • ಪಂಚಾಯಿತಿ ಕಟ್ಟಡ ಅಂಗಡಿಯವರಿಂದ ಹಣ ವಸೂಲಿ-ಸಮಗ್ರ ತನಿಖೆಗೆ ಆಗ್ರಹ
  • ಎಲ್ಲೆಡೆ ಅಂಗಡಿಗಳಲ್ಲಿ ಗಾಂಜಾ, ಮಾದಕ ವಸ್ತುಗಳ ಮಾರಾಟ
  • ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಆಕ್ಷೇಪಿತ ನಡವಳಿಕೆಗಳು

ಉಪ್ಪಿನಂಗಡಿ: ಪೇಟೆಯೊಳಗೆ ಬಹಳಷ್ಟು ವರ್ತಕರು ತಮ್ಮ ಅಂಗಡಿ ಸರಂಜಾಮುಗಳನ್ನು ಅಂಗಡಿಯಿಂದ ಹೊರಗಡೆ ಫುಟ್‌ಪಾತ್‌ನಲ್ಲಿ ಇಡುತ್ತಿದ್ದು, ಇದರಿಂದಾಗಿ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ನಡೆದಾಡುವುದಕ್ಕೂ ಸಮಸ್ಯೆ ಉಂಟಾಗಿದೆ, ಅಂತಹವುಗಳನ್ನು ಶೀಘ್ರ ತೆರವು ಮಾಡುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಆ. ೨೩ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು ಪೇಟೆಯೊಳಗೆ ಅನಧಿಕೃತವಾಗಿ ವಾಹನಗಳನ್ನು ನಿಲ್ಲಿಸಿ ಅನಧಿಕೃತವಾಗಿ ವ್ಯಾಪಾರ ನಡೆಸುವುದನ್ನು ತಡೆಯುವದರ ಜೊತೆಗೆ ಬಹಳಷ್ಟು ವರ್ತಕರು ತಮ್ಮ ಅಂಗಡಿಯ ಮುಂದೆ ಪಾದಾಚಾರಿಗಳು ನಡೆದುಕೊಂಡು ಹೋಗುವ ಫುಟ್‌ಫಾತ್ ಮೇಲೆಯೇ ಅಂಗಡಿಯ ವಸ್ತು, ಸರಂಜಾಮುಗಳನ್ನು ಇಡುತ್ತಿದ್ದು, ನಡೆದಾಡುವುದಕ್ಕೂ ಜಾಗ ಇಲ್ಲದಂತಾಗಿದೆ.

ಇನ್ನೊಂದೆಡೆ ಯಾವುದೇ ಹೊತ್ತು ಇಲ್ಲದೆ, ಅನಿಯಮಿತ ಸಮಯದಲ್ಲಿ ಇಕ್ಕಡೆಗಳಲ್ಲಿ ಬೃಹತ್ ವಾಹನಗಳನ್ನು ನಿಲ್ಲಿಸಿ ಸಾಮಾನುಗಳನ್ನು ಏರಿಸುವುದು, ಇಳಿಸುವುದು ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ಪೇಟೆಯೊಳಗಿನ ರಸ್ತೆ ಸಂಪೂರ್ಣವಾಗಿ ಅತಿಕ್ರಮಣವಾಗಿರುತ್ತದೆ. ವೃದ್ಧರು, ಸಾರ್ವಜನಿಕರು, ವಿದ್ಯಾರ್ಥಿಗಳು ನಡೆದಾಡುವುದಕ್ಕೂ ಅಸಾಧ್ಯವಾಗುವಂತಿರುತ್ತದೆ. ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಮತ್ತು ಶಾಲೆ ಬಿಟ್ಟ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹರ ಸಾಹಸ ಪಡುವಂತಾಗಿದೆ, ರಸ್ತೆಯ ಫುಟ್‌ಪಾತ್‌ನ್ನು ಅತಿಕ್ರಮಣ ಮಾಡಿರುವುದರ ಜೊತೆಗೆ ವಾಹನಗಳ ನಿಲುಗಡೆಯಿಂದಾಗಿ ವಿದ್ಯಾರ್ಥಿಗಳು ನಡು ರಸ್ತೆಯಲ್ಲೇ ಹೋಗಬೇಕಾಗದ ಪರಿಸ್ಥಿತಿ ನಿರ್ಮಾಣ ಆಗಿದ್ದು, ಈ ನಿಟ್ಟಿನಲ್ಲಿ ಪಂಚಾಯಿತಿ ಅಗತ್ಯ ಕ್ರಮಕೈಗೊಳ್ಳುವಂತೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಅದರಂತೆ ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್‍ಯಾಚರಣೆ ನಡೆಸಿ ಫುಟ್‌ಪಾತ್‌ಗಳಲ್ಲಿ ವಸ್ತುಗಳನ್ನು ಇರಿಸಿರುವ ವರ್ತಕರ ವಿರುದ್ಧ ಕ್ರಮಕೈಗೊಳ್ಳುವುದಾಗಿ ನಿರ್ಣಯ ಅಂಗೀಕರಿಸಲಾಯಿತು.

ಎಲ್ಲೆಡೆ ಅಂಗಡಿಗಳಲ್ಲಿ ಗಾಂಜಾ, ಮಾದಕ ವಸ್ತುಗಳ ಮಾರಾಟ:
ಉಪ್ಪಿನಂಗಡಿ ಪೇಟೆಯಲ್ಲಿ ಕೆಲವೊಂದು ಅಂಗಡಿಗಳಲ್ಲಿ ಮತ್ತು ಇಂಡಿಯನ್ ಸ್ಕೂಲ್, ಮಾದರಿ ಶಾಲೆ, ಇಂದ್ರಪ್ರಸ್ಥ ವಿದ್ಯಾಲಯ ಈ ವಿದ್ಯಾ ಸಂಸ್ಥೆಗಳ ಮಧ್ಯೆ ಇರುವ ಕೆಲವೊಂದು ಅಂಗಡಿಗಳಲ್ಲಿ ಗಾಂಜಾ ಇತ್ಯಾದಿ ಮಾದಕ ವಸ್ತುಗಳ ಮಾರಾಟ ನಡೆಯುತ್ತಿರುವ ಬಗ್ಗೆ ದೂರುಗಳು ವ್ಯಕ್ತವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಯನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.

ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಆಕ್ಷೇಪಿತ ನಡವಳಿಕೆಗಳು:
ಹೈಸ್ಕೂಲ್, ಕಾಲೇಜಿಗೆ ಬರುವ ಕೆಲವೊಂದು ವಿದ್ಯಾರ್ಥಿ-ವಿದ್ಯಾರ್ಥಿನಿಯರು ತರಗತಿಗೆ ಹೋಗದೆ ಪೇಟೆಯಲ್ಲಿ ಶಾಪಿಂಗ್ ಕಾಂಪ್ಲೆಕ್ಸ್, ವಸತಿ ಸಮುಚ್ಚಯದ ಕೆಳಗಡೆ ಇರುತ್ತಾರೆ. ಅವರುಗಳು ಮೈಮರೆತು ಆಕ್ಷೇಪಿತ ನಡವಳಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಕೆಲವರು ಸಾರ್ವಜನಿಕರು ಅಸಹ್ಯ ಪಡುವ ರೀತಿಯಲ್ಲಿ ಇರುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆಯೂ ಪಂಚಾಯಿತಿ ವತಿಯಿಂದ ಅಗತ್ಯ ಕ್ರಮಕೈಗೊಳ್ಳುವ ಅಥವಾ ಪೊಲೀಸ್‌ಗೆ ದೂರು ನೀಡುವುದು ಸೂಕ್ತ ಎಂದ ಸದಸ್ಯರು ಮುಂದೆ ಅವುಗಳು ಬೇರೊಂದು ರೀತಿಯಲ್ಲಿ ತಿರುಗಿ, ಪೇಟೆಯಲ್ಲಿ ಶಾಂತಿ-ಭಂಗ ಉಂಟಾಗುವುದಕ್ಕೆ ಕಾರಣ ಆಗದಂತೆ ನೋಡಿಕೊಳ್ಳುವುದು ಅಗತ್ಯ ಎಂಬ ಸಲಹೆ ವ್ಯಕ್ತವಾಗಿ ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೆ ತರುವುದಾಗಿ ನಿರ್ಣಯ ಅಂಗೀಕರಿಸಲಾಯಿತು.

ವಸತಿ ಗೃಹಗಳ ಕೊಳಚೆ ನೀರು ಶಾಲಾ ಆವರಣಕ್ಕೆ:
ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಆವರಣಕ್ಕೆ ಹೊಂದಿಕೊಂಡು ಮೂರು ದಿಕ್ಕಿನಿಂದಲೂ ಕೊಳಚೆ ನೀರು ಹರಿದು ಬರುತ್ತಿದ್ದು, ಶಾಲೆಯಲ್ಲಿ ಮಕ್ಕಳು ಮತ್ತು ಸನಿಹದಲ್ಲಿ ಇರುವ ಅಂಗನವಾಡಿಯ ಮಕ್ಕಳು ದುರ್ನಾತವನ್ನು ಅನುಭವಿಸಿಕೊಂಡು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಿದೆ. ಅದಾಗ್ಯೂ ಸೊಳ್ಳೆಗಳ ಕಾಟದಿಂದ ಡೆಂಗ್ಯೂನಂತಹ ರೋಗ ಬರುವ ಸಾಧ್ಯತೆ ಹೆಚ್ಚಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಸಭೆಗೆ ಬಂದ ಅರ್ಜಿಯನ್ನು ಓದಿ ಹೇಳಲಾಗಿ ನಿರ್ಣಯ ಅಂಗೀಕರಿಸಲಾಯಿತು.

ಪಂಚಾಯಿತಿ ಕಟ್ಟಡದ ಅಂಗಡಿಯವರಿಂದ ಹಣ ವಸೂಲಿ-ಸಮಗ್ರ ತನಿಖೆಗೆ ಆಗ್ರಹ
ಪಂಚಾಯಿತಿಯ ಹಿಂದಿನ ಸಭೆಯಲ್ಲಿ ಪಂಚಾಯಿತಿ ಅಂಗಡಿ ಕೋಣೆಗಳನ್ನು ಮುಂದಿನ ೫ ವರ್ಷದ ಅವಧಿಗೆ ಹಿಂದಿನ ಬಾಡಿಗೆದಾರರಿಗೆ ಶೇಕಡಾವಾರು ಹೆಚ್ಚಿಸಿ ನೀಡುವುದು ಎಂದು ನಿರ್ಣಯಿಸಲಾಗಿದೆ. ಆದರೆ ಬಹಳಷ್ಟು ಅಂಗಡಿಗಳವರಿಂದ ಅಂಗಡಿಗಳನ್ನು ಏಲಂ ಮಾಡುವ ಮತ್ತು ಬಾಡಿಗೆ ಹೆಚ್ಚಳ ಮಾಡುವ ಬೆದರಿಕೆ ಹಾಕಿ ಅವರುಗಳಿಂದ ವ್ಯಕ್ತಿಯೋರ್ವರು ತಲಾ ೩೦ ಸಾವಿರ ರೂಪಾಯಿ ಪಡೆದಿದ್ದಾರೆ. ಆ ಹಣ ಪಂಚಾಯಿತಿ ಸದಸ್ಯರುಗಳಿಗೆ ಬಡವಾಡೆ ಆಗಿದೆ ಎಂಬ ಪ್ರಚಾರ ಇದೆ. ಈ ರೀತಿ ನಡೆದಿದೆಯೇ? ಎಂದು ಸದಸ್ಯರೋರ್ವರು ಸಭೆಯಲ್ಲಿ ಪ್ರಶ್ನಿಸಿದರು.

ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ “ಸದಸ್ಯರುಗಳಿಗೆ ಕೊಡಲು ಇದೆ ಎಂದು ವ್ಯಕ್ತಿಯೋರ್ವರು ಹಣ ಪಡೆದಿದ್ದಾರೆ ಎನ್ನುವ ವಿಚಾರ ನನ್ನ ಗಮನಕ್ಕೂ ಬಂದಿದೆ. ಆದರೆ ನಾವುಗಳು ಪಡೆದಿಲ್ಲ”. ಎಂದರು. ಆಗ ಉಳಿದಂತೆ ಸದಸ್ಯರು ಪ್ರತಿಕ್ರಿಯಿಸಿ “ಈ ಬಗ್ಗೆ ಯಾರು ಕೊಟ್ಟಿದ್ದು, ಯಾರ ಮೂಲಕ ಕೊಟ್ಟಿದ್ದಾರೆ? ಎಂದು ಸಮಗ್ರ ತನಿಖೆ ಆಗಬೇಕು” ಎಂದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ವಿದ್ಯಾಲಕ್ಷ್ಮೀ ಪ್ರಭು, ಯು.ಕೆ. ಇಬ್ರಾಹಿಂ, ಸಣ್ಣಣ್ಣ ಯಾನೆ ಸಂಜೀವ ಮಡಿವಾಳ, ಅಬ್ದುಲ್ ರಶೀದ್, ಮೈಸಿದಿ ಇಬ್ರಾಹಿಂ ಮಾತನಾಡಿದರು. ಲಲಿತಾ, ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸ, ಸೌದ ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್ ಸ್ವಾಗತಿಸಿ, ಕಾರ್‍ಯದರ್ಶಿ ದಿನೇಶ್ ವಂದಿಸಿದರು.

LEAVE A REPLY

Please enter your comment!
Please enter your name here