ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ವಲಯದ ಒಕ್ಕೂಟ ಪದಾಧಿಕಾರಿಗಳ ಪದಗ್ರಹಣ, ಸಾಧನಾ ಸಮಾವೇಶ

0

  • ಸರಕಾರದ ಯೋಜನೆಗಳು ಒಕ್ಕೂಟದ ಮೂಲಕ ಕಾರ್ಯಗತ-ಸಂಜೀವ ಮಠಂದೂರು
  • ಮಹಿಳೆಯರು ಸಾಧಕರಾಗಲು ಗ್ರಾಮಾಭಿವೃದ್ಧಿ ಯೋಜನೆ ಕಾರಣ -ಶಕುಂತಳಾ ಶೆಟ್ಟಿ
  • ಪ್ರತಿ ಪದಗ್ರಹಣದಲ್ಲೂ ಹೊಸ ಒಕ್ಕೂಟ ಉದ್ಘಾಟನೆ-ಮಹಾಬಲ ರೈ
  • ಯೋಜನೆಯ ಕಾರ್ಯವನ್ನು ಸದುಪಯೋಗಪಡಿಸಿಕೊಳ್ಳಿ-ಪ್ರವೀಣ್ ಕುಮಾರ್
  • ಸ್ವಸಹಾಯ ಸಂಘವೇ ಜೀವನಕ್ಕೆ ಅಗತ್ಯ-ವಿಶ್ವನಾಥ ಗೌಡ
  • ಗ್ರಾಮಾಭಿವೃದ್ಧಿ ಯೋಜನೆ ಜೀವನಕ್ಕೆ ಅಡಿಪಾಯ-ಬಾಲಕೃಷ್ಣ ಹಾರ್ಪಳ

ಸಾಧಕರಿಗೆ ಸನ್ಮಾನ
ಪಿಯುಸಿಯಲ್ಲಿ ಶೇ.98.83 ಅಂಕ ಪಡೆದ, ಸಾಲ್ಮರ ಒಕ್ಕೂಟದ ದೇವಿಕಾ ತಂಡದ ರೇಖಾ ಅವರ ಪುತ್ರಿ ಮನ್ವಿತಾ, ಹಲವರಿಗೆ ಯೋಜನೆ ಮಾಹಿತಿ ನೀಡಿ ಸಹಕಾರ ನೀಡಿದ ಜಿಡೆಕಲ್ಲು ಒಕ್ಕೂಟದ ಸ್ಕಂದಶ್ರೀ ತಂಡದ ಪುಷ್ಪಾವತಿ, ಪಡೀಲ್ ಒಕ್ಕೂಟದಿಂದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿದ್ದ ಹರೀಶ್, ಕಸಬ ಒಕ್ಕೂಟದ ಆರಾಧ್ಯ ತಂಡದ ಚಂದ್ರಶೇಖರ್ ಅವರ ಪುತ್ರಿ ಕಲಾವಿದೆ ಪವಿತ್ರಾ ಹೆಗ್ಡೆ, ಹೈನುಗಾರಿಕೆ ಸೇರಿದಂತೆ ಹಲವು ಕ್ಷೇತ್ರದಲ್ಲಿ ಯೋಜನೆಯ ಸಹಾಯ ಪಡೆದ ಬಪ್ಪಳಿಗೆ ಒಕ್ಕೂಟದ ಸರ್ವಶಕ್ತಿ ತಂಡದ ಸದಸ್ಯೆ ನಳಿನಾಕ್ಷಿ ಜನಾರ್ದನ ದಂಪತಿ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

 

ಪುತ್ತೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು ವಲಯದ ಒಕ್ಕೂಟಗಳ ಪದಾಧಕಾರಿಗಳ ಪದಗ್ರಹಣ, ನೂತನ ಒಕ್ಕೂಟಗಳ ಉದ್ಘಾಟನೆ, ಸಾಧನಾ ಸಮಾವೇಶವು ಆ.23ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.ನೂತನ ಸಾಲ್ಮರ, ಸಾಮೆತ್ತಡ್ಕ, ಪಡೀಲು ಒಕ್ಕೂಟಗಳನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿ, ಇ-ಶ್ರಮ್ ಮತ್ತು ಆಯುಷ್ಮಾನ್ ಕಾರ್ಡ್ಗಳನ್ನು ಸಾಂಕೇತಿಕವಾಗಿ ವಿತರಿಸಿದರು.
ಕೇಂದ್ರ, ರಾಜ್ಯ ಸರಕಾರದ ಯೋಜನೆಗಳು ಒಕ್ಕೂಟದ ಮೂಲಕ ಕಾರ್ಯಗತ:
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಭಾರತ ದೇಶದ ಜನರು ಯಾವ ರೀತಿ ಇರಬೇಕೆಂದು ಮಹಾತ್ಮ ಗಾಂಧೀಜಿಯವರು ಕನಸು ಕಂಡಿದ್ದಂತೆ ದುಶ್ಚಟಮುಕ್ತ ಸಮಾಜ, ಸ್ವಾವಲಂಬಿ ಬದುಕು, ದೇವಸ್ಥಾನ, ಗ್ರಾಮಗಳು ಸೇರಿದಂತೆ ಎಲ್ಲವನ್ನು ಸಾಕಾರಗೊಳಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರು ಮಾಡಿದ್ದಾರೆ.ಪ್ರತಿ ಗ್ರಾಮದಲ್ಲಿ ದುಶ್ಚಟಮುಕ್ತ ಸಮಾಜಕ್ಕಾಗಿ ಮದ್ಯವರ್ಜನ ಶಿಬಿರ,ಗ್ರಾಮೋದ್ಯೋಗ,ಸ್ವದೇಶಿ ಚಿಂತನೆ, ಸಂಸ್ಕಾರ ಜೀವನಕ್ಕೆ ಭಜನಾ ಒಕ್ಕೂಟಗಳು,ಆರಾಧನೆಗೆ ದೇವಸ್ಥಾನಗಳ ನಿರ್ಮಾಣ ಸೇರಿದಂತೆ ಒಟ್ಟಿನಲ್ಲಿ ಸರಕಾರ ಮಾಡುವ ಎಲ್ಲಾ ಕೆಲಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಆಗುತ್ತಿದೆ.ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ಒಕ್ಕೂಟದ ಮೂಲಕ ಕಾರ್ಯಗತಗೊಳ್ಳುತ್ತಿವೆ ಎಂದರಲ್ಲದೆ ದೇಶದ, ಜನಸಾಮಾನ್ಯರ ಬೆಳಕಿಗೆ ಕಾರಣಕರ್ತರಾದ ಖಾವಂದರು ರಾಜ್ಯ ಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವುದು ನಮಗೆಲ್ಲ ಹೆಮ್ಮೆಯ ವಿಚಾರ ಎಂದರು.
ಮಹಿಳೆಯರು ಸಾಧಕರಾಗಲು ಗ್ರಾಮಾಭಿವೃದ್ಧಿ ಯೋಜನೆ ಕಾರಣ:
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಮಾತನಾಡಿ ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ.ಸ್ವಸಹಾಯ ಸಂಘಗಳು ಆರ್ಥಿಕ ಸಬಲತೆ ನೀಡುವ ಮಹತ್ವದ ಕೆಲಸವನ್ನು ಮಾಡಿದ್ದರಿಂದ ಇವತ್ತು ಮಹಿಳೆಯರೂ ಮುಂದೆ ಬಂದಿದ್ದಾರೆ.ಬ್ಯಾಂಕುಗಳ ವ್ಯವಹಾರದ ಬಗ್ಗೆ ಪರಿಚಯವೇ ಇಲ್ಲದ ಮಹಿಳೆಯರು ಕೂಡ ಆರ್ಥಿಕ ಚಟುವಟಿಕೆಗಳನ್ನು ಯಾವುದೇ ಅಳುಕಿಲ್ಲದೆ ನಡೆಸುವ ವಾತಾವರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಗಳು ಮಾಡುತ್ತಿವೆ.ಅದೇ ರೀತಿ ಖಾವಂದರ ಈ ಕಾರ್ಯಗಳಿಗಾಗಿ ಸರಕಾರವು ಅವರನ್ನು ರಾಜ್ಯ ಸಭೆಗೆ ನಾಮನಿರ್ದೇಶನ ಮಾಡಿದೆ.ನಾನು ರಾಜಕಾರಣಿ ಅಲ್ಲ.ಆದರೆ ಸಿಕ್ಕಿದ ಅವಕಾಶವನ್ನು ಉಪಯೋಗಿಸುತ್ತೇನೆ ಎಂದು ಖಾವಂದರು ತಿಳಿಸಿದ್ದರು ಎಂದರು.
ಪ್ರತಿ ಪದಗ್ರಹಣದಲ್ಲೂ ಹೊಸ ಒಕ್ಕೂಟ ಉದ್ಘಾಟನೆ ಉತ್ತಮ ವಿಚಾರ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಇದರ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ ಅವರು ಮಾತನಾಡಿ,40 ವರ್ಷದ ಹಿಂದೆ ಗ್ರಾಮಾಭಿವೃದ್ದಿ ಯೋಜನೆ ಆರಂಭಗೊಂಡಿರುವ ಸಂದರ್ಭದಿಂದ ಇವತ್ತಿನ ತನಕ ಯೋಜನೆಯ ಮೂಲಕ ಅನೇಕ ಕಾರ್ಯಗಳು ನಡೆಯುತ್ತಿದೆ.ಈ ಜನ್ಮವನ್ನು ಸಾರ್ಥಕಗೊಳಿಸಬೇಕಾದರೆ ದುರಾಭ್ಯಾಸ ಬಿಡಬೇಕೆಂಬ ನಿಟ್ಟಿನಲ್ಲಿ ಮದ್ಯವರ್ಜನ ಶಿಬಿರ ಸೇರಿದಂತೆ ಯೋಜನೆ ಮೂಲಕ ಬೇರೆ ಬೇರೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ.ಅದೇ ರೀತಿ ಪ್ರತಿ ಒಕ್ಕೂಟಗಳ ಪದಗ್ರಹಣ ಸಂದರ್ಭದಲ್ಲೂ ಹೊಸ ಒಕ್ಕೂಟಗಳು ಉದ್ಘಾಟನೆಗೊಳ್ಳುತ್ತಿರುವುದು ಉತ್ತಮ ವಿಚಾರ ಎಂದರು.
ಯೋಜನೆಯ ಕಾರ್ಯ ಸದುಪಯೋಗಪಡಿಸಿಕೊಳ್ಳಿ: ಶ್ರೀ ಕ್ಷೇ.ಧ.ಗ್ರಾ.ಯೋ ಬಿ.ಸಿ.ಟ್ರಸ್ಟ್‌ನ ದ.ಕ.ಜಿಲ್ಲೆ 2 ಇದರ ಅಧ್ಯಕ್ಷ ಪ್ರವೀಣ್ ಕುಮಾರ್ ಅವರು ಮಾತನಾಡಿ ಬದುಕನ್ನು ಗಟ್ಟಿ ಮಾಡುವ ಕಾರ್ಯಕ್ರಮವಾಗಿ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ನೀಡುತ್ತಿದೆ.ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ.ಒಕ್ಕೂಟಗಳ ಮೂಲಕ ಎಲ್ಲರೂ ಸಬಲೀಕರಣವಾಗಬೇಕು.ಬಡವರ ಚೈತನ್ಯಕ್ಕೆ ಸಂಘದ ಮೂಲಕ ಅನೇಕ ಯೋಜನೆಗಳನ್ನು ನೀಡಲಾಗಿದೆ. ಅದನ್ನು ಸದುಪಯೋಗ ಮಾಡಬೇಕೆಂದರು.
ಸ್ವಸಹಾಯ ಸಂಘ ಜೀವನದ ಅಗತ್ಯತೆ: ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆ ಅವರು ಮಾತನಾಡಿ ಸಂಸ್ಕಾರಯುತ ಸಮಾಜದಲ್ಲಿ ಇವತ್ತು ನಾವಿರಬೇಕಾದರೆ ಅದಕ್ಕೆ ಮೂಲ ಕಾರಣ ಖಾವಂದರ ಅಶೀರ್ವಾದ. ಸ್ವಸಹಾಯ ಸಂಘ ಎಂಬುದು ಹಿಂದಿನಿಂದಲೂ ಕೃಷಿ ಕುಟುಂಬದಲ್ಲಿ ಕಾಣುತ್ತಿತ್ತು.ಅದೇ ಮುಂದುವರಿದು ಸ್ವಸಹಾಯವೆಂಬ ರೀತಿಯಲ್ಲಿ ಬೆಳವಣಿಗೆಯಾಗಿದೆ.ಇವತ್ತು ಸ್ವಸಹಾಯ ಸಂಘ ಜೀವನದ ಅಗತ್ಯತೆಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆ ಜೀವನಕ್ಕೆ ಅಡಿಪಾಯ: ಪ್ರಗತಿ ಬಂಧು ಕೇಂದ್ರ ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಹಾರ್ಪಳ ಅವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಜೀವನಕ್ಕೆ ಅಡಿಪಾಯ.ಇದರ ಮೂಲಕ ಜನಸಾಮಾನ್ಯರು ಉತ್ತಮ ಬೆಳವಣಿಗೆ ಕಂಡಿದ್ದಾರೆ ಎಂದರು.ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಗೌಡ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.ತಾಲೂಕು ಯೋಜನಾಧಿಕಾರಿ ಆನಂದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದಗ್ರಹಣ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ವಲಯದ ಪರ್ಲಡ್ಕ ಒಕ್ಕೂಟದ ನೂತನ ಅಧ್ಯಕ್ಷ ಪರ್ವಿನ್‌ಲತಾ ಮತ್ತು ಪದಾಧಿಕಾರಿಗಳು, ಬಪ್ಪಳಿಗೆ ಒಕ್ಕೂಟದ ಸ್ವರ್ಣಲತಾ ಹೆಗ್ಡೆ ಮತ್ತು ಪದಾಧಿಕಾರಿಗಳು, ಜಿಡೆಕಲ್ಲು ಒಕ್ಕೂಟದ ಅಧ್ಯಕ್ಷ ದಯಾನಂದ ಎ ಮತ್ತು ಪದಾಧಿಕಾರಿಗಳು, ಬೊಳುವಾರು ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಮತ್ತು ಪದಾಧಿಕಾರಿಗಳು, ಕಸಬಾ ಬಿ ಒಕ್ಕೂಟದ ಅಧ್ಯಕ್ಷ ರತ್ನಾಕರ ಆಚಾರ್ಯ ಮತ್ತು ಪದಾಧಿಕಾರಿಗಳು, ಕಸಬಾ ಒಕ್ಕೂಟದ ಅಧ್ಯಕ್ಷೆ ತಿಲೋತ್ತಮ ಮತ್ತು ಪದಾಧಿಕಾರಿಗಳು, ನೂತನ ಒಕ್ಕೂ ಸಾಲ್ಮರದ ಅಧ್ಯಕ್ಷ ಪ್ರಸಾದ್ ರೈ ಕೆರೆಮೂಲೆ, ಸಾಮೆತ್ತಡ್ಕ ನೂತನ ಒಕ್ಕೂಟದ ಅಧ್ಯಕ್ಷೆ ಅಹಲ್ಯ, ಪಡೀಲ್ ನೂತನ ಒಕ್ಕೂಟದ ಅಧ್ಯಕ್ಷೆ ಮೈಮುನಾ ಅವರಿಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಪುಸ್ತಕ ಹಸ್ತಾಂತರಿಸುವ ಮೂಲಕ ಪದಗ್ರಹಣ ನೆರವೇರಿಸಿದರು.ಈ ಸಂದರ್ಭದಲ್ಲಿ ಪರ್ಲಡ್ಕ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ಧರ್ಮೆಂದ್ರ, ಬಪ್ಪಳಿಗೆ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ದೀಕ್ಷಾ ಪೈ, ಜಿಡೆಕಲ್ಲು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಸುಜಾತ ನಾರಾಯಣ, ಬಪ್ಪಳಿಗೆ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಧನೇಶ್ವರಿ, ಬೊಳುವಾರು ಒಕ್ಕೂಟದ ನಿಕಟಪೂರ್ವ ಅಧ್ಯಕ್ಷ ರವಿರಾಜ್ ಆಚಾರ್ಯ ಜವಾಬ್ದಾರಿ ಹಸ್ತಾಂತರಿಸಿದರು.

ಕಸಬಾ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷೆ ಧನೇಶ್ವರಿ, ಬಪ್ಪಳಿಗೆ ಒಕ್ಕೂಟದ ನೂತನ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಅನಿಸಿಕೆ ವ್ಯಕ್ತಪಡಿಸಿದರು.ಸಾಮೆತ್ತಡ್ಕ ಒಕ್ಕೂಟದ ಕಾರ್ಯದರ್ಶಿ ನಳಿನಾಕ್ಷಿ ವರದಿ ವಾಚಿಸಿದರು.ಬಪ್ಪಳಿಗೆ ಒಕ್ಕೂಟದ ನೂತನ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಪರ್ಲಡ್ಕ ಒಕ್ಕೂಟದ ಭಾರತಿ, ಕಸಬಾ ಒಕ್ಕೂಟದ ತಿಲೋತ್ತಮ, ರತ್ನಾಕರ ಆಚಾರ್ಯ,ಜಿಡೆಕಲ್ಲು ಒಕ್ಕೂಟದ ದಯಾನಂದ, ಸಾಲ್ಮರ ಒಕ್ಕೂಟದ ಪ್ರಸಾದ್, ಕಸಬಾ ಬಿ ಒಕ್ಕೂಟದ ಶ್ರೀಧರ್ ಆಚಾರ್ಯ, ಪಡೀಲು ಒಕ್ಕೂಟದ ಮೈಮುನಾ, ಸುರೇಶ್, ಸೌಮ್ಯ ಅತಿಥಿಗಳನ್ನು ಗೌರವಿಸಿದರು.ಸೇವಾ ಪ್ರತಿನಿಧಿಗಳಿಗೆ ಮತ್ತು ನಿಕಟಪೂರ್ವ ಒಕ್ಕೂಟಗಳ ಅಧ್ಯಕ್ಷ ಪದಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಪೂಜಾ ಮತ್ತು ಬಳಗ ಪ್ರಾರ್ಥಿಸಿದರು. ಕಸಬಾ ಬಿ ಒಕ್ಕೂಟದ ಅಧ್ಯಕ್ಷ ಜಯರಾಮ ಕುಲಾಲ್ ಸ್ವಾಗತಿಸಿದರು. ಪರ್ಲಡ್ಕ ಒಕ್ಕೂಟದ ಮಂಜುನಾಥ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಯೋಗೇಶ್ವರಿ ವಂದಿಸಿದರು.

 

LEAVE A REPLY

Please enter your comment!
Please enter your name here