ಗಣಪತಿ, ಶಾರದೆ, ನವದುರ್ಗೆಯರ ಆರಾಧನೆ – ವಿವಿಧ ಕ್ಷೇತ್ರದ ಸಾಧಕ 24 ಮಂದಿಗೆ ಸನ್ಮಾನ
ಪುತ್ತೂರು: ಜಿಲ್ಲೆಯಲ್ಲಿ ಮಂಗಳೂರು ಬಳಿಕ ಪುತ್ತೂರಿನಲ್ಲೇ ನವದುರ್ಗೆಯರ ಆರಾಧಾನೆ ಪುತ್ತುರು ದಸರಾ ಮಹೋತ್ಸವ ನಡೆಯುತ್ತಿದ್ದು, ಕಳೆದ ಎರಡು ವರ್ಷಗಳಿಂದ ಕೊರೊನಾ ನೆಪದಿಂದ ಸಾಂಕೇತಿಕವಾಗಿ ಆಚರಣೆಯಾಗುತ್ತಿದ್ದ ದಸರಾವನ್ನು ಈ ಬಾರಿ ಸೆ.26 ರಿಂದ ಅ.7ರ ತನಕ ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ, ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸುವ ಮೂಲಕ ಭಕ್ತರು ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಲಿದೆ.
ಪ್ರತಿ ದಿನ ಸಂಜೆ ಭಜನೆ ಕಾರ್ಯಕ್ರಮ ಜರುಗಲಿದೆ. ಸೆ.27ಕ್ಕೆ ವಿಷ್ಣುಮೂರ್ತಿ ದೈವದ ಬಯಲುಕೋಲ, ಸೆ.30ಕ್ಕೆ ರಕ್ತೇಶ್ವರಿ, ಕಲ್ಲುರ್ಟಿ ದೈವದ ನೇಮ, ಅ.1ಕ್ಕೆ ಶ್ರೀಚಕ್ರಪೂಜೆ, ಅ.2ಕ್ಕೆ ಶಾರದಾ ಪ್ರತಿಷ್ಠೆ, ಸಂಜೆ ಸಾಮೂಹಿಕ ಆಯುಧ ಪೂಜೆ, ಅ.7ಕ್ಕೆ ಸಾಮೂಹಿಕ ಚಂಡಿಕಾಹವನ, ಮಹಾಪೂಜೆ ಬಳಿಕ ಸಂಜೆ ಪುತ್ತೂರು ದಸರಾ ಮೆರವಣಿಗೆ ಜರುಗಲಿದೆ.
ಸೆ.26ಕ್ಕೆ ಬೆಳಿಗ್ಗೆ ಗಣಪತಿ ಹವನ ಮತ್ತು ನವದುರ್ಗೆಯರ ಪ್ರತಿಷ್ಠೆ ಜರುಗಲಿದ್ದು, ಅಕ್ಷಯ ಕಾಲೇಜು ಸಂಪ್ಯ ಇದರ ಸಂಚಾಲಕ ಜಯಂತ ನಡುಬೈಲು ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಅದೇ ದಿನ ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಲಿದ್ದು, ನ್ಯೂಸ್ ಒನ್ ಬೆಂಗಳೂರು ಇದರ ರವಿಕುಮಾರ್ ಅವರು ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ದಸರಾವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಹಳೆ ನ್ಯೂಸ್ನ ಶ್ಯಾಮಸುದರ್ಶನ್, ಚಲನಚಿತ್ರ ನಟ ಸುರೇಶ್ ರೈ, ನಟಿ ನಿರೀಕ್ಷಾ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಅಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ ಮತ್ತು ಅನುಗ್ರಹ ಐಡಿಯಲ್ ಪಾಯಿಂಟ್ನ ರಮಾನಂದ ನಾಯಕ್ ಅವರನ್ನು ಸನ್ಮಾನಿಸಲಾಗುವುದು.
ಸಭಾ ಕಾರ್ಯಕ್ರಮದ ಬಳಿಕ ವಿಕ್ರಂ ಶೆಟ್ಟಿಯವರಿಂದ ಮಾಯಾ ಮ್ಯಾಜಿಕ್ ಕಾರ್ಯಕ್ರಮ ಜರುಗಲಿದೆ. ಸೆ.27ಕ್ಕೆ ಸಂಜೆ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಇದರ ಅಧ್ಯಕ್ಷ ಶಶಾಂಕ್ ಕೊಟೇಚಾ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಚಿಣ್ಣರ ಲೋಕ ಬಂಟ್ವಾಳ ಇದರ ಸಂಚಾಲಕ ಮೋಹನದಾಸ ಕೊಟ್ಟಾರಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಾಲಸುಬ್ರಹ್ಮಣ್ಯ ಭಟ್, ಸಮಜ ಸೇವೆಯ ಪ್ರೇಮಲತಾ ರಾವ್, ಭೂತಾರಾಧನೆಯ ಜಿನ್ನಪ್ಪ ಮಡಿವಾಳ ಅವರನ್ನು ಸನ್ಮಾನಿಸಲಾಗುವುದು. ಸಂಜೆ ವಿದುಷಿ ವೀಣಾ ರಾಘವೇಂದ್ರ ಅವರ ಶಿಷ್ಯ ಬಳಗದಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸೆ.28ಕ್ಕೆ ಸಂಜೆ ರಾಮಜಾಲು ಶ್ರೀ ಕೋಟಿ ಚೆನ್ನಯ ಆದಿಬ್ರಹ್ಮ ಬೈದರ್ಕಳ ಇದರ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು ಅವರು ಅಧ್ಯಕ್ಷತೆ ವಹಿಸಲಿದ್ದು, ಉದ್ಯಮಿ ದಿನೇಶ್ ರೈ ಮೊಡಪ್ಪಾಡಿ ಮೂಲೆ ಮತ್ತು ಜೇಸಿಐ ವಲಯಾಧ್ಯಕ್ಷೆ ಸ್ವಾತಿ ಜೆ ರೈ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಉರಗ ತಜ್ಞ ತೇಜಸ್, ಯಕ್ಷಗಾನ ಕಲಾವಿದ ಸುಬ್ಬು ಸೆಂಟ್ಯಾರು ಅವರನ್ನು ಸನ್ಮಾನಿಸಲಾಗುವುದು. ಸಂಜೆ ಶ್ರೀ ದುರ್ಗಾ ಪರಮೇಶ್ವರಿ ಕೃಪಾಪೋಷಿತ ಮನೆಮನೆ ಯಕ್ಷಗಾನ ಮಂಡಳಿ ಕನ್ಯಾನ ಇದರ ಪ್ರಾಯೋಜಕತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಜರುಗಲಿದೆ.
ಸೆ.29ಕ್ಕೆ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಆಶಾ ಪುತ್ತೂರಾಯ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಗುರು ಆಶಾ ಬೆಳ್ಳಾರೆ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಹಿರಿಯ ವೈದ್ಯೆ ಡಾ. ಗೌರಿ ಪೈ ಅವರನ್ನು ಸನ್ಮಾನಿಸಲಾಗುವುದು. ಇದೇ ಸಂದರ್ಭದಲ್ಲಿ ಆಶಾಕಾರ್ಯಕರ್ತೆಯರಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ನೃತ್ಯೋಪಸನಾ ಕಲಾಕೇಂದ್ರ ಪುತ್ತೂರು ಇದರ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷನ್ ಅವರ ಶಿಷ್ಯವೃಂದದವರಿಂದ ನೃತ್ಯೋಹಂ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.
ಸೆ.30ಕ್ಕೆ ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಸಂಪ್ಯ ಇದರ ವ್ಯವಸ್ಥಾಪನಾ ಸಮಿತಿ ಸದಸ್ಯ ಜಯಕುಮರ್ ಆರ್ ನಾಯರ್, ಕೃಷಿ ಇಲಾಖೆಯ ಕೃಷ್ಣಪ್ರಸಾದ್ ಭಂಡಾರಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಹೈನುಗಾರಿಕೆಯ ಪ್ರಗತಿಪರ ಕೃಷಿಕ ಭಾಸ್ಕರ್ ಆಚಾರ್ ಹಿಂದಾರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಂದಿ ಸೇವಕ ವಸಂತ ಗೌಡ ತೆಂಕಿಲ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಅ.1ಕ್ಕೆ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಬಳ್ಳಾಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಸೌತಡ್ಕ, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷ ವಿಶ್ವಾಸ್ ಶೆಣೈ ಅವರು ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಯು ಪೂವಪ್ಪ ಮತ್ತು ಸ್ವರ್ಣೋದ್ಯಮಿ ಜಿ.ಎಲ್.ಬಲರಾಮ ಅಚಾರ್ಯ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯರಿಂದ ಭರತನಾಟ್ಯ ಮತ್ತು ನೃತ್ಯ ವೈವಿಧ್ಯ ಕಾರ್ಯಕ್ರಮ ಜರುಗಲಿದೆ.
ಅ.2ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ದಸರಾ ಸಮಿತಿ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಕಲ್ಲಾರೆ ಶ್ರೀ ರಾಘವೇಂದ್ರ ಸ್ವಾಮಿ ಮಠದ ಅರ್ಚಕ ರಾಘವೇಂದ್ರ ಉಡುಪ, ಅಂಬಿಕಾ ವಿದ್ಯಾ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಊರ ಕಲಾವಿದರಿಂದ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಜರುಗಲಿದೆ.
ಅ.3ಕ್ಕೆ ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನಗರಸಭೆ ಸ್ಥಳೀಯ ಸದಸ್ಯ ಶೀನಪ್ಪ ನಾಯ್ಕ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಹಿರಿಯ ನೃತ್ಯ ಕಲಾವಿದೆ ನಯನ ವಿ ರೈ, ಪ್ರಜ್ಞಾನ ಆಶ್ರಮದ ಅಣ್ಣಪ್ಪ, ಸಮಾಜ ಸೇವೆ ಮಾಡುತ್ತಿರುವ ನಯನ ರೈ ನೆಲ್ಲಿಕಟ್ಟೆಯವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ವಿಶ್ವಕಲಾನಿಕೇತನ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್ ಮತ್ತು ಕಲ್ಚರಲ್ ಇದರ ವತಿಯಿಂದ ನೃತ್ಯ ಸಂಭ್ರಮ ಕಾರ್ಯಕ್ರಮ ಜರುಗಲಿದೆ.
ಅ.4ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಯೋಜನ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ರೋಟರಿ ಈಸ್ಟ್ ಅಧ್ಯಕ್ಷ ಶರತ್ ರೈ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಹೊಟೇಲ್ ಹರಿಪ್ರಸಾದ್ನ ಹರಿಪ್ರಸಾದ್ ಮಯ್ಯ, ಕೋರ್ಟ್ ರಸ್ತೆಯ ವರ್ತಕ ದಿನೇಶ್ ಪೈ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಗಾನಸಿರಿ ಕಲಾಕೇಂದ್ರದ ಡಾ| ಕಿರಣ್ ಕುಮಾರ್ ನೇತೃತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ.
ಅ.5ರಂದು ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಿವಳ್ಳಿ ಸಂಪದದ ಅಧ್ಯಕ್ಷ ದಿವಾಕರ ನಿಡ್ವಣ್ಣಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಸಂಚಾಲಕ ಟಿ.ಸುಬ್ರಹ್ಮಣ್ಯ ಭಟ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಕೃಷ್ಣ ಸ್ಟುಡಿಯೋದ ಮಾಲಕ ಹರೀಶ್, ಜವುಳಿ ಉದ್ಯಮಿ ಗಿರಿಧರ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಸಾಧನಾ ಸಂಗೀತ ಕಲಾ ಶಾಲೆಯ ವಿದುಷಿ ಸುಚಿತ್ರಾ ಹೊಳ್ಳ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಲಿದೆ.
ಅ.6ರಂದು ಸಂಜೆ ನಡೆಯುವ ಪುತ್ತೂರು ದಸರಾದ ಸಭಾ ಕಾರ್ಯಕ್ರಮದ ಸಮಾರೋಪ ಸಮಾರಂಂಭದಲ್ಲಿ ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಜಾರಿ ನಿರ್ದೇಶನಾಲಯದ ವಿಶೇಷ ಸರಕಾರಿ ಅಭಿಯೋಜಕ ಮಹೇಶ್ ಕಜೆ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಪಿ.ಜಿ.ಜಗನ್ನಿವಾಸ ರಾವ್, ವೈದ್ಯಕೀಯ ಸೇವೆಯಲ್ಲಿ ಡಾ. ಸುರೇಶ್ ಪುತ್ತೂರಾಯ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಪುನೀ ಆರ್ಕೆಸ್ಟ್ರಾದ ಗಾಯಕ ಚಂದ್ರಶೇಖರ್ ಹೆಗ್ಡೆ ಅವರ ನಿರ್ದೇಶನದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.