ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಧಾರ್ಮಿಕ ಸಭೆ, ಕುಂಜೂರು ಶ್ರೀ ದುರ್ಗೆ ವಿಡಿಯೋ ಲೋಕಾರ್ಪಣೆ

0

ಪುತ್ತೂರು; ದೇವಸ್ಥಾನಗಳ ಜೀರ್ಣೋದ್ಧಾರ, ಅಭಿವೃದ್ದಿ, ತಡೆಗೋಡೆ, ಇಂಟರ್ ಲಾಕ್ ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಲ್ಲಿ 13 ಕೋಟಿ ರೂಪಾಯಿ ಅನುದಾನ ನೀಡಿರುವುದಾಗಿ ಶಾಸಕ ಸಂಜೀವ ಮಠಂದೂರು ತಿಳಿಸಿದರು.

ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಅ.2 ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಧರ್ಮಾಧಾರಿತ ರಾಜಕಾರಣ‌ವಿರಬೇಕು ಎಂಬ ಉದ್ದೇಶದಿಂದ ದೇವಸ್ಥಾನ, ದೈವಸ್ಥಾನಗಳಿಗೆ ಅನುದಾನ ನೀಡಲಾಗುತ್ತಿದ್ದು ಕುಂಜೂರು ದೇವಸ್ಥಾನದ ರಸ್ತೆಯ ಸಂಪೂರ್ಣ ಕಾಂಕ್ರಿಟೀಕರಣಕ್ಕೆ ರೂ.50 ಅನುದಾನ ಹಾಗೂ ಜಿಲ್ಲಾ ಪಂಚಾಯತ್ ಮೂಲಕ ಕೊಳವೆ ಬಾವಿ ನಿರ್ಮಾಣಕ್ಕೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.

ದೈವಸ್ಥಾನಗಳಿರುವ ಅಡಿಸ್ಥಳವನ್ನು ಕಾನೂನು ಬದ್ದವಾಗಿ ಪಡೆಯಲು ಪ್ರಯತ್ನಿಸುವುದಾಗಿ ತಿಳಿಸಿದ ಶಾಸಕರು, ದೈವಸ್ಥಾನಗಳ ರಕ್ಷಣೆಗಾಗಿ ರಾಜ್ಯ ಸರಕಾರ ದೇವಸ್ಥಾನಗಳ ರಕ್ಷಣಾ ಮಸೂದೆ‌ ಜಾರಿ ಮಾಡಿದೆ. ಗೋವಿನ ರಕ್ಷಣೆಗಾಗಿ ಕಾನೂನಿನಲ್ಲಿದ್ದ ತೊಡಕುಗಳನ್ನು ನಿವಾರಿಸಿಕೊಂಡು ಗೋಹತ್ಯೆ ಮಸೂದೆ, ರಾಜ್ಯ ಸರಕಾರ ಜಾರಿಮಾಡಿದೆ. ಬಡವರಿಗೆ ಕಲ್ಯಾಣಕ್ಕಾಗಿ ಸಪ್ತಪದಿ ಯೋಜನೆ ವಿಶೇಷ ಕಾರ್ಯಕ್ರಮ ಜಾರಿ ಮಾಡಿದೆ ಎಂದರು.

ಜಿಲ್ಲಾ‌ ಧಾರ್ಮಿಕ ಪರಿಷತ್ ಸದಸ್ಯ ಮುರಳಿಕೃಷ್ಣ ಹಸಂತಡ್ಕ ಮಾತನಾಡಿ, ಕುಂಜೂರು ದೇವಿಯನ್ನು ಭಕ್ತಿ, ಶ್ರದ್ಧೆಯಿಂದ ಆರಾಧಿಸಲ್ಪಡುವ ಕ್ಷೇತ್ರವಾಗಿದೆ. ಹೊರಭಾಗದಿಂದಲೂ ಬಹಳಷ್ಟು ಭಕ್ತರು ಆಗಮಿಸುತ್ತಾರೆ. ನವರಾತ್ರಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಮತ್ತಷ್ಟು ಧಾರ್ಮಿಕತೆ ಒತ್ತ ನೀಡಲಾಗಿದೆ.
ಶಾಸಕರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಸುಸಜ್ಜಿತ ಸಭಾಂಗಣ ನಿರ್ಮಾಣ ವಾಗಬೇಕು ಎಂಬ ಬೇಡಿಕೆ ಭಕ್ತರಲ್ಲಿದೆ ಎಂದ ಅವರು ಈಗಿನ ವ್ಯವಸ್ಥಾಪನಾ ಸಮಿತಿ ಮಾದರಿಯಾಗಿ ಕೆಲಸ ಮಾಡಿದ್ದು ಕೋವಿಡ್ ನ ಕಷ್ಟದ ಸಂದರ್ಭದಲ್ಲಿಯೂ ದೇವತಾ ಕಾರ್ಯಗಳಿಗೆ ತೊಡಕುಂಟಾಗದಂತೆ ಕೆಲಸ ಮಾಡಿರುವುದನ್ನು ಶ್ಲಾಘಿಸಿದರು.

ಪ್ರಗತಿ ಪರ ಕೃಷಿಕ ಕೃಷ್ಣಪ್ರಸಾದ್ ಭಂಡಾರಿ, ಕುಂಜೂರು ಕ್ಷೇತ್ರಕ್ಕೆ ಒಂದು‌ ಸಾವಿರ ವರ್ಷಗಳ ಇತಿಹಾಸವಿದೆ. ದೇವಿ ಸಾನಿಧ್ಯವು ಶಕ್ತಿಯುತವಾಗಿದೆ. ಇಲ್ಲಿರುವ ಭಕ್ತರ ಪ್ರಾಮಾಣಿಕ ಸೇವೆ ವಿಶಿಷ್ಠವಾದದು. ಇದನ್ನು ಬೇರೆ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಕಾಲಕ್ಕೆ ಅನುಗುಣವಾದಂತೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಹಂತ ಹಂತವಾಗಿ ನಡೆದಿರುತ್ತದೆ. ದೇವಿ ಸಾನಿಧ್ಯ ದಲ್ಲಿ ಸಪ್ತಸತಿ ಪಾರಾಯಣವು ಪ್ರಾಮುಖ್ಯವಾಗಿದ್ದು ನಿರಂತರ ನಡೆದರೆ ಕ್ಷೇತ್ರದ ಸಾನಿಧ್ಯ ಇನ್ನಷ್ಟು ವೃದ್ಧಿಯಾಗುತ್ತದೆ‌. ಇದಕ್ಕೆ ಭಕ್ತರ ಸಹಕಾರ ಅಗತ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಕೆಎಂಎಫ್ ನ ಜಂಟೀ ನಿರ್ದೇಶಕ ರಾಮಕೃಷ್ಣ ಭಟ್ ಮುದ್ರಜೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಭಕ್ತರಿಂದಲೇ ನಡೆಯಬೇಕು. ಹಲವು ಮಂದಿ ಹಿರಿಯರು ಅವಿರತ ಪ್ರಯತ್ನದಿಂದ ದೇವಸ್ಥಾನದ ಅಭಿವೃದ್ಧಿ ಸಾಧ್ಯವಾಗಿದೆ. ಹಂತ ಹಂತವಾಗಿ ಎಲ್ಲರ ಶ್ರಮದ ಫಲವಾಗಿ ಬೆಳೆದು ಬಂದಿದೆ. ಅವರ ಪ್ರತಿಫಲಾಪೇಕ್ಷೆಯಿಲ್ಲದ ಸೇವೆಯಿಂದ ಕ್ಷೇತ್ರವು ಅಭಿವೃದ್ಧಿಯಾಗಿದೆ. ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕಾರ್ಯ ನಿರ್ವಹಿಸುವ ತಂಡ ಕ್ಷೇತ್ರದಲ್ಲಿ ಕಾಣಬಹುದು ಎಂದರು.


ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಆಡಳಿತವೆಂದರ ಅದು ಅಧಿಕಾರವಲ್ಲ. ದೇವರ ಸೇವೆ ಮಾಡಲು ಭಕ್ತರಿಗೆ ಒಲಿಯುವ ಸೌಭಾಗ್ಯವಾಗಿದೆ. ನವರಾತ್ರಿಯಲ್ಲಿ ದೇವರ ಕಾರ್ಯಗಳ ಜೊತೆಗೆ ದೇವಿಗೆ ಪ್ರೀತ್ಯರ್ಥವಾಗಿರುವ ಕಲಾ ಸೇವೆಯು ಈ ವರ್ಷ ಪ್ರಥಮ ಬಾರಿಗೆ ಆಯೋಜಿಸಿಕೊಳ್ಳಲಾಗಿದ್ದು ಬಹಳಷ್ಟು ಯಶಸ್ವಿಯಾಗಿ ನಡೆಯುತ್ತಿದೆ.ಶಾಸಕರ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸಲಾಗಿದೆ. ಇನ್ನು ಮುಂದೆ ಕ್ಷೇತ್ರದಲ್ಲಿ ಸಭಾ ಭವನ ನಿರ್ಮಾಣದ ಬೇಡಿಕೆ ಭಕ್ತರಲ್ಲಿದೆ ಎಂದರು.
ರಾಮಕೃಷ್ಣ ಕಾಟುಕುಕ್ಕೆ‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕುಂಜೂರು ಶ್ರೀದುರ್ಗೆ ವಿಡಿಯೋ ಲೋಕಾರ್ಪಣೆ;
ಕ್ಷೇತ್ರದ ಐತಿಹ್ಯ, ಕಾರಣಿಕತೆಗಳನ್ನು ಆಧಾರಿತವಾಗಿ ಅನು ಆಡಿಯೋಸ್ ರವರಿಂದ ನಿರ್ಮಾನಗೊಂಡಿರುವ ‘ ಕುಂಜೂರು ಶ್ರೀದುರ್ಗೆ’ ಭಕ್ತಿ ಗೀತೆಗಳ ವಿಡಿಯೋ ವನ್ನು ಶಾಸಕ ಸಂಜೀವ ಮಠಂದೂರು ಯೂಟ್ಯೂಬ್ ನಲ್ಲಿ ಲೋಕಾರ್ಪಣೆ ಗೊಳಿಸಿದರು. ಅನು ಆಡಿಯೋಸ್ ನ ಚರಣ್ ಉಪ್ಪಳಿಗೆ ಉಪಸ್ಥಿತರಿದ್ದರು. ಕ್ಷೇತ್ರದ ಹಿನ್ನೆಲೆ, ಕಾರಣಿಕತೆ ಜಗತ್ತಿಗೆ ತಿಳಿಯಲು ವಿಡಿಯೋ ಸಹಕಾರಿಯಾಗಲಿದೆ. ಭಕ್ತರನ್ನು ಕ್ಷೇತ್ರದ ಕಡೆಗೆ ಸೆಲೆಯಲು ಸಹಕಾರಿಯಾಗಲಿದೆ ಎಂದು ವಿಡಿಯೋದ ಬಗ್ಗೆ ಶಾಸಕರು ಹಾಗೂ ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಅನು ಆಡಿಯೋಸ್ ನ ಪೋಸ್ಟರ್ ಹಾಗೂ ಭಕ್ತಿಗೀತೆಗಳ ಪುಸ್ತಕವನ್ನು ಶಾಸಕರು ಬಿಡುಗಡೆಗೊಳಿಸಿದರು.
ಸನ್ಮಾನ;
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಒದಗಿಸಿಕೊಟ್ಟ ಶಾಸಕ ಸಂಜೀವ ಮಠಂದೂರು, ಕುಂಜೂರು ದುರ್ಗೆ ಭಕ್ತಿಗೀತೆ ಚಿತ್ರೀಕರಣದಲ್ಲಿ ಸಹಕರಿಸಿದ ರಾಮಕೃಷ್ಣ ಕಾಟುಕುಕ್ಕೆ, ರಾಘವೇಂದ್ರ ಬಂಗಾರಡ್ಕ, ಚರಣ್ ಉಪ್ಪಳಿಗೆ, ವಿಜಯಶ್ರೀ ಮುಳಿಯ, ಟಿ.ವಿ ರವಿಯವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಮೋಕ್ಷ ಹಾಗೂ ಹೇಮಲತಾ ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಆರ್ ಶುಭಕರ ರಾವ್, ಮಹಾಲಿಂಗ ನಾಯ್ಕ ಮಚ್ಚಿಮಲೆ, ಚಂದಪ್ಪ ಪೂಜಾರಿ, ಉಮಾವತಿ, ವಿಶ್ವನಾಥ ಕುಲಾಲ್, ಲೀಲಾವತಿ, ಅಶೋಕ್ ಕುಂಜೂರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ನವೀನ್ ಕುಮಾರ್ ಜಿ.ಟಿ ವಂದಿಸಿದರು. ಈಶ್ವರ ಎಂ.ಎಸ್. ಹಾಗೂ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶ್ರೀದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ನಂತರ ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಬಳಗದವರಿಂದ ದಾಸ ಭಕ್ತಿಮಂಜರಿ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.

LEAVE A REPLY

Please enter your comment!
Please enter your name here