ಪಠ್ಯ ಪುಸ್ತಕದಲ್ಲಿ ಆರೋಗ್ಯ ಅರಿವು ಮೂಡಿಸಬೇಕು-ಡಾ.ಎಂ.ಕೆ ಪ್ರಸಾದ್
ಪುತ್ತೂರು : ಕಾಯಿಲೆಯ ಬಂದಾಗ ಜನರಿಗೆ ಎಲ್ಲಿ ಹೋಗಬೇಕು ಎಂಬ ಅರಿವಿಲ್ಲ. ಆರೋಗ್ಯದ ಜ್ಞಾನ ಮುಖ್ಯ. ಇದಕ್ಕಾಗಿ ಆರೋಗ್ಯ ರಕ್ಷಣೆಯ ಅರಿವಿನ ವಿಚಾರಗಳನ್ನು ಶಾಲಾ ಪಠ್ಯದಲ್ಲಿ ಅಳವಡಿಸಿಕೊಳ್ಳಬೇಕು. ಇದರ ಕುರಿತು ಶಾಸಕರು ವಿಧಾನ ಸಭೆಯಲ್ಲಿ ಒತ್ತಡ ತರಬೇಕು ಎಂದು ಆದರ್ಶ ಆಸ್ಪತ್ರೆಯ ವೈದ್ಯ ಡಾ.ಎಂ.ಕೆ ಪ್ರಸಾದ್ ಹೇಳಿದರು.
ಮೋದಿ ಅಭಿಮಾನಿ ಬಳಗದ ವತಿಯಿಂದ ಮಹಮ್ಮಾಯಿ ದೇವಸ್ಥಾನದ ಸಭಾ ಭವನದಲ್ಲಿ ಅ.9ರಂದು ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾನ್ಯವಾಗಿ ಯಾವುದೇ ಕಾಯಿಲೆಗಳು ಬಂದಾಗ ವೈದ್ಯರ ಬಳಿ ಹೋಗುವ ಬದಲು ಪುಕ್ಕಟೆ ಸಲಹೆಗಳು ನೀಡುತ್ತಾರೆ. ಇದರಿಂದ ಕಾಯಿಲೆ ಉಲ್ಬಣವಾಗುತ್ತದೆ. ಪಠ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಜೋತೆಗೆ ಆರೋಗ್ಯ ರಕ್ಷಣೆಯ ಮಾಹಿತಿ ನೀಡಬೇಕು ಎಂದರು. ಸಕ್ಕರೆ ಕಾಯಿಲೆಯಿಂದ ಕಿಡ್ನಿ, ಕಣ್ಣಿನ ತೊಂದರೆ, ಹೃದಯಾಘಾತ ಬರುತ್ತದೆ. ಸಕ್ಕರೆ ಕಾಯಿಲೆಯಿಂದ ಮುಂದೆ ಶೇ.30 ರಷ್ಟು ಜನರಿಗೆ ಡಯಾಲಿಸಿಸ್ ಮಾಡಬೇಕಾದ ಅನಿವಾರ್ಯತೆ ಬರಲಿದೆ. ಇದರ ಬಗ್ಗೆ ಮುಂಜಾಗ್ರತಾ ವಹಿಸಬೇಕು. ಬೃಹತ್ ಕಿಡ್ನಿ ಆಸ್ಪತ್ರೆ ತೆರೆಯಬೇಕು ಎಂದ ಅವರು ಶಿಬಿರದಲ್ಲಿ ವೈದ್ಯರು ಸೂಚಿಸುವ ಚಿಕಿತ್ಸೆಗಳಿಗೆ ತಾನು ಕಡಿಮೆ ದರದಲ್ಲಿ ಸೇವೆ ನೀಡುವುದಾಗಿ ತಿಳಿಸಿದರು.
ಸಾಮಾನ ನಾಗರಿಕ ಹಕ್ಕು ಜಾರಿಯಾಗಲಿ:
ದೇಶದ ಜನಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ಧರ್ಮದವರಿಗೂ ಅನ್ವಯವಾಗುವಂತೆ ಸಮಾನ ನಾಗರಿಕ ಹಕ್ಕು ಜಾರಿಯಾಗಬೇಕು ಎಂದು ಡಾ.ಎಂ.ಕೆ ಪ್ರಸಾದ್ ತಿಳಿಸಿದರು.
ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನಲ್ಲಿ ಡಯಾಲಿಸಿಸ್ ಗಾಗಿ ಸುಮಾರು 50 ಮಂದಿ ಕಾಯುತ್ತಿದ್ದಾರೆ. ಹೀಗಾಗಿ 10 ಬೆಡ್ ನ ಡಯಾಲಿಸಿಸ್ ಪ್ರತ್ಯೇಕ ವಿಭಾಗವನ್ನು ಒಂದು ತಿಂಗಳಲ್ಲಿ ಪ್ರಾರಂಭಿಸಲಾಗುವುದು ಎಂದರು. ಪುತ್ತೂರು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಜೊತೆಗೆ ಹೆಚ್ಚುವರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸುವುದು ಹಾಗೂ ಅಲ್ಲಿಗೆ ವೈದ್ಯರು ಹಾಗೂ ವೈದ್ಯಕೀಯ ಸಿಬಂದಿಗಳನ್ನು ನೇಮಿಸಲಾಗುವುದು ಎಂದು ತಿಳಿಸಿದ ಅವರು, ಕಾಯಿಲೆ ಬರುವ ಮೊದಲೇ ಆರೋಗ್ಯ ರಕ್ಷಣೆಗೆ ಶಿಬಿರಗಳು ಸಹಕಾರಿಯಾಗಲಿದ್ದು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕರು ತಿಳಿಸಿದರು.
ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ವೈದ್ಯರಿಗೆ ರೋಗಿಗಳೇ ದೇವರು. ಅವರ ಸೇವೆಯೇ ದೇವರ ಸೇವೆ ಮಾಡಿದಂತೆ. ಶಿಬಿರಗಳು ಒಂದು ದಿನಕ್ಕೆ ಸೀಮಿತಲ್ಲ. ಯಾರೂ ಕಾಯಿಲೆ ಇಲ್ಲ ಎಂದು ಸುಮ್ಮನಿರಬಾರದು. ಆರೋಗ್ಯವನ್ನು ಪರೀಕ್ಷಿಸಿಕೊಳ್ಳಬೇಕು. ಶಿಬಿರಗಳು ಕಾಯಿಲೆ ಪತ್ತೆ ಹಚ್ಚಲು ಅನುಕೂಲ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಂಸಿ ವೈದ್ಯರು, ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಅಶೋಕ್ ಪ್ರಭು ಮಾತನಾಡಿ, ಪ್ರಧಾನಿ ಮೋದಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿಯಿದೆ. ಆರೋಗ್ಯದ ರಕ್ಷಣೆಯು ನಮ್ಮ ಜೀವನದ ಅವಿಭಾಜ್ಯ ಅಂಗ. ವೈದ್ಯರು ಸೂಚಿಸಿದ ವೈದ್ಯರು, ಲ್ಯಾಬ್ ಗಳಿಗೇ ಹೋಗಬೇಕು. ಇತರ ಕಡೆ ಹೋಗಬಾರದು ಎಂದು ತಿಳಿಸಿದರು.
ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ಪುತ್ತೂರಿನ ವೈದ್ಯರುಗಳಾದ ಡಾ.ಸುಬ್ರಾಯ ಭಟ್, ಡಾ.ಅಜಿತ್, ಡಾ.ಭಾಸ್ಕರ್, ಡಾ.ಬದರಿನಾಥ್, ಡಾ.ಸಚಿನ್ ಶಂಕರ್, ಡಾ.ಪ್ರೀತಿರಾಜ್ ಬಳ್ಳಾಲ್, ಡಾ. ವೇಣುಗೋಪಾಲ್, ಡಾ.ಚೇತನ ಸುಬ್ರಹ್ಮಣ್ಯ
ಡಾ.ಅರ್ಚನಾ ಕಾವೇರಿ ಹಾಗೂ ಡಾ ಎ.ಕೆ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪುಷ್ಪಲತಾ ಕಾಮತ್ ಪ್ರಾರ್ಥಿಸಿದರು. ಸಂಚಾಲಕ ರಾಮಚಂದ್ರ ಕಾಮತ್ ಸ್ವಾಗತಿಸಿ, ವಂದಿಸಿದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಚಿನ್ ಶೆಣೈ, ಗಣೇಶ್ ಕಾಮತ್ ಹಾಗೂ ಶ್ರವಿನ್ ಪೂಜಾರಿ ಅತಿಥಿಗಳಿಗೆ ಶಾಲು ಹಾಕಿ ಹೂ ನೀಡಿ ಸ್ವಾಗತಿಸಿದರು.