ವಿಶ್ವಕರ್ಮ ಸಭಾಭವನದಲ್ಲಿ ಆನೆಗುಂದಿ ಗುರುಸೇವಾ ಪರಿಷತ್ ಸಭೆ: ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ಮೂಲಭೂತ ವಿಸ್ತರಿಸಲು ನಿರಂತ ಭೂ ಖರೀದಿ ಯೋಜನೆ-ಎರಡನೇ ಮೊಕ್ತೇಸರ ಸುಂದರ ಆಚಾರ್ಯ

0

ಪುತ್ತೂರು:ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಜಾಗ ಖರೀದಿಸಬೇಕಾದ ಆವಶ್ಯಕತೆಯಿದೆ. ಇದಕ್ಕಾಗಿ ಭೂ ಖರೀದಿ ಯೋಜನೆಯು ನಿರಂತರವಾಗಿ ನಡೆಯಲಿದೆ ಎಂದು ದೇವಸ್ಥಾನದ ಎರಡನೇ ಮೊಕ್ತೇಸರ ಸುಂದರ ಆಚಾರ್ಯ ಬೆಳುವಾಯಿ ತಿಳಿಸಿದರು.

ಆನೆಗುಂದಿ ಗುರುಸೇವಾ ಪರಿಷತ್ ಪುತ್ತೂರು ವಲಯ ಹಾಗೂ ಶ್ರೀಕಾಳಿಕಾಂಬ ವಿನಾಯಕ ದೇವಸ್ಥಾನದ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಅ.೨೩ರಂದು ಬೊಳುವಾರು ವಿಶ್ವಕರ್ಮ ಸಭಾ ಭವನದಲ್ಲಿ ನಡೆದ ಗುರು ಪರಿಷತ್‌ನ ಸಭೆಯಲ್ಲಿ ಅವರು ಅತಿಥಿಯಾಗಿ ಅವರು ಮಾತನಾಡಿದರು. ಶಿಲಾಮಯ ಸುತ್ತು ಪೌಳಿ ದೇವಸ್ಥಾನ ನಿರ್ಮಿಸಿ, ಅದ್ದೂರಿ ಬ್ರಹ್ಮಕಲಶ ನೆವೇರಿಸಿ ರೂ.೧.೫೦ಕೋಟಿ ಉಳಿಕೆಯಾಗಿದೆ. ದೇವಸ್ಥಾನದಲ್ಲಿ ಮುಂದಿನ ಯೋಜನೆಯಾಗಿ ಬ್ರಹ್ಮರಥ ನಿರ್ಮಿಸಲಾಗುವುದು. ಬ್ರಹ್ಮರಥದ ಶೆಡ್ ನಿರ್ಮಾಣ ಹಾಗೂ ದೇವಸ್ಥಾನದ ಆವಶ್ಯಕತೆಗೆ ಸುಮಾರು ೩.೫ಕೋಟಿ ವೆಚ್ಚದಲ್ಲಿ ಜಾಗವನ್ನು ಖರೀದಿಸಲಾಗಿದೆ. ಜೊತೆಗೆ ದೇವಸ್ಥಾನದಲ್ಲಿ ಮೂಲಭೂತ ಸೌಲಭ್ಯಗಳನ್ನು ವಿಸ್ತರಿಸಲು ಜಾಗ ಖರೀದಿಸಬೇಕಾಗಿದೆ. ಜಾಗ ಖರೀದಿಗೆ ಹಣ ಹೊಂದಾಣಿಸಲು ಒಂದು ಚದರ ಅಡಿಗೆ ರೂ.೫ ಸಾವಿರದಂತೆ ಸಂಗ್ರಹಿಸುವ ಭೂ ಖರೀದಿ ಯೋಜನೆಯನ್ನು ಮಾಡಲಾಗಿದ್ದು ಇದು ನಿರಂತರವಾಗಿ ನಡೆಯಲಿದೆ. ಜೊತೆಗೆ ದೇವಸ್ಥಾನದ ಆದಾಯದಲ್ಲಿ ಶೇ.೧೦ನ್ನು ಕಾಯ್ದಿರಿಸುವ ಬಗ್ಗೆ ನಿರ್ಣಯಕೈಗೊಳ್ಳಲಾಗಿದೆ. ದೇವಸ್ಥಾನದಲ್ಲಿ ನಡೆಯುವ ಎಲ್ಲಾ ಕಾರ್ಯಗಳಲ್ಲಿಯೂ ಸಹಕರಿಸುವಂತೆ ಅವರು ಮನವಿ ಮಾಡಿದರು.

ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ದಾಮೋದರ ಆಚಾರ್ಯ ಬಿಕರ್ನಕಟ್ಟೆ ಮಾತನಾಡಿ, ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದಲ್ಲಿ ಬಹಳ ಅಪರೂಪವಾಗಿ ನಡೆಯುವ ಶಾಕಲ ಋಕ್ಸಂಹಿತಾ ಯಾಗದಲ್ಲಿ ಭಾಗವಹಿಸಿ, ಸಹಕರಿಸಬೇಕು. ಸಮಾಜ ಬಾಂಧವರ ಮಾಹಿತಿಗಳು ಕ್ಷೇತ್ರದಲ್ಲಿರಬೇಕು ಎಂಬ ಉದ್ದೇಶದಿಂದ ಎಲ್ಲಾ ಮನೆಗಳ ವಿವರಗಳನ್ನು ಸಂಗ್ರಹಿಸಲಾಗುತ್ತಿದ್ದು ಬಾಕಿಯಿರುವವರು ನೀಡುವಂತೆ ಅವರು ತಿಳಿಸಿದರು. ಕ್ಷೇತ್ರದ ಎಲ್ಲಾ ಕೆಲಸ ಕಾರ್ಯಗಳು ಗಣಕೀಕೃತಗೊಳಿಸಲಾಗುವುದು ಎಂದರು.

ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಹರೀಶ್ ಆಚಾರ್ಯ ಅರೆಕ್ಕಲ ಮಾತನಾಡಿ, ಕಾಳಿಕಾಂಬ ದೇವಸ್ಥಾನಕ್ಕೆ ಸ್ವರ್ಣ ಶಿಖರ ನೀಡಿದ ಪುತ್ತೂರು ಸಂಘ, ಸಮಾಜ ಬಾಂಧವರಿಗೆ ಅಭಿನಂದನೆ ಸಲ್ಲಿಸಿ, ಶಾಕಲ ಋಕ್ಸಂಹಿತಾ ಯಾಗದ ಬಗ್ಗೆ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗುರುಪರಿಷತ್‌ನ ಪುತ್ತೂರು ಘಟಕದ ಅಧ್ಯಕ್ಷರು, ಕಾಳಿಕಾಂಬ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿರುವ ಪುರುಷೋತ್ತಮ ಆಚಾರ್ಯ ಮಾತನಾಡಿ, ಕಾಳಿಕಾಂಬ ದೇವಸ್ಥಾನಕ್ಕೆ ಸ್ವರ್ಣ ಶಿಖರ ಸಮರ್ಪಿಸುವ ಮೂಲಕ ಪುತ್ತೂರಿನಿಂದ ಮಹತ್ತರ ಕೊಡುಗೆ ನೀಡಲಾಗಿದೆ ಎಂದು ಹೇಳಿ ಚಿನ್ನದ ಶಿಖರ ಸಮರ್ಪಣೆಯ ಲೆಕ್ಕಪತ್ರ ಮಂಡಿಸಿದರು.

ವಿಶ್ವಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಜಗದೀಶ ಎಸ್.ಎನ್ ಸ್ವಾಗತಿಸಿದರು. ವಸಂತ ಆಚಾರ್ಯ, ಜನಾರ್ದನ ಆಚಾರ್ಯ ಅನಿಸಿಕೆ ವ್ಯಕ್ತಪಡಿಸಿದರು. ಶ್ರೀಧರ ಆಚಾರ್ಯ ಕೊಕ್ಕಡ ಹಾಗೂ ಮಹೇಶ್ ಕಾರ್ಯಕ್ರಮ ನಿರೂಪಿಸಿ, ಯುವ ಮಿಲನದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಆಚಾರ್ಯ ವಂದಿಸಿದರು. ವಿವಿಧ ವಲಯಗಳ ಮೊಕ್ತೇಸರರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜದ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here