ಸಹನೆ ಕಳಕೊಂಡ ಅಧಿಕಾರಿಯಿಂದ ಉಡಾಫೆಯ ಉತ್ತರ

0

ಆಕ್ರೋಶಗೊಂಡ ಗ್ರಾಮಸ್ಥರು: ಕರ್ತವ್ಯದಿಂದ ವಜಾಕ್ಕೆ ನಿರ್ಣಯ
ಹಿರೇಬಂಡಾಡಿ ಗ್ರಾಮ ಸಭೆಯಲ್ಲಿ ಅರಣ್ಯಾಧಿಕಾರಿಯ ಮೇಲೆ ಲಂಚದ ಆರೋಪ

ಉಪ್ಪಿನಂಗಡಿ: ಗ್ರಾಮಸಭೆಯಲ್ಲಿ ಗ್ರಾಮಸ್ಥರಿಗೆ ಮಾಹಿತಿ, ಪ್ರಶ್ನೆಗಳಿಗೆ ಉತ್ತರ ನೀಡಬೇಕಾದ ಅಧಿಕಾರಿಯೋರ್ವರು ಉಡಾಫೆಯ ಉತ್ತರ ನೀಡಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣರಾದರಲ್ಲದೆ, ಲಂಚದ ಆರೋಪ ಕೇಳಿ ಬಂದಾಗ ಸಭೆಯಿಂದ ಹೊರನಡೆದ ಘಟನೆ ಹಿರೇಬಂಡಾಡಿ ಗ್ರಾಮ ಸಭೆಯಲ್ಲಿ ನಡೆಯಿತು. ಈ ಅಧಿಕಾರಿಯ ವರ್ತನೆಯಿಂದ ಆಕ್ರೋಶಿತರಾದ ಗ್ರಾಮಸ್ಥರು ಈ ಅಧಿಕಾರಿಯನ್ನು ಸರಕಾರಿ ಕರ್ತವ್ಯದಿಂದಲೇ ವಜಾಗೊಳಿಸಬೇಕೆಂದು ನಿರ್ಣಯ ಕೈಗೊಂಡರು.
ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷೆ ಚಂದ್ರಾವತಿಯವರ ಅಧ್ಯಕ್ಷತೆಯಲ್ಲಿ ಶನಿವಾರ ಗ್ರಾ.ಪಂ. ಸಮುದಾಯ ಭವನದಲ್ಲಿ ನಡೆದ ಹಿರೇಬಂಡಾಡಿ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಪುತ್ತೂರು ಉಪ ಅರಣ್ಯಾಧಿಕಾರಿ ಸಂಜೀವ ಅವರು ಮಾಹಿತಿ ನೀಡುತ್ತಿದ್ದಂತೆ ಗ್ರಾಮಸ್ಥ ರಾಮಕೃಷ್ಣ ಹೊಸಮನೆಯವರು ಮಾತನಾಡಿ, ಈ ಭಾಗದಲ್ಲಿ ಕೃಷಿಕರಿಗೆ ಮಂಗಗಳ ಹಾವಳಿ ವಿಪರೀತ ಇದೆ. ಇದರ ಪರಿಹಾರಕ್ಕೆ ಇಲಾಖೆ ಏನಾದರೂ ಕ್ರಮ ಕೈಗೊಂಡಿದ್ದೇಯೇ ಎಂದು ಪ್ರಶ್ನಿಸಿದರು. ಅದಕ್ಕೆ ಏಕಾಏಕಿ ಉಡಾಫೆಯಿಂದ ಉತ್ತರ ಕೊಟ್ಟ ಸಂಜೀವ ಅವರು, ನನ್ನ ಮನೆಯಲ್ಲೂ ತೋಟ ಇದೆ. ಅಲ್ಲೂ ಮಂಗಗಳ ಉಪಟಳ ಇದೆ. ಮಂಗಗಳ ಹಾವಳಿ ಜಾಸ್ತಿಯಾಗಲು ಕಾರಣ ನೀವುಗಳೇ. ನೀವು ಹಣ್ಣಿನ ಗಿಡಗಳನ್ನು ಎಷ್ಟು ನೆಟ್ಟಿದ್ದೀರಿ ಎಂದು ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ಮರು ಪ್ರಶ್ನಿಸಿದರು.

ಅದಕ್ಕೆ ಗ್ರಾಮಸ್ಥರು ಅರಣ್ಯ ಇಲಾಖೆಯು ಅರಣ್ಯದಲ್ಲಿ ಎಷ್ಟು ಹಣ್ಣುಹಂಪಲುಗಳ ಗಿಡಗಳನ್ನು ನಾಟಿ ಮಾಡಿದೆ. ಈಗ ಹಲಸಿನ ಹಣ್ಣು, ಮಾವಿನ ಹಣ್ಣುಗಳಂತಹ ಹಣ್ಣು ಹಂಪಲಿನ ಮರ ಇರುವುದು ಕೃಷಿಕರ ಭೂಮಿಯಲ್ಲೇ ಹೊರತು ಅರಣ್ಯದಲ್ಲಲ್ಲ ಎಂದರು. ಅದಕ್ಕೆ ಪ್ರತ್ಯುತ್ತರಿಸಿದ ಅರಣ್ಯಾಧಿಕಾರಿ ಸಂಜೀವ, ಅರಣ್ಯದಲ್ಲೂ ನಾವು ಹಣ್ಣಿನ ಮರಗಳನ್ನು ಬೆಳೆಸುತ್ತಿದ್ದೇವೆ. ಅದರ ಬೀಜಗಳನ್ನು ಹಾಕುತ್ತಿದ್ದೇವೆ. ಅದರ ಬಗ್ಗೆ ನೀವು ಮಾತನಾಡಬೇಡಿ. ನೀವು ಇಷ್ಟವಿದ್ದರೆ ಬೆಳೆಸಿ, ನಮ್ಮಲ್ಲಿ ಹೇಳಬೇಡಿ ಎಂದರಲ್ಲದೆ, ನಿಮ್ಮ ತೋಟಕ್ಕೆ ಬರುವ ಮಂಗಗಳನ್ನು ಕಾಯಲು ಇದ್ದವರು ನಾವಲ್ಲ ಎಂದು ತೀವ್ರ ಅಸಹನೆಯಿಂದಲೇ ಉತ್ತರಿಸಿದರು.

ಅಧಿಕಾರಿಯೋರ್ವರು ಗ್ರಾಮಸ್ಥರಲ್ಲಿ ತೋರಿದ ಈ ನಡೆ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಆಗ ಮಧ್ಯ ಪ್ರವೇಶಿಸಿದ ಸಭೆಯ ನೋಡಲ್ ಅಧಿಕಾರಿಯಾಗಿದ್ದ ಪುತ್ತೂರು ತಾ.ಪಂ.ನ ಯೋಜನಾಧಿಕಾರಿ ಸುಕನ್ಯಾ ಅವರು ನೇರವಾಗಿ ಅರಣ್ಯಾಧಿಕಾರಿಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಿ, ಸಹನಾಶೀಲರಾಗಿ ವರ್ತಿಸಿ ಎಂದರು. ಗ್ರಾ.ಪಂ. ಸದಸ್ಯ ಹಮ್ಮಬ್ಬ ಶೌಕತ್ ಅಲಿ ಮಾತನಾಡಿ, ಇಲ್ಲಿ ರಸ್ತೆ ಬದಿ ಸಾವಿರಾರು ಹಣ್ಣಿನ ಗಿಡಗಳನ್ನು ನೆಡಲಾಗಿದೆ. ಇದಕ್ಕೆ ಯಾವುದೇ ಇಲಾಖೆ ಕಾರಣರಲ್ಲ. ಉದ್ಯೋಗಖಾತ್ರಿ ಯೋಜನೆಯಲ್ಲಿ ಗ್ರಾಮಸ್ಥರೇ ನೆಟ್ಟದ್ದು. ಅದು ಅವರದ್ದೇ ಕೊಡುಗೆ ಎಂದರು. ಬಳಿಕವೂ ಅರಣ್ಯಾಧಿಕಾರಿಯ ಸಹನೆ ಮೀರಿದ ಉಡಾಫೆಯ ಮಾತುಗಳು ಮುಂದುವರಿಯುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರಾದ ಸೊಮೇಶ್, ಸೇರಿದಂತೆ ನೀಲಯ್ಯ ಸರೋಳಿ, ದಯಾನಂದ ಸರೋಳಿ ಮತ್ತಿತರರು ಶಾಖೆಪುರದಲ್ಲಿ ವ್ಯಕ್ತಿಯೋರ್ವರು ಮನೆ ನಿರ್ಮಾಣಕ್ಕೆ ನೆಲ ಸಮತಟ್ಟು ಮಾಡಲು ಅಲ್ಲಿದ್ದ ಒಂದು ಗೇರು ಮರ, ಒಂದು ಸಣ್ಣ ಅಕೇಶಿಯಾ ಮರ ಕಡಿದಿದ್ದಾರೆಂದು ಮರುದಿನ ಬಂದು ಜೆಸಿಬಿಯ ಕೀಯನ್ನು ಎಳೆದು ತೆಗೆದುಕೊಂಡು ಸೀಝ್ ಮಾಡುತ್ತೇನೆ ಎಂದು ಅದರ ಮೇಲೆ ಕೂತು ದರ್ಪ ಪ್ರದರ್ಶಿಸಿದ್ದೀರಿ. ಬಳಿಕ ಆ ಪ್ರಕರಣವನ್ನು ಹೇಗೆ ಮುಗಿಸಿದ್ದೀರಿ ಎಂದು ಮಾಹಿತಿ ಕೊಡಿ ಎಂದರಲ್ಲದೆ, ನೀವು ಅವರಲ್ಲಿ ಲಂಚ ಪಡೆದುಕೊಂಡು ಮತ್ತೆ ಆ ಪ್ರಕರಣವನ್ನು ಬಿಟ್ಟಿದ್ದೀರಿ ಎಂದು ಆರೋಪಿಸಿದರು.

ಅಲ್ಲದೆ, ಪ್ರತಿಯೊಂದಕ್ಕೂ ಮೊಬೈಲ್ ತೋರಿಸಿ, ಇದಕ್ಕೆ ಶಾಸಕರ ನಿರ್ದೇಶನ ಇದೆ ಎಂದು ಹೇಳುತ್ತಾ ಶಾಸಕರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೀರಿ ಎಂದರು. ಆಗ ಅರಣ್ಯಾಧಿಕಾರಿ ಇನ್ನಷ್ಟು ಕುಪಿತಗೊಂಡಿದ್ದು, ನೋಡಲ್ ಅಧಿಕಾರಿಯವರ ಮನವಿಯನ್ನು ಕೇಳಿಸಿಕೊಳ್ಳದೆ ಆಕ್ರೋಶಭರಿತವಾಗಿಯೇ ಗ್ರಾಮಸ್ಥರಲ್ಲಿ ಚರ್ಚೆಗೆ ಇಳಿದರಲ್ಲದೆ, ಲಂಚ ಕೊಟ್ಟವರನ್ನು ಕರೆದುಕೊಂಡು ಬನ್ನಿ ಎಂದರು. ಆಗ ಗ್ರಾಮಸ್ಥರು ಅರ್ಧ ಗಂಟೆ ನೀವು ಇಲ್ಲೇ ಇರಿ. ನಾವು ಅವರನ್ನು ಕರೆದುಕೊಂಡು ಬರುತ್ತೇವೆ. ನೀವು ಲಂಚ ಪಡೆದುಕೊಂಡದನ್ನು ಇಲ್ಲೇ ದೃಢಪಡಿಸುತ್ತೇವೆ ಎಂದರು. ಆಗ ತನ್ನ ಮಾತನ್ನು ಅಲ್ಲಿಗೆ ಮೊಟಕುಗೊಳಿಸಿ, ಸಭೆಯಿಂದ ಹೊರನಡೆಯಲು ಮುಂದಾದಾಗ ಗ್ರಾಮಸ್ಥರು ಇದು ಸಾಬೀತಾಗುವವರೆಗೆ ನೀವು ಸಭೆಯಿಂದ ಹೋಗಬಾರದು ಎಂದು ಬೊಬ್ಬಿಟ್ಟರೂ, ಅವರು ಹೊರನಡೆದೇ ಬಿಟ್ಟರು. ಆಗ ನೋಡಲ್ ಅಧಿಕಾರಿಯವರು ಮಾತನಾಡಿ, ಓರ್ವ ಅಧಿಕಾರಿಯಾಗಿ ಅವರು ಈ ಗ್ರಾಮಸಭೆಯಲ್ಲಿ ಸಹನೆಯನ್ನು ಮೀರಿ ವರ್ತಿಸಿದ್ದಾರೆ. ಅವರ ಬಗ್ಗೆ ಅವರ ಮೇಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಹೇಳಿದರು. ಆಗ ಸದಸ್ಯ ಶೌಕತ್ ಅಲಿ ಮಾತನಾಡಿ, ಗ್ರಾಮ ಸಭೆಯಲ್ಲಿ ಪ್ರಶ್ನೆಕೇಳುವುದು ಗ್ರಾಮಸ್ಥರ ಹಕ್ಕು. ಅದಕ್ಕೆ ಅಧಿಕಾರಿಗಳು ಸಹನೆಯಿಂದಲೇ ಉತ್ತರಿಸಬೇಕು. ಅದು ಬಿಟ್ಟು ಅವರ ಮೇಲೆಯೇ ಏರಿ ಹೋಗುವುದಲ್ಲ. ಆದ್ದರಿಂದ ಇಂತಹ ಉಡಾಫೆಯಿಂದ ವರ್ತಿಸಿದ ಅಧಿಕಾರಿಯನ್ನು ಕರ್ತವ್ಯದಿಂದ ವಜಾಗೊಳಿಸಲು ಈ ಗ್ರಾಮಸಭೆಯಲ್ಲಿ ನಿರ್ಣಯಿಸಿ, ಸರಕಾರಕ್ಕೆ ಹಾಗೂ ಅರಣ್ಯ ಇಲಾಖೆಗೆ ಬರೆಯೋಣ ಎಂದರು. ಅದಕ್ಕೆ ಗ್ರಾಮಸ್ಥರೆಲ್ಲಾ ಧ್ವನಿಗೂಡಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಅರ್ಹತೆಯಿದ್ದರೂ ಬಿಪಿಎಲ್ ಪಡಿತರ ಚೀಟಿ ರದ್ದು!:
ನಾನು ಬಿಪಿಎಲ್ ಪಡಿತರ ಚೀಟಿಗೆ ಅರ್ಹನಾಗಿದ್ದರೂ, ನಾಲ್ಕು ಚಕ್ರದ ಒಂದು ವಾಹನವಿದೆ ಎಂಬ ಕಾರಣಕ್ಕೆ ನನ್ನ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಿ ನಾಲ್ಕು ತಿಂಗಳಾಗಿದೆ. ಈ ಗ್ರಾಮದಲ್ಲಿ ಐಷಾರಾಮಿ ಕಾರುಗಳು, ಅನೂಕಲಸ್ಥರಿಗೆ ಇಂದಿಗೂ ಬಿಪಿಎಲ್ ಪಡಿತರ ಚೀಟಿ ಇದೆ. ಗ್ರಾಮದಲ್ಲಿ ನನ್ನದೊಬ್ಬನ್ನದ್ದೇ ರದ್ದುಗೊಂಡಿರುವುದು. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಅದಕ್ಕೆ ಗ್ರಾಮಕರಣಿಕ ಎನ್.ಎಂ. ಮಠದ ಉತ್ತರಿಸಿ, ಈ ಬಗ್ಗೆ ಇಲಾಖೆಯಲ್ಲಿ ವಿಚಾರಿಸುತ್ತೇನೆ. ಸರಕಾರಿ ಮಾನದಂಡದಲ್ಲಿ ನಾಲ್ಕು ಚಕ್ರದ ವಾಹನವಿರಬಾರದು ಎಂದಿದೆ ಎಂದರು. ಆಗ ಸದಸ್ಯ ಶೌಕತ್ ಅಲಿ ಮಾತನಾಡಿ, ಸರಕಾರ ಮೊದಲು ನಾಲ್ಕು ಚಕ್ರದ ವಾಹನವುಳ್ಳವರು ಬಿಪಿಎಲ್ ಪಡಿತರ ಚೀಟಿ ಇಲ್ಲ ಎಂದು ಹೇಳಿತ್ತು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಮಾನದಂಡವನ್ನು ತೆಗೆದುಹಾಕಿದೆ. ಆದರೆ ಅದಕ್ಕೆ ಮೊದಲೇ ಇವರ ಬಿಪಿಎಲ್ ಕಾರ್ಡ್ ಅನ್ನು ಬೆಂಗಳೂರಿನಲ್ಲೇ ಅನರ್ಹಗೊಳಿಸಿ, ಬ್ಲಾಕ್ ಮಾಡಲಾಗಿದೆ. ಇನ್ನು ಅಲ್ಲಿ ಅದನ್ನು ಸರಿಪಡಿಸುವ ಕೆಲಸವಾಗಬೇಕು ಎಂದರು. ಅದಕ್ಕೆ ಗ್ರಾಮಕರಣಿಕ ಎನ್.ಎಂ. ಮಠದ ಅವರು ರೋಹಿತ್ ಅವರಲ್ಲಿ ನಾನು- ನೀವು ಜೊತೆಯಾಗೇ ಪುತ್ತೂರು ನಾಗರಿಕ ಪೂರೈಕೆ ಹಾಗೂ ಆಹಾರ ಸರಬರಾಜು ಇಲಾಖೆಗೆ ಹೋಗುವ ಮುಂದೆ ಅದಕ್ಕೆ ಏನು ಕೆಲಸವಾಗಬೇಕೋ ಅದು ಮಾಡುವ ಎಂದರು.

ಎಲ್ಲಾ ದಲಿತರನ್ನು ಸೌಲಭ್ಯ ತಲುಪುತ್ತಿಲ್ಲ: ಕೃಷಿ ಅಧಿಕಾರಿ ತಿರುಪತಿ ಎನ್. ಭರಮಣ್ಣನವರ್ ಕೃಷಿ ಇಲಾಖೆಯ ಮಾಹಿತಿ ನೀಡುತ್ತಿದ್ದಾಗ ಲಿಂಗಪ್ಪ ನೆಕ್ಕಿಲು ಮಾತನಾಡಿ, ಕೃಷಿ ಇಲಾಖೆಯಲ್ಲಿ ಟರ್ಪಾಲಿನ್ಗೆ ಅರ್ಜಿ ಸಲ್ಲಿಸಿ ಎರಡು ವರ್ಷವಾಗಿದೆ. ಆದರೆ ಇನ್ನೂ ಟರ್ಫಾಲಿನ್ ಸಿಕ್ಕಿಲ್ಲ. ಇಲ್ಲಿ ಮಾತನಾಡುವವರಿಗೆ ಮಾತ್ರ ಸವಲತ್ತು ಬೇಗ ಸಿಗುತ್ತದೆ. ಅರ್ಜಿ ಕೊಟ್ಟು ಮೌನವಾಗಿದ್ದವರಿಗೆ ಇಲ್ಲ ಎಂದರು. ಅಲ್ಲದೆ, ಸರಕಾರಿ ಸವಲತ್ತುಗಳು ಎಲ್ಲಾ ದಲಿತರಿಗೂ ಸರಿಯಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು. ಇದಕ್ಕೆ ಇನ್ನಿತರರೂ ಧ್ವನಿಗೂಡಿಸಿದರು.

ಇಲ್ಲಿಗೊಂದು ವೈನ್‌ಶಾಪ್ ಕೊಡಿ!:
ಹಿರೇಬಂಡಾಡಿಗೆ ಒಂದು ಮದ್ಯದಂಗಡಿ ಕೊಡಿ ಎಂದು ಬೇಡಿಕೆ ನೀಡುವ ಮೂಲಕ ಇಲ್ಲಿರುವ ಅನಧಿಕೃತ ಮದ್ಯ ಮಾರಾಟಗಳನ್ನು ನೀಲಯ್ಯ ಅವರು ಸೂಚ್ಯವಾಗಿಯೇ ಸಭೆಗೆ ತಿಳಿಸಿದ ನೀಲಯ್ಯ ಅವರು, ಹಿರೇಬಂಡಾಡಿಯಲ್ಲಿ ಅನಧಿಕೃತ ಮದ್ಯ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಒಂದೋ ಅವರ ಮೇಲೆ ಕ್ರಮ ಕೈಗೊಳ್ಳಿ. ಇಲ್ಲದಿದ್ದಲ್ಲಿ ಇಲ್ಲಿಗೆ ಅಧಿಕೃತ ಮದ್ಯದಂಗಡಿ ಕೊಡಿ ಎಂದರು. ಅದಕ್ಕೆ ಉತ್ತರಿಸಿದ ಅಬಕಾರಿ ಇಲಾಖೆಯ ಪ್ರೇಮಾನಂ ಬಿ., ಹೊಸ ಮದ್ಯದಂಗಡಿಗೆ ಪರವಾನಿಗೆ ಈಗ ನೀಡುತ್ತಿಲ್ಲ. ಅಕ್ರಮದ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದರಲ್ಲದೆ, ಮದ್ಯದಂಗಡಿಗಳಲ್ಲಿ ಅದರ ಮದ್ಯದ ಬಾಟಲಿಗಳಲ್ಲಿ ಮುದ್ರಿತವಾದ ಬೆಲೆಗಿಂತ ಹೆಚ್ಚು ಬೆಲೆ ನೀಡಬೇಡಿ. ಹಾಗೆ ಹೆಚ್ಚಿನ ಹಣ ವಸೂಲಿ ಮಾಡಿದರೆ ಬಿಲ್ ಸಹಿತವಾಗಿ ದೂರು ನೀಡಿ, ಅಂತಹ ಮದ್ಯದಂಗಡಿಯವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದರು.

ವೇದಿಕೆಯಲ್ಲಿ ಸದಸ್ಯರಾದ ನಾರಾಯಣ ಎಸ್., ಸದಾನಂದ ಶೆಟ್ಟಿ, ಶಾಂಭವಿ, ನಿತಿನ್ ಬಿ., ಲಕ್ಷ್ಮೀಶ, ಹೇಮಾವತಿ, ವಾರಿಜಾಕ್ಷಿ, ಉಷಾ ಎಚ್.ಎನ್. ಹೇಮಂತ ಉಪಸ್ಥಿತರಿದ್ದರು. ಕೆಎಸ್ಸಾರ್ಟಿಯ ಅಬ್ಬಾಸ್, ಆರೋಗ್ಯ ಇಲಾಖೆಯ ಯಕ್ಷಿತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಶೋಭಾ, ಪಶು ಸಂಗೋಪನಾ ಇಲಾಖೆಯ ಡಾ. ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆಯ ವಿಠಲ ಟಿ., ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಉಮಾವತಿ, ಮೆಸ್ಕಾಂನ ಎಇ ರಾಜೇಶ್, ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಎಸ್‌ಐ ಶಿವಪ್ಪ ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರಾದ ಚೆನ್ನಕೇಶವ ಕನ್ಯಾನ, ಬಾಲಚಂದ್ರ ಕೊರಂಬಾಡಿ, ಜತ್ತಪ್ಪ, ಸಂತು ಅಡೆಕಲ್ಲ್, ದಾಮೋದರ, ರವೀಂದ್ರ ಪಟಾರ್ತಿ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪಿಡಿಒ ದಿನೇಶ್ ಶೆಟ್ಟಿ ವರದಿ ಮಂಡಿಸಿದರು. ಕಾರ್ಯದರ್ಶಿ ಪರಮೇಶ್ವರ ಸ್ವಾಗತಿಸಿ, ವಂದಿಸಿದರು.

ಅಭಿವೃದ್ಧಿಯಲ್ಲಿ ತಾರತಮ್ಯ ಆರೋಪ: ವೇದಿಕೆಯೇರದ ಕೆಲ ಸದಸ್ಯರು
ಗ್ರಾ.ಪಂ.ನ ಉಪಾಧ್ಯಕ್ಷೆ ಭವಾನಿ ಸಹಿತ ಸದಸ್ಯರಾದ ಗೀತಾ ದಾಸರಮೂಲೆ, ಸತೀಶ್ ಶೆಟ್ಟಿ ಎನ್., ಶ್ರೀಮತಿ ಸವಿತಾ ಅವರು ವೇದಿಕೆಯೇರದೆ ಗ್ರಾಮಸ್ಥರ ಸಾಲಿನಲ್ಲಿ ಕೂತಿದ್ದರು. ಇದನ್ನು ಕಂಡ ಗ್ರಾಮಸ್ಥ ಸೇಸಪ್ಪ ನೆಕ್ಕಿಲು ಅವರು, ಇದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಆಗ ಪ್ರತಿಕ್ರಿಯಿಸಿದ ಇಲ್ಲಿ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನಮ್ಮ ವಾರ್ಡ್‌ನ ಅಭಿವೃದ್ಧಿಗೆ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ದಾರಿ ದೀಪದಲ್ಲೂ ತಾರತಮ್ಯ ನಡೆಯುತ್ತಿದೆ ಎಂದು ಸದಸ್ಯ ಸತೀಶ ಶೆಟ್ಟಿ ಎನ್. ಆರೋಪಿಸಿದರು. ಇದಕ್ಕೆ ಧ್ವನಿಗೂಡಿಸಿದ ಗೀತಾ ದಾಸರಮೂಲೆ, ಅಭಿವೃದ್ಧಿಯಲ್ಲಿ ನಮ್ಮ ವಾರ್ಡ್‌ಗಳನ್ನು ಕಡೆಗಣಿಸಲಾಗುತ್ತಿದೆ. ನನ್ನ ಒಂದನೇ ವಾರ್ಡ್‌ನಲ್ಲಿ ಸಮರ್ಪಕ ರಸ್ತೆ ಕೂಡಾ ಇಲ್ಲ. ನೀರಿನ ಸಮಸ್ಯೆಯೂ ಇದೆ. ಅಲ್ಲಿನ ಸಮಸ್ಯೆಯಿಂದಾಗಿ ವಾರ್ಡ್ ಸಭೆಗೆ ಅಧ್ಯಕ್ಷರು ಬರಲೇ ಬೇಕು ಎಂದು ವಾರ್ಡ್‌ನ ಜನತೆ ಪಟ್ಟು ಹಿಡಿದಿದ್ದರು. ಆದರೆ ಅಧ್ಯಕ್ಷರು ಬಾರದಿದ್ದಾಗ ಅಲ್ಲಿ ವಾರ್ಡ್ ಸಭೆಗೂ ಯಾರೂ ಬರಲಿಲ್ಲ. ಆದ್ದರಿಂದ ಅಲ್ಲಿ ವಾರ್ಡ್ ಸಭೆಯೂ ಆಗಿಲ್ಲ ಎಂದರು. ನಮ್ಮನ್ನು ಆಯ್ಕೆ ಮಾಡಿದ್ದು ಜನರು. ಆದ್ದರಿಂದ ಅಲ್ಲಿ ಅಭಿವೃದ್ಧಿ ಕೆಲಸ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ಇಲ್ಲದಿದ್ದರೆ ಅವರಿಗೆ ಉತ್ತರ ನಾವು ಕೊಡಬೇಕಾಗುತ್ತದೆ. ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ನಮ್ಮ ವಾರ್ಡ್‌ಗಳನ್ನು ಕಡೆಗಣಿಸಲಾಗುತ್ತದೆ. ಆದ್ದರಿಂದ ನಾವು ಇಲ್ಲಿ ಗ್ರಾಮಸ್ಥರೊಂದಿಗೆ ಕೂತಿದ್ದೇವೆ ಎಂದು ಸ್ಪಷ್ಟನೆ ನೀಡಿದರು. ಉಪಾಧ್ಯಕ್ಷೆ ಭವಾನಿ ಕೂಡಾ ಅದೇ ಮಾತುಗಳನ್ನು ಹೇಳಿದರು.

LEAVE A REPLY

Please enter your comment!
Please enter your name here